ಕಠ್ಮಂಡು: ರಾಜಕೀಯ ಮೇಲಾಟದಿಂದ ಭಾರತದಿಂದ ದೂರಾಗಿದ್ದ ನೇಪಾಳ ಇದೀಗ ಭಾರತದೊಂದಿಗೆ ತನ್ನ ಸಂಬಂಧ ಸುಧಾರಿಸಿಕೊಳ್ಳಲು ಮುಂದಾಗಿದ್ದು, ಇದರ ಮೊದಲ ಹೆಜ್ಜೆಯಾಗಿ ಭಾರತದ ನೋಟುಗಳಿಗೆ ನೇಪಾಳದಲ್ಲಿ ಮತ್ತೆ ಮಾನ್ಯತೆ ನೀಡುವ ಕುರಿತು ಮಹತ್ವದ ನಿರ್ಣಯ ಕೈಗೊಂಡಿದೆ.
ಹೌದು.. ಭಾರತೀಯ ಕರೆನ್ಸಿಗಳ ಮೇಲೆ ಸುಮಾರು 10 ವರ್ಷಗಳ ಹಿಂದೆ ಹೇರಲಾಗಿದ್ದ ನಿರ್ಬಂಧ ಅಂತ್ಯಗೊಳಿಸಿದ್ದು, ಅದರಂತೆ ಭಾರತದ 200 ಮತ್ತು 500 ರೂ ಕರೆನ್ಸಿಗಳಿಗೆ ಅನುಮತಿ ನೀಡಿದೆ. ಅದರಂತೆ ಒಬ್ಬ ವ್ಯಕ್ತಿಗೆ ₹25,000 ವರೆಗೆ ಕೊಂಡೊಯ್ಯಲು ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.
ಸುಮಾರು ಒಂದು ದಶಕದಿಂದ ಜಾರಿಯಲ್ಲಿದ್ದ ನಿರ್ಬಂಧವನ್ನು ಸಡಿಲಿಸಿರುವ ನೇಪಾಳ ಸರ್ಕಾರ, ಭಾರತೀಯ ಹಾಗೂ ನೇಪಾಳದ ನಾಗರಿಕರು ₹200 ಮತ್ತು ಹೊಸ ವಿನ್ಯಾಸದ ₹500 ಮುಖಬೆಲೆಯ ಭಾರತೀಯ ಕರೆನ್ಸಿ ನೋಟುಗಳನ್ನು ದೇಶದೊಳಗೆ ತರಲು ಹಾಗೂ ಹೊರಗೆ ಕೊಂಡೊಯ್ಯಲು ಅನುಮತಿ ನೀಡಿದೆ.
2016ರ ನೋಟು ಅಮಾನ್ಯೀಕರಣದ ಬಳಿಕ ₹100ಕ್ಕಿಂತ ಹೆಚ್ಚಿನ ಮುಖಬೆಲೆಯ ಭಾರತೀಯ ನೋಟುಗಳನ್ನು ನೇಪಾಳದಲ್ಲಿ ಬಳಸಲು ಮತ್ತು ಸಾಗಿಸಲು ನಿರ್ಬಂಧ ಹೇರಲಾಗಿತ್ತು. ಇದೀಗ ಆ ನಿಯಮವನ್ನು ಪರಿಷ್ಕರಿಸಿ, ಹೊಸ ವಿನ್ಯಾಸದ ₹200 ಹಾಗೂ ₹500 ನೋಟುಗಳಿಗೆ ಅವಕಾಶ ಕಲ್ಪಿಸಲಾಗಿದೆ.
₹25,000 ವರೆಗೆ ಕೊಂಡೊಯ್ಯಲು ಅವಕಾಶ
ನೇಪಾಳ ರಾಷ್ಟ್ರ ಬ್ಯಾಂಕ್ (NRB) ಗುರುವಾರ ಮರುಪ್ರಕಟಿಸಿದ ಅಧಿಸೂಚನೆಯ ಪ್ರಕಾರ, 2016ರ ನವೆಂಬರ್ 9ರ ನಂತರ ಬಿಡುಗಡೆಗೊಂಡ ₹200 ಮತ್ತು ₹500 ಮುಖಬೆಲೆಯ ಭಾರತೀಯ ನೋಟುಗಳನ್ನು ಭಾರತೀಯರು ಹಾಗೂ ನೇಪಾಳದ ನಾಗರಿಕರು ಒಬ್ಬರಿಗೆ ಗರಿಷ್ಠ ₹25,000 ವರೆಗೆ ಕೊಂಡೊಯ್ಯಬಹುದು.
