ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇತ್ತೀಚೆಗೆ ಏನಾಗಿದೆಯೋ ಯಾರಿಗೂ ತಿಳಿಯುತ್ತಿಲ್ಲ, ಒಂದೆಡೆ ತನ್ನ ವೈರಿ ದೇಶಗಳ ನಾಯಕರ ಕುರಿತು ಮಾತನಾಡುತ್ತಾರೆ. ಆದರೆ, ಮಿತ್ರ ರಾಷ್ಟ್ರಗಳ ನಾಯಕರ ವಿರುದ್ಧವೇ ಹೊಂಚು ಹಾಕುತ್ತಿದ್ದಾರೆ. ಜೊತೆಗೆ ಹೋದಲ್ಲೆಲ್ಲಾ ಅಸಂಬದ್ಧ ಹೇಳಿಕೆಗಳನ್ನು ಪುನರುಚ್ಚರಿಸುತ್ತಾ ಜಗತ್ತಿನ ಎದುರು ನಗೆಪಾಟಲಿಗೀಡಾಗುತ್ತಿದ್ದಾರೆ.
ಗ್ರೀನ್‌ಲ್ಯಾಂಡ್ ಮೇಲಿನ ಅಮೆರಿಕ ನಿಯಂತ್ರಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯುರೋಪಿನ ಎಂಟು ರಾಷ್ಟ್ರಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದ ಅವರು, ಇದೀಗ ಸುಂಕಗಳನ್ನು ಹೇರುವುದಿಲ್ಲ ಎಂದು ದಿಢೀರ್ ನಿರ್ಧಾರ ಕೈಗೊಂಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ.
ಹೌದು, ಟ್ರಂಪ್ 8 ಯುರೋಪಿಯನ್ ರಾಷ್ಟ್ರಗಳ ಮೇಲೆ ವಿಧಿಸಲು ಉದ್ದೇಶಿಸಿದ್ದ ಶೇ. 10ರಷ್ಟು ಆಮದು ಸುಂಕಗಳನ್ನು ಸದ್ಯಕ್ಕೆ ತಡೆಹಿಡಿಯಲು ಒಪ್ಪಿಕೊಂಡಿದ್ದಾರೆ.
ಈ ಮೂಲಕ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಉಂಟಾಗಿದ್ದ ದೊಡ್ಡ ಮಟ್ಟದ ವ್ಯಾಪಾರ ಸಮರ ತಾತ್ಕಾಲಿಕವಾಗಿ ಶಮನಗೊಂಡಂತಾಗಿದೆ.
ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಭೆಯ ಹಿನ್ನೆಲೆಯಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ.
ಗ್ರೀನ್‌ಲ್ಯಾಡ್ ವಿಷಯವಾಗಿ ಉಂಟಾಗಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ನ್ಯಾಟೋ (NATO) ಮಿತ್ರರಾಷ್ಟ್ರಗಳ ನಡುವಿನ ಸಂಬಂಧವನ್ನು ಕಾಪಾಡಲು ಎರಡೂ ಕಡೆಯವರು ಹೊಸ "ಫ್ರೇಮ್‌ವರ್ಕ್" (ಚೌಕಟ್ಟು) ಅಡಿಯಲ್ಲಿ ಮಾತುಕತೆ ನಡೆಸಲು ಮುಂದಾಗಿದ್ದಾರೆ.
ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಯುರೋಪಿಯನ್ ಮಿತ್ರರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ, ಸುಂಕದ ನಿರ್ಧಾರವನ್ನು ಸದ್ಯಕ್ಕೆ ಜಾರಿಗೆ ತರದಂತೆ ಟ್ರಂಪ್ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್ ಅವರು, ಆರ್ಕ್ಟಿಕ್ ಪ್ರದೇಶದ ಭದ್ರತೆ ಕುರಿತಾಗಿ ನಾಟೋ ಜೊತೆ ಮುಂದಿನ ಚರ್ಚೆಗಳು ನಡೆಯಲಿವೆ ಎಂದಿದ್ದಾರೆ.
ಇದೇ ವೇಳೆ ಗ್ರೀನ್‌ಲ್ಯಾಂಡ್ ಸಂಬಂಧಿತವಾಗಿ ‘ಗೋಲ್ಡನ್ ಡೋಮ್’ ಕ್ಷಿಪಣಿ ರಕ್ಷಣಾ ಯೋಜನೆಯ ಕುರಿತು ಮಾತುಕತೆ ನಡೆಯುತ್ತಿದೆ ಎಂದೂ ತಿಳಿಸಿದ್ದಾರೆ.
ಯುರೋಪಿನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಸಮಾಧಾನದ ಭಾಗವಾಗಿ ಗ್ರೀನ್‌ಲ್ಯಾಂಡ್‌ನಲ್ಲಿ ಹೆಚ್ಚುವರಿ ಅಮೆರಿಕ ಸೇನಾ ನೆಲೆಗಳನ್ನು ನಿರ್ಮಿಸುವ ಬಗ್ಗೆ ಡೆನ್ಮಾರ್ಕ್ ಮತ್ತು ನಾಟೋ ಚರ್ಚೆ ನಡೆಸಿವೆ. ಆದರೆ ಇದು ಅಧಿಕೃತ ಒಪ್ಪಂದದ ಭಾಗವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆಯೂ ಸುಂಕ ಬೆದರಿಕೆ ಹಿಂಪಡೆದಿದ್ದ ಟ್ರಂಪ್
ಇದಕ್ಕೂ ಮೊದಲು ಏಪ್ರಿಲ್ ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರೀ ಆಮದು ಸುಂಕ ವಿಧಿಸುವುದಾಗಿ ಹೇಳಿದ್ದ ಟ್ರಂಪ್, ಮಾರುಕಟ್ಟೆಗಳಲ್ಲಿ ಕುಸಿತ ಉಂಟಾದ ಬಳಿಕ ಆ ನಿರ್ಧಾರದಿಂದ ಹಿಂದೆ ಸರಿದಿದ್ದರು.
ಡಾವೋಸ್‌ನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಟ್ರಂಪ್, ಗ್ರೀನ್‌ಲ್ಯಾಂಡನ್ನು ವಶಕ್ಕೆ ತೆಗೆದುಕೊಳ್ಳಲು ಬಲಪ್ರಯೋಗ ನಡೆಸುವುದಿಲ್ಲ. ಆದರೆ ಖನಿಜದಿಂದ ಸಮೃದ್ಧವಾದ ಗ್ರೀನ್‌ಲ್ಯಾಂಡ್ ದ್ವೀಪವನ್ನು ಅಮೆರಿಕ ಮಾತ್ರ ರಕ್ಷಿಸಬಲ್ಲದು. ಅಮೆರಿಕ ಬೆಳೆಯುತ್ತಿದೆ. ಆದರೆ, ಯುರೋಪ್ ಸರಿಯಾದ ದಿಕ್ಕಿಗೆ ಸಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸುಮಾರು 70 ನಿಮಿಷಗಳ ಕಾಲ ಮಾತನಾಡಿದ ಟ್ರಂಪ್, ನ್ಯಾಟೋ ಮಿತ್ರ ದೇಶಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸುಂಕ, ಪರಿಸರ ಹಾಗೂ ವಲಸೆಗೆ ಸಂಬಂಧಿಸಿದಂತೆ ಮಿತ್ರ ದೇಶಗಳನ್ನು ಟೀಕಿಸಿದರು.
ನಾವು ಡೆನ್ಮಾರ್ಕ್‌ಗಾಗಿ ಹೋರಾಟ ನಡೆಸಿದೆವು. ಇದು ನೆಲವಲ್ಲ, ಬೃಹತ್ ಮಂಜುಗಡ್ಡೆಯಾಗಿದೆ ಹಾಗೂ ಸರಿಯಾದ ಜಾಗದಲ್ಲಿ ಇಲ್ಲ. ನಾವು ಅವರಿಗೆ ದಶಕಗಳಿಂದ ನೀಡಿರುವುದಕ್ಕೆ ಹೋಲಿಸಿದರೆ ನಾವು ಕೇಳುತ್ತಿರುವುದು ತುಂಬಾ ಕಡಿಮೆ. ಗ್ರೀನ್‌ಲ್ಯಾಂಡ್ ಅಮೆರಿಕಕ್ಕೆ ಸೇರಿದ್ದಾಗಿದೆ. ಇದನ್ನು ಡೆನ್ಮಾರ್ಕ್‌ಗೆ ಕೊಟ್ಟಿದ್ದು ತಪ್ಪಾಯಿತು. ನಾನು ಗ್ರೀನ್‌ಲ್ಯಾಂಡ್ ಪಡೆಯಲು ಬಲಪ್ರಯೋಗ ಮಾಡುತ್ತೇನೆ ಎಂದು ಜನರು ಭಾವಿಸಿದ್ದಾರೆ, ಆದರೆ ನಾನು ಬಲಪ್ರಯೋಗ ಮಾಡುವುದಿಲ್ಲ ಎಂದು ತಿಳಿಸಿದರು.
