ಭೂಕಂಪದ ನಂತರ ಜನರು ಅವಶೇಷಗಳ ನಡುವೆ ನಡೆಯುತ್ತಿರುವುದು. 
ವಿದೇಶ

ಭೂಕಂಪದ ರೌದ್ರನರ್ತನಕ್ಕೆ Venezuela ತತ್ತರ; Caracasನಲ್ಲಿ ಧರೆಗುರುಳಿದ ಕಟ್ಟಡಗಳು, ಸುನಾಮಿ ಎಚ್ಚರಿಕೆ..!

ಮೊದಲ ಭೂಕಂಪದ ಕೇವಲ ಒಂದು ನಿಮಿಷದ ನಂತರವೇ ಮತ್ತೊಂದು ಇನ್ನಷ್ಟು ಪ್ರಬಲವಾದ 7.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು ಮೊರೊನ್‌ನ ನೈಋತ್ಯ ಭಾಗದಲ್ಲಿ ಸುಮಾರು 16 ಕಿಲೋಮೀಟರ್ ದೂರದಲ್ಲಿದ್ದು, 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ.

ಕಾರಾಕಸ್: ದಕ್ಷಿಣ ಅಮೆರಿಕದ ದೇಶವಾದ ವೆನೆಜುವೆಲಾದಲ್ಲಿ ಬುಧವಾರ ಸಂಜೆ ಸತತವಾಗಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ಭಾರೀ ಆತಂಕ ಸೃಷ್ಟಿಸಿವೆ.

ಪ್ರಬಳ ಭೂಕಂಪದ ಪರಿಣಾಮ ರಾಜಧಾನಿ ಕಾರಾಕಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ಕುಸಿದಿದ್ದು, ಜನರು ಭಯಭೀತರಾಗಿ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (USGS) ನೀಡಿರುವ ಮಾಹಿತಿಯ ಪ್ರಕಾರ, ಮೊದಲ ಭೂಕಂಪವು ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ಹೊಂದಿದ್ದು, ಇದರ ಕೇಂದ್ರಬಿಂದು ಕ್ಯಾರಿಬಿಯನ್ ಕರಾವಳಿಯಲ್ಲಿರುವ ಮೊರೊನ್ (Morón) ಪಟ್ಟಣದ ಪಶ್ಚಿಮ ಭಾಗದಲ್ಲಿ ದಾಖಲಾಗಿದೆ. ಭೂಕಂಪವು ಸುಮಾರು 22 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.

ಮೊದಲ ಭೂಕಂಪದ ಕೇವಲ ಒಂದು ನಿಮಿಷದ ನಂತರವೇ ಮತ್ತೊಂದು ಇನ್ನಷ್ಟು ಪ್ರಬಲವಾದ 7.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು ಮೊರೊನ್‌ನ ನೈಋತ್ಯ ಭಾಗದಲ್ಲಿ ಸುಮಾರು 16 ಕಿಲೋಮೀಟರ್ ದೂರದಲ್ಲಿದ್ದು, 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ.

ತಜ್ಞರ ಪ್ರಕಾರ, ಕಳೆದ ನೂರು ವರ್ಷಗಳಲ್ಲಿ ವೆನೆಜುವೆಲಾದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಇದು ಪ್ರಮುಖವಾಗಿವೆ ಎಂದು ತಿಳಿಸಿದ್ದಾರೆ.

ರಾಜಧಾನಿ ಕಾರಾಕಸ್‌ನಲ್ಲಿ ಹೆಚ್ಚಿದ ಆತಂಕ

ಸ್ಥಳೀಯ ಸಮಯ ಸಂಜೆ 6 ಗಂಟೆಯ ಬಳಿಕ ಭೂಕಂಪ ಸಂಭವಿಸಿದ ಪರಿಣಾಮ ಕಾರಾಕಸ್ ನಗರದ ಹಲವೆಡೆ ಕಟ್ಟಡಗಳು ತೀವ್ರವಾಗಿ ನಡುಗಿದವು. ಅನೇಕ ನಿವಾಸಿಗಳು ಮತ್ತು ವ್ಯಾಪಾರಸ್ಥರು ತಕ್ಷಣವೇ ಕಟ್ಟಡಗಳಿಂದ ಹೊರಬಂದು ರಸ್ತೆಗಳಲ್ಲೇ ಆಶ್ರಯ ಪಡೆದರು.

ಕೆಲವು ಪ್ರದೇಶಗಳಲ್ಲಿ ಕಟ್ಟಡಗಳ ಗೋಡೆಗಳು ಕುಸಿದಿದ್ದು, ಮನೆಯೊಳಗಿನ ಪೀಠೋಪಕರಣಗಳು ರಸ್ತೆಯಿಂದಲೇ ಕಾಣುವಂತಾಗಿದ್ದವು. ಧೂಳು ತುಂಬಿದ ಗಾಳಿ ಆವರಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸ್ಥಳೀಯ ನಿವಾಸಿ ಹೆಕ್ಟರ್ ರಿಕ್ಕಿ ಮಾತನಾಡಿ, “ಮೊದಲಿಗೆ ಸಣ್ಣ ಮಟ್ಟದಲ್ಲಿ ಕಂಪನ ಆರಂಭವಾಯಿತು. ನಂತರ ಅದರ ತೀವ್ರತೆ ಹೆಚ್ಚಾಗುತ್ತಾ ಹೋಯಿತು. ಕೊನೆಗೆ ಎಲ್ಲರೂ ಮನೆಗಳಿಂದ ಹೊರಗೆ ಓಡಿ ಬಂದು ಒಟ್ಟಾಗಿ ನಿಂತುಕೊಂಡೆವು” ಎಂದು ಹೇಳಿದ್ದಾರೆ.

ವೆನೆಜುವೆಲಾದ ಸಚಿವ ಡಿಯೊಸ್‌ಡಾಡೊ ಕಬೆಲ್ಲೊ ಅವರು ಮಾತನಾಡಿ, ಭೂಕಂಪದ ಪರಿಣಾಮ ದೇಶದ ಹಲವು ರಾಜ್ಯಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.

ಕಾರಾಕಸ್‌ನ ಅಲ್ಟಾಮಿರಾ ಪ್ರದೇಶದಲ್ಲಿ ಕೆಲವು ಮನೆಗಳು ಮತ್ತು ಕಟ್ಟಡಗಳು ಕುಸಿದಿರುವ ಬಗ್ಗೆ ಮಾಹಿತಿ ದೊರೆತಿದ್ದು, ಗಾಯಾಳುಗಳಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ರಕ್ಷಣಾ ಮತ್ತು ವೈದ್ಯಕೀಯ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಸಾರ್ವಜನಿಕರು ಆಂಬ್ಯುಲೆನ್ಸ್ ಹಾಗೂ ತುರ್ತು ವಾಹನಗಳಿಗೆ ದಾರಿ ಬಿಡುವಂತೆ ಮನವಿ ಮಾಡಿದ್ದಾರೆ.

“ಜನರು ಆತಂಕಕ್ಕೊಳಗಾಗುವುದು ಸಹಜ. ಆದರೆ ನಾವು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದು, ರಕ್ಷಣಾ ಕಾರ್ಯಗಳನ್ನು ವೇಗಗೊಳಿಸಿದ್ದೇವೆ. ಮಕ್ಕಳು ಮತ್ತು ವೃದ್ಧರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ” ಎಂದು ಹೇಳಿದ್ದಾರೆ.

ಮನೆಗಳ ಹೊರಗೇ ಉಳಿದ ಜನರು

ಭೂಕಂಪದ ಬಳಿಕ ಸಂಭವಿಸಬಹುದಾದ ನಂತರದ ಕಂಪನಗಳ (Aftershocks) ಭೀತಿಯಿಂದ ಅಧಿಕಾರಿಗಳು ಜನರಿಗೆ ತಾತ್ಕಾಲಿಕವಾಗಿ ಹೊರಾಂಗಣದಲ್ಲೇ ಉಳಿಯುವಂತೆ ಸೂಚಿಸಿದ್ದಾರೆ.

ಸ್ಥಳೀಯ ನಿವಾಸಿ ರಾಬರ್ಟೊ ಗಾಮಾಸ್ ಮಾತನಾಡಿ, “ಕಟ್ಟಡ ಎಡಬಲಕ್ಕೆ ಭಾರೀ ಪ್ರಮಾಣದಲ್ಲಿ ಅಲುಗಾಡುತ್ತಿತ್ತು. ನಾವು ನಡೆಯುತ್ತಿದ್ದಾಗಲೇ ಭೂಮಿ ನಮ್ಮನ್ನು ತಳ್ಳುತ್ತಿರುವಂತೆ ಅನುಭವವಾಯಿತು. ಮನೆಯೊಳಗಿನ ಬಹುತೇಕ ವಸ್ತುಗಳು ನೆಲಕ್ಕುರುಳಿದವು. ಅದೃಷ್ಟವಶಾತ್ ನಾವು ಸುರಕ್ಷಿತವಾಗಿ ಹೊರಬಂದೆವು” ಎಂದು ಹೇಳಿದ್ದಾರೆ.