ಈ ನಿಯಮವನ್ನು ಈ ವರ್ಷದ ಫೆಬ್ರವರಿ 11ರಂದು ನೇಪಾಳ ಗೆಜೆಟ್‌ನಲ್ಲಿ ಈಗಾಗಲೇ ಪ್ರಕಟಿಸಲಾಗಿತ್ತು. ಆದರೆ ಅದರ ಅನುಷ್ಠಾನದ ಕುರಿತು ಸ್ಪಷ್ಟನೆ ನೀಡುವ ಉದ್ದೇಶದಿಂದ ನೇಪಾಳ ರಾಷ್ಟ್ರ ಬ್ಯಾಂಕ್ ಮತ್ತೊಮ್ಮೆ ಅಧಿಸೂಚನೆ ಹೊರಡಿಸಿದೆ.
ಹೊಸ ನಿಯಮಗಳೇನು?
ನೇಪಾಳ ರಾಷ್ಟ್ರ ಬ್ಯಾಂಕ್‌ನ ವಕ್ತಾರ ಗುರು ಪ್ರಸಾದ್ ಪೌಡೆಲ್ ಅವರ ಪ್ರಕಾರ, ನೇಪಾಳದ ನಾಗರಿಕರು ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಿಂದ ಭಾರತೀಯ ಕರೆನ್ಸಿಯನ್ನು ನೇಪಾಳಕ್ಕೆ ತರಲು ಅವಕಾಶವಿಲ್ಲ. ಅದೇ ರೀತಿ, ನೇಪಾಳದಿಂದ ಭಾರತವನ್ನು ಹೊರತುಪಡಿಸಿ ಮೂರನೇ ದೇಶಕ್ಕೆ ಭಾರತೀಯ ಕರೆನ್ಸಿಯನ್ನು ಕೊಂಡೊಯ್ಯುವುದಕ್ಕೂ ಅನುಮತಿ ಇಲ್ಲ. ಈ ಹೊಸ ನಿಯಮದಿಂದ ನೇಪಾಳಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಹಾಗೂ ಭಾರತ-ನೇಪಾಳ ವ್ಯಾಪಾರದಲ್ಲಿ ತೊಡಗಿರುವ ನೇಪಾಳದ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
ವಿದೇಶಿ ಕರೆನ್ಸಿಗೂ ಹೊಸ ಸ್ಪಷ್ಟನೆ
ನೇಪಾಳದ ನಾಗರಿಕರು ಹಾಗೂ ವಿದೇಶಿ ಪ್ರವಾಸಿಗರು USD 5,000 ಅಥವಾ ಅದಕ್ಕೆ ಸಮಾನ ಮೌಲ್ಯದ ವಿದೇಶಿ ಕರೆನ್ಸಿಯನ್ನು ಯಾವುದೇ ಕಸ್ಟಮ್ಸ್ ಘೋಷಣೆ ಇಲ್ಲದೆ ನೇಪಾಳಕ್ಕೆ ತರಬಹುದು. ಆದರೆ USD 5,000 ಮೀರಿದ ಮೊತ್ತವನ್ನು ಕಡ್ಡಾಯವಾಗಿ ಕಸ್ಟಮ್ಸ್ ಅಧಿಕಾರಿಗಳಿಗೆ ಘೋಷಿಸಬೇಕು. ಭಾರತೀಯ ಕರೆನ್ಸಿಯ ವಿಷಯದಲ್ಲಿ, ₹100 ಮುಖಬೆಲೆಯ ನೋಟುಗಳಷ್ಟೇ ಇದ್ದರೆ USD 5,000 (ಸುಮಾರು ₹4.83 ಲಕ್ಷ) ಮೌಲ್ಯದವರೆಗೆ ಕಸ್ಟಮ್ಸ್ ಘೋಷಣೆ ಇಲ್ಲದೆ ತರಬಹುದು. ಅದಕ್ಕಿಂತ ಹೆಚ್ಚಿನ ಮೊತ್ತ ಇದ್ದರೆ ಕಸ್ಟಮ್ಸ್ ಘೋಷಣೆ ಕಡ್ಡಾಯವಾಗಿದೆ.
