ಸ್ವಿಟ್ಜರ್ ಲೆಂಡ್ ನ ಕ್ರಾನ್ಸ್ ಮೊಂಟೆನಾದ ಐಶಾರಾಮಿ ಹೋಟೆಲ್ ವೊಂದರ ಬಾರ್ ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಸಂಭವಿಸಿದ ಭಾರಿ ಬೆಂಕಿ ಅನಾಹುತದಲ್ಲಿ 47 ಜನರು ಸಾವನ್ನಪ್ಪಿರುವುದಾಗಿ ಇಟಾಲಿಯನ್ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಹೇಳಿದ್ದಾರೆ.
ಸ್ವಿಸ್ ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಐಷಾರಾಮಿ ಬಾರ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಕನಿಷ್ಠ 47 ಜನರು ಸಾವನ್ನಪ್ಪಿದ್ದಾರೆ ಮತ್ತು 112 ಜನರು ಗಾಯಗೊಂಡಿದ್ದಾರೆ.
ಘಟನೆಗೆ ಕಾರಣ ಕುರಿತು ಸ್ವಿಸ್ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿರುವಾಗ ದೊರೆತ ವೀಡಿಯೊ ಮತ್ತು ಫೋಟೋವೊಂದು ವೈರಲ್ ಆಗಿದ್ದು, ಬೆಂಕಿ ಸ್ಫೋಟಗೊಂಡ ಕ್ಷಣವನ್ನು ತೋರಿಸುತ್ತದೆ.
ಷಾಂಪೇನ್ ಬಾಟಲಿ ಹಿಡಿದ ಜನರು ಸಂಭ್ರಮಿಸುತ್ತಿದ್ದಾಗ ಸೌಂಡ್ ಪ್ರೂಫಿಂಗ್ ಚಾವಣಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ತದನಂತರದ ಭೀತಿಯ ಕ್ಷಣಗಳನ್ನು ವಿಡಿಯೋ ತೋರಿಸುತ್ತದೆ. ಕೆಲವರು ವೇಗವಾಗಿ ಹರಡುವ ಬೆಂಕಿಯ ಜ್ವಾಲೆಯನ್ನು ನಂದಿಸಲು ಪ್ರಯತ್ನಿಸಿದ್ದರೆ, ಮತ್ತೆ ಕೆಲವರು ಅಲ್ಲಿಂದ ಓಡಿಹೋಗಲು ಇರುವ ಮಾರ್ಗಗಳನ್ನು ಹುಡುಕುವ ದೃಶ್ಯಗಳು ಕಾಣುತ್ತವೆ.
ಗುರುವಾರ ಮುಂಜಾನೆ 1:30 ರ ಸುಮಾರಿಗೆ ಬಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಯುವಕನೊಬ್ಬ ಮೇಣದ ಬತ್ತಿ ಹಿಡಿದಿದ್ದ ಯುವತಿಯನ್ನು ತನ್ನ ಭುಜದ ಮೇಲೆ ಎತ್ತಿದಾಗ ತಕ್ಷಣ ಬೆಂಕಿ ಹೊತ್ತುಕೊಂಡು ಮರದ ಸೀಲಿಂಗ್ ಕೆಳಗೆ ಬಿದ್ದಿತು ಎಂದು ಪಾರ್ಟಿಯಲ್ಲಿದ್ದ ಇಬ್ಬರು ಮಹಿಳೆಯರು ಫ್ರೆಂಚ್ ನ ಸುದ್ದಿವಾಹಿನಿ BFMTV ಗೆ ತಿಳಿಸಿದ್ದಾರೆ.