ಕರಾಚಿ: ಮಾಜಿ ಕ್ರಿಕೆಟಿಗನ ಪುತ್ರನೋರ್ವ ಬಂಧನ ಭೀತಿ ಎದುರಿಸುತ್ತಿದ್ದು, ಮನೆಗೆಲಸದಾಕೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಬಂದಿದೆ.
ಪಾಕಿಸ್ತಾನದ ಮಾಜಿ ಸ್ಪಿನ್ನರ್ ಅಬ್ದುಲ್ ಖಾದಿರ್ ಅವರ ಪುತ್ರ ಸುಲೇಮಾನ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ತಮ್ಮದೇ ಮನೆಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಗಂಭೀರ ಆರೋಪ ಕೇಳಿಬಂದಿದೆ.
ಪ್ರಸ್ತುತ ಸಂತ್ರಸ್ಥ ಮಹಿಳೆ ಎಫ್ಐಆರ್ ದಾಖಲಿಸಿದ್ದು, ಮಹಿಳೆ ದೂರಿನ ಆಧಾರದ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸುಲೇಮಾನ್ ನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಸುಲೇಮಾನ್ ಅವರ ಮನೆಯಲ್ಲಿ ಸಂತ್ರಸ್ಥ ಮಹಿಳೆ ಕೆಲಸ ಮಾಡುತ್ತಿದ್ದರು. ಈ ವೇಳೆ ಸುಲೇಮಾನ್ ಸಂತ್ರಸ್ಥೆಯನ್ನು ಕೆಲಸದ ನೆಪವೊಡ್ಡಿ ಬಲವಂತವಾಗಿ ತಮ್ಮ ತೋಟದ ಮನೆಗೆ ಆಕೆಯನ್ನು ಕರೆದೊಯ್ದಿದ್ದಾರೆ.
ಅಲ್ಲಿ ಅವರು ಅವರ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಮಹಿಳೆ ಹೇಳಿದ್ದಾರೆ. ಈ ವೇಳೆ ನಾನು ಸಾಕಷ್ಟು ಬಾರಿ ಬೇಡ ಬೇಡ ಎಂದರೂ ಬಿಡದೇ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರು ಎಂದು ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಆರೋಪಿ ವಶಕ್ಕೆ
ಆರೋಪಿ ಸುಲೇಮಾನ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ದೂರಿನ ನಂತರ, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು, ಇದು ಅತ್ಯಾಚಾರವನ್ನು ದೃಢಪಡಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವತಃ ಕ್ರಿಕೆಟಿಗರಾಗಿದ್ದ ಸುಲೇಮಾನ್
ಇನ್ನು 41 ವರ್ಷದ ಸುಲೇಮಾನ್ 2005 ರಿಂದ 2013 ರವರೆಗೆ 26 ಪ್ರಥಮ ದರ್ಜೆ ಪಂದ್ಯಗಳು ಮತ್ತು 40 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಅವರ ತಂದೆ ಅಬ್ದುಲ್ ಖಾದಿರ್ ಅವರನ್ನು ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.
ಅಬ್ದುಲ್ ಪಾಕಿಸ್ತಾನ ಪರ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 104 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ. ಅಬ್ದುಲ್ 1980 ರ ದಶಕದಲ್ಲಿ ಲೆಗ್ ಸ್ಪಿನ್ ಅನ್ನು ಪುನರುಜ್ಜೀವನಗೊಳಿಸಲು ಹೆಸರುವಾಸಿಯಾಗಿದ್ದಾರೆ.