ಪ್ರಧಾನಿ ಮೋದಿ 
ವಿದೇಶ

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ನಮ್ಮ ಪಾಲುದಾರಿಕೆ ಸಂಸ್ಕೃತಿ ಮತ್ತು ಪರಂಪರೆಯನ್ನು ಮೀರಿದ್ದು, ಡಿಜಿಟಲ್, ರಕ್ಷಣಾ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಹೊಸ ಆಯಾಮಗಳನ್ನು ತಲುಪಿದೆ.

ಮನಿಲಾ (ಫಿಲಿಪೈನ್ಸ್): ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಒಟ್ಟಾಗಿ ಜಾಗತಿಕ ಜನಸಂಖ್ಯೆಯ ಸುಮಾರು ನಾಲ್ಕನೇ ಒಂದು ಭಾಗವನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಎರಡೂ ಕಡೆಯವರ ಸಾಮಾನ್ಯ ಭವಿಷ್ಯವು ಸ್ಪರ್ಧೆಯ ಬದಲಿಗೆ ಸಹಕಾರದ ಮೂಲಕ ರೂಪುಗೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ ಭಾರತ-ಆಸಿಯಾನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, 11 ರಾಷ್ಟ್ರಗಳ ಒಕ್ಕೂಟವಾದ ಆಸಿಯಾನ್‌ನ ಏಕತೆ ಮತ್ತು ಪ್ರಾದೇಶಿಕ ಪಾಲುದಾರಿಕೆಯಲ್ಲಿ ಅದರ ಕೇಂದ್ರ ಸ್ಥಾನಮಾನಕ್ಕೆ ಭಾರತದ ಬದ್ಧತೆ ಈಗಲೂ ಇದೆ, ಮುಂದೆಯೂ ಅಚಲವಾಗಿ ಮುಂದುವರಿಯಲಿದೆ ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಜಗತ್ತು ಸರಣಿ ಬಿಕ್ಕಟ್ಟುಗಳನ್ನು ಎದುರಿಸಿದೆ. ಇಂದು ಜಗತ್ತಿಗೆ ಎಲ್ಲಕ್ಕಿಂತ ಹೆಚ್ಚಾಗಿ ಶಾಂತಿ, ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟ ನಿರೀಕ್ಷೆ ಬೇಕಾಗಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಈ ವರ್ಷದ ಶೃಂಗಸಭೆಯ "ಒಟ್ಟಾಗಿ ನಮ್ಮ ಭವಿಷ್ಯದ ಹಾದಿ ರೂಪಿಸೋಣ" ಎಂಬ ಧ್ಯೇಯವಾಕ್ಯಕ್ಕೆ ವಿಶೇಷ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು.

ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್) ಈ ಪ್ರದೇಶದ ಅತ್ಯಂತ ಪ್ರಭಾವಶಾಲಿ ಸಂಘಟನೆಗಳಲ್ಲಿ ಒಂದಾಗಿದೆ. ಭಾರತ ಸೇರಿದಂತೆ ಅಮೆರಿಕ, ಚೀನಾ, ಜಪಾನ್ ಮತ್ತು ಆಸ್ಟ್ರೇಲಿಯಾ ಈ ಒಕ್ಕೂಟದ ಸಂವಾದ ಪಾಲುದಾರ ರಾಷ್ಟ್ರಗಳಾಗಿವೆ.

ಭಾರತ ಮತ್ತು ಆಸಿಯಾನ್ ಒಟ್ಟಾಗಿ ಜಗತ್ತಿನ ಜನಸಂಖ್ಯೆಯ ಸುಮಾರು ನಾಲ್ಕನೇ ಒಂದು ಭಾಗವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ ನಮ್ಮ ಭವಿಷ್ಯವನ್ನು ಸ್ಪರ್ಧೆಯಲ್ಲ, ಸಹಕಾರದ ಮೂಲಕ ನಿರ್ಧರಿಸುವುದು ಅತ್ಯಗತ್ಯ. ಭಾರತ ಮತ್ತು ಆಸಿಯಾನ್ ಎರಡೂ ಬಲ ಹಾಗೂ ಸಂಕಲ್ಪವನ್ನು ಹೊಂದಿವೆ. ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಈ ಪ್ರದೇಶವನ್ನು ಶಾಂತಿ ಮತ್ತು ಸ್ಥಿರತೆಯ ಸಂಕೇತವನ್ನಾಗಿ ರೂಪಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದ ಅಭಿವೃದ್ಧಿ ಮತ್ತು ಆಸಿಯಾನ್‌ನ ಸಮೃದ್ಧಿ ಪರಸ್ಪರ ಆಳವಾಗಿ ಬೆಸೆದುಕೊಂಡಿವೆ. ಮುಂಬರುವ ವರ್ಷಗಳಲ್ಲಿ ಆಸಿಯಾನ್ ಸಮುದಾಯದ ದೃಷ್ಟಿಕೋನ 2045 ಮತ್ತು ವಿಕಸಿತ ಭಾರತ 2047 ನಮ್ಮ ಹಂಚಿಕೆಯ ಆಶಯಗಳನ್ನು ಸಾಕಾರಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಹೇಳಿದರು.

