ಹೊಸ ವರ್ಷದ (2026) ಆರಂಭದಲ್ಲಿ ಇರಾನ್‌ನಲ್ಲಿ ಪ್ರಾರಂಭವಾದ ಹಣದುಬ್ಬರ ಮತ್ತು ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಗಳು ವೇಗವಾಗಿ ಹಿಂಸಾತ್ಮಕವಾಗಿವೆ. ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಒಂದು ವಾರದಿಂದಲೂ ನಡೆಯುತ್ತಿರುವ ಈ ಪ್ರತಿಭಟನೆಗಳು ಈಗಾಗಲೇ ಹಲವಾರು ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಯ ಸಾವಿಗೆ ಕಾರಣವಾಗಿವೆ. ಪ್ರತಿಭಟನೆಗಳು ಟೆಹ್ರಾನ್‌ನಿಂದ ಗ್ರಾಮೀಣ ಪ್ರದೇಶಗಳಿಗೆ ಹರಡಿವೆ. ಅಲ್ಲಿ ಜನರು ಕುಸಿಯುತ್ತಿರುವ ಕರೆನ್ಸಿ, ಬೆಲೆ ಏರಿಕೆ ಮತ್ತು ಪಾಶ್ಚಿಮಾತ್ಯ ನಿರ್ಬಂಧಗಳಿಂದ ಉಂಟಾದ ಆರ್ಥಿಕ ಬಿಕ್ಕಟ್ಟನ್ನು ಪ್ರತಿಭಟಿಸಲು ಬೀದಿಗಿಳಿದಿದ್ದಾರೆ. ಏತನ್ಮಧ್ಯೆ, ವಿದ್ಯಾರ್ಥಿಗಳು ಮಾಜಿ ಷಾ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದಾರೆ. ಇನ್ನು ಅಮೆರಿಕದಲ್ಲಿ ವಾಸಿಸುತ್ತಿರುವ ರೆಜಾ ಪಹ್ಲವಿ ಪ್ರತಿಭಟನಾಕಾರರನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಸದ್ಯದ ಪರಿಸ್ಥಿತಿ ಇರಾನ್‌ನ ಧಾರ್ಮಿಕ ನಾಯಕತ್ವಕ್ಕೆ ಗಂಭೀರ ಸವಾಲನ್ನು ಒಡ್ಡಿದೆ, ಅಲ್ಲಿ ಹಣದುಬ್ಬರವು ಡಿಸೆಂಬರ್ 2025ರಲ್ಲಿ ಶೇಕಡ 42.5ಕ್ಕೆ ತಲುಪಿದೆ.
ಹೊಸ ವರ್ಷದ ಆರಂಭದಿಂದಲೂ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಬದಲಾಗಿವೆ. ಇದರ ಪರಿಣಾಮವಾಗಿ ಹಲವಾರು ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳು ಸಾವನ್ನಪ್ಪಿವೆ. ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಸಾವುನೋವುಗಳ ಮೊದಲ ವರದಿಗಳಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಇರಾನ್‌ನಾದ್ಯಂತ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಗಳು ವರದಿಯಾಗಿವೆ. ಇದಕ್ಕೂ ಮೊದಲು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಟೆಹ್ರಾನ್‌ನ ಬೀದಿಗಿಳಿದು 'ಸರ್ವಾಧಿಕಾರಿಗೆ ಕಿಕ್ ಔಟ್' ಹಾಗೂ ಮುಲ್ಲಾಗಳು ತೊಲಗಲಿ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಅಮೆರಿಕದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿರುವ ರೆಜಾ ಪಹ್ಲವಿ, ನಾನು ನಿಮ್ಮೊಂದಿಗಿದ್ದೇನೆ. ನಮ್ಮ ಉದ್ದೇಶ ನ್ಯಾಯಯುತವಾಗಿದೆ. ನಾವು ಒಗ್ಗಟ್ಟಿನಿಂದ ಇದ್ದೇವೆ ಏಕೆಂದರೆ ಗೆಲುವು ನಮ್ಮದೇ. ಈ ಆಡಳಿತವು ಅಧಿಕಾರದಲ್ಲಿರುವವರೆಗೆ, ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಲೇ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ದೇಶವು ಹಣದುಬ್ಬರದ ವಿರುದ್ಧದ ಅತಿದೊಡ್ಡ ಪ್ರತಿಭಟನೆಗಳಿಗೆ ಸಾಕ್ಷಿಯಾಗುತ್ತಿದೆ. ಇದು ಹಲವಾರು ಪ್ರದೇಶಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಲೋಹ್ಡೆಗನ್, ಕುಹ್ಡಾಶ್ಟ್ ಮತ್ತು ಇಸ್ಫಹಾನ್‌ನಲ್ಲಿ ಸಾವುನೋವುಗಳ ವರದಿಗಳಿವೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್-ಸಂಯೋಜಿತ ಫಾರ್ಸ್ ಸುದ್ದಿ ಸಂಸ್ಥೆ ಮತ್ತು ಮಾನವ ಹಕ್ಕುಗಳ ಗುಂಪು ಹೆಂಗಾವ್ ಪಶ್ಚಿಮ ನಗರ ಲೋಹ್ಡೆಗನ್‌ನಲ್ಲಿ ಸಾವುಗಳನ್ನು ವರದಿ ಮಾಡಿದೆ, ಆದರೆ ಅಧಿಕಾರಿಗಳು ಕುಹ್ಡಾಶ್ಟ್ ಮತ್ತು ಇಸ್ಫಹಾನ್ ಪ್ರಾಂತ್ಯಗಳಲ್ಲಿ ಕನಿಷ್ಠ ಒಂದು ಸಾವನ್ನು ದೃಢಪಡಿಸಿದ್ದಾರೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಗಳು ಹೊಸ ಪ್ರದೇಶಗಳಿಗೆ ಹರಡುತ್ತಿದ್ದಂತೆ ಉದ್ವಿಗ್ನತೆ ಹೆಚ್ಚುತ್ತಿದೆ.