ವಾಷಿಂಗ್ಟನ್: ಇರಾನ್‌ಗೆ ಬೆಂಬಲ ನೀಡಿದ ಆರೋಪದಡಿ ಅಮೆರಿಕ ಗುರುವಾರ ಭಾರತ ಮೂಲದ ಕಂಪನಿಯೊಂದನ್ನು ಒಳಗೊಂಡಂತೆ ಒಟ್ಟು ಆರು ಸಂಸ್ಥೆಗಳು ಮತ್ತು ವ್ಯಕ್ತಿಗಳ ಮೇಲೆ ಆರ್ಥಿಕ ನಿರ್ಬಂಧಗಳನ್ನು (ಸ್ಯಾಂಕ್ಷನ್) ಜಾರಿ ಮಾಡಿದೆ.
ಭಾರತದ ಸ್ಕೈಝ್ ಟ್ರಾವೆಲ್ಸ್ ಆ್ಯಂಡ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ (Skiez Travels and Logistics Private Limited) ಸೇರಿದಂತೆ ಚೀನಾ ಮತ್ತು ರಷ್ಯಾದ ಕೆಲವು ಸಂಸ್ಥೆಗಳು ಅಮೆರಿಕಾದ ಕಪ್ಪುಪಟ್ಟಿಗೆ ಸೇರ್ಪಡೆಗೊಂಡಿವೆ.
ಅಮೆರಿಕದ ಹಣಕಾಸು ಇಲಾಖೆಯ (U.S. Department of the Treasury) ಪ್ರಕಾರ, ಈ ಸಂಸ್ಥೆಗಳು ಇರಾನ್‌ನ ಮಹಾನ್ ಏರ್ (Mahan Air) ವಿಮಾನಯಾನ ಸಂಸ್ಥೆಗೆ ಸಾಮಾನ್ಯ ಮಾರಾಟ ಪ್ರತಿನಿಧಿಗಳಾಗಿ (General Sales Agent - GSA) ಕಾರ್ಯನಿರ್ವಹಿಸುತ್ತಿದ್ದವು. ಮಹಾನ್ ಏರ್ ಹಲವು ವರ್ಷಗಳಿಂದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ಗೆ ನೆರವು ನೀಡುತ್ತಿದೆ ಎಂದು ಆರೋಪಿಸಿದೆ.
ಮಹಾನ್ ಏರ್ ಐಆರ್‌ಜಿಸಿ ಸಿಬ್ಬಂದಿಯನ್ನು ಸಾಗಿಸುವುದು, ಮಿಲಿಟರಿ ತರಬೇತಿಗೆ ನೆರವಾಗುವುದು ಹಾಗೂ ಡ್ರೋನ್ ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರಗಳ ಸಾಗಣೆಗೆ ಸಹಕಾರ ನೀಡುವ ಮೂಲಕ ಇರಾನ್‌ನ ಸೇನಾ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್, "ಐಆರ್‌ಜಿಸಿ ಅಥವಾ ಮಹಾನ್ ಏರ್‌ಗೆ ಹಣಕಾಸು ಸೇವೆ, ಲಾಜಿಸ್ಟಿಕ್ಸ್ ಅಥವಾ ವಾಣಿಜ್ಯ ಬೆಂಬಲ ನೀಡುವವರು ಉಗ್ರ ಚಟುವಟಿಕೆಗಳಿಗೆ ಪರೋಕ್ಷವಾಗಿ ನೆರವಾಗುತ್ತಿದ್ದಾರೆ. ಅಂತಹ ಸಂಸ್ಥೆಗಳನ್ನು ಗುರುತಿಸಿ, ಬಯಲಿಗೆಳೆದು, ಅಮೆರಿಕದ ಹಣಕಾಸು ವ್ಯವಸ್ಥೆಯಿಂದ ಸಂಪೂರ್ಣವಾಗಿ ಹೊರಗಿಡುವ ಕ್ರಮ ಮುಂದುವರಿಯಲಿದೆ" ಎಂದು ಹೇಳಿದ್ದಾರೆ.
ಭಾರತದ ಕಂಪನಿಯ ವಿರುದ್ಧದ ಆರೋಪವೇನು?
