ಮಾಸ್ಕೋ: ಯುದ್ಧಕ್ಕಿಂತ ಶಾಂತಿ ಮುಖ್ಯವಾಗಿದ್ದು, ಉಕ್ರೇನ್ ಸಂಘರ್ಷ ಅಂತ್ಯದ ಹಂತದಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಹೇಳಿದ್ದು, ಈ ಹೇಳಿಕೆ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಜಗತ್ತಿನ ಗಮನ ಸೆಳೆದಿರುವ ರಷ್ಯಾ–ಉಕ್ರೇನ್ ಯುದ್ಧ ಕೊನೆಗೊಳ್ಳುವ ಸಾಧ್ಯತೆಗಳನ್ನು ಸೂಚಿಸುತ್ತಿದೆ.
ಮಾಸ್ಕೋದಲ್ಲಿ ನಡೆದ ವಿಜಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, ಉಕ್ರೇನ್ ಯುದ್ಧವು "ಅಂತ್ಯದತ್ತ ಸಾಗುತ್ತಿದೆ" ಎಂಬ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಪಶ್ಚಿಮ ರಾಷ್ಟ್ರಗಳ ಮಿಲಿಟರಿ ನೆರವು ರಷ್ಯಾವನ್ನು ಸೋಲಿಸುವಲ್ಲಿ ವಿಫಲವಾಗಿದೆ. ಈಗ ಆ ರಾಷ್ಟ್ರಗಳು ಒಂದು ಸಂಕೀರ್ಣ ಸ್ಥಿತಿಯಲ್ಲಿ ಸಿಲುಕಿಕೊಂಡಿವೆ ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿನ ಸಂಘರ್ಷವು ಈಗ ಅದರ ಅಂತ್ಯದ ಹಂತಕ್ಕೆ (winding down) ತಲುಪುತ್ತಿದೆ. ನಾವು ಎಂದಿಗೂ ಮಾತುಕತೆಯಿಂದ ಹಿಂದೆ ಸರಿದಿಲ್ಲ. ಶಾಂತಿಯ ಹಾದಿ ತೆರೆದಿದೆ, ಆದರೆ ಅದು ನಮ್ಮ ಹಿತಾಸಕ್ತಿಗಳನ್ನು ಮತ್ತು ವಾಸ್ತವಿಕ ಪರಿಸ್ಥಿತಿಯನ್ನು ಆಧರಿಸಿರಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ಪಶ್ಚಿಮ ರಾಷ್ಟ್ರಗಳ ಬಗ್ಗೆ ಕಟುವಾಗಿ ಮಾತನಾಡಿದ ಪುಟಿನ್, "ರಷ್ಯಾವನ್ನು ಯುದ್ಧಭೂಮಿಯಲ್ಲಿ ಆಯಕಟ್ಟಿನ ರೀತಿಯಲ್ಲಿ ಸೋಲಿಸಬಹುದು ಎಂದು ಅವರು (ಪಶ್ಚಿಮದ ದೇಶಗಳು) ಭಾವಿಸಿದ್ದರು. ಅದಕ್ಕಾಗಿ ಕೋಟ್ಯಂತರ ಡಾಲರ್ ಮೌಲ್ಯದ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಿದರು. ಆದರೆ ಈಗ ಏನಾಗಿದೆ? ಅವರ ಯೋಜನೆ ಸಂಪೂರ್ಣ ವಿಫಲವಾಗಿದೆ. ರಷ್ಯಾವನ್ನು ಸೋಲಿಸುವುದು ಅಸಾಧ್ಯ ಎಂಬುದು ಅವರಿಗೆ ಈಗ ಮನವರಿಕೆಯಾಗಿದೆ.
ಈಗ ಅವರು ಒಂದು ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ಯುದ್ಧವನ್ನು ಮುಂದುವರಿಸಲೂ ಸಾಧ್ಯವಾಗುತ್ತಿಲ್ಲ, ಹಾಗೆಂದು ಗೌರವಯುತವಾಗಿ ಇದರಿಂದ ಹೊರಬರಲೂ ದಾರಿ ಕಾಣುತ್ತಿಲ್ಲ. ತಮ್ಮ ಜನರಿಂದಲೇ ಅವರು ಒತ್ತಡವನ್ನು ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಳಿಕ ರಷ್ಯಾ ಸೇನೆಯನ್ನು ಶ್ಲಾಘಿಸಿದ ಅವರು, "ನಮ್ಮ ಸೈನಿಕರು ಅಸಾಧಾರಣ ಧೈರ್ಯ ತೋರಿದ್ದಾರೆ. ಎದುರಾಳಿಗಳು ಎಷ್ಟೇ ಅತ್ಯಾಧುನಿಕ ಕ್ಷಿಪಣಿಗಳನ್ನು ತಂದರೂ, ನಮ್ಮ ರಕ್ಷಣಾ ವ್ಯವಸ್ಥೆ ಮತ್ತು ಸೈನಿಕರ ಚಾಣಾಕ್ಷತನ ಅವುಗಳನ್ನು ಮೆಟ್ಟಿ ನಿಂತಿದೆ. ಇಡೀ ನ್ಯಾಟೋ (NATO) ಒಕ್ಕೂಟವೇ ರಷ್ಯಾದ ವಿರುದ್ಧ ನಿಂತಿದ್ದರೂ ನಾವು ಅಲುಗಾಡಿಲ್ಲ ಎಂದು ಹೇಳಿದರು.
ನಾವು ಶಾಂತಿಗೆ ಸಿದ್ಧರಿದ್ದೇವೆ. ಆದರೆ, ಅದು ಉಕ್ರೇನ್ ಅನ್ನು ಸೈನ್ಯೀಕರಣದಿಂದ ಮುಕ್ತಗೊಳಿಸುವ ಮತ್ತು ನಮ್ಮ ಸುರಕ್ಷತೆಯ ಖಾತರಿಯನ್ನು ನೀಡುವ ಒಪ್ಪಂದವಾಗಿರಬೇಕು. ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ನಾವು ಈ ನಿಟ್ಟಿನಲ್ಲಿ ಗಮನಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮೂರು ದಿನಗಳ ತಾತ್ಕಾಲಿಕ ಕದನ ವಿರಾಮ ಜಾರಿಗೊಂಡಿದ್ದು, ಇದೇ ವೇಳೆ ಕೈದಿಗಳ ವಿನಿಮಯ ಪ್ರಕ್ರಿಯೆಯೂ ಮುಂದುವರಿದಿದೆ.
ಈ ಬೆಳವಣಿಗೆಗಳು ಎರಡೂ ರಾಷ್ಟ್ರಗಳು ಸಂಧಾನದ ದಾರಿಗೆ ನಿಧಾನವಾಗಿ ಸಾಗುತ್ತಿರುವ ಸೂಚನೆ ನೀಡುತ್ತಿವೆ. ಆದರೆ ಕದನ ವಿರಾಮ ಉಲ್ಲಂಘನೆ ಆರೋಪಗಳನ್ನು ರಷ್ಯಾ ಮತ್ತು ಉಕ್ರೇನ್ ಪರಸ್ಪರ ಮಾಡುತ್ತಿದ್ದು, ನೆಲಮಟ್ಟದಲ್ಲಿ ಉದ್ವಿಗ್ನತೆ ಇನ್ನೂ ಕಡಿಮೆಯಾಗಿಲ್ಲ.
2022ರಲ್ಲಿ ಆರಂಭವಾದ ಈ ಯುದ್ಧವು ಸಾವಿರಾರು ಸೈನಿಕರು ಹಾಗೂ ನಾಗರಿಕರ ಪ್ರಾಣ ಬಲಿಗೆ ಕಾರಣವಾಗಿದೆ. ಉಕ್ರೇನ್‌ನ ಹಲವು ನಗರಗಳು ಭಾರೀ ಹಾನಿಗೊಳಗಾಗಿದ್ದು, ಕೋಟ್ಯಾಂತರ ಜನರು ನಿರಾಶ್ರಿತರಾಗಿದ್ದಾರೆ. ಇನ್ನೊಂದೆಡೆ ಪಾಶ್ಚಾತ್ಯ ರಾಷ್ಟ್ರಗಳ ಆರ್ಥಿಕ ನಿರ್ಬಂಧಗಳಿಂದ ರಷ್ಯಾ ಕೂಡ ಸಾಕಷ್ಟು ಒತ್ತಡ ಅನುಭವಿಸಿದೆ.
ಪ್ರಸ್ತುತ ಡೊನ್‌ಬಾಸ್ ಸೇರಿದಂತೆ ಉಕ್ರೇನ್‌ನ ಸುಮಾರು ಐದನೇ ಭಾಗದ ಪ್ರದೇಶ ಇನ್ನೂ ರಷ್ಯಾ ನಿಯಂತ್ರಣದಲ್ಲಿದೆ. ಉಕ್ರೇನ್ ಸರ್ಕಾರ ತನ್ನ ಭೌಗೋಳಿಕ ಸಮಗ್ರತೆ ಮತ್ತು ಭದ್ರತಾ ಭರವಸೆಗಳ ವಿಚಾರದಲ್ಲಿ ತಲೆ ಬಾಗಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಶಾಂತಿ ಮಾತುಕತೆ ಸುಲಭವಾಗುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