NVIDIA ಸಿಇಒ ಜೆನ್ಸನ್ ಹುವಾಂಗ್ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. 
ವಿದೇಶ

ಚೀನಾ 'Spy' ಜೊತೆ ಪ್ರೀತಿ: Nvidia ಸಿಇಒ ಜೆನ್ಸನ್ ಹುವಾಂಗ್‌ಗೆ ಸಂಕಷ್ಟ; FBI ತನಿಖೆ ನಡೆಯುತ್ತಿದೆ ಎಂದ ಟ್ರಂಪ್, ಷೇರು ಮೌಲ್ಯದಲ್ಲಿ ಭಾರೀ ಕುಸಿತ..!

ಕೃತಕ ಬುದ್ಧಿಮತ್ತೆ (ಎಐ) ಅಭಿವೃದ್ಧಿಗೆ ಅಗತ್ಯವಿರುವ ಅತ್ಯಾಧುನಿಕ ಚಿಪ್‌ಗಳನ್ನು ತಯಾರಿಸುವ ಎನ್‌ವಿಡಿಯಾ ಕಂಪನಿಯ ತಂತ್ರಜ್ಞಾನವನ್ನು ಚೀನಾ ಪಡೆಯಲು ಸಾಧ್ಯವಾಗಿದೆಯೇ ಎಂಬ ಆತಂಕವೂ ಹೆಚ್ಚಾಗಿದೆ.

ವಾಷಿಂಗ್ಟನ್: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಎನ್‌ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ಅವರ ವೈಯಕ್ತಿಕ ಜೀವನ ಮತ್ತು ಚೀನಾದೊಂದಿಗಿನ ಸಂಬಂಧ ಇದೀಗ ಅಮೆರಿಕದಲ್ಲಿ ರಾಜಕೀಯ ಹಾಗೂ ತಂತ್ರಜ್ಞಾನ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಚೀನಾ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾದ ಮಹಿಳೆಯೊಂದಿಗೆ ಹುವಾಂಗ್ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಆರೋಪದ ಕುರಿತು ಎಫ್‌ಬಿಐ ತನಿಖೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ಹುವಾಂಗ್ ಆತಂಕಪಡುವ ಅಗತ್ಯವಿಲ್ಲ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಬೇರೆ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಎಫ್‌ಬಿಐ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಆದರೆ, ಹುವಾಂಗ್ ಯಾವುದೇ ತೊಂದರೆಗೆ ಸಿಲುಕುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಹುವಾಂಗ್ ಅವರ ವಿವಾಹೇತರ ಸಂಬಂಧದ ಸುದ್ದಿ ರಾಜಕೀಯ ವಲಯ ಮತ್ತು ಅಮೆರಿಕದ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

ಕೃತಕ ಬುದ್ಧಿಮತ್ತೆ (ಎಐ) ಅಭಿವೃದ್ಧಿಗೆ ಅಗತ್ಯವಿರುವ ಅತ್ಯಾಧುನಿಕ ಚಿಪ್‌ಗಳನ್ನು ತಯಾರಿಸುವ ಎನ್‌ವಿಡಿಯಾ ಕಂಪನಿಯ ತಂತ್ರಜ್ಞಾನವನ್ನು ಚೀನಾ ಪಡೆಯಲು ಸಾಧ್ಯವಾಗಿದೆಯೇ ಎಂಬ ಆತಂಕವೂ ಹೆಚ್ಚಾಗಿದೆ.

ಈ ಪ್ರಕರಣದಲ್ಲಿ ಟ್ರಂಪ್ ನೇರವಾಗಿ ಮಧ್ಯಪ್ರವೇಶಿಸಿರುವುದು ಗಮನ ಸೆಳೆದಿದೆ. ಹುವಾಂಗ್ ಅವರೊಂದಿಗಿನ ಆತ್ಮೀಯ ಸಂಬಂಧ ಮತ್ತು ಈ ವಿಚಾರದ ಹಿಂದಿರುವ ಭೌಗೋಳಿಕ ರಾಜಕೀಯ ಮಹತ್ವ ಇದಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಇಂದು ನಾನು ಅವರೊಂದಿಗೆ ಮಾತನಾಡಿದ್ದೇನೆ. ಅವರು ಹೇಗಿದ್ದಾರೆ, ಆರೋಗ್ಯವಾಗಿದ್ದಾರೆಯೇ ಎಂದು ವಿಚಾರಿಸಿದೆ. ಗೂಢಚಾರಿಣಿ ಮಹಿಳೆ ಬಗ್ಗೆ ತಮಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ.