ಅಮೆರಿಕದ ಹಣಕಾಸು ಇಲಾಖೆಯ ಮಾಹಿತಿ ಪ್ರಕಾರ, ಶ್ರೀನಗರ ಮತ್ತು ದೆಹಲಿಯಲ್ಲಿ ಕಚೇರಿಗಳನ್ನು ಹೊಂದಿರುವ ಸ್ಕೈಝ್ ಟ್ರಾವೆಲ್ಸ್ ಆ್ಯಂಡ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ 2020ರಿಂದ ಮಹಾನ್ ಏರ್‌ನ ಸಾಮಾನ್ಯ ಮಾರಾಟ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ಕಾರಣಕ್ಕಾಗಿ ಕಂಪನಿಯನ್ನು ನಿರ್ಬಂಧ ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಚೀನಾ ಮತ್ತು ರಷ್ಯಾದ ಸಂಸ್ಥೆಗಳೂ ಪಟ್ಟಿಯಲ್ಲಿ
ಈ ನಿರ್ಬಂಧಗಳು ಚೀನಾ ಮೂಲದ ಶಾಂಘೈ ವಿಂಗ್ಸ್ ಇಂಟರ್‌ನ್ಯಾಷನಲ್ ಲಾಜಿಸ್ಟಿಕ್ಸ್ ಕಂಪನಿ, ಶಾಂಘೈ ಎಲೈಟ್ ಇಂಟರ್‌ನ್ಯಾಷನಲ್ ಟ್ರಾವೆಲ್ ಕಂಪನಿ, ರಷ್ಯಾದ ಏರ್ ಕಾರ್ಗೋ ಪ್ರೊ ಲಿಮಿಟೆಡ್ ಹಾಗೂ ಶಾಂಘೈ ವಿಂಗ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಟಾಂಗ್ ಶಿನ್ ಅವರ ಮೇಲೂ ಅನ್ವಯವಾಗಿವೆ.
ಶಾಂಘೈ ವಿಂಗ್ಸ್ ಚೀನಾದಿಂದ ಇರಾನ್‌ಗೆ ಎಲೆಕ್ಟ್ರಾನಿಕ್ ಸಾಧನಗಳ ಸಾಗಣೆಯನ್ನು ಸಂಯೋಜಿಸಿತ್ತು ಎಂದು ಅಮೆರಿಕ ಆರೋಪಿಸಿದೆ. ಜೊತೆಗೆ ಟಾಂಗ್ ಶಿನ್, ಮಹಾನ್ ಏರ್‌ಗೆ ಚೀನಾದಲ್ಲಿ ಮತ್ತೊಂದು ಸಾಮಾನ್ಯ ಮಾರಾಟ ಪ್ರತಿನಿಧಿಯಾಗಿರುವ ಶಾಂಘೈ ಎಲೈಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದು, ಸಂಸ್ಥೆಯಲ್ಲಿ ಶೇ.50ರಷ್ಟು ಪಾಲುದಾರಿಕೆಯನ್ನೂ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಐಆರ್‌ಜಿಸಿಗೆ ಸಂಬಂಧಿಸಿದ ಮತ್ತೊಂದು ಸಂಸ್ಥೆಯ ಮೇಲೂ ಕ್ರಮ
ಇದೇ ವೇಳೆ ಡಾಡೆನೆಗರ್ ಸ್ಟಾರ್ಟ್‌ಅಪ್ ಸ್ಟುಡಿಯೋ (DadeNegar Startup Studio) ಎಂಬ ಸಂಸ್ಥೆಯ ಮೇಲೂ ಅಮೆರಿಕ ನಿರ್ಬಂಧ ಹೇರಿದೆ.
ಈ ಸಂಸ್ಥೆ ಐಆರ್‌ಜಿಸಿಗೆ ಸಂಬಂಧಿಸಿದ ಮುಂಚೂಣಿ (Front) ಕಂಪನಿಯಾಗಿದ್ದು, ಆನ್‌ಲೈನ್ ವೇದಿಕೆಯ ಮೂಲಕ ಇರಾನ್ ಸೇನೆಯ ಗುರಿ ಗುರುತಿಸುವ ಕಾರ್ಯಾಚರಣೆಗೆ ನೆರವು ನೀಡಿದೆ ಎಂದು ಅಮೆರಿಕ ಆರೋಪಿಸಿದೆ.
ಡಾಡೆನೆಗರ್ ಅಮೆರಿಕ ಮತ್ತು ಇಸ್ರೇಲ್‌ನ ಸೇನಾ ಉಪಕರಣಗಳ ಸ್ಥಳದ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸಿತ್ತು. ಅಲ್ಲದೆ, ಐಆರ್‌ಜಿಸಿಯೊಂದಿಗೆ ಸಮನ್ವಯ ಸಾಧಿಸಿ ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಗುರಿಗಳ ಮೇಲೆ ದಾಳಿ ನಡೆಸಲು ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ಕೆಲಸದಲ್ಲೂ ತೊಡಗಿಸಿಕೊಂಡಿತ್ತು ಎಂಬ ಆರೋಪವನ್ನೂ ಅಮೆರಿಕಾದ ಹಣಕಾಸು ಇಲಾಖೆ ಮಾಡಿದೆ.
ಈ ನಿರ್ಬಂಧಗಳ ಹಿನ್ನೆಲೆಯಲ್ಲಿ ಸಂಬಂಧಿತ ಸಂಸ್ಥೆಗಳು ಮತ್ತು ವ್ಯಕ್ತಿಗಳ ಅಮೆರಿಕದಲ್ಲಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಜೊತೆಗೆ, ಅಮೆರಿಕದ ಹಣಕಾಸು ವ್ಯವಸ್ಥೆಯೊಂದಿಗೆ ಯಾವುದೇ ರೀತಿಯ ವ್ಯವಹಾರ ನಡೆಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.