ಇರಾನ್-ಅಮೆರಿಕಾ ಕದನ ವಿರಾಮ ಒಪ್ಪಂದದ ವಿಚಾರವಾಗಿ ಅಮೆರಿಕ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಘರ್ಷ ಈಗ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇಸ್ರೇಲ್‌ಗೆ ಅಮೆರಿಕವೇ ಏಕೈಕ ಮಿತ್ರ ರಾಷ್ಟ್ರ ಎಂಬ ವಾಷಿಂಗ್ಟನ್‌ನ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇರವಾಗಿಯೇ ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲದೆ, "ಇಸ್ರೇಲ್ ಹಿಂದೆ 140 ಕೋಟಿ ಭಾರತೀಯರ ಪ್ರಚಂಡ ಬೆಂಬಲವಿದೆ" ಎಂದು ಹೇಳುವ ಮೂಲಕ ಅಮೆರಿಕಕ್ಕೆ ತಿರುಗೇಟು ನೀಡಿದ್ದಾರೆ.
ಭಾರತವು ಇಸ್ರೇಲ್‌ನ ಅತ್ಯಂತ ದೊಡ್ಡ ಬೆಂಬಲಿಗ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಹೇಳಿರುವ ಅವರು, "1.4 ಬಿಲಿಯನ್ ಜನಸಂಖ್ಯೆಯ ಭಾರತದ ಜನರಿಂದ ನಮಗೆ ಅಪಾರ ಬೆಂಬಲವಿದೆ" ಎಂದು ತಿಳಿಸಿದ್ದಾರೆ.
ಗಾಜಾ, ಇರಾನ್ ಮತ್ತು ಲೆಬನಾನ್‌ನಲ್ಲಿ ನಡೆಯುತ್ತಿರುವ ಯುದ್ಧಗಳ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಜಾಗತಿಕ ಮಟ್ಟದಲ್ಲಿ ಟೀಕೆಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ನೆತನ್ಯಾಹು ಈ ಹೇಳಿಕೆ ನೀಡಿದ್ದಾರೆ.
Fox Newsಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನೆತನ್ಯಾಹು, ಜೆಡಿ ವ್ಯಾನ್ಸ್ ಅವರ ಹೇಳಿಕೆಯನ್ನು ನೇರವಾಗಿ ಪ್ರಸ್ತಾಪಿಸಿ, ಇಸ್ರೇಲ್‌ಗೆ ಅಮೆರಿಕ ಮಾತ್ರವಲ್ಲದೆ ಹಲವು ರಾಷ್ಟ್ರಗಳ ಬೆಂಬಲವೂ ಇದೆ ಎಂದು ಸ್ಪಷ್ಟಪಡಿಸಿದರು.
"ನಮಗೆ ಭಾರತದಂತಹ ಮತ್ತೊಂದು ದೊಡ್ಡ ಸ್ನೇಹಿತ ರಾಷ್ಟ್ರವಿದೆ. ಅದು ಚಿಕ್ಕ ದೇಶವಲ್ಲ, 1.4 ಬಿಲಿಯನ್ ಜನಸಂಖ್ಯೆ ಹೊಂದಿರುವ ಭಾರತ. ಅಲ್ಲಿನ ಜನರಿಂದ ನಮಗೆ ಅಪಾರ ಬೆಂಬಲ ಸಿಗುತ್ತಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಇಸ್ರೇಲ್‌ಗೆ ವ್ಯಕ್ತವಾಗುತ್ತಿರುವ ಬೆಂಬಲವನ್ನು ಉಲ್ಲೇಖಿಸಿದ ನೆತನ್ಯಾಹು, ವಿಶೇಷವಾಗಿ ಫೇಸ್‌ಬುಕ್‌ನಲ್ಲಿ ಭಾರತೀಯರಿಂದ ಸಾವಿರಾರು ಬೆಂಬಲ ಸಂದೇಶಗಳು ಬರುತ್ತಿವೆ ಎಂದು ಹೇಳಿದರು. ಭಾರತದಲ್ಲಿ ಇಸ್ರೇಲ್ ಪರವಾಗಿ ವ್ಯಕ್ತವಾಗುತ್ತಿರುವ ಜನಾಭಿಪ್ರಾಯವು ತಮ್ಮನ್ನು ಆಶ್ಚರ್ಯಚಕಿತರನ್ನಾಗಿಸಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದ ಇತಿಹಾಸದಲ್ಲಿ ಇಸ್ರೇಲ್‌ಗೆ ಅತ್ಯಂತ ದೊಡ್ಡ ಸ್ನೇಹಿತ ಎಂದು ಬಣ್ಣಿಸಿದ ನೆತನ್ಯಾಹು, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಬಗ್ಗೆ ಗೌರವ ವ್ಯಕ್ತಪಡಿಸಿದರು.