ತಂತ್ರಜ್ಞಾನ ಜಗತ್ತಿನ ಪ್ರಮುಖ ವ್ಯಕ್ತಿ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಜೆನ್ಸನ್ ಹುವಾಂಗ್, ತಮ್ಮ ಪತ್ನಿ ಮತ್ತು ಕಂಪನಿಗೆ ಬಹಿರಂಗ ಪತ್ರದ ಮೂಲಕ ಕ್ಷಮೆಯಾಚಿಸಿದ್ದಾರೆ.

ಎನ್‌ವಿಡಿಯಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಪತ್ರದಲ್ಲಿ ತಾವು ವಿವಾಹೇತರ ಸಂಬಂಧ ಹೊಂದಿದ್ದುದನ್ನು ಒಪ್ಪಿಕೊಂಡಿದ್ದಾರೆ. ಈ ಮಹಿಳೆ ಚೀನಾ ಸರ್ಕಾರದ ಪರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದರು ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ನಿರ್ಧರಿಸಿರುವುದಾಗಿ 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ನಾನು ಈ ತನಿಖೆಯನ್ನು ಬೆಂಬಲಿಸುತ್ತೇನೆ ಮತ್ತು ಸಂಪೂರ್ಣ ಸಹಕಾರ ನೀಡುತ್ತೇನೆ. ನಾನು ನಮ್ಮ ದೇಶ ಮತ್ತು ಕಂಪನಿಯನ್ನು ಪ್ರೀತಿಸುತ್ತೇನೆ. ಎನ್‌ವಿಡಿಯಾವನ್ನು ರಕ್ಷಿಸಲು ಹಾಗೂ ಅಮೆರಿಕದ ರಾಷ್ಟ್ರೀಯ ಭದ್ರತೆಯನ್ನು ಬೆಂಬಲಿಸಲು ಬದ್ಧನಾಗಿದ್ದೇನೆ ಎಂದು ಹುವಾಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ವಿದೇಶಿ ಗುಪ್ತಚರ ಸಂಸ್ಥೆಯೊಂದು ಹುವಾಂಗ್ ಅವರನ್ನು ಗುರಿಯಾಗಿಸಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಎನ್‌ವಿಡಿಯಾ ಭಾನುವಾರ ಸ್ವತಂತ್ರ ತನಿಖೆ ಆರಂಭಿಸಿರುವುದಾಗಿ ಘೋಷಿಸಿದೆ.

ಈ ಪ್ರಕರಣ ಇದೀಗ ಅಮೆರಿಕದ ಸಂಸತ್ತಿನ ಗಮನವನ್ನೂ ಸೆಳೆದಿದೆ. ಹಿರಿಯ ಡೆಮಾಕ್ರಟಿಕ್ ನಾಯಕರು ಹಾಗೂ ಸೆನೆಟರ್ ಮಾರ್ಕ್ ವಾರ್ನರ್ ಮತ್ತು ಪ್ರತಿನಿಧಿ ಸಭೆಯ ಸದಸ್ಯ ಹಕೀಮ್ ಜೆಫ್ರೀಸ್ ಸೋಮವಾರ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಇರಾನ್ ಕುರಿತ ಚರ್ಚೆಗಾಗಿ ಸಿಐಎ ನಿರ್ದೇಶಕ ಮತ್ತು ರಾಷ್ಟ್ರೀಯ ಗುಪ್ತಚರ ನಿರ್ದೇಶಕರೊಂದಿಗೆ ನಡೆದ ರಹಸ್ಯ ಸಭೆಯಲ್ಲಿಯೂ ಎನ್‌ವಿಡಿಯಾ ವಿಚಾರ ಪ್ರಸ್ತಾಪವಾಗಿದೆ ಎಂದು ಜೆಫ್ರೀಸ್ ತಿಳಿಸಿದ್ದಾರೆ.

