ಬ್ರೆಸಿಲಿಯಾ: ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಬೀದಿ ನಾಯಿಯೊಂದು ಆಸ್ಪತ್ರೆಗೆ ಬಂದು ಚಿಕಿತ್ಸೆ ಮಾಡಿಸಿಕೊಂಡ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಈಶಾನ್ಯ ಬ್ರೆಜಿಲ್‌ನಲ್ಲಿರುವ ಜುವಾಝೈರೊ ಡೊ ನಾರ್ಟೆ ನಗರದಲ್ಲಿ ಈ ಘಟನೆ ನಡೆದಿದ್ದು, ಕ್ಲಿನಿಕ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ನಾಯಿ ಮತ್ತು ಅದಕ್ಕೆ ಚಿಕಿತ್ಸೆ ನೀಡಿದ ವೈದ್ಯೆಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇಷ್ಟಕ್ಕೂ ಆಗಿದ್ದೇನು?
ಈಶಾನ್ಯ ಬ್ರೆಜಿಲ್‌ನಲ್ಲಿರುವ ಜುವಾಝೈರೊ ಡೊ ನಾರ್ಟೆ ನಗರದಲ್ಲಿರುವ ಆಸ್ಪತ್ರೆಗೆ ಬೀದಿ ನಾಯಿಯೊಂದು ದಿಢೀರ್ ಎಂಟ್ರಿಯಾಗಿದೆ. ಈ ವೇಳೆ ನಾಯಿ ಕಾಲಿಗೆ ಪೆಟ್ಟಾಗಿದ್ದು, ಕ್ಲಿನಿಕ್ ಪ್ರವೇಶಿಸಿದ ನಾಯಿ ತನ್ನ ಪೆಟ್ಟಾಗಿದ್ದ ಕಾಲು ತೋರಿಸಿ ಅಲ್ಲಿದ್ದ ಸಿಬ್ಬಂದಿಯ ಗಮನ ಸೆಳೆದಿದೆ.
ಈ ವೇಳೆ ಅಲ್ಲಿದ್ದ ಮಹಿಳಾ ವೈದ್ಯೆಯೊಬ್ಬರು ನಾಯಿಯನ್ನು ಕಂಡು ಕೂಡಲೇ ಅದರ ಬಳಿಗೆ ಹೋಗಿ ಪರಿಶೀಲಿಸಿದ್ದಾರೆ. ಈ ವೇಳೆ ನಾಯಿ ಕಾಲಿಗೆ ಪೆಟ್ಟಾಗಿರುವುದು ಕಂಡು ಬಂದಿದೆ.
ಕೂಡಲೇ ವೈದ್ಯ ನಾಯಿಯನ್ನು ಒಳಗೆ ಕರೆದೊಯ್ದು ಅದರ ಕಾಲನ್ನು ಮೊದಲು ಶುಚಿಗೊಳಿಸಿ ಬಳಿಕ ಅದಕ್ಕೆ ಮುಲಾಮು ಹಚ್ಚಿ ಬ್ಯಾಂಡೇಜ್ ಕಟ್ಟಿದ್ದಾರೆ. ಬಳಿಕ ನಾಯಿಯೊಂದಿಗೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ.
ವಿಡಿಯೋ ವೈರಲ್, ವೈದ್ಯೆ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, @HumanityChad ಖಾತೆಯಲ್ಲಿ ಅಪ್ಲೋಡ್ ಆಗಿರುವ ವಿಡಿಯೋಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ 2.5 ಮಿಲಿಯನ್ ವೀಕ್ಷಣೆ ಪಡೆದಿದ್ದು, 8 ಸಾವಿರ ಮಂದಿ ರಿಟ್ವೀಟ್ ಮಾಡಿದ್ದಾರೆ.
5 ವರ್ಷ ಹಳೆಯ ವಿಡಿಯೋ
ಅಂದಹಾಗೆ ಈ ವಿಡಿಯೋ 5 ವರ್ಷ ಹಳೆಯ ವಿಡಿಯೋ ಎನ್ನಲಾಗಿದ್ದು, 2021ರ ಮಾರ್ಚ್ 6ರಂದು ಈ ಘಟನೆ ನಡೆದಿತ್ತು ಎಂದು ಬಿಬಿಸಿ ವರದಿ ಮಾಡಿದೆ.
ಇದೇ ಕ್ಲಿನಿಕ್ ಗೆ ನಾಯಿ ಬಂದಿದ್ದೇಕೆ?
ಇನ್ನು ನಾಯಿ ಚಿಕಿತ್ಸೆ ಪಡೆಯಲು ಇದೇ ಕ್ಲಿನಿಕ್ ಬಂದಿದ್ದು ಏಕೆ ಪ್ರಶ್ನೆಗೂ ತಜ್ಞರು ಉತ್ತರ ನೀಡುವ ಪ್ರಯತ್ನ ಮಾಡಿದ್ದು, ನಾಯಿಗೆ ವೈದ್ಯರ ಪರಿಚಯವಿರಬಹದು. ಸಾಮಾನ್ಯವಾಗಿ ಪ್ರಾಣಿಗಳು ಪ್ರಮುಖವಾಗಿ ನಾಯಿಗಳು ವಾಸನೆ ಮತ್ತು ಪರಿಸರದ ಪರಿಚಿತತೆಯ ಮೇಲೆ ಕಾರ್ಯ ನಿರ್ವಹಿಸುತ್ತವೆ. ಹೀಗಾಗಿ ವೈದ್ಯರ ಪರಿಚಿತತೆಯ ಮೇಲೆ ಅದು ಅವರ ಕ್ಲಿನಿಕ್ ಗೆ ಹೋಗಿರಬಹುದು.
ಇದು ಸುರಕ್ಷತೆ ಮತ್ತು ಕಾಳಜಿಯನ್ನು ಸೂಚಿಸುತ್ತದೆ. ನಾಯಿಗಳು ಅಸಾಧಾರಣವಾದ ವಾಸನೆ ಮತ್ತು ಭಾವನಾತ್ಮಕ ಅರಿವನ್ನು ಹೊಂದಿವೆ ಎಂದು ಅಧ್ಯಯನಗಳು ತೋರಿಸಿವೆ, ಆಗಾಗ್ಗೆ ಅಪಾಯ ಮತ್ತು ಸೌಕರ್ಯವನ್ನು ಅರಿಯಲು ಪ್ರವೃತ್ತಿಯನ್ನು ಅವಲಂಬಿಸುತ್ತವೆ, ಇದನ್ನು ಈ ಧೈರ್ಯಶಾಲಿ ನಾಯಿ ಸಂಪೂರ್ಣವಾಗಿ ಪ್ರದರ್ಶಿಸಿತು ಎಂದು ಹೇಳಿದ್ದಾರೆ.