ಸುನಾಮಿ ಎಚ್ಚರಿಕೆ

ಈ ನಡುವೆ ಭೂಕಂಪದ ತೀವ್ರತೆಯನ್ನು ಗಮನಿಸಿ ಅಮೆರಿಕದ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ವರ್ಜಿನ್ ದ್ವೀಪಗಳಲ್ಲಿ ಸುನಾಮಿ ಎಚ್ಚರಿಕೆ ನೀಡಿದೆ.

ವೆನೆಜುವೆಲಾದಲ್ಲಿ ಭೂಕಂಪಗಳು ಅಪರೂಪ

ವೆನೆಜುವೆಲಾ ಹಲವು ಭೂಪದರಗಳ (Fault Lines) ಸಮೀಪದಲ್ಲಿದ್ದರೂ, ದಕ್ಷಿಣ ಅಮೆರಿಕ ಮತ್ತು ಕ್ಯಾರಿಬಿಯನ್ ಟೆಕ್ಟೋನಿಕ್ ಫಲಕಗಳ ನಡುವಿನ ಅದರ ಭೌಗೋಳಿಕ ಸ್ಥಾನಮಾನದಿಂದಾಗಿ ಮೆಕ್ಸಿಕೋ, ಚಿಲಿ ಮೊದಲಾದ ದೇಶಗಳಿಗಿಂತ ಇಲ್ಲಿ ಭೂಕಂಪಗಳು ಕಡಿಮೆ ಪ್ರಮಾಣದಲ್ಲಿ ಸಂಭವಿಸುತ್ತವೆ.

ಆದರೆ, ಈ ಬಾರಿ ಸಂಭವಿಸಿದ 7.1 ಮತ್ತು 7.5 ತೀವ್ರತೆಯ ಸತತ ಭೂಕಂಪಗಳು ದೇಶವನ್ನು ಬೆಚ್ಚಿಬೀಳಿಸಿದ್ದು, ಹಾನಿಯ ಪ್ರಮಾಣ ಮತ್ತು ಸಂಭವನೀಯ ಸಾವುನೋವುಗಳ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಮುಂದಿನ ಕೆಲ ಗಂಟೆಗಳು ಅತ್ಯಂತ ಮಹತ್ವದ್ದಾಗಿವೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಲ್ಕತ್ತಾದಲ್ಲಿ ಭೀಕರ ದುರಂತ: ನಿರ್ಮಾಣ ಹಂತದ ಗೋದಾಮು ಕುಸಿದು 5 ಕಾರ್ಮಿಕರ ಸಾವು, 20 ಮಂದಿ ರಕ್ಷಣೆ; TMC ಅವಧಿಯ ಯೋಜನೆಗಳಿಗೆ CM ಸುವೇಂದು ಬ್ರೇಕ್..!

ದೇಶದ ಮೊದಲ ಖಾಸಗಿ ಚಿನ್ನದ ಗಣಿ ಉದ್ಘಾಟಿಸಿದ ಆಂಧ್ರ CM; ಪ್ರತಿ ವರ್ಷ 900 ಕೆಜಿ ಚಿನ್ನ ಉತ್ಪಾದನೆ!

ಖರ್ಗೆ ಕುಟುಂಬದಿಂದ 100 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಲೂಟಿ: BJP ಗಂಭೀರ ಆರೋಪ

ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ- ಸಿಲ್ಕ್ ಬೋರ್ಡ್ ವರೆಗೆ 1,300 ಕೋಟಿ ರೂ ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್: ಟೋಲ್ ಬದಲು Value Capture Financing ಗೆ ಪ್ರಸ್ತಾವನೆ!

ಮಂಡ್ಯ: ಮುತ್ತತ್ತಿ ದೇವಸ್ಥಾನಕ್ಕೆ ತೆರಳಿದ್ದಾಗ ದುರ್ಘಟನೆ: ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಜಲಸಮಾಧಿ!