ಟೆಹ್ರಾನ್: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಯುದ್ಧ 16ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ಇರಾನ್ ವಾರ್ ಗೆ ಹೌತಿಗಳು ಸಜ್ಜಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಮತ್ತೊಂದು ನಿರ್ಣಾಯಕ ಜಲಸಂಧಿ ಬಂದ್?
ಅಮೆರಿಕ ಮತ್ತು ಇಸ್ರೇಲ್ ದಾಳಿ ವಿರುದ್ಧ ಇರಾನ್ ಪ್ರತೀಕಾರದ ಹೇಳಿಕೆ ನೀಡಿದ ಬೆನ್ನಲ್ಲೇ ಈ ವಾರದ ಆರಂಭದಲ್ಲಿ ಕೆಲವು ಜಾಗತಿಕ ಮಾಧ್ಯಮಗಳಲ್ಲಿ ಇದು ವರದಿಯಾಗಿತ್ತು. ಇರಾನ್ ಬೆಂಬಲಿತ ಶಸ್ತ್ರಸಜ್ಜಿತ ಮತ್ತು ಉಗ್ರಗಾಮಿ ಗುಂಪು ಯೆಮೆನ್ ಮೂಲದ ಹೌತಿಗಳು ಯುದ್ಧಕ್ಕೆ ಕೈ ಜೋಡಿಸಿದರೆ ಹಾರ್ಮುಜ್ ಬಳಿಕ ಮತ್ತೊಂದು ನಿರ್ಣಾಯಕ ಜಲಸಂಧಿ ಬಾಬ್ ಎಲ್-ಮಂಡೇಬ್ ಬಂದ್ ಆಗುವ ಸಾಧ್ಯತೆಯಿದೆ.
ಯುದ್ಧಕ್ಕೆ ರೆಡಿ ಎಂದ ಹೌತಿಗಳು
ಹಾರ್ಮುಜ್ ಜಲಸಂಧಿ ಬಂದ್ ನಡುವೆ ಈ ಜಲಸಂಧಿಯೂ ಬಂದ್ ಆದರೆ, ಜಾಗತಿಕ ವ್ಯಾಪಾರದ ಮೇಲೆ ಮತ್ತಷ್ಟು ಹೊಡೆತ ಬೀಳುವ ಅಪಾಯವಿದೆ. ಇಲ್ಲಿಯವರೆಗೂ ಇರಾನ್ ವಿರುದ್ಧದ ಯುದ್ಧಕ್ಕೆ ಏನನ್ನೂ ಪ್ರತಿಕ್ರಿಯಿಸಿದ ಹೌತಿಗಳು ಈಗ ಮಾತನಾಡಿದ್ದಾರೆ. ಯಾವುದೇ ಕ್ಷಣದಲ್ಲಿ ಪ್ರತಿಕ್ರಿಯಿಸಲು ತಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಹೌತಿಗಳು ಈ ಪ್ರದೇಶದಲ್ಲಿ ಇರಾನ್‌ನ ಮೂರು-ಹಂತದ ತಂತ್ರ ದ ಭಾಗವಾಗಲಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
ಇದೇ ವೇಳೆ ಹೌತಿಗಳು ಮತ್ತಿತರ ಬಂಡುಕೋರ ಗುಂಪುಗಳು ಸಂಪೂರ್ಣ ಆಲರ್ಟ್ ಆಗಿದ್ದಾರೆ. ಇರಾನ್ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಸೇರಬಹುದು. ಇದರಿಂದ ಬಾಬ್ ಎಲ್-ಮಂಡೇಬ್ ಜಲಸಂಧಿ ಬಂದ್ ಆಗಬಹುದು ಎಂದು ಇರಾನ್‌ನ ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಯುದ್ಧ ಮತ್ತಷ್ಟು ವಿನಾಶಕಾರಿ: ಇರಾನ್ ಹಾರ್ಮುಜ್ ಜಲಸಂಧಿ ಬಂದ್ ಮಾಡುವ ಮೂಲಕ ಹಲವು ಸರಕು ಸಾಗಣೆ ಹಡಗುಗಳ ಮಾರ್ಗವನ್ನು ತಡೆಯುತ್ತಿರುವ ವರದಿಗಳ ನಡುವೆ ಇದೀಗ ಅದರಂತೆ ನಿರ್ಣಾಯಕವಾದ ಮತ್ತೊಂದು ಜಲಸಂಧಿ ಬಾಬ್ ಎಲ್-ಮಂಡೇಬ್ ಬಂದ್ ಮಾಡಲು ಮುಂದಾಗಿದೆ.
ಬಾಬ್ ಎಲ್-ಮಂಡೇಬ್ ಕೆಂಪು ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಮೆಡಿಟರೇನಿಯನ್ ಸಮುದ್ರಕ್ಕೆ ಮತ್ತು ಅಟ್ಲಾಂಟಿಕ್ ಸಾಗರಕ್ಕೆ ಪರಿಣಾಮಕಾರಿಯಾಗಿ ಸಂಪರ್ಕಿಸುತ್ತದೆ. ಈ ಮಾರ್ಗವು ಏಷ್ಯಾ-ಯುರೋಪ್ ವ್ಯಾಪಾರಕ್ಕೆ ಪ್ರಮುಖವಾಗಿದೆ. ಬಾಬ್ ಎಲ್-ಮಂಡೇಬ್ ಮಾರ್ಗವನ್ನು ನಿರ್ಬಂಧಿಸಲು ಹೌತಿಗಳು ಮುಂದಾದರೆ ಯುದ್ಧ ಮತ್ತಷ್ಟು ವಿನಾಶಕಾರಿಯಾಗಲಿದೆ. ಜಾಗತಿಕ ವ್ಯಾಪಾರವು ಭಾರಿ ಆಘಾತವನ್ನು ಎದುರಿಸಬೇಕಾಗುತ್ತದೆ.
ಈ ಮಾರ್ಗಗಳ ಮೂಲಕ ಪ್ರಪಂಚದ ಸರಿಸುಮಾರು ಶೇ.30 ರಷ್ಟು ತೈಲವನ್ನು ಒಯ್ಯುತ್ತವೆ ಮತ್ತು ಸೂಯೆಜ್ ಕಾಲುವೆಯ ಮೂಲಕ ಏಷ್ಯಾ-ಯುರೋಪ್ ಕಡಲ ವ್ಯಾಪಾರದ ಪ್ರಮುಖ ಪಾಲನ್ನು ನಿರ್ವಹಿಸುತ್ತವೆ. ಸೌದಿ ಅರೇಬಿಯಾ ಈ ಜಲಸಂಧಿ ಮೂಲಕ ಕೆಂಪು ಸಮುದ್ರದ ಪ್ರವೇಶದ್ವಾರದಲ್ಲಿ ಪರ್ಯಾಯ ತೈಲ ವಿತರಣಾ ಮಾರ್ಗವನ್ನು ಪ್ರಾರಂಭಿಸಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಬಾಲ್ ಎಲ್-ಮಂಡೇಬ್‌ನ ಸಂಭಾವ್ಯ ಬಂದ್ ಆಗುವುದು ಮಹತ್ವ ಪಡೆದುಕೊಂಡಿದೆ.