ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತೀವ್ರವಾಗುತ್ತಿರುವ ಸಂದರ್ಭದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿರುವ ಹೇಳಿಕೆಯೊಂದು ತೀವ್ರ ಸಂಚಲನ ಸೃಷ್ಟಿಸಿದೆ.
ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪವನ್ನು ಅಮೆರಿಕ “ಸುಲಭವಾಗಿ ತನ್ನ ವಶಕ್ಕೆ ಪಡೆಯಬಹುದು” ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಖಾರ್ಗ್ ದ್ವೀಪವು ಇರಾನ್‌ನ ತೈಲ ರಫ್ತಿನ ಪ್ರಮುಖ ಕೇಂದ್ರವಾಗಿದ್ದು, ದೇಶದ ಬಹುಪಾಲು ಕಚ್ಚಾ ತೈಲವು ಇಲ್ಲಿಂದಲೇ ಸಾಗುತ್ತದೆ. ಈ ದ್ವೀಪದ ಮೇಲೆ ನಿಯಂತ್ರಣ ಸಾಧಿಸುವುದು ಎಂದರೆ ಇರಾನ್ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವಂತಾಗುತ್ತದೆ.
ಹೀಗಾಗಿ ಟ್ರಂಪ್ ಅವರು ನೀಡಿರುವ ಹೇಳಿಕೆ ಭಾರೀ ಸಂಚಲನವನ್ನು ಮೂಡಿಸಿದೆ. ಟ್ರಂಪ್ ತಮ್ಮ ಹೇಳಿಕೆಯಲ್ಲಿ “ಇರಾನ್‌ನ ತೈಲ ಸಂಪತ್ತನ್ನು ನಾವೇ ವಶಕ್ಕೆ ಪಡೆಯಬೇಕು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅವರಿಗೆ ಯಾವುದೇ ಗಟ್ಟಿಯಾದ ರಕ್ಷಣೆಯಿಲ್ಲ. ನಾವು ಅದನ್ನು ಬಹಳ ಸುಲಭವಾಗಿ ವಶಕ್ಕೆ ಪಡೆಯಬಹುದು ಎಂದು ಹೇಳಿದ್ದಾರೆ. ಇದು ಈಗಾಗಲೇ ನಡೆಯುತ್ತಿರುವ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವ ಸೂಚನೆ ಎಂದು ಪರಿಗಣಿಸಲಾಗುತ್ತಿದೆ.
ಇದಕ್ಕೂ ಮುನ್ನ ಅಮೆರಿಕ ಪಡೆಗಳು ಖಾರ್ಗ್ ದ್ವೀಪದ ಮೇಲೆ ದಾಳಿ ನಡೆಸಿ ಸೈನಿಕ ಗುರಿಗಳನ್ನು ಧ್ವಂಸ ಮಾಡಿರುವುದಾಗಿ ಟ್ರಂಪ್ ಹೇಳಿದ್ದರು. ಆದರೆ, ದ್ವೀಪದ ತೈಲ ಮೂಲಸೌಕರ್ಯವನ್ನು ನಾಶಪಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಈ ನಡುವೆ ಅಮೆರಿಕ ತನ್ನ ಸೈನಿಕ ಬಲವನ್ನು ಹೆಚ್ಚಿಸುತ್ತಿದ್ದು, ಇದರ ಬೆನ್ನಲ್ಲೇ ಭೂ ಕಾರ್ಯಾಚರಣೆಗಳ ಸಾಧ್ಯತೆಗಳ ಕುರಿತು ಚರ್ಚೆಗಳು ಶುರುವಾಗುವಂತಾಗಿದೆ. ಇದೇ ಸಂದರ್ಭದಲ್ಲಿ ಟ್ರಂಪ್ ನೀಡಿರುವ ಈ ಹೇಳಿಕೆ ಯುದ್ಧವು ಮತ್ತಷ್ಟು ವಿಸ್ತರಿಸಬಹುದೆಂಬ ಆತಂಕವನ್ನು ಹೆಚ್ಚಿಸಿದೆ.
ಇರಾನ್ ಈಗಾಗಲೇ ಅಮೆರಿಕದ ಯಾವುದೇ ನೆಲದ ದಾಳಿಗೆ ಕಠಿಣ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ, ಖಾರ್ಗ್ ದ್ವೀಪದ ಕುರಿತ ಈ ಹೇಳಿಕೆ ಎರಡು ದೇಶಗಳ ನಡುವಿನ ಸಂಘರ್ಷವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ, ಖಾರ್ಗ್ ದ್ವೀಪದ ಮೇಲಿನ ನಿಯಂತ್ರಣದ ವಿಚಾರವು ಈಗ ಮಧ್ಯ ಪ್ರಾಚ್ಯ ಯುದ್ಧದ ಪ್ರಮುಖ ಕೇಂದ್ರೀಯ ವಿಷಯವಾಗಿ ಹೊರಹೊಮ್ಮಿದ್ದು, ಜಾಗತಿಕ ತೈಲ ಮಾರುಕಟ್ಟೆ ಹಾಗೂ ಆರ್ಥಿಕತೆಗೆ ಇದರ ಪರಿಣಾಮ ಬೀರುವ ಸಾಧ್ಯತೆಗಳೂ ಹೆಚ್ಚಾಗುವಂತೆ ಮಾಡಿದೆ.