ಎಸ್. ಜೈಶಂಕರ್ 
ವಿದೇಶ

ಕಡಲ ಭದ್ರತೆ, ನಾವಿಕರ ಸುರಕ್ಷತೆಗೆ ಬದ್ಧ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ನಿಲುವು ಸ್ಪಷ್ಟಪಡಿಸಿದ ಜೈಶಂಕರ್

ಸಮುದ್ರ ಮಾರ್ಗಗಳ ಭದ್ರತೆ, ನಾವಿಕರ ಸುರಕ್ಷತೆ, ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆ ಹಾಗೂ ಜಾಗತಿಕ ದಕ್ಷಿಣದ (Global South) ಧ್ವನಿಗೆ ಆದ್ಯತೆ ನೀಡುವುದಾಗಿ ಘೋಷಿಸಿದರು.

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ನಿಯಮ ಆಧಾರಿತ ಕಡಲ ವ್ಯವಸ್ಥೆಯನ್ನು ಕಾಪಾಡಲು ಮತ್ತು ಜಾಗತಿಕ ಸಮುದ್ರ ಮಾರ್ಗಗಳಲ್ಲಿ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಲು ಭಾರತ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ 2028-29ರ ಅವಧಿಗೆ ಭಾರತದ ತಾತ್ಕಾಲಿಕ ಸದಸ್ಯತ್ವದ ಅಧಿಕೃತ ಜಾಗತಿಕ ಪ್ರಚಾರಕ್ಕೆ ಚಾಲನೆ ನೀಡಿ ಜೈಶಂಕರ್ ಅವರು ಮಾತನಾಡಿದರು.

ಸಮುದ್ರ ಮಾರ್ಗಗಳ ಭದ್ರತೆ, ನಾವಿಕರ ಸುರಕ್ಷತೆ, ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆ ಹಾಗೂ ಜಾಗತಿಕ ದಕ್ಷಿಣದ (Global South) ಧ್ವನಿಗೆ ಆದ್ಯತೆ ನೀಡುವುದಾಗಿ ಘೋಷಿಸಿದರು.

ಸೋಮವಾರ ವಿಶ್ವಸಂಸ್ಥೆಯ ರಾಯಭಾರಿಗಳು, ರಾಜತಾಂತ್ರಿಕರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯಲ್ಲಿ ಭಾರತದ ಕಾರ್ಯತಂತ್ರ 'ಶಾಂತಿ (SHANTI – Securing Holistic Advancement through Norms, Trust and Integrity)' ಎಂಬ ಪರಿಕಲ್ಪನೆಯ ಮೇಲೆ ಆಧಾರಿತವಾಗಿದ್ದು, ಇದೇ ಮಾರ್ಗಸೂಚಿಯಡಿ ಭಾರತ ತನ್ನ ಆದ್ಯತೆಗಳನ್ನು ಮುಂದಿರಿಸಲಿದೆ ಎಂದು ಹೇಳಿದರು.

ಭಾರತವು ತನ್ನ ಪ್ರಚಾರದಲ್ಲಿ ಜಾಗತಿಕ ದಕ್ಷಿಣದ ಧ್ವನಿಯಾಗುವುದು, ಬಹುಪಕ್ಷೀಯ ವ್ಯವಸ್ಥೆಯಲ್ಲಿ ಸುಧಾರಣೆ, ಭವಿಷ್ಯಕ್ಕೆ ಸಜ್ಜಾದ ಶಾಂತಿಪಾಲನಾ ಕಾರ್ಯಾಚರಣೆ, ಕೃತಕ ಬುದ್ಧಿಮತ್ತೆ (AI) ದುರುಪಯೋಗದಿಂದ ಉಂಟಾಗುವ ಅಪಾಯಗಳನ್ನು ಎದುರಿಸುವುದು, ಸಮುದ್ರ ಮಾರ್ಗಗಳ ಭದ್ರತೆ ಹಾಗೂ ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆ ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಒತ್ತು ನೀಡಲಿದೆ ಎಂದು ತಿಳಿಸಿದರು.

ಸಮುದ್ರ ಮಾರ್ಗಗಳ ಭದ್ರತೆಗೆ ಆದ್ಯತೆ

ಇತ್ತೀಚಿನ ಜಾಗತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಮುದ್ರ ಮಾರ್ಗಗಳ ಭದ್ರತೆ ಅತ್ಯಂತ ಮಹತ್ವ ಪಡೆದಿದೆ. ಜಾಗತಿಕ ಆರ್ಥಿಕತೆ ಇಂದು ಸಮುದ್ರ ವ್ಯಾಪಾರ ಮತ್ತು ಪೂರೈಕೆ ಸರಪಳಿಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಸಮುದ್ರ ಮಾರ್ಗಗಳು ಮುಕ್ತ, ಸುರಕ್ಷಿತ ಹಾಗೂ ನಿಯಮಾಧಾರಿತವಾಗಿರಬೇಕು. ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದ (UNCLOS) ಕಟ್ಟುನಿಟ್ಟಾಗಿ ಪಾಲನೆಯಾಗಬೇಕು" ಎಂದು ಹೇಳಿದರು.

ಜಾಗತಿಕ ವ್ಯಾಪಾರ ನಿರಾತಂಕವಾಗಿ ಸಾಗಬೇಕಾದರೆ ಸಮುದ್ರ ಮಾರ್ಗಗಳ ಸುರಕ್ಷತೆ ಅತ್ಯಗತ್ಯ. ಕಡಲ್ಗಳ್ಳತನ, ಮಾದಕವಸ್ತು ಕಳ್ಳಸಾಗಣೆ ಹಾಗೂ ಮಾನವ ಕಳ್ಳಸಾಗಣೆಯನ್ನು ತಡೆಯಲು ರಾಷ್ಟ್ರಗಳು ಪರಸ್ಪರ ಸಹಕರಿಸಬೇಕಿದೆ ಎಂದು ತಿಳಿಸಿದರು.

ಗಲ್ಫ್ ಸಂಘರ್ಷದಿಂದ ನಾವಿಕರ ಸುರಕ್ಷತೆಗೆ ಸವಾಲು

ಇದೇ ವೇಳೆ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದ ನಾವಿಕರ ಸುರಕ್ಷತೆ ಗಂಭೀರ ಸವಾಲಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

"ಗಲ್ಫ್ ಪ್ರದೇಶದಲ್ಲಿ ನಡೆದ ಬೆಳವಣಿಗೆಗಳಿಂದ ನಾವಿಕರ ಜೀವಕ್ಕೆ ಅಪಾಯ ಎದುರಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು, ಮಾನವೀಯ ನೆರವು, ವಿಪತ್ತು ಪರಿಹಾರ ಹಾಗೂ ಸಾಮರ್ಥ್ಯ ವೃದ್ಧಿಯಲ್ಲಿ ಭಾರತ ದೀರ್ಘಕಾಲದಿಂದ ಸಕ್ರಿಯ ಪಾತ್ರ ವಹಿಸಿದೆ. ಈ ಎಲ್ಲ ವಿಷಯಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅಗತ್ಯ ಪ್ರಾಮುಖ್ಯತೆ ಸಿಗುವಂತೆ ಭಾರತ ಪ್ರಯತ್ನಿಸಲಿದೆ" ಎಂದು ಹೇಳಿದರು.

ಭಾರತದ ನೌಕಾಪಡೆ ಇಂಡೋ-ಪೆಸಿಫಿಕ್‌ನಾದ್ಯಂತ, ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಅರೇಬಿಯನ್ ಸಮುದ್ರ, ಅಡೆನ್ ಕೊಲ್ಲಿ, ಮಲಕ್ಕಾ ಜಲಸಂಧಿಗಳು ಮತ್ತು ಗಿನಿಯಾ ಕೊಲ್ಲಿಯಲ್ಲಿ ಸಮುದ್ರ ಮಾರ್ಗಗಳ ಭದ್ರತೆಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಹಾರ್ಮುಜ್ ಉದ್ವಿಗ್ನತೆ ಕುರಿತು ಪರೋಕ್ಷ ಉಲ್ಲೇಖ

ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಉದ್ವಿಗ್ನತೆ ಜಾಗತಿಕ ಇಂಧನ ಪೂರೈಕೆ, ಸರಕು ಸಾಗಣೆ ಹಾಗೂ ನಾವಿಕರ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.

ಈ ಸಂಘರ್ಷದ ನಡುವೆ 11 ಭಾರತೀಯರು ಮೃತಪಟ್ಟಿದ್ದು, ಹಲವು ಭಾರತೀಯ ನಾವಿಕರನ್ನು ರಕ್ಷಿಸಲಾಗಿದೆ. ಹಡಗುಗಳು ಮತ್ತು ತೈಲ ಟ್ಯಾಂಕರ್‌ಗಳ ಮೇಲೆ ದಾಳಿಗಳು ನಡೆದಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.

ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆಗೂ ಒತ್ತು

ಭಾರತದ ಮತ್ತೊಂದು ಪ್ರಮುಖ ಆದ್ಯತೆ ಭಯೋತ್ಪಾದನೆಗೆ ಹಣಕಾಸು ಪೂರೈಕೆಯನ್ನು ತಡೆಯುವುದಾಗಿದೆ ಎಂದು ಜೈಶಂಕರ್ ಹೇಳಿದರು.

"ಭಯೋತ್ಪಾದನೆಯ ಪರಿಣಾಮಗಳನ್ನು ಎದುರಿಸುವುದಷ್ಟೇ ಸಾಕಾಗುವುದಿಲ್ಲ. ಅದರ ಮೂಲ ಸಂಪನ್ಮೂಲಗಳನ್ನು ಕಡಿತಗೊಳಿಸುವತ್ತ ಜಗತ್ತು ಗಮನ ಹರಿಸಬೇಕು. ಭಯೋತ್ಪಾದಕ ಸಂಘಟನೆಗಳನ್ನು ಗುರುತಿಸುವಲ್ಲಿ ವಸ್ತುನಿಷ್ಠ ಹಾಗೂ ಸಾಕ್ಷ್ಯಾಧಾರಿತ ಕ್ರಮಗಳನ್ನು ಭಾರತ ಬೆಂಬಲಿಸಲಿದೆ ಎಂದು ಅವರು ಹೇಳಿದರು.

ಕೃತಕ ಬುದ್ಧಿಮತ್ತೆಯ (AI) ದುರುಪಯೋಗದಿಂದ ಎದುರಾಗುವ ಅಪಾಯಗಳನ್ನು ತಡೆಯುವ ಜೊತೆಗೆ, ಮಾನವ ಕೇಂದ್ರಿತ ಎಐ ಬಳಕೆಗೆ ಭಾರತ ಬದ್ಧವಾಗಿದೆ.

ಪ್ರಸ್ತುತ ವಿಶ್ವಸಂಸ್ಥೆಯ 11 ಸಕ್ರಿಯ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ 10 ಕಾರ್ಯಾಚರಣೆಗಳಿಗೆ ಭಾರತ ಸುಮಾರು 4,300 ಯೋಧರನ್ನು ನಿಯೋಜಿಸಿದ್ದು, ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಭಾರತಕ್ಕೆ ಅಪಾರ ಅನುಭವವಿದೆ ಎಂದು ತಿಳಿಸಿದರು.

ಸಂವಾದ ಮತ್ತು ರಾಜತಾಂತ್ರಿಕತೆಗೆ ಆದ್ಯತೆ

ಇಂದಿನ ಜಗತ್ತು ಅನೇಕ ಸಂಘರ್ಷಗಳು ಮತ್ತು ಉದ್ವಿಗ್ನತೆಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ಸದಾ ಸಂವಾದ ಮತ್ತು ರಾಜತಾಂತ್ರಿಕ ಮಾರ್ಗವನ್ನೇ ಅನುಸರಿಸಿದೆ. ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಿ ಸಾಮಾನ್ಯ ನೆಲೆಯನ್ನು ಹುಡುಕಲು ನಾವು ನಿರಂತರ ಪ್ರಯತ್ನಿಸಿದ್ದೇವೆ. ವಿಶೇಷವಾಗಿ ಜಾಗತಿಕ ದಕ್ಷಿಣದ ರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ಆದ್ಯತೆಯಾಗಿದೆ" ಎಂದು ಜೈಶಂಕರ್ ಹೇಳಿದರು.

2028-29ರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯತ್ವಕ್ಕಾಗಿ ನಡೆಯಲಿರುವ ಚುನಾವಣೆಯಲ್ಲಿ ಭಾರತ ಏಷ್ಯಾ-ಪೆಸಿಫಿಕ್ ವಿಭಾಗದ ಏಕೈಕ ಸ್ಥಾನಕ್ಕಾಗಿ ತಜಿಕಿಸ್ತಾನದೊಂದಿಗೆ ಸ್ಪರ್ಧಿಸಲಿದೆ. ಈ ಚುನಾವಣೆ ಮುಂದಿನ ವರ್ಷದ ಜೂನ್‌ನಲ್ಲಿ ನಡೆಯಲಿದೆ.

'Navigation systems' ಸ್ಥಗಿತಗೊಳಿಸಿ ನಿಷೇಧಿತ ಮಾರ್ಗದಲ್ಲಿ ಸಂಚರಿಸಿದ್ದರು', ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿದ್ದರು: UAE ಹಡಗುಗಳ ಮೇಲಿನ ದಾಳಿಗೆ Iran ಸಮರ್ಥನೆ..!

ಅಮೆರಿಕ ದಾಳಿಗೆ Iran ಪ್ರತೀಕಾರ; Hormuzನಲ್ಲಿ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿಗಳ ಸುರಿಮಳೆ; ಭಾರತೀಯ ನಾವಿಕ ಸಾವು, 8 ಮಂದಿಗೆ ಗಾಯ

ತಿರುಪತಿಯನ್ನು ರಾಜಕೀಯ ಅಖಾಡವಾಗಿಸಬೇಡಿ, ಆ ಹಕ್ಕು ಕೇವಲ ಮೈಸೂರು ಮಹಾರಾಜರಿಗೆ ಮಾತ್ರ: ಡಿಕೆ ಶಿವಕುಮಾರ್ ‘ಆರತಿ’ ಪ್ರಸ್ತಾವನೆಗೆ TTD ಗರಂ..!

ಮೊದಲ ಬಾರಿಗೆ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ; ಕರಾವಳಿ ಅಭಿವೃದ್ಧಿಗೆ ಮಹತ್ವದ ಘೋಷಣೆಗಳ ನಿರೀಕ್ಷೆ..!

BJP ಹಿರಿಯ ನಾಯಕ ರಾಮಚಂದ್ರೇಗೌಡ ವಿಧಿವಶ: ತಳಮಟ್ಟದಿಂದ ಪಕ್ಷ ಕಟ್ಟಲು ಯಡಿಯೂರಪ್ಪಗೆ ಸಾಥ್ ನೀಡಿದ್ದ ಧುರೀಣ!