ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಡ್ರೋನ್ ದಾಳಿ. 
ವಿದೇಶ

Iran conflict: ರಿಯಾದ್‌ ಅಮೆರಿಕಾ ರಾಯಭಾರಿ ಕಚೇರಿ ಮೇಲೆ ಡ್ರೋನ್ ದಾಳಿ: ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಸೌದಿ; ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ- ಟ್ರಂಪ್ ಎಚ್ಚರಿಕೆ

ರಿಯಾದ್‌ನ ಡಿಪ್ಲೊಮ್ಯಾಟಿಕ್ ಕ್ವಾರ್ಟರ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಮೇಲೆ ಎರಡು ಆತ್ಮಹತ್ಯಾ ಡ್ರೋನ್ ಗಳು (UAVs) ದಾಳಿ ನಡೆಸಿವೆ.

ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಇಂದು ಮುಂಜಾನೆ ಭೀಕರ ಡ್ರೋನ್ ದಾಳಿ ನಡೆದಿದೆ.

ಇರಾನ್ ಬೆಂಬಲಿತ ಪಡೆಗಳು ಈ ಕೃತ್ಯ ಎಸಗಿರಬಹುದು ಎಂದು ಸಂಶಯಿಸಲಾಗಿದ್ದು, ಘಟನೆಯಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ.

ರಿಯಾದ್‌ನ ಡಿಪ್ಲೊಮ್ಯಾಟಿಕ್ ಕ್ವಾರ್ಟರ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಮೇಲೆ ಎರಡು ಆತ್ಮಹತ್ಯಾ ಡ್ರೋನ್ ಗಳು (UAVs) ದಾಳಿ ನಡೆಸಿವೆ.

ದಾಳಿಯಿಂದಾಗಿ ಕಚೇರಿಯ ಆವರಣದಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್, ದಾಳಿಯ ಸಮಯದಲ್ಲಿ ಕಚೇರಿ ಖಾಲಿಯಾಗಿದ್ದರಿಂದ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ, ಆದರೆ ಕಟ್ಟಡಕ್ಕೆ ಅಲ್ಪ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ರಿಯಾದ್ ಮೇಲೆ ದಾಳಿ ಮಾಡಲು ಬಂದಿದ್ದ ಇತರ ನಾಲ್ಕು ಡ್ರೋನ್ ಗಳನ್ನು ಸೌದಿ ವಾಯು ರಕ್ಷಣಾ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿವೆ.

ಟ್ರಂಪ್ ಎಚ್ಚರಿಕೆ

ಈ ನಡುವೆ ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ತಕ್ಕ ಪ್ರತಿಕ್ರಿಯೆ ನೀಡಲಾಗುವುದು" ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಸೌದಿ ಸೇರಿದಂತೆ 12 ಮಧ್ಯಪ್ರಾಚ್ಯ ದೇಶಗಳನ್ನು ಕೂಡಲೇ ತೊರೆಯುವಂತೆ ತನ್ನ ನಾಗರಿಕರಿಗೆ ಸೂಚನೆ ನೀಡಿದ್ದಾರೆ.

ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಶೇ. 10 ರಷ್ಟು ಏರಿಕೆಯಾಗಿದೆ. ಸೌದಿ ಅರಾಮ್ಕೊ ಮುನ್ನೆಚ್ಚರಿಕಾ ಕ್ರಮವಾಗಿ ತನ್ನ ಪ್ರಮುಖ ತೈಲ ಸಂಸ್ಕರಣಾಗಾರವನ್ನು ತಾತ್ಕಾಲಿಕವಾಗಿ ಮುಚ್ಚಿದೆ.

ರಿಯಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಭಾರತೀಯ ನಾಗರಿಕರು ಕೂಡ ಜಾಗರೂಕರಾಗಿರಲು ಸೂಚಿಸಲಾಗಿದೆ.

ಏತನ್ಮಧ್ಯೆ ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯವು ಈ ದಾಳಿಯನ್ನು "ಹೇಡಿಗಳ ಕೃತ್ಯ" ಎಂದು ಕರೆದಿದ್ದು, ಇದು ಕೇವಲ ಅಮೆರಿಕದ ಮೇಲಿನ ದಾಳಿಯಲ್ಲ, ಬದಲಾಗಿ ಸೌದಿಯ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಖಂಡಿಸಿದೆ.

ದಾಳಿಯ ಹಿಂದೆ ಇರುವ ಶಕ್ತಿಗಳನ್ನು ಪತ್ತೆಹಚ್ಚಲು ಮತ್ತು ಪ್ರಾದೇಶಿಕ ಭದ್ರತೆಯನ್ನು ಕಾಪಾಡಲು ಅಂತರಾಷ್ಟ್ರೀಯ ಸಮುದಾಯದೊಂದಿಗೆ ಸಹಕರಿಸುವುದಾಗಿ ಸೌದಿ ತಿಳಿಸಿದೆ.

ರಿಯಾದ್ ನಗರದ ನಾಗರಿಕರನ್ನು ರಕ್ಷಿಸಲು ಮತ್ತು ತೈಲ ಕೇಂದ್ರಗಳ ಸುರಕ್ಷತೆಗಾಗಿ ವಾಯು ರಕ್ಷಣಾ ವ್ಯವಸ್ಥೆಯನ್ನು (Patriot Missiles) ಮತ್ತಷ್ಟು ಬಲಪಡಿಸಲಾಗಿದೆ ಎಂದು ಸೌದಿ ರಕ್ಷಣಾ ಪಡೆ ತಿಳಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

ಭಾರತವು ತನ್ನ ಕಚ್ಚಾ ತೈಲದ ಅಗತ್ಯತೆಯ ಸುಮಾರು ಶೇ.80 ಕ್ಕಿಂತ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಶೇ. 10 ರಷ್ಟು ಏರಿಕೆಯಾಗಿರುವುದರಿಂದ, ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ ರೂ.5 ರಿಂದ ರೂ.8 ರವರೆಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ತೈಲ ನೀಡುವ ಪ್ರಮುಖ ದೇಶಗಳಲ್ಲಿ ಸೌದಿ ಅರೇಬಿಯಾ ಒಂದಾಗಿದೆ. ಅಲ್ಲಿನ ಸಂಸ್ಕರಣಾಗಾರಗಳು ಸ್ಥಗಿತಗೊಂಡರೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.

ಡೀಸೆಲ್ ಬೆಲೆ ಏರಿಕೆಯಾದರೆ ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ತರಕಾರಿ, ಹಾಲು ಮತ್ತು ದಿನಸಿ ಪದಾರ್ಥಗಳ ಬೆಲೆಗಳು ಏರಿಕೆಯಾಗಬಹುದು.

ತೈಲ ಬೆಲೆ ಏರಿಕೆಯು ನೇರವಾಗಿ ದೇಶದ ಹಣದುಬ್ಬರದ (Inflation) ಮೇಲೆ ಪರಿಣಾಮ ಬೀರಲಿದ್ದು, ಮಧ್ಯಮ ವರ್ಗದ ಜನರ ಮೇಲೆ ಹೊರೆಯಾಗಲಿದೆ. ಈಗಾಗಲೇ ಈ ಸುದ್ದಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ (Nifty & Sensex) ಕುಸಿತ ಕಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ: ಸಮುದ್ರದಲ್ಲಿ ಅಲೆಗಳ ಅಬ್ಬರ; ಸುನಾಮಿ ಎಚ್ಚರಿಕೆ

ಬಸ್‌ನಲ್ಲಿ ನಿಧಾನಕ್ಕೆ ಕೈ ಹಾಕಿದ, ಸುಮ್ನೆ ಬಿಡ್ತಿನಾ?: ಕಹಿ ಅನುಭವ ಬಿಚ್ಚಿಟ್ಟ Bigg Boss ರಿಷಾ ಗೌಡ

ಬುರ್ಖಾ ಧರಿಸದಿದ್ದರೆ ರೇಪ್ ಮಾಡುವ ಬೆದರಿಕೆ; ಟೀಂ ಲೀಡರ್ ಕೆಟ್ಟದಾಗಿ ಮುಟ್ಟುತ್ತಿದ್ದ: TCS ಭಯಾನಕತೆ ಬಿಚ್ಚಿಟ್ಟ ಸಂತ್ರಸ್ತೆ

ನೆಹರು ಕಾಶ್ಮೀರಿ ಪಂಡಿತ ಅಲ್ಲ, ಮುಸ್ಲಿಂ ಕುಟುಂಬದಿಂದ ಬಂದಿದ್ದಾರೆ: ಬಿಜೆಪಿ ಮಾಜಿ ಸಂಸದ ವಿವಾದಾತ್ಮಕ ಹೇಳಿಕೆ

Video: ಸೋಲಿನ ನಂತರ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ; ಓಡಿ ಬಂದ KKR ಆಟಗಾರ!

SCROLL FOR NEXT