ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಅರಾಮ್ಕೊ (Aramco) ಆಡಳಿತ ಕಚೇರಿ ಕಟ್ಟಡದ ಮೇಲೆ ದಾಳಿ ಯತ್ನ ನಡೆದಿರುವುದನ್ನು ಸೌದಿ ಅರೇಬಿಯಾದ ಇಂಧನ ಸಚಿವಾಲಯ ಭಾನುವಾರ ದೃಢಪಡಿಸಿದೆ.
ದಾಳಿಯ ವೇಳೆ ಅರಾಮ್ಕೋ ಘಟಕದ ಮೇಲೆ ಸ್ಫೋಟದ ಅವಶೇಷಗಳು ಬಿದ್ದ ಪರಿಣಾಮ ಸಣ್ಣ ಪ್ರಮಾಣದ ಹಾನಿಯಾಗಿದೆ. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಸಚಿವಾಲಯದ ಅಧಿಕೃತ ಮೂಲಗಳ ಪ್ರಕಾರ, ದಾಳಿಯ ಯತ್ನದ ಬಳಿಕ ಕಟ್ಟಡದ ಮೇಲೆ ಸ್ಫೋಟದ ಚೂರುಗಳು ಬಿದ್ದಿವೆ. ಇದರಿಂದ ಕಟ್ಟಡಕ್ಕೆ ಅಲ್ಪ ಹಾನಿಯಾಗಿದ್ದು, ಯಾರಿಗೂ ಗಾಯಗಳಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹೊಣೆ ಹೊತ್ತ ಹೌತಿಗಳು
ಈ ದಾಳಿಯ ಹೊಣೆಯನ್ನು ಯೆಮನ್‌ನ ಹೌತಿ ಬಂಡುಕೋರರ ವಕ್ತಾರ ಯಾಹ್ಯಾ ಸರೀ ಹೊತ್ತುಕೊಂಡಿದ್ದಾರೆ. ಸೌದಿ ಅರೇಬಿಯಾದ ಪ್ರಮುಖ ತೈಲ ಘಟಕಗಳು, ಸೇನಾ ನೆಲೆಗಳು ಹಾಗೂ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಆರು ಸೇನಾ ಕಾರ್ಯಾಚರಣೆಗಳನ್ನು ನಡೆಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಬಳಸಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಯಾಹ್ಯಾ ಸರೀ ತಿಳಿಸಿದ್ದಾರೆ. ಯೆಮನ್ ವಿರುದ್ಧ ಸೌದಿ ಅರೇಬಿಯಾ ನಡೆಸುತ್ತಿರುವ ದಾಳಿಗಳಿಗೆ ಪ್ರತಿಯಾಗಿ ಈ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ ಎಂಬುದು ಹೌತಿಗಳ ವಾದ.
6 ಕಡೆ ದಾಳಿ ನಡೆಸಿರುವುದಾಗಿ ಹೌತಿಗಳ ಹೇಳಿಕೆ
ಹೌತಿ ವಕ್ತಾರರ ಪ್ರಕಾರ, ಮೊದಲ ದಾಳಿಯಲ್ಲಿ ರಿಯಾದ್‌ನ ಕಿಂಗ್ ಖಾಲಿದ್ ವಿಮಾನ ನಿಲ್ದಾಣ, ತೈಲ ಸಂಗ್ರಹಣಾ ಟ್ಯಾಂಕ್‌ಗಳು ಹಾಗೂ ಅರಾಮ್ಕೊ ಕಂಪನಿಯ ತೈಲ ಸಂಸ್ಕರಣಾ ಘಟಕವನ್ನು ಗುರಿಯಾಗಿಸಿಕೊಳ್ಳಲಾಗಿದೆ. ಎರಡನೇ ದಾಳಿಯನ್ನು ಖುರೈಸ್‌ನಲ್ಲಿರುವ ಅರಾಮ್ಕೊ ತೈಲ ಘಟಕದ ಮೇಲೆ ನಡೆಸಲಾಗಿದೆ. ಮೂರನೇ ದಾಳಿಯಲ್ಲಿ ದವಾದ್ಮಿ ಪ್ರದೇಶದ ಪಂಪಿಂಗ್ ಸ್ಟೇಷನ್ ನಂ.8 ಅನ್ನು ಗುರಿಯಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಾಲ್ಕನೇ ಕಾರ್ಯಾಚರಣೆಯಲ್ಲಿ ನಜ್ರಾನ್‌ನ ರಾಷ್ಟ್ರೀಯ ಗಾರ್ಡ್ ಸೇನಾ ಶಿಬಿರವನ್ನು ಗುರಿಯಾಗಿಸಲಾಗಿದೆ. ಐದನೇ ದಾಳಿಯಲ್ಲಿ ಅಲ್-ಜೌಫ್ ಪ್ರಾಂತ್ಯದ ಪೂರ್ವ ಭಾಗದಲ್ಲಿರುವ ಸೌದಿ ಸೇನಾ ಪಡೆಗಳ ನೆಲೆಗಳ ಮೇಲೆ ಮೂರು ಹಂತಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಹೌತಿ ವಕ್ತಾರರು ಹೇಳಿಕೊಂಡಿದ್ದಾರೆ.
ಮತ್ತೆ ತೀವ್ರಗೊಂಡ ಸೌದಿ-ಹೌತಿ ಸಂಘರ್ಷ
ಯೆಮನ್‌ನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಅಂತರ್ಯುದ್ಧದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮತ್ತು ಹೌತಿ ಬಂಡುಕೋರರ ನಡುವೆ ಮತ್ತೆ ಸಂಘರ್ಷ ತೀವ್ರಗೊಂಡಿದೆ. 2022ರಲ್ಲಿ ಜಾರಿಯಾಗಿದ್ದ ಕದನ ವಿರಾಮ ಒಪ್ಪಂದ ಮುರಿದುಬಿದ್ದ ಬಳಿಕ ಎರಡೂ ಕಡೆಯಿಂದ ದಾಳಿಗಳು ಮುಂದುವರಿದಿವೆ.
ಈ ಹಿಂದೆ ಹೌತಿ ಬಂಡುಕೋರರು ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು, ತೈಲ ಮೂಲಸೌಕರ್ಯಗಳು ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಇದೀಗ ಅರಾಮ್ಕೊ ಕಟ್ಟಡದ ಮೇಲಿನ ದಾಳಿ ಯತ್ನದಿಂದ ಪ್ರದೇಶದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ.
ಆದರೆ ಹೌತಿಗಳು ಹೇಳಿಕೊಂಡಿರುವ ಆರು ದಾಳಿಗಳ ವಿವರಗಳನ್ನು ಸೌದಿ ಅರೇಬಿಯಾ ದೃಢಪಡಿಸಿಲ್ಲ. ಸಚಿವಾಲಯವು ರಿಯಾದ್‌ನ ಅರಾಮ್ಕೊ ಆಡಳಿತ ಕಟ್ಟಡದ ಮೇಲಿನ ದಾಳಿ ಯತ್ನ ಮತ್ತು ಅದರಿಂದ ಉಂಟಾದ ಹಾನಿಯ ಬಗ್ಗೆ ಮಾತ್ರ ಅಧಿಕೃತ ಮಾಹಿತಿ ನೀಡಿದೆ.