ಎನ್‌ವಿಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಸಂಪೂರ್ಣ ಮಾಹಿತಿ ನೀಡಬೇಕು. ಏನಾಗಿದೆ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತೆಯ ಮೇಲೆ ಇದರ ಪರಿಣಾಮಗಳೇನು ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಆರೋಪ ತಳ್ಳಿಹಾಕಿದ ಬೀಜಿಂಗ್

ಈ ನಡುವೆ ಎನ್‌ವಿಡಿಯಾ ಮುಖ್ಯಸ್ಥರನ್ನು ಬಲೆಗೆ ಬೀಳಿಸಲು ಚೀನಾ ಸಂಚು ರೂಪಿಸಿದೆ ಎಂಬ ಆರೋಪವನ್ನು ಬೀಜಿಂಗ್ ತಳ್ಳಿಹಾಕಿದೆ.

ಸೋಮವಾರ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್, ಚೀನಾದ ಗೂಢಚಾರಿಕೆ ಕುರಿತ ಆರೋಪಗಳಿಗೆ ಯಾವುದೇ ಆಧಾರವಿಲ್ಲ. ಇದು ಚೀನಾದ ವಿರುದ್ಧ ಮಾಡಲಾಗುತ್ತಿರುವ ಅಪಪ್ರಚಾರವಷ್ಟೇ ಎಂದು ಹೇಳಿದ್ದಾರೆ.

ಚೀನಾ ಮೂಲದ ಆಲಿಸ್ ಹುವಾಂಗ್ ಎಂಬ ಮಹಿಳೆಯೊಂದಿಗೆ ಜೆನ್ಸನ್ ಹುವಾಂಗ್ ನಿಕಟ ಸಂಬಂಧ ಹೊಂದಿದ್ದರು ಎಂಬ 'ನ್ಯೂಯಾರ್ಕ್ ಟೈಮ್ಸ್' ವರದಿಯನ್ನೂ ಬೀಜಿಂಗ್ ಈ ಹಿಂದೆ ತಳ್ಳಿಹಾಕಿತ್ತು.

ಆಲಿಸ್ ಹುವಾಂಗ್ ಸಿಂಗಾಪುರ ಮೂಲದ ಮೆಗಾಸ್ಪೀಡ್ ಇಂಟರ್‌ನ್ಯಾಷನಲ್ ಎಂಬ ಡೇಟಾ ಸೆಂಟರ್ ಕಂಪನಿಯ ಮಾಜಿ ಕಾರ್ಯನಿರ್ವಾಹಕಿಯಾಗಿದ್ದರು. ಈ ಕಂಪನಿಯು ಕಳೆದ ವರ್ಷ ಎನ್‌ವಿಡಿಯಾದ ಅತ್ಯಾಧುನಿಕ ಕಂಪ್ಯೂಟರ್ ಚಿಪ್‌ಗಳನ್ನು ಅಕ್ರಮವಾಗಿ ಚೀನಾಕ್ಕೆ ಸಾಗಿಸುತ್ತಿದೆ ಎಂಬ ಆರೋಪ ಎದುರಿಸಿತ್ತು.

ಎಐ ನಿಯಂತ್ರಣ ವಿಚಾರದಲ್ಲೂ ಟ್ರಂಪ್ ಮೇಲೆ ಪ್ರಭಾವ ಬೀರಿದ್ದ ಹುವಾಂಗ್

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಎನ್‌ವಿಡಿಯಾ ಪ್ರಮುಖ ಪಾತ್ರ ವಹಿಸುತ್ತಿದೆ. ವಿಶ್ವದ ಹಲವು ಪ್ರಮುಖ ಎಐ ಅಭಿವೃದ್ಧಿ ಸಂಸ್ಥೆಗಳು ತಮ್ಮ ತಂತ್ರಜ್ಞಾನ ವ್ಯವಸ್ಥೆಗಳಿಗೆ ಎನ್‌ವಿಡಿಯಾ ತಯಾರಿಸುವ ವಿಶೇಷ ಚಿಪ್‌ಗಳನ್ನು ಅವಲಂಬಿಸಿವೆ.

ಎಐ ನಿಯಂತ್ರಣ ವಿಚಾರದಲ್ಲಿ ಟ್ರಂಪ್ ಸರ್ಕಾರ ಹೆಚ್ಚು ಕಟ್ಟುನಿಟ್ಟಿನ ನಿಲುವು ತಳೆಯದಂತೆ ಮಾಡುವಲ್ಲಿಯೂ ಹುವಾಂಗ್ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ತಂತ್ರಜ್ಞಾನದಿಂದ ಎದುರಾಗಬಹುದಾದ ಭದ್ರತಾ ಸಮಸ್ಯೆಗಳನ್ನು ಈಗಿರುವ ಕಾನೂನುಗಳ ಮೂಲಕವೇ ನಿಭಾಯಿಸಬಹುದು. ಹೊಸ ನಿಯಂತ್ರಣಗಳನ್ನು ರೂಪಿಸುವ ಬದಲು ಕಂಪನಿಗಳು ತಾವು ಅಭಿವೃದ್ಧಿಪಡಿಸುವ ತಂತ್ರಜ್ಞಾನಗಳ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂಬುದು ಅವರ ವಾದವಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಎನ್‌ವಿಡಿಯಾ ಚಿಪ್‌ಗಳನ್ನು ಚೀನಾಕ್ಕೆ ಮಾರಾಟ ಮಾಡುವ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಹುವಾಂಗ್ ಅಮೆರಿಕ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಈ ವರ್ಷ ಎಚ್200 ಚಿಪ್‌ಗಳನ್ನು ಚೀನಾಕ್ಕೆ ಮಾರಾಟ ಮಾಡಲು ಟ್ರಂಪ್ ಅನುಮೋದನೆ ನೀಡಿದ್ದರು. ಆದರೆ, ಈ ಚಿಪ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಚೀನಾ ಸರ್ಕಾರ ತನ್ನ ಕಂಪನಿಗಳಿಗೆ ಅವಕಾಶ ನೀಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಚೀನಾ ಸರ್ಕಾರದ ನಿರ್ಬಂಧಗಳಿಂದಾಗಿ ಆ ದೇಶಕ್ಕೆ ಎನ್‌ವಿಡಿಯಾ ಚಿಪ್‌ಗಳ ಮಾರಾಟ ಸೀಮಿತವಾಗಿದೆ ಎಂದು ಕಂಪನಿ ಆಗಸ್ಟ್‌ನಲ್ಲಿ ನಿಯಂತ್ರಕ ಸಂಸ್ಥೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿತ್ತು.

ಎಚ್200 ಚಿಪ್‌ಗಳು ಎನ್‌ವಿಡಿಯಾದ ಅತ್ಯಾಧುನಿಕ ಮಾದರಿಗಳಲ್ಲದಿದ್ದರೂ, ಸುಧಾರಿತ ತಂತ್ರಜ್ಞಾನ ಹೊಂದಿವೆ. ಇದಕ್ಕೂ ಮೊದಲು ಚೀನಾದ ಮೇಲಿನ ಅಮೆರಿಕದ ರಫ್ತು ನಿರ್ಬಂಧಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿದ್ದ ಕಡಿಮೆ ಸಾಮರ್ಥ್ಯದ ಎಚ್20 ಚಿಪ್‌ಗಳ ಮಾರಾಟಕ್ಕೂ ಅನುಮತಿ ನೀಡುವಂತೆ ಹುವಾಂಗ್ ಟ್ರಂಪ್ ಅವರನ್ನು ಒತ್ತಾಯಿಸಿದ್ದರು.

ಜೂನ್‌ನಲ್ಲಿ ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹುವಾಂಗ್, ರಾಷ್ಟ್ರೀಯ ಭದ್ರತೆ ಯಾವಾಗಲೂ ಎಲ್ಲ ತಂತ್ರಜ್ಞಾನಗಳಲ್ಲೂ ಪ್ರಮುಖ ಆದ್ಯತೆಯಾಗಿರಬೇಕು. ಆದರೆ, ರಫ್ತು ನಿಯಂತ್ರಣ ನೀತಿಗಳನ್ನು ರೂಪಿಸುವ ಮೊದಲು ಯಾವ ಅಪಾಯದ ಬಗ್ಗೆ ಕಳವಳವಿದೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬೇಕು ಎಂದು ಹೇಳಿದ್ದರು.

