ವಾಷಿಂಗ್ಟನ್: ಹಲವು ತಿಂಗಳುಗಳಿಂದ ಜಾಗತಿಕ ಆತಂಕಕ್ಕೆ ಕಾರಣವಾಗಿರುವ ಇರಾನ್ ಅಣು ಯೋಜನೆ ಕುರಿತು ಅಮೆರಿಕೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವದ ಹೇಳಿಕೆ ನೀಡಿದ್ದಾರೆ.
ಇರಾನ್ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂಬ ಭರವಸೆಯನ್ನು ತನ್ನ ಆಡಳಿತ ಪಡೆದುಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಇದೇ ವೇಳೆ ಮಧ್ಯಪ್ರಾಚ್ಯ ಯುದ್ಧ ಅಂತ್ಯಗೊಳಿಸುವ ಹಾಗೂ ಹಾರ್ಮುಜ್ ಜಲಸಂಧಿ ಪುನರಾರಂಭಕ್ಕೆ ಸಂಬಂಧಿಸಿದ ಹೊಸ ಮತ್ತು ಕಠಿಣ ಷರತ್ತುಗಳಿರುವ ಒಪ್ಪಂದ ಪ್ರಸ್ತಾವನೆಯನ್ನು ಅಮೆರಿಕ ಇರಾನ್‌ಗೆ ಕಳುಹಿಸಿದೆ ಎಂಬ ವರದಿಗಳು ಹೊರಬಿದ್ದಿವೆ.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, “ನನಗೆ ಬೇಕಾಗಿರುವ ಪ್ರಮುಖ ಭರವಸೆ ಎಂದರೆ ಇರಾನ್ ಅಣ್ವಸ್ತ್ರಗಳನ್ನು ಹೊಂದದಿರುವುದು. ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ” ಎಂದು ಹೇಳಿದ್ದಾರೆ.
ಆದರೆ, ಟ್ರಂಪ್ ಅವರ ಈ ಹೇಳಿಕೆಗಳ ಬಗ್ಗೆ ಇರಾನ್ ಈಗಾಗಲೇ ಅನುಮಾನ ವ್ಯಕ್ತಪಡಿಸಿದ್ದು, ಎರಡೂ ದೇಶಗಳ ನಡುವೆ ಇನ್ನೂ ಹಲವು ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.
ಕಠಿಣ ಷರತ್ತುಗಳ ಹೊಸ ಪ್ರಸ್ತಾವನೆ
ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಟ್ರಂಪ್ ಆಡಳಿತ ಇರಾನ್‌ಗೆ ಹೊಸ ಶಾಂತಿ ಪ್ರಸ್ತಾವನೆಯನ್ನು ಕಳುಹಿಸಿದ್ದು, ಅದರಲ್ಲಿ ಹಿಂದಿನ ಒಪ್ಪಂದಕ್ಕಿಂತ ಕಠಿಣ ಷರತ್ತುಗಳನ್ನು ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಪ್ರಸ್ತಾವನೆಗೆ ಇರಾನ್ ಒಪ್ಪಿಗೆ ನೀಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಟ್ರಂಪ್ ಅವರ ಪ್ರಮುಖ ಗುರಿಗಳಲ್ಲಿ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮವನ್ನು ಸಂಪೂರ್ಣವಾಗಿ ತಡೆಯುವುದು ಹಾಗೂ ಹಲವು ವಾರಗಳಿಂದ ಉದ್ವಿಗ್ನತೆಯ ಕೇಂದ್ರವಾಗಿರುವ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಿಸುವುದು ಸೇರಿವೆ.
$12 ಬಿಲಿಯನ್ ಆಸ್ತಿಗಳ ಬಿಡುಗಡೆಗೆ ಇರಾನ್ ಒತ್ತಾಯ
ಈ ನಡುವೆ ಇರಾನ್ ಸ್ಥಗಿತಗೊಂಡಿರುವ 12 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳನ್ನು ಬಿಡುಗಡೆ ಮಾಡಿದ ಬಳಿಕವೇ ಅಣು ಕಾರ್ಯಕ್ರಮ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಗಂಭೀರ ಮಾತುಕತೆಗೆ ಸಿದ್ಧ ಎಂದು ಹೇಳಿದೆ. ಅಲ್ಲದೆ ತನ್ನ ಸಂಸ್ಕರಿತ ಯುರೇನಿಯಂ ಸಂಗ್ರಹವನ್ನು ನಾಶಪಡಿಸಲಾಗುತ್ತದೆ ಎಂಬ ಟ್ರಂಪ್ ಅವರ ಹಿಂದಿನ ಹೇಳಿಕೆಯನ್ನು "ಆಧಾರರಹಿತ" ಎಂದು ತಳ್ಳಿಹಾಕಿದೆ.
ಮತ್ತೆ ಯುದ್ಧದ ಎಚ್ಚರಿಕೆ
ಒಪ್ಪಂದದ ಕುರಿತು ಮಾತನಾಡಿದ ಟ್ರಂಪ್, “ನನಗೆ ಯಾವುದೇ ಆತುರವಿಲ್ಲ. ನಿಧಾನವಾಗಿ ನಾವು ಬಯಸಿದ ಗುರಿಯತ್ತ ಸಾಗುತ್ತಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರದಿದ್ದರೆ, ಪರಿಸ್ಥಿತಿ ಬೇರೆ ರೀತಿಯಲ್ಲಿ ಅಂತ್ಯಗೊಳ್ಳಬಹುದು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮೊದಲು ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಕೂಡ ಅಗತ್ಯವಿದ್ದರೆ ಮತ್ತೆ ಸೇನಾ ಕಾರ್ಯಾಚರಣೆ ಆರಂಭಿಸಲು ಅಮೆರಿಕ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದ್ದರು.
ಇನ್ನೂ ಶಮನಗೊಂಡಿಲ್ಲ ಉದ್ವಿಗ್ನತೆ
ತಾತ್ಕಾಲಿಕ ಕದನ ವಿರಾಮ ಜಾರಿಯಲ್ಲಿದ್ದರೂ, ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಇತ್ತೀಚೆಗೆ ಇರಾನ್ ತನ್ನ ಪ್ರಾದೇಶಿಕ ಜಲಪ್ರದೇಶ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ.
ಮತ್ತೊಂದೆಡೆ, ಹಾರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧಗಳಿಂದ ಜಾಗತಿಕ ತೈಲ ಪೂರೈಕೆ ಮೇಲೆ ಪರಿಣಾಮ ಬಿದ್ದು, ವಿಶ್ವ ಆರ್ಥಿಕತೆಯ ಮೇಲೂ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಒಪ್ಪಂದ ಸಾಧಿಸಲು ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿದಿವೆ.
ಲೆಬನಾನ್‌ನಲ್ಲಿ ಇಸ್ರೇಲ್ ಕಾರ್ಯಾಚರಣೆ ವಿಸ್ತರಣೆ
ಇದೇ ವೇಳೆ, ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಘರ್ಷವೂ ತೀವ್ರಗೊಂಡಿದೆ. ಇಸ್ರೇಲ್ ಸೇನೆ ದಕ್ಷಿಣ ಲೆಬನಾನ್‌ನ ಮತ್ತಷ್ಟು ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಿದ್ದು, ಹಲವು ಗ್ರಾಮಗಳ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದೆ.
ಲೆಬನಾನ್ ಪ್ರಧಾನಿ ನವಾಫ್ ಸಲಾಂ ಅವರು ಮಾತನಾಡಿ, ಇಸ್ರೇಲ್ "ಭಸ್ಮ ನೀತಿ" ಅನುಸರಿಸುತ್ತಿದೆ ಎಂದು ಆರೋಪಿಸಿದ್ದು, ತಕ್ಷಣ ಮತ್ತು ಪರಿಣಾಮಕಾರಿ ಕದನ ವಿರಾಮಕ್ಕೆ ಕರೆ ಒತ್ತಾಯಿಸಿದ್ದಾರೆ.