ಎರಡನೇ ವಿಶ್ವಸಮರದ ನಂತರ ನಾವು ಗ್ರೀನ್‌ಲ್ಯಾಂಡ್ ಉಳಿಸಿಕೊಂಡೆವು. ಅದನ್ನು ಡೆನ್ಮಾರ್ಕ್‌ಗೆ ಕೊಟ್ಟೆವು. ಆಗ ನಾವು ಬಲಿಷ್ಠ ದೇಶವಾಗಿದ್ದೆವು, ಈಗ ಅದಕ್ಕಿಂತಲೂ ಬಲಿಷ್ಠ ದೇಶವಾಗಿದ್ದೇವೆ. ಡೆನ್ಮಾರ್ಕ್‌ನಿಂದ ಅಮೆರಿಕಕ್ಕೆ ಗ್ರೀನ್‌ಲ್ಯಾಂಡ್ ವಹಿಸುವ ಬಗ್ಗೆ ತಕ್ಷಣವೇ ಸಂಧಾನ ನಡೆಸಬೇಕು, ಆದರೆ ಡೆನ್ಮಾರ್ಕ್ ಕೃತಘ್ನ ದೇಶವಾಗಿದೆ ಎಂದರು.
ನಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ, ಅಮೆರಿಕದ ಮೇಲೆ ದಾಳಿ ನಡೆದರೆ ನಾಟೋ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸ್ಪಷ್ಟಪಡಿಸಿದ ನಂತರ ಟ್ರಂಪ್ ತಮ್ಮ ಸುಂಕ ನಿರ್ಧಾರವನ್ನು ಹಿಂಪಡೆದಿದ್ದಾರೆಂದು ತಿಳಿದುಬಂದಿದೆ.
ಡೆನ್ಮಾರ್ಕ್ ಪ್ರತಿಕ್ರಿಯೆ
ಡೆನ್ಮಾರ್ಕ್ ವಿದೇಶಾಂಗ ಸಚಿವ ಲಾರ್ಸ್ ಲೋಕ್ಕ ರಾಸ್ಮುಸನ್ ಅವರ ಪ್ರತಿಕ್ರಿಯೆ ನೀಡಿ, “ಬಲಪ್ರಯೋಗದಿಂದ ಗ್ರೀನ್‌ಲ್ಯಾಂಡ್ ಪಡೆಯುವ ಮಾತನ್ನು ಟ್ರಂಪ್ ಕೈಬಿಟ್ಟಿರುವುದನ್ನು ಸ್ವಾಗತಿಸುತ್ತೇವೆ. ಯುರೋಪ್ ವಿರುದ್ಧದ ವ್ಯಾಪಾರ ಯುದ್ಧಕ್ಕೂ ವಿರಾಮ ಸಿಕ್ಕಿದೆ ಎಂದು ಹೇಳಿದ್ದಾರೆ.
ಗ್ರೀನ್‌ಲ್ಯಾಂಡ್‌ನಲ್ಲಿ ಆತಂಕ
ಏತನ್ಮಧ್ಯೆ ಗ್ರೀನ್‌ಲ್ಯಾಂಡ್ ಸರ್ಕಾರವು ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ಐದು ದಿನಗಳ ಕಾಲ ತುರ್ತು ಪರಿಸ್ಥಿತಿಯಲ್ಲಿ ಬದುಕಲು ಬೇಕಾದ ಆಹಾರ, ನೀರು ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಕೊಳ್ಳುವಂತೆ ಸೂಚಿಸಿದೆ. ಸರ್ಕಾರದ ಸೂಚನೆ ಬೆನ್ನಲ್ಲೇ ರಾಜಧಾನಿ ನೂಕ್‌ನಲ್ಲಿ ಜನರು ಆಹಾರ ಮತ್ತು ಇಂಧನ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.