ಈ ಬೆಳವಣಿಗೆಗಳ ನಡುವೆಯೇ ಸೋಮವಾರದ ವಹಿವಾಟಿನಲ್ಲಿ ಎನ್‌ವಿಡಿಯಾ ಷೇರುಗಳು ಶೇ.4ಕ್ಕಿಂತ ಹೆಚ್ಚು ಕುಸಿದಿವೆ. ಕಳೆದ ಬುಧವಾರದಿಂದ ಕಂಪನಿಯ ಷೇರುಗಳ ಮೌಲ್ಯದಲ್ಲಿ ಸುಮಾರು ಶೇ.11ರಷ್ಟು ಇಳಿಕೆಯಾಗಿದೆ.

ಸಿಂಗಾಪುರದ ಡೇಟಾ ಸೆಂಟರ್ ಕಂಪನಿಯತ್ತ ತನಿಖಾಧಿಕಾರಿಗಳ ಗಮನ

'ನ್ಯೂಯಾರ್ಕ್ ಟೈಮ್ಸ್' ವರದಿಯ ಪ್ರಕಾರ, ಆಲಿಸ್ ಹುವಾಂಗ್ ಸಿಂಗಾಪುರ ಮೂಲದ ಮೆಗಾಸ್ಪೀಡ್ ಇಂಟರ್‌ನ್ಯಾಷನಲ್ ಎಂಬ ಡೇಟಾ ಸೆಂಟರ್ ಕಂಪನಿಯ ಮಾಜಿ ಕಾರ್ಯನಿರ್ವಾಹಕಿಯಾಗಿದ್ದರು. ಆ ಕಂಪನಿಯ ವೆಬ್‌ಸೈಟ್‌ನಲ್ಲಿ ಎನ್‌ವಿಡಿಯಾದೊಂದಿಗಿನ ಪಾಲುದಾರಿಕೆಯನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

ಸೋಮವಾರ ಸಿಂಗಾಪುರದಲ್ಲಿ ರಜೆ ಇದ್ದ ಕಾರಣ ಹಲವು ಕಚೇರಿಗಳು ಮುಚ್ಚಿದ್ದವು. ಈ ಹಿನ್ನೆಲೆಯಲ್ಲಿ ಮೆಗಾಸ್ಪೀಡ್ ಮತ್ತು ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ.

ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಜೊತೆಗೆ ಎನ್‌ವಿಡಿಯಾ ವಿಶ್ವದ ಅತ್ಯಂತ ಮೌಲ್ಯಯುತ ಷೇರುಪೇಟೆ ಕಂಪನಿಗಳಲ್ಲಿ ಒಂದಾಗಿದೆ. ಚೀನಾಕ್ಕೆ ಕಂಪನಿಯ ಚಿಪ್‌ಗಳ ಮಾರಾಟದ ಮೇಲೆ ಅಮೆರಿಕದ ನಿಯಂತ್ರಕ ಸಂಸ್ಥೆಗಳು ಹಲವು ಬಾರಿ ನಿರ್ಬಂಧಗಳನ್ನು ವಿಧಿಸಿವೆ.

ಹುವಾಂಗ್‌ಗೆ ಯಾವುದೇ ಗೂಢಚಾರಿಕೆ ಚಟುವಟಿಕೆಗಳ ಬಗ್ಗೆ ತಿಳಿದಿತ್ತೇ? ಕಂಪನಿಯ ಗೌಪ್ಯ ಅಥವಾ ಕಾರ್ಯತಂತ್ರದ ಮಹತ್ವ ಹೊಂದಿರುವ ಮಾಹಿತಿ ಸೋರಿಕೆಯಾಗಿದೆಯೇ? ಎಂಬುದು ಪ್ರಮುಖ ಪ್ರಶ್ನೆಗಳಾಗಿವೆ.

