ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ 
ವಿದೇಶ

"ಭಾರತದ ಜಲ ಬಾಂಬ್‌ಗೆ ಪಾಕ್ ನಡುಕ": ನಮ್ಮ ಪಾಲಿನ ನೀರು ಮುಟ್ಟಿದರೆ ಆ ಕೈಗಳನ್ನೇ ಕತ್ತರಿಸುತ್ತೇವೆ- ಶತ್ರು ರಾಷ್ಟ್ರದಿಂದ ಮತ್ತೆ ಗೊಡ್ಡು ಬೆದರಿಕೆ..!

ಪಾಕಿಸ್ತಾನಕ್ಕೆ ಹಕ್ಕಿನಂತೆ ದೊರೆಯಬೇಕಾದ ನೀರನ್ನು ತಡೆಯಲು ಅಥವಾ ಬೇರೆಡೆಗೆ ತಿರುಗಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ನಮ್ಮ ಪಾಲಿನ ನೀರಿನ ಮೇಲೆ ಯಾರಾದರೂ ಹಕ್ಕು ಸಾಧಿಸಲು ಯತ್ನಿಸಿದರೆ, ನಾವು ಸುಮ್ಮನಿರುವುದಿಲ್ಲ.

ನವದೆಹಲಿ/ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದ (Indus Waters Treaty) ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಭಾರತದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

"ಪಾಕಿಸ್ತಾನಕ್ಕೆ ಸೇರಬೇಕಾದ ನೀರನ್ನು ಕಸಿದುಕೊಳ್ಳಲು ಯಾರೇ ಪ್ರಯತ್ನಿಸಿದರೂ ಅವರ ಕೈ ಕತ್ತರಿಸುತ್ತೇವೆ" ಎಂದು ಯುದ್ಧೋನ್ಮಾದದ ಮಾತುಗಳನ್ನಾಡಿದ್ದಾರೆ.

ಪಾಕಿಸ್ತಾನದ ಮಾಹಿತಿ ಸಚಿವ ಅತ್ತಾವುಲ್ಲಾ ತಾರರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಸಾದಿಕ್ ಮಲಿಕ್, ಭಾರತ ಸಿಂಧೂ ನದಿ ನೀರಿನ ಹರಿವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಪಾಕಿಸ್ತಾನಕ್ಕೆ ಹಕ್ಕಿನಂತೆ ದೊರೆಯಬೇಕಾದ ನೀರನ್ನು ತಡೆಯಲು ಅಥವಾ ಬೇರೆಡೆಗೆ ತಿರುಗಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ನಮ್ಮ ಪಾಲಿನ ನೀರಿನ ಮೇಲೆ ಯಾರಾದರೂ ಹಕ್ಕು ಸಾಧಿಸಲು ಯತ್ನಿಸಿದರೆ, ನಾವು ಸುಮ್ಮನಿರುವುದಿಲ್ಲ. ಅಗತ್ಯವಿದ್ದರೆ ಬಲಪ್ರಯೋಗಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯ ವಿಡಿಯೊವನ್ನು ಪಾಕಿಸ್ತಾನದ 24NewsHD ಸೇರಿದಂತೆ ಹಲವು ಮಾಧ್ಯಮಗಳು ಪ್ರಸಾರ ಮಾಡಿವೆ.

ಇದೇ ವೇಳೆ, ಮಾಹಿತಿ ಸಚಿವ ಅತ್ತಾವುಲ್ಲಾ ತಾರರ್ ಮಾತನಾಡಿ, 1960ರ ಸಿಂಧೂ ಜಲ ಒಪ್ಪಂದವನ್ನು ಭಾರತ ಏಕಪಕ್ಷೀಯವಾಗಿ ಅಮಾನತುಗೊಳಿಸಲು ಅಥವಾ ರದ್ದುಪಡಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ಈ ಒಪ್ಪಂದವು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಬದ್ಧ ಒಪ್ಪಂದವಾಗಿದ್ದು, ಎರಡೂ ರಾಷ್ಟ್ರಗಳ ಒಪ್ಪಿಗೆ ಇಲ್ಲದೆ ಅದರಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತ ಒಪ್ಪಂದವನ್ನು ಅಮಾನತುಗೊಳಿಸುವ ಪ್ರಯತ್ನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಬೆಂಬಲ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಕೂಡ ನೀರನ್ನು ದೇಶದ ಜೀವನಾಡಿ ಎಂದು ಪರಿಗಣಿಸಿದ್ದು, ಅದನ್ನು ಯಾರೂ ಕಸಿದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಸಿಂಧೂ ಜಲ ಒಪ್ಪಂದ ಕುರಿತು ಮೊದಲ ಬಾರಿಗೆ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾಗುತ್ತಿದೆ ಎಂದು ಪಾಕಿಸ್ತಾನ ಘೋಷಿಸಿದೆ.

