ಸಂಗ್ರಹ ಚಿತ್ರ 
ವಿದೇಶ

Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕ ಭೀಕರ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ, ತೈಲ ಬೆಲೆ ಭಾರೀ ಏರಿಕೆ..!

ಈ ದಾಳಿ ಇರಾನ್ ನಡೆಸಿದ ದಾಳಿಗೆ ನೀಡಿದ "ಪ್ರಬಲ ಪ್ರತಿಕ್ರಿಯೆ"ಯಾಗಿದೆ. ದಾಳಿಯ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಇರಾನ್‌ನ ಪ್ರಮುಖ ಸೇನಾ ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಹೇಳಿದೆ.

ಬಾಗ್ದಾದ್: ಮಧ್ಯಪ್ರಾಚ್ಯದಲ್ಲಿ ಹಲವು ದಿನಗಳಿಂದ ತುಸು ಶಾಂತವಾಗಿದ್ದ ಪರಿಸ್ಥಿತಿ ಮತ್ತೆ ಸ್ಫೋಟಕ ತಿರುವು ಪಡೆದುಕೊಂಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ಈಗ ನಮ್ಮ ಸರದಿ... ಅವರನ್ನು ಅತ್ಯಂತ ಕಠಿಣವಾಗಿ ಹೊಡೆಯುತ್ತೇವೆ" ಎಂದು ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕದ ಸೇನೆ ಇರಾನ್ ಗುರಿಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ.

ಇರಾನ್ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸ್ಪಷ್ಟಪಡಿಸಿದೆ.

ಈ ದಾಳಿ ಇರಾನ್ ನಡೆಸಿದ ದಾಳಿಗೆ ನೀಡಿದ "ಪ್ರಬಲ ಪ್ರತಿಕ್ರಿಯೆ"ಯಾಗಿದೆ. ದಾಳಿಯ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಇರಾನ್‌ನ ಪ್ರಮುಖ ಸೇನಾ ಗುರಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಹೇಳಿದೆ. ಟ್ರಂಪ್ ಆಡಳಿತ ಈ ಮೂಲಕ ಇರಾನ್‌ಗೆ ಕಠಿಣ ಸಂದೇಶ ರವಾನಿಸಲು ಪ್ರಯತ್ನಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಬೆಳವಣಿಗೆಗೂ ಮುನ್ನ ಅಮೆರಿಕ ಮತ್ತು ಸೌದಿ ಅರೇಬಿಯಾ ಜಂಟಿಯಾಗಿ ಇರಾಕ್‌ನ ಪೂರ್ವ ಭಾಗದಲ್ಲಿರುವ ಇರಾನ್ ಬೆಂಬಲಿತ ಮಿಲಿಷಿಯಾ ಸಂಘಟನೆಗಳ ಶಸ್ತ್ರಾಸ್ತ್ರ ಹಾಗೂ ಲಾಜಿಸ್ಟಿಕ್ಸ್ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದವು.

ಈ ದಾಳಿಯಲ್ಲಿ ಕನಿಷ್ಠ 20 ಮಿಲಿಷಿಯಾ ಯೋಧರು ಸಾವನ್ನಪ್ಪಿದ್ದು, 32ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪಾಪ್ಯುಲರ್ ಮೊಬಿಲೈಸೇಶನ್ ಫೋರ್ಸಸ್ (PMF) ತಿಳಿಸಿದೆ. ಜೊತೆಗೆ ಆರು ಮಂದಿ ಇರಾನಿ ಸೇನಾ ಸಲಹೆಗಾರರು ಕೂಡ ಮೃತಪಟ್ಟಿದ್ದಾರೆ ಎಂದು ಇರಾಕಿನ ಅಧಿಕಾರಿಗಳು ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಗೆ ಕಾರಣವಾಗಿದ್ದು ಜೋರ್ಡನ್‌ನಲ್ಲಿರುವ ಅಮೆರಿಕದ ಪ್ರಮುಖ ವಾಯುನೆಲೆ ಮುವಾಫಕ್ ಸಲ್ತಿ ಏರ್ ಬೇಸ್ ಮೇಲೆ ಇರಾನ್ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ. ಈ ವಾಯುನೆಲೆ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪ್ರಮುಖ ಸೇನಾ ಕೇಂದ್ರಗಳಲ್ಲಿ ಒಂದಾಗಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ (IRGC) ಈ ದಾಳಿಯ ಹೊಣೆ ಹೊತ್ತು, ಅಮೆರಿಕದ ಸೇನಾ ಹಾಜರಾತಿಗೆ ಉತ್ತರವಾಗಿ ಕ್ಷಿಪಣಿಗಳನ್ನು ಉಡಾಯಿಸಿದ್ದಾಗಿ ಹೇಳಿದೆ.

ಆದರ, ಜೋರ್ಡನ್ ಸೇನೆ, ಇರಾನ್ ಉಡಾಯಿಸಿದ್ದ ಐದು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಗಾಳಿಯಲ್ಲೇ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ. ದಾಳಿಯಿಂದ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯ ನಂತರ ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, "ಇದು ಇನ್ನೂ ಮುಂದುವರಿಯುತ್ತಿರುವ ಸಂಘರ್ಷದ ಭಾಗ. ಆದರೆ, ಈಗ ನಮ್ಮ ಸರದಿ. ನಾವು ಅವರನ್ನು ಅತ್ಯಂತ ಕಠಿಣವಾಗಿ ಹೊಡೆಯಲಿದ್ದೇವೆ" ಎಂದು ಎಚ್ಚರಿಕೆ ನೀಡಿದ್ದರು. ಟ್ರಂಪ್ ಹೇಳಿಕೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಅಮೆರಿಕದ ಸೇನೆ ಇರಾನ್ ಮೇಲೆ ದಾಳಿ ನಡೆಸಿದೆ.

ಈ ನಡುವೆ ಈಜಿಪ್ಟ್‌ನ ಡಮಿಯೆಟ್ಟಾ ಬಂದರಿನಲ್ಲಿ ನೈಸರ್ಗಿಕ ಅನಿಲ ಸಾಗಣೆ ಮಾಡುತ್ತಿದ್ದ ಎರಡು ಹಡಗುಗಳ ಮೇಲೆ ಡ್ರೋನ್ ದಾಳಿ ನಡೆದಿದ್ದು, ಹಡಗುಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಅಮೆರಿಕದ ಒಡೆತನದ ತೇಲುವ ಅನಿಲ ಸಂಗ್ರಹ ಘಟಕ ಹಾಗೂ ಗ್ರೀಸ್‌ಗೆ ಸೇರಿದ ತೈಲ ಸಾಗಣೆ ಹಡಗು ಈ ದಾಳಿಗೆ ಗುರಿಯಾಗಿವೆ ಎಂದು ಬ್ರಿಟಿಷ್ ಸಮುದ್ರ ಭದ್ರತಾ ಸಂಸ್ಥೆ ಅಂಬ್ರೇ ತಿಳಿಸಿದೆ. ಈ ದಾಳಿಯ ಹೊಣೆ ಯಾರು ಹೊತ್ತಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಈ ದಾಳಿಗಳು ಮಧ್ಯಪ್ರಾಚ್ಯದ ಸಂಘರ್ಷ ಮತ್ತಷ್ಟು ವಿಸ್ತಾರಗೊಳ್ಳುವ ಭೀತಿಯನ್ನು ಹೆಚ್ಚಿಸಿವೆ. ಈಜಿಪ್ಟ್ ಇದುವರೆಗೆ ನೇರ ಯುದ್ಧದಿಂದ ದೂರ ಉಳಿದಿದ್ದರೂ, ಅಲ್ಲಿನ ಪ್ರಮುಖ ಬಂದರಿನ ಮೇಲೆ ದಾಳಿ ನಡೆದಿರುವುದು ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಿರುವ ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಕಡಿಮೆ ಮಾಡಲು ಹಲವು ರಾಷ್ಟ್ರಗಳು ಮಧ್ಯಸ್ಥಿಕೆ ನಡೆಸುತ್ತಿವೆ. ಎರಡೂ ರಾಷ್ಟ್ರಗಳನ್ನು ಮತ್ತೆ ಮಾತುಕತೆ ಮೇಜಿನತ್ತ ಕರೆತರಲು ಪ್ರಯತ್ನ ನಡೆದಿತ್ತು. ಆದರೆ, ಹಾರ್ಮುಜ್ ಜಲಸಂಧಿಯಲ್ಲಿನ ಹೊಸ ಸಂಘರ್ಷದಿಂದ ಆ ಪ್ರಯತ್ನಗಳಿಗೆ ಭಾರೀ ಹಿನ್ನಡೆಯಾಗಿದೆ.

ಪ್ರಾದೇಶಿಕ ರಾಜತಾಂತ್ರಿಕ ಮೂಲಗಳ ಪ್ರಕಾರ, ಮಧ್ಯಸ್ಥಿಕೆ ಪ್ರಯತ್ನ ಇನ್ನೂ ಮುಂದುವರಿದಿದ್ದರೂ ಎರಡೂ ರಾಷ್ಟ್ರಗಳು ದಾಳಿಗಳನ್ನು ನಿಲ್ಲಿಸುವ ಯಾವುದೇ ಲಕ್ಷಣ ತೋರಿಸುತ್ತಿಲ್ಲ. "ಪರಿಸ್ಥಿತಿ ಅತ್ಯಂತ ಅಪಾಯಕಾರಿ ಹಂತದಲ್ಲಿದೆ. ಸದ್ಯಕ್ಕೆ ಶಾಂತಿ ಸಾಧ್ಯತೆಗಳು ತುಂಬಾ ಕ್ಷೀಣವಾಗಿವೆ ಎಂದು ಅರಬ್ ದೇಶದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೊಸ ದಾಳಿಗಳ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲೂ ತೀವ್ರ ಪರಿಣಾಮ ಕಂಡುಬಂದಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 7.3ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 88.09 ಡಾಲರ್ ತಲುಪಿದೆ.

ಹಾರ್ಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರದ ವ್ಯಾಪಾರ ಮಾರ್ಗಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಜಾಗತಿಕ ಇಂಧನ ಪೂರೈಕೆಯ ಮೇಲೂ ಆತಂಕ ವ್ಯಕ್ತವಾಗಿದೆ.

ಇದರ ಜೊತೆಗೆ ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ತೈಲ ಮೂಲಸೌಕರ್ಯಗಳ ಮೇಲೂ ಡ್ರೋನ್ ದಾಳಿ ನಡೆಸಿರುವುದಾಗಿ ಘೋಷಿಸಿದ್ದಾರೆ. ಸೌದಿ ಅರಾಮ್ಕೋ ಸಂಸ್ಥೆಯ ಅಬ್ಕೈಕ್ ತೈಲ ಸಂಸ್ಕರಣಾ ಘಟಕಕ್ಕೆ ಹಾನಿಯಾಗಿರುವುದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ. ಈ ಘಟಕ ದಿನಕ್ಕೆ ಸುಮಾರು 70 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಇನ್ನೊಂದೆಡೆ, ಹಾರ್ಮುಜ್ ಜಲಸಂಧಿಯ ನಿರ್ವಹಣೆಗೆ ಸಂಬಂಧಿಸಿದಂತೆ ಒಮಾನ್ ನೀಡಿದ್ದ ಜಂಟಿ ಯೋಜನೆಯನ್ನು ಇರಾನ್ ತಿರಸ್ಕರಿಸಿದೆ. ಇರಾನ್ ಉಪ ವಿದೇಶಾಂಗ ಸಚಿವ ಕಾಜೆಂ ಘರೀಬಾಬಾದಿ ಮಾತನಾಡಿ, "ಯುದ್ಧಕ್ಕೂ ಮುಂಚಿನ ಸ್ಥಿತಿಗೆ ಹಾರ್ಮುಜ್ ಜಲಸಂಧಿ ಎಂದಿಗೂ ಮರಳುವುದಿಲ್ಲ" ಎಂದು ಹೇಳಿದ್ದಾರೆ. ಬದಲಾಗಿ ಇರಾನ್ ತನ್ನದೇ ಆದ ತಾತ್ಕಾಲಿಕ ಸಂಚಾರ ವ್ಯವಸ್ಥೆಯನ್ನು ಮುಂದಿಟ್ಟಿದೆ.

