ಕ್ರಾನ್ಸ್-ಮೊಂಟಾನ: ಗೋವಾ ಪಬ್ ಮಾದರಿಯಲ್ಲೇ ಸ್ವಿಜರ್ಲೆಂಡಲ್ಲಿ ಕ್ರಾನ್ಸ್-ಮಾಂಟಾನಾ ಸ್ಕೀ ರೆಸಾರ್ಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಭಾರೀ ಸ್ಫೋಟ-ಅಗ್ನಿ ಅವಘಡದಲ್ಲಿ 40 ಮಂದಿ ಮೃತಪಟ್ಟು, 115ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಕ್ರಾನ್ಸ್-ಮೊಂಟಾನಾ ಪಟ್ಟಣದ ಕಾನ್ಟ್ಸೆಲೇಷನ್ ಬಾರ್‌ನ ಬೇಸ್‌ಮೆಂಟ್‌ನಲ್ಲಿ ಈ ಸ್ಫೋಟ ಸಂಭವಿಸಿದ್ದು, ಆ ಬಳಿಕ ವ್ಯಾಪಿಸಿದ ಬೆಂಕಿಯಿಂದಾಗಿ 40ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆ ವೇಳೆ ಬಾರ್‌ನಲ್ಲಿ 150ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಹೇಳಲಾಗಿದೆ.
ಸದ್ಯಕ್ಕೆ ದುರಂತಕ್ಕೆ ಕಾರಣ ಏನೆಂಬುದು ಪತ್ತೆಯಾಗಿಲ್ಲ. ಆದರೆ, ಭಯೋತ್ಪಾದನೆಯ ಸಾಧ್ಯತೆಯನ್ನು ತಳ್ಳಿಹಾಕಲಾಗಿದೆ. ತಜ್ಞರಿಗೆ ಇನ್ನೂ ದುರಂತಕ್ಕೀಡಾದ ಬಾರ್‌ನೊಳಗೆ ತೆರಳಲು ಅಸಾಧ್ಯವಾಗಿದ್ದು, ಅವರು ಸ್ಥಳ ಪರಿಶೀಲಿಸಿದ ಬಳಿಕ ದುರಂತಕ್ಕೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಲೈಸ್ ಕ್ಯಾಂಟನ್‌ನ ಪ್ರಾದೇಶಿಕ ಸರ್ಕಾರದ ಮುಖ್ಯಸ್ಥ ಮಥಿಯಾಸ್ ರೆನಾರ್ಡ್ ಅವರು ಮಾತನಾಡಿ, ಈ ಸಂಜೆ ಆಚರಣೆಯ ಮತ್ತು ಒಟ್ಟಿಗೆ ಸೇರುವ ಕ್ಷಣವಾಗಬೇಕಿತ್ತು, ಆದರೆ ಅದು ದುಃಸ್ವಪ್ನವಾಗಿ ಮಾರ್ಪಟ್ಟಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ,
ಘಟನೆ ವೇಳೆ ಸಾಕಷ್ಟು ಮಂದಿ ಗಾಯಗೊಂಡಿದ್ದರು. ಎಲ್ಲರನ್ನು ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ 150 ಮಂದಿ ಸೇರಿದ್ದರು. ಘಟನೆಗೆ ಕಾರಣ ಪತ್ತೆಗೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಸಂಗೀತ ಕಾರ್ಯಕ್ರಮದ ವೇಳೆ ಪೈರೋಟೆಕ್ನಿಕ್‌ಗಳನ್ನು ಬಳಸಿದಾಗ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಸ್ವಿಸ್ ಮಾಧ್ಯಮಗಳು ಶಂಕಿಸಿವೆ. ಆದರೆ, ಪೊಲೀಸರು ಯಾವುದೇ ದೃಢೀಕರಣವನ್ನು ನೀಡಿಲ್ಲ.
ಗೋವಾದ ಪಬ್‌ವೊಂದರಲ್ಲಿ ಡಿ.6ರಂದು ಬೆಂಕಿ ಅವಘಡ ಸಂಭವಿಸಿತ್ತು. ಆ ವೇಳೆ ಅಲ್ಲಿದ್ದ 25 ಮಂದಿ ಸಾವಿಗೀಡಾಗಿದ್ದರು.