ಕಳೆದ 12 ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಪಾಲುದಾರಿಕೆಗೆ ಹೊಸ ವೇಗ ನೀಡಲಾಗಿದೆ. ಇದೀಗ ನಮ್ಮ ಪ್ರದೇಶದ ಭವಿಷ್ಯವನ್ನು ಒಟ್ಟಾಗಿ ರೂಪಿಸಬೇಕಿದೆ ಎಂದು ಮೋದಿ ತಿಳಿಸಿದರು. ಆಸಿಯಾನ್‌ನ ಏಕತೆ ಮತ್ತು ಪಾಲುದಾರಿಕೆಯಲ್ಲಿ ಅದರ ಕೇಂದ್ರ ಸ್ಥಾನಮಾನಕ್ಕೆ ಭಾರತದ ಬದ್ಧತೆ ಎಂದಿಗೂ ಬದಲಾಗುವುದಿಲ್ಲ ಎಂದು ಪುನರುಚ್ಚರಿಸಿದರು.

ಇಂದಿನ ಸಭೆಯು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ. ಜೊತೆಗೆ ಸುರಕ್ಷಿತ, ಎಲ್ಲರನ್ನೂ ಒಳಗೊಂಡ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶ ನಿರ್ಮಾಣಕ್ಕೆ ಕೊಡುಗೆ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಭಾರತದ 'ಆಕ್ಟ್ ಈಸ್ಟ್' ನೀತಿಯು ಭಾರತ-ಆಸಿಯಾನ್ ಸಂಬಂಧಗಳಿಗೆ ಹೊಸ ವೇಗ ಮತ್ತು ಆಳವನ್ನು ನೀಡಿದೆ. ಹಂಚಿಕೊಂಡ ಸಂಸ್ಕೃತಿ ಮತ್ತು ಪರಂಪರೆಯನ್ನು ಮೀರಿದ ಪಾಲುದಾರಿಕೆಯು ಈಗ ಡಿಜಿಟಲ್ ತಂತ್ರಜ್ಞಾನ, ರಕ್ಷಣೆ ಮತ್ತು ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ ಎಂದರು.

ಆಸಿಯಾನ್ ರಾಷ್ಟ್ರಗಳೊಂದಿಗಿನ ಸಂಬಂಧವು ಭಾರತದ ಆಕ್ಟ್ ಈಸ್ಟ್ ನೀತಿಯ ಪ್ರಮುಖ ಆಧಾರವಾಗಿದೆ. 2014ರಿಂದ ಉಭಯ ದೇಶಗಳ ನಡುವಿನ ಸಹಕಾರದ ಫಲಿತಾಂಶಗಳನ್ನು ವಿವರಿಸಿದ ಮೋದಿ, ಜನರ ನಡುವಿನ ಬಾಂಧವ್ಯ ಬಲಪಡಿಸಲು 100ಕ್ಕೂ ಹೆಚ್ಚು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಸುಮಾರು 250 ತ್ವರಿತ ಪರಿಣಾಮದ ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಭಾರತ ಮತ್ತು ಆಸಿಯಾನ್‌ನ ಒಂಬತ್ತು ರಾಷ್ಟ್ರಗಳ ನಡುವೆ ನೇರ ವಿಮಾನಯಾನ ಸೇವೆಗಳು ಹಾಗೂ ಹೆಚ್ಚುತ್ತಿರುವ ಪ್ರವಾಸೋದ್ಯಮವು ಪರಸ್ಪರರ ನಿಕಟ ಸಂಬಂಧಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.

ಭಾರತ ಮತ್ತು ಆಸಿಯಾನ್ ನಡುವಿನ ಸಂವಾದ ಸಂಬಂಧಗಳು 1992ರಲ್ಲಿ ವಲಯವಾರು ಪಾಲುದಾರಿಕೆಯೊಂದಿಗೆ ಆರಂಭಗೊಂಡವು. 1995ರ ಡಿಸೆಂಬರ್‌ನಲ್ಲಿ ಪೂರ್ಣ ಪ್ರಮಾಣದ ಸಂವಾದ ಪಾಲುದಾರಿಕೆಯಾಗಿ ಬೆಳೆದವು. 2002ರಲ್ಲಿ ಶೃಂಗಸಭೆ ಮಟ್ಟದ ಪಾಲುದಾರಿಕೆಯ ಸ್ಥಾನಮಾನ ಪಡೆದುಕೊಂಡವು. 2012ರಲ್ಲಿ ಈ ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಉನ್ನತೀಕರಿಸಲಾಯಿತು.

ಆಸಿಯಾನ್‌ನ 11 ಸದಸ್ಯ ರಾಷ್ಟ್ರಗಳೆಂದರೆ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್, ಬ್ರೂನೈ, ವಿಯೆಟ್ನಾಂ, ಲಾವೋಸ್, ಮ್ಯಾನ್ಮಾರ್, ಕಾಂಬೋಡಿಯಾ ಮತ್ತು ಟಿಮೋರ್-ಲೆಸ್ಟೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಆಸಿಯಾನ್ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಸಿದ್ದು, ವ್ಯಾಪಾರ, ಹೂಡಿಕೆ, ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವತ್ತ ಉಭಯ ಕಡೆಯವರು ಗಮನಹರಿಸಿದ್ದಾರೆ.

ಆಸಿಯಾನ್‌ನ ಪ್ರಸ್ತುತ ಅಧ್ಯಕ್ಷ ರಾಷ್ಟ್