ಇವುಗಳಿಗೆ ಊಹಾಪೋಹಗಳ ಬದಲಿಗೆ ಸಾಕ್ಷ್ಯಗಳ ಆಧಾರದ ಮೇಲೆ ಉತ್ತರ ಕಂಡುಕೊಳ್ಳಬೇಕಿದೆ" ಎಂದು ವಾಷಿಂಗ್ಟನ್ ಮೂಲದ ಏಷ್ಯಾ ಗ್ರೂಪ್‌ನ ಡಿಜಿಟಲ್ ವಿಭಾಗದ ಮುಖ್ಯಸ್ಥ ಜಾರ್ಜ್ ಚೆನ್ ಹೇಳಿದ್ದಾರೆ.

ಚೀನಾದ ಮಾಧ್ಯಮಗಳು ಮುಖ್ಯವಾಗಿ ಹುವಾಂಗ್ ಅವರ ವಿವಾಹೇತರ ಸಂಬಂಧದ ವಿಚಾರಕ್ಕೆ ಹೆಚ್ಚಿನ ಗಮನ ನೀಡಿವೆ. ಅಮೆರಿಕ-ಚೀನಾ ಸಂಬಂಧ ಸುಧಾರಿಸುವ ಸಂದರ್ಭದಲ್ಲಿ ಇಂತಹ ವರದಿಗಳು ಉಭಯ ದೇಶಗಳ ನಡುವಿನ ಸಂಬಂಧ ಹದಗೆಡಿಸುವ ಉದ್ದೇಶ ಹೊಂದಿವೆ ಎಂದು ಚೀನಾದ ಸರ್ಕಾರಿ ಮಾಧ್ಯಮ 'ಗ್ಲೋಬಲ್ ಟೈಮ್ಸ್' ಅಭಿಪ್ರಾಯಪಟ್ಟಿದೆ.

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮುಂದಿನ ವಾರ ಚೀನಾದ ಶೆನ್‌ಜೆನ್‌ನಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಟ್ರಂಪ್ ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಹುವಾಂಗ್ ಪ್ರಕರಣವನ್ನು ಪ್ರಸ್ತಾಪಿಸುತ್ತೀರಾ ಎಂಬ ಪ್ರಶ್ನೆಗೆ ಟ್ರಂಪ್ ಸ್ಪಷ್ಟ ಉತ್ತರ ನೀಡಿಲ್ಲ.

ಇಲ್ಲ, ಹಾಗೆ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಬಹುಶಃ ಅವರು ಈ ಬಗ್ಗೆ ನನ್ನನ್ನು ಕೇಳಬಹುದು. ನನಗೆ ಜೆನ್ಸನ್ ಚೆನ್ನಾಗಿ ಗೊತ್ತು. ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆ: 307ಕ್ಕೆ ಇಳಿದ AQI; ಆದರೂ 'ಅತ್ಯಂತ ಕಳಪೆ' ಸ್ಥಿತಿ ಮುಂದುವರಿಕೆ, ಧೂಳು ನಿಯಂತ್ರಣಕ್ಕೆ ರಸ್ತೆಗಳಲ್ಲಿ ನೀರು ಸಿಂಪಡಣೆ..!

ದೀಪಾವಳಿಯನ್ನು 'ಖುಷಿಯೋಂ ಕಾ ಈದ್' ಎಂದ ಖರ್ಗೆ: 'ಈದ್' ಎಂದರೆ ಹಬ್ಬವಷ್ಟೇ, ಧರ್ಮವಲ್ಲ: ತಂದೆ ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

Sting operation ಸುಳಿಯಲ್ಲಿ 'ಕೈ' ಪಾಳಯ: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದು; ದಿಢೀರ್ ಸಿದ್ದು ಭೇಟಿಯಾದ ಡಿಕೆಶಿ, ಒಂದೂವರೆ ಗಂಟೆ ರಹಸ್ಯ ಮಾತುಕತೆ..!

BDA ನಿವೇಶನ ಮಾಲೀಕರಿಗೆ ಸಿಹಿಸುದ್ದಿ: ಮಾರ್ಗಸೂಚಿ ದರದಲ್ಲಿ ಶೇ.50 ರಿಯಾಯಿತಿ ಘೋಷಣೆ; 1 ಲಕ್ಷ ಮಂದಿಗೆ ಲಾಭ..!

UP ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರು ಕಣ್ಮರೆ; ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದೇನೆ: CM ಯೋಗಿ ಆದಿತ್ಯನಾಥ್