ಈ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಕಾನೂನು ತಜ್ಞರು, ಜಲ ಸಂಪನ್ಮೂಲ ಪರಿಣಿತರು ಹಾಗೂ ವಿದೇಶಿ ಪ್ರತಿನಿಧಿಗಳು ಭಾಗವಹಿಸಲಿದ್ದು, ಪಾಕಿಸ್ತಾನದ ಹಕ್ಕುಗಳ ಕುರಿತು ಚರ್ಚೆ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ.

ಈ ಹಿಂದೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀರಿನ ಭದ್ರತೆ ದೇಶದ ರಾಷ್ಟ್ರೀಯ ಭದ್ರತೆಯ ಭಾಗವಾಗಿದ್ದು, ನೀರಿನ ಹಕ್ಕಿಗೆ ಧಕ್ಕೆ ಉಂಟಾದರೆ ಭಾರತ ವಿರುದ್ಧ ಯುದ್ಧಕ್ಕೂ ಸಿದ್ಧ ಎಂದು ಹೇಳಿದ್ದರು.

ಇದರ ನಡುವೆ, ಭಾರತ ತನ್ನ ನಿಲುವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದೆ. 2025ರ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿರುವ ಭಾರತ, 1960ರಲ್ಲಿ ಮಾಡಿಕೊಂಡ ಒಪ್ಪಂದವು ಇಂದಿನ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 62ನೇ ಅಧಿವೇಶನದಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ಅನುಪಮಾ ಸಿಂಗ್, ರಾಜ್ಯ ಪ್ರಾಯೋಜಿತ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶವು ಸಹಕಾರದ ಆಧಾರದ ಮೇಲೆ ರೂಪುಗೊಂಡ ಒಪ್ಪಂದದ ಸೌಲಭ್ಯಗಳನ್ನು ನಿರಂತರವಾಗಿ ನಿರೀಕ್ಷಿಸುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.

ಆರು ದಶಕಗಳ ಹಿಂದೆ ರೂಪುಗೊಂಡ ಒಪ್ಪಂದವನ್ನು ಯಾವುದೇ ಬದಲಾವಣೆ ಇಲ್ಲದೆ ಶಾಶ್ವತವಾಗಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಜೊತೆಗೆ, ದ್ವಿಪಕ್ಷೀಯ ವಿವಾದಗಳನ್ನು ಅಂತರರಾಷ್ಟ್ರೀಯ ವೇದಿಕೆಗಳಿಗೆ ಕೊಂಡೊಯ್ಯುವ ಬದಲು ಪಾಕಿಸ್ತಾನ ತನ್ನ ಆಂತರಿಕ ಸಮಸ್ಯೆಗಳತ್ತ ಗಮನಹರಿಸಬೇಕು ಎಂದೂ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ಗಟ್ಟಿ: ಪ್ರಧಾನಿ ಮೋದಿಗೆ ಮತ್ತೆ ಅಮೆರಿಕ ಆಹ್ವಾನ, ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ..!

ಡೀಸೆಲ್ ಖರೀದಿಗೆ ಇನ್ನು ಮಿತಿ ಇಲ್ಲ: ಜು.1ರಿಂದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಮುಕ್ತ ಮಾರಾಟ..!

'ಇದು ಬಹಿರಂಗ ಆಕ್ರಮಣ, ಪ್ರಾದೇಶಿಕ ಸ್ಥಿರತೆಗೆ ಧಕ್ಕೆ': ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿಗೆ ಭಾರತ ತೀವ್ರ ಖಂಡನೆ

ಅಧ್ಯಕ್ಷೀಯ ಅಧಿಕಾರ: ಟ್ರಂಪ್ ಪರ ಅಮೆರಿಕ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಬೆಂಗಳೂರು ಸುರಂಗ ರಸ್ತೆ ಯೋಜನೆ ವಿರುದ್ಧ ಸಂಸದ Tejasvi Surya PIL