2016ರ ಬಳಿಕ ಜಾರಿಯಲ್ಲಿದ್ದ ನಿರ್ಬಂಧ
ಭಾರತವು 2016ರ ನವೆಂಬರ್ 8ರಂದು ₹500 ಮತ್ತು ₹1,000 ಮುಖಬೆಲೆಯ ಹಳೆಯ ನೋಟುಗಳನ್ನು ಅಮಾನ್ಯಗೊಳಿಸಿತ್ತು. ಬಳಿಕ ಹೊಸ ವಿನ್ಯಾಸದ ₹500 ಹಾಗೂ ₹2,000 ನೋಟುಗಳನ್ನು ಪರಿಚಯಿಸಲಾಗಿತ್ತು. ನಂತರ ₹2,000 ನೋಟುಗಳನ್ನು ಸಹ ಚಲಾವಣೆಯಿಂದ ಹಿಂತೆಗೆದುಕೊಳ್ಳಲಾಯಿತು.
ಈ ನೋಟು ಅಮಾನ್ಯೀಕರಣದ ಬಳಿಕ ನೇಪಾಳವು ₹100ಕ್ಕಿಂತ ಹೆಚ್ಚಿನ ಮುಖಬೆಲೆಯ ಭಾರತೀಯ ನೋಟುಗಳ ಪ್ರವೇಶ ಮತ್ತು ಬಳಕೆಗೆ ನಿಷೇಧ ಹೇರಿತ್ತು. ಆಗಲೂ ಭಾರತೀಯ ಕರೆನ್ಸಿ ಕೊಂಡೊಯ್ಯುವ ಗರಿಷ್ಠ ಮಿತಿ ₹25,000 ಆಗಿಯೇ ಉಳಿದಿದ್ದರೂ, ₹100 ಅಥವಾ ಅದಕ್ಕಿಂತ ಕಡಿಮೆ ಮುಖಬೆಲೆಯ ನೋಟುಗಳಿಗೆ ಮಾತ್ರ ಅವಕಾಶವಿತ್ತು.
ಹಳೆಯ ₹500, ₹1,000 ನೋಟುಗಳಿಗೆ ಇನ್ನೂ ನಿಷೇಧ
ಪರಿಷ್ಕೃತ ನಿಯಮಗಳ ಪ್ರಕಾರ, 2016ರ ನವೆಂಬರ್ 9ರ ನಂತರ ಬಿಡುಗಡೆಯಾದ ಹೊಸ ವಿನ್ಯಾಸದ ₹500 ಹಾಗೂ ₹200 ನೋಟುಗಳನ್ನು ಮಾತ್ರ ₹25,000 ಮಿತಿಯೊಳಗೆ ಕೊಂಡೊಯ್ಯಲು ಅವಕಾಶವಿದೆ.
ಆದರೆ, 2016ಕ್ಕೂ ಮೊದಲು ಚಲಾವಣೆಯಲ್ಲಿದ್ದ ಹಳೆಯ ₹500 ಮತ್ತು ₹1,000 ಮುಖಬೆಲೆಯ ಭಾರತೀಯ ನೋಟುಗಳು ನೇಪಾಳದಲ್ಲಿ ಇನ್ನೂ ಸಂಪೂರ್ಣ ನಿಷೇಧಿತವಾಗಿಯೇ ಉಳಿದಿವೆ.
ಭಾರತ ಮತ್ತು ನೇಪಾಳ ಮುಕ್ತ ಗಡಿಯನ್ನು ಹಂಚಿಕೊಂಡಿದ್ದು, ಎರಡೂ ದೇಶಗಳ ನಡುವೆ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಜನರ ಓಡಾಟ ಹೆಚ್ಚಾಗಿದೆ. ಈ ಹೊಸ ನಿಯಮದಿಂದ ಗಡಿ ವ್ಯಾಪಾರ, ಪ್ರವಾಸೋದ್ಯಮ ಮತ್ತು ಎರಡೂ ದೇಶಗಳ ನಡುವಿನ ಆರ್ಥಿಕ ವ್ಯವಹಾರಗಳಿಗೆ ಮತ್ತಷ್ಟು ಉತ್ತೇಜನ ಸಿಗುವ ನಿರೀಕ್ಷೆಯಿದೆ.