ಇರಾಕ್ ಸರ್ಕಾರ ಅಮೆರಿಕ ಮತ್ತು ಸೌದಿ ಅರೇಬಿಯಾದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಇದು ದೇಶದ ಸಾರ್ವಭೌಮತ್ವದ ಉಲ್ಲಂಘನೆ ಎಂದು ಆರೋಪಿಸಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇರಾಕ್ ಪ್ರಧಾನಿ ಅಲಿ ಅಲ್-ಜೈದಿ ಅವರ ಸೌದಿ ಅರೇಬಿಯಾ ಪ್ರವಾಸವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಮಧ್ಯಪ್ರಾಚ್ಯದ ಹಲವು ಭಾಗಗಳಲ್ಲಿ ಒಂದೇ ಸಮಯದಲ್ಲಿ ನಡೆಯುತ್ತಿರುವ ಕ್ಷಿಪಣಿ ದಾಳಿ, ಡ್ರೋನ್ ದಾಳಿ, ವೈಮಾನಿಕ ಕಾರ್ಯಾಚರಣೆಗಳು ಹಾಗೂ ತೈಲ ಮೂಲಸೌಕರ್ಯಗಳ ಮೇಲಿನ ದಾಳಿಗಳು ಜಾಗತಿಕ ಮಟ್ಟದಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.

ಮುಂದಿನ ಕೆಲ ದಿನಗಳಲ್ಲಿ ಅಮೆರಿಕ, ಇರಾನ್ ಹಾಗೂ ಅವರ ಮಿತ್ರ ರಾಷ್ಟ್ರಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತವೆ ಎಂಬುದರ ಮೇಲೆ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿ ಮತ್ತು ಜಾಗತಿಕ ಇಂಧನ ಮಾರುಕಟ್ಟೆಯ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಕ್ಷಾಂತರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್: DCC ಅಧ್ಯಕ್ಷರ ನೇಮಕಕ್ಕೆ ಹೊಸ ತಂತ್ರ, ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಫುಲ್ ಕಂಟ್ರೋಲ್...!

ಇನ್ನಿಬ್ಬರು DCM ನೇಮಕಕ್ಕೆ ಕಾಂಗ್ರೆಸ್ ಕಸರತ್ತು? 'ನನಗೂ ಅವಕಾಶ ಸಿಗುವ ವಿಶ್ವಾಸವಿದೆ' ಎಂದ ಸತೀಶ್ ಜಾರಕಿಹೊಳಿ..!

ಭಾರತಕ್ಕೆ 'ಸೇವಾ ಉತ್ಪಾದನಾ ಸೂಚ್ಯಂಕ' (ISP) ಏಕೆ ಅಗತ್ಯ? (ಹಣಕ್ಲಾಸು)

ಮತದಾರರ ಪಟ್ಟಿಯಿಂದ 84 ಲಕ್ಷ ಹೆಸರು ಡಿಲೀಟ್? ಸ್ಪಷ್ಟನೆ ಕೊಟ್ಟ CEO, ಹೇಳಿದ್ದೇನು..?

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ: ಶಾ ಅವರೇ ಆದೇಶ ನೀಡಿದ್ದಾರೆ, ಇಲ್ಲವೇ ಅವರು ಅಸಮರ್ಥ; ವಜಾಗೊಳಿಗೊಳಿಸಿ- ಪ್ರಧಾನಿಗೆ ರಾಹುಲ್ ಒತ್ತಾಯ