ವಿಶ್ವಸಂಸ್ಥೆ: ಪಾಕಿಸ್ತಾನದ ನಿರಂತರ ಭಯೋತ್ಪಾದನೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದೆ. ಆಪರೇಷನ್ ಸಿಂಧೂರ ವಿಚಾರದಲ್ಲಿ ತಪ್ಪು ಹೇಳಿಕೆ ಹಿನ್ನೆಲೆಯಲ್ಲಿ
ಇಸ್ಲಾಮಾಬಾದ್ ವಿರುದ್ಧ ಕಿಡಿಕಾರಿದ ಭಾರತ, ಪಾಕಿಸ್ತಾನ ಭಯೋತ್ಪಾದನೆಯನ್ನು ತನ್ನ ರಾಷ್ಟ್ರ ನೀತಿಯ ಸಾಧನವನ್ನಾಗಿ ಬಳಸುವುದನ್ನು ಮುಂದುವರೆಸಿದೆ ಎಂದು ಆರೋಪಿಸಿದೆ.
ಸೋಮವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬಹಿರಂಗ ಚರ್ಚೆಯಲ್ಲಿ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಅಸಿಮ್ ಇಫ್ತಿಕರ್ ಅಹ್ಮದ್ ಹೇಳಿಕೆಗಳಿಗೆ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಅಹ್ಮದ್ ಆಪರೇಷನ್ ಸಿಂಧೂರ, ಜಮ್ಮು ಮತ್ತು ಕಾಶ್ಮೀರ ಮತ್ತು ಸಿಂಧೂ ಜಲ ಒಪ್ಪಂದ, ಅಂತಾರಾಷ್ಟ್ರೀಯ ಕಾನೂನಿಗೆ ಬದ್ಧತೆ, ಶಾಂತಿ, ನ್ಯಾಯ ಮತ್ತು ದ್ವಿಪಕ್ಷೀಯತೆ ಮಾರ್ಗಗಳ' ಕುರಿತು ಮಾತನಾಡಿದರು. ಭದ್ರತಾ ಮಂಡಳಿಯ ಚುನಾಯಿತ ಸದಸ್ಯರಾಗಿರುವ ಪಾಕಿಸ್ತಾನವು ಭಾರತ ಮತ್ತು ಅದರ ಜನರಿಗೆ ಹಾನಿ ಮಾಡುವ ಏಕೈಕ ಅಂಶದ ಕಾರ್ಯಸೂಚಿಯನ್ನು ಹೊಂದಿದೆ ಎಂದು ಹರೀಶ್ ಹೇಳಿದರು.
ಆಪರೇಷನ್ ಸಿಂಧೂರ್‌ಗೆ ಪಾಕಿಸ್ತಾನ ಸೂಕ್ತ ಪ್ರತಿಕ್ರಿಯೆ ನೀಡಿದೆ ಎಂಬ ಅಹ್ಮದ್ ಹೇಳಿಕೆ ವಿರುದ್ಧ ಕಿಡಿಕಾರಿದ ಹರೀಶ್, ಪಾಕಿಸ್ತಾನ ಬಯಸಿದಂತೆ ಭಯೋತ್ಪಾದನೆಯನ್ನು ಎಂದಿಗೂ ಸಾಮಾನ್ಯಗೊಳಿಸಲಾಗದು. ಪಾಕಿಸ್ತಾನ ಭಯೋತ್ಪಾದನೆಯನ್ನು ತನ್ನ ನೀತಿಯ ಸಾಧನವಾಗಿ ಬಳಸುವುದನ್ನು ಸಹಿಸಿಕೊಳ್ಳವುದು ಅಸಾಧ್ಯ. ಭಾರತ ತನ್ನ ನಾಗರಿಕರ ಸುರಕ್ಷತೆ ಖಾತ್ರಿಗೆ ಏನು ಬೇಕಾದರೂ ಮಾಡುತ್ತದೆ ಎಂದು ತಿರುಗೇಟು ನೀಡಿದರು.
ಆಪರೇಷನ್ ಸಿಂಧೂರ ವಿಚಾರದಲ್ಲಿ ಸತ್ಯಗಳು ಸ್ಪಷ್ಟವಾಗಿವೆ. 2025 ರ ಏಪ್ರಿಲ್‌ನಲ್ಲಿ ಪಹಲ್ಗಾಮ್ ನಲ್ಲಿ ಪಾಕ್ ಪ್ರಚೋದಿತ ಉಗ್ರರು 26 ಅಮಾಯಕ ನಾಗರಿಕರನ್ನು ಕೊಂದಿದ್ದರು. ಈ ಕೃತ್ಯದ ಉಗ್ರರು, ಸಂಘಟಕರು, ಹಣಕಾಸು ಪೂರೈಕದಾರರು ಮತ್ತು ಪ್ರಾಯೋಜಕರನ್ನು ಕಂಡುಹಿಡಿದು ನ್ಯಾಯ ಒದಗಿಸಲಾಗುವುದು ಎಂದು ಹೇಳಿದ್ದೇವು. ಅದೇ ರೀತಿಯಲ್ಲಿ ಮಾಡಿದ್ದೇವೆ ಎಂದು ಕಳೆದ ವರ್ಷ ಏಪ್ರಿಲ್ ನಲ್ಲಿ ಭದ್ರತಾ ಮಂಡಳಿ ಹೊರಡಿಸಿದ್ದ ಹೇಳಿಕೆಯನ್ನು ಹರೀಶ್ ಉಲ್ಲೇಖಿಸಿದರು.