"ನಾನು ವ್ಯಾನ್ಸ್ ಅವರನ್ನು ಗೌರವಿಸುತ್ತೇನೆ. ಆದರೆ, ಅವರು ಹೇಳುವ ಪ್ರತಿಯೊಂದು ಮಾತನ್ನೂ ನಾನು ಒಪ್ಪಿಕೊಳ್ಳಬೇಕೆಂದಿಲ್ಲ. ಕೆಲವು ವಿಷಯಗಳಲ್ಲಿ ನನ್ನ ಅಭಿಪ್ರಾಯ ಭಿನ್ನವಾಗಿದೆ," ಎಂದು ಹೇಳಿದರು.
ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವ್ಯಾನ್ಸ್, ಇರಾನ್ ಜೊತೆಗಿನ ಕದನ ವಿರಾಮ ಮಾತುಕತೆಗಳ ಕುರಿತು ಪ್ರತಿಕ್ರಿಯಿಸುತ್ತಾ, "ನಾನು ಇಸ್ರೇಲ್ ಸಚಿವ ಸಂಪುಟದಲ್ಲಿದ್ದರೆ, ವಿಶ್ವದಲ್ಲಿ ಉಳಿದಿರುವ ಏಕೈಕ ಪ್ರಬಲ ಮಿತ್ರ ರಾಷ್ಟ್ರವಾದ ಅಮೆರಿಕದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ," ಎಂದು ಹೇಳಿದ್ದರು. ಈ ಹೇಳಿಕೆಯನ್ನು ಅಮೆರಿಕ-ಇಸ್ರೇಲ್ ಸಂಬಂಧಗಳ ಕುರಿತ ಮಹತ್ವದ ಸಂದೇಶವೆಂದು ವಿಶ್ಲೇಷಿಸಲಾಗಿತ್ತು.
ನೆತನ್ಯಾಹು ತಮ್ಮ ಸಂದರ್ಶನದಲ್ಲಿ ಇಸ್ರೇಲ್‌ಗೆ ಹಲವು ದೇಶಗಳ ಬೆಂಬಲವಿದೆ ಎಂಬುದನ್ನೂ ಒತ್ತಿ ಹೇಳಿದರು. ಕೆಲವು ರಾಷ್ಟ್ರಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್ ವಿರೋಧಿ ಹಾಗೂ ಯೆಹೂದಿ ವಿರೋಧಿ (Anti-Semitic) ಪೋಸ್ಟ್‌ಗಳು ಹೆಚ್ಚಾಗಿ ಕಾಣಿಸಬಹುದು. ಆದರೆ, ಅದೇ ರಾಷ್ಟ್ರಗಳ ನಾಯಕರು ಖಾಸಗಿಯಾಗಿ ತಮ್ಮನ್ನು ಸಂಪರ್ಕಿಸಿ ವಿವಿಧ ಒಪ್ಪಂದಗಳಿಗೆ ಸಹಿ ಹಾಕಲು, ಭದ್ರತಾ ಸಹಕಾರದ ಬಗ್ಗೆ ಚರ್ಚಿಸಲು ಮತ್ತು ಇಸ್ರೇಲ್ ಸೇನೆಯ ಕಾರ್ಯತಂತ್ರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಾರೆ ಎಂದು ತಿಳಿಸಿದರು.
"ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಚಿತ್ರಣವೇ ನಿಜವಾದ ಅಂತರರಾಷ್ಟ್ರೀಯ ಸಂಬಂಧಗಳ ಪ್ರತಿಬಿಂಬವಲ್ಲ. ಅನೇಕ ದೇಶಗಳೊಂದಿಗೆ ನಮ್ಮ ಸಂಬಂಧಗಳು ಉತ್ತಮವಾಗಿವೆ. ಹಲವರು ಬಹಿರಂಗವಾಗಿ ಹೇಳದಿದ್ದರೂ, ಖಾಸಗಿಯಾಗಿ ನಮ್ಮೊಂದಿಗೆ ಸಹಕಾರ ಮುಂದುವರಿಸುತ್ತಿದ್ದಾರೆ. ನಮಗೆ ಅನೇಕ ಸ್ನೇಹಿತ ರಾಷ್ಟ್ರಗಳಿವೆ," ಎಂದು ಹೇಳಿದರು.
ಇದೇ ಸಂದರ್ಶನದಲ್ಲಿ ಲೆಬನಾನ್ ಕುರಿತು ಕೂಡ ಮಾತನಾಡಿರುವ ಅವರು, ದಕ್ಷಿಣ ಲೆಬನಾನ್‌ನ ಕೆಲವು ಕ್ರೈಸ್ತ ಗ್ರಾಮಗಳು ತಮ್ಮನ್ನು ಇಸ್ರೇಲ್‌ಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಿವೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು. ಹಿಜ್ಬುಲ್ಲಾ ಉಗ್ರರಿಂದ ತಮ್ಮ ಜೀವಕ್ಕೆ ಅಪಾಯವಿರುವ ಕಾರಣ ಇಸ್ರೇಲ್ ರಕ್ಷಣೆ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ ಎಂದು ನೆತನ್ಯಾಹು ಹೇಳಿದರು.
"ದಕ್ಷಿಣ ಲೆಬನಾನ್‌ನ ಕೆಲವು ಕ್ರೈಸ್ತ ಗ್ರಾಮಗಳು ನಮ್ಮನ್ನು ಸಂಪರ್ಕಿಸಿ, ಇಸ್ರೇಲ್‌ಗೆ ಸೇರಿಸಿಕೊಳ್ಳುವಂತೆ ಕೇಳಿಕೊಂಡಿವೆ. ಹಿಜ್ಬುಲ್ಲಾ ಉಗ್ರರಿಂದ ಅವರನ್ನು ನಾವು ರಕ್ಷಿಸುತ್ತಿದ್ದೇವೆ. ಕ್ರೈಸ್ತ ಸಮುದಾಯದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ," ಎಂದು ಹೇಳಿದರು.
ಇರಾನ್ ಜೊತೆ ಅಮೆರಿಕ ಮಾಡಿಕೊಂಡಿರುವ ಒಪ್ಪಂದದಲ್ಲಿ ಇಸ್ರೇಲ್ ತನ್ನ ಸೇನೆಯನ್ನು ಲೆಬನಾನ್‌ನಿಂದ ಹಿಂತೆಗೆದುಕೊಳ್ಳುವ ಪ್ರಸ್ತಾಪ ಇದ್ದರೂ, ಇಸ್ರೇಲ್ ಇನ್ನೂ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿಲ್ಲ.
ಈ ಹಿನ್ನೆಲೆಯಲ್ಲಿ ನೆತನ್ಯಾಹು ನೀಡಿರುವ ಹೊಸ ಹೇಳಿಕೆ ಮಧ್ಯಪ್ರಾಚ್ಯದ ರಾಜಕೀಯ ಬೆಳವಣಿಗೆಗಳಿಗೆ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಅಮೆರಿಕ-ಇಸ್ರೇಲ್ ಸಂಬಂಧಗಳು, ಭಾರತದ ಬೆಂಬಲ ಮತ್ತು ಲೆಬನಾನ್‌ನ ಪರಿಸ್ಥಿತಿ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.