ಬ್ಯಾಂಕಾಕ್: ಥಾಯ್ಲೆಂಡ್ ರಾಜಮನೆತನದ ಹಿರಿಯ ರಾಜಕುಮಾರಿ ಬಜ್ರಕಿಟಿಯಾಭ ನರೇಂದಿರಾ ದೇಬ್ಯಾವತಿ (47) ಅವರು ಗುರುವಾರ ಸಂಜೆ ಬ್ಯಾಂಕಾಕ್‌ನಲ್ಲಿ ನಿಧನರಾಗಿದ್ದಾರೆ.
ಕಳೆದ ಮೂರು ವರ್ಷಗಳಿಗೂ ಹೆಚ್ಚು ಕಾಲ ಕೋಮಾದಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕಿಂಗ್ ಚುಲಾಲಾಂಗ್‌ಕಾರ್ನ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ರಾಜಮನೆತನದ ಬ್ಯೂರೋ ಅಧಿಕೃತವಾಗಿ ಪ್ರಕಟಿಸಿದೆ.
ರಾಜಕುಮಾರಿಯ ನಿಧನ ವಾರ್ತೆಯ ಬೆನ್ನಲ್ಲೇ ಥಾಯ್ಲೆಂಡ್ ದೇಶಾದ್ಯಂತ ತೀವ್ರ ಶೋಕ ಆವರಿಸಿದ್ದು, ರಾಜಮನೆತನದ ಮುಂದಿನ ಉತ್ತರಾಧಿಕಾರ ಯಾರು ಎಂಬ ಚರ್ಚೆ ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ಬಂದಿದೆ.
2022ರ ಡಿಸೆಂಬರ್‌ನಲ್ಲಿ ತಮ್ಮ ಸಾಕು ನಾಯಿಗಳೊಂದಿಗೆ ವ್ಯಾಯಾಮ ಮಾಡುತ್ತಿದ್ದ ವೇಳೆ ರಾಜಕುಮಾರಿ ಹಠಾತ್ತನೆ ಕುಸಿದು ಬಿದ್ದಿದ್ದರು. ಹೃದಯದಲ್ಲಿ ಉಂಟಾದ ಮೈಕೋಪ್ಲಾಸ್ಮಾ ಸೋಂಕಿನಿಂದ ತೀವ್ರ ಹೃದಯ ಬಡಿತದ ಅಸಮತೋಲನ ಉಂಟಾಗಿ ಅವರು ಪ್ರಜ್ಞಾಹೀನರಾಗಿದ್ದರು. ಬಳಿಕ ವೈದ್ಯರು ತೀವ್ರ ಚಿಕಿತ್ಸೆ ನೀಡಿದರೂ ಅವರಿಗೆ ಮತ್ತೆ ಪ್ರಜ್ಞೆ ಬರಲಿಲ್ಲ.
ರಾಜಮನೆತನ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “ವೈದ್ಯಕೀಯ ತಂಡ ಸಾಧ್ಯವಾದಷ್ಟು ಉತ್ತಮ ಮತ್ತು ತೀವ್ರ ಚಿಕಿತ್ಸೆಯನ್ನು ನೀಡಿತು. ಆದರೂ ಅವರ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಡುತ್ತಲೇ ಹೋಯಿತು” ಎಂದು ತಿಳಿಸಿದೆ.
‘ಲಾಯರ್ ಪ್ರಿನ್ಸೆಸ್’ ಎಂದೇ ಖ್ಯಾತಿ
ಥಾಯ್ಲೆಂಡ್‌ನಲ್ಲಿ “ಲಾಯರ್ ಪ್ರಿನ್ಸೆಸ್” ಎಂದೇ ಜನಪ್ರಿಯರಾಗಿದ್ದ ಬಜ್ರಕಿಟಿಯಾಭಾ ಅವರು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ಅವರು ಥಾಯ್ಲೆಂಡ್‌ನಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.
ನ್ಯೂಯಾರ್ಕ್‌ನಲ್ಲಿರುವ ಥಾಯ್ಲೆಂಡ್‌ನ ವಿಶ್ವಸಂಸ್ಥೆ ಪ್ರತಿನಿಧಿ ಕಚೇರಿಯಲ್ಲಿ ಕೆಲಸ ಮಾಡಿದ ಬಳಿಕ, ದೇಶಕ್ಕೆ ಮರಳಿ ಅಟಾರ್ನಿ ಜನರಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸಿದರು. 2012ರಿಂದ 2014ರವರೆಗೆ ಆಸ್ಟ್ರಿಯಾದಲ್ಲಿನ ಥಾಯ್ಲೆಂಡ್ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಮಹಿಳಾ ಕೈದಿಗಳ ಕಲ್ಯಾಣ, ಕಾರಾಗೃಹ ಸುಧಾರಣೆ ಹಾಗೂ ಸಮಾಜದಲ್ಲಿ ಪುನರ್ವಸತಿ ಕುರಿತಾಗಿ ಅವರು ವಿಶೇಷ ಆಸಕ್ತಿ ತೋರಿದ್ದರು. ಮಹಿಳಾ ಕೈದಿಗಳ ಬದುಕು ಸುಧಾರಿಸಲು ‘ಕಮ್ಲಾಂಗ್‌ಜೈ’ ಯೋಜನೆಯನ್ನು ಆರಂಭಿಸಿದ್ದರು. ಅವರ ಪ್ರಯತ್ನದ ಫಲವಾಗಿ ಮಹಿಳಾ ಕೈದಿಗಳ ಹಕ್ಕುಗಳ ಕುರಿತ ‘ಬ್ಯಾಂಕಾಕ್ ರೂಲ್ಸ್’ ಅನ್ನು ವಿಶ್ವಸಂಸ್ಥೆ ಅಂಗೀಕರಿಸಿತ್ತು.
ಉತ್ತರಾಧಿಕಾರದ ಪ್ರಶ್ನೆ ಮತ್ತೆ ಮುನ್ನೆಲೆಗೆ
2021ರಲ್ಲಿ ರಾಜ ವಜಿರಾಲೋಂಗ್ಕೋನ್ ಅವರು ತಮ್ಮ ಖಾಸಗಿ ಭದ್ರತಾ ಪಡೆಯ ಮುಖ್ಯಸ್ಥೆಯಾಗಿ ಬಜ್ರಕಿಟಿಯಾಭಾ ಅವರನ್ನು ನೇಮಿಸಿದ್ದರು. 2025ರಲ್ಲಿಯೂ ಆಸ್ಪತ್ರೆಯಲ್ಲಿದ್ದಾಗಲೇ ಅವರನ್ನು ರಾಜನ ವೈಯಕ್ತಿಕ ಭದ್ರತಾ ಕಮಾಂಡ್‌ನ ಉಪ ಕಮಾಂಡರ್ ಆಗಿ ನೇಮಿಸಲಾಗಿತ್ತು.
ಅವರ ಆಡಳಿತಾತ್ಮಕ ಸಾಮರ್ಥ್ಯ ಮತ್ತು ರಾಜನ ವಿಶ್ವಾಸದಿಂದಾಗಿ ಭವಿಷ್ಯದ ಉತ್ತರಾಧಿಕಾರಿಯಾಗಿ ಅವರ ಹೆಸರನ್ನು ಹಲವು ಬಾರಿ ಚರ್ಚಿಸಲಾಗಿತ್ತು. ಆದರೆ, ಥಾಯ್ಲೆಂಡ್ ರಾಜ ಇನ್ನೂ ಅಧಿಕೃತ ಉತ್ತರಾಧಿಕಾರಿಯನ್ನು ಘೋಷಿಸಿಲ್ಲ.
ಥಾಯ್ಲೆಂಡ್‌ನ ಸಾಂಪ್ರದಾಯಿಕ ಪದ್ಧತಿಯ ಪ್ರಕಾರ ಪುರುಷ ಉತ್ತರಾಧಿಕಾರಿಗೆ ಆದ್ಯತೆ ನೀಡಲಾಗುತ್ತದೆ. ಆದರೂ 1974ರ ಸಂವಿಧಾನ ತಿದ್ದುಪಡಿಯು ಮಹಿಳೆಯೂ ಸಿಂಹಾಸನ ಏರಲು ಅವಕಾಶ ಕಲ್ಪಿಸಿದೆ.
ರಾಜನ ಪುತ್ರ ದೀಪಾಂಗ್‌ಕಾರ್ನ್ ರಸ್ಮಿಜೋತಿ ಅವರನ್ನು ಸದ್ಯ ಸಂಭಾವ್ಯ ಉತ್ತರಾಧಿಕಾರಿಯಾಗಿ ಪರಿಗಣಿಸಲಾಗುತ್ತಿದೆ. ಆದರೆ, ಅವರ ಸಾಮರ್ಥ್ಯದ ಕುರಿತು ಕೆಲ ವಲಯಗಳಲ್ಲಿ ಪ್ರಶ್ನೆಗಳು ಕೇಳಿಬಂದಿವೆ.
ರಾಜಮನೆತನದ ಗೌರವದೊಂದಿಗೆ ಅಂತ್ಯಕ್ರಿಯೆ
ರಾಜಕುಮಾರಿ ಬಜ್ರಕಿಟಿಯಾಭಾ ಅವರ ಪಾರ್ಥಿವ ಶರೀರವನ್ನು ಬ್ಯಾಂಕಾಕ್‌ನ ಗ್ರ್ಯಾಂಡ್ ಪ್ಯಾಲೇಸ್ ಆವರಣದಲ್ಲಿರುವ ಪಿಮಾನ್ ರತ್ತಾಯ ಸಿಂಹಾಸನ ಭವನದಲ್ಲಿ ಇರಿಸಲಾಗುತ್ತಿದ್ದು, ರಾಜಮನೆತನದ ಅತ್ಯುನ್ನತ ಗೌರವಗಳೊಂದಿಗೆ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿದೆಯ ಜೂನ್ 13ರಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜಕುಮಾರಿಯ ನಿಧನದೊಂದಿಗೆ ಥಾಯ್ಲೆಂಡ್ ರಾಜಮನೆತನ ತನ್ನ ಅತ್ಯಂತ ಪ್ರಭಾವಿ ಹಾಗೂ ಜನಪ್ರಿಯ ಸದಸ್ಯೆಯನ್ನು ಕಳೆದುಕೊಂಡಿದ್ದು, ದೇಶದ ರಾಜಸಿಂಹಾಸನದ ಉತ್ತರಾಧಿಕಾರ ಪ್ರಶ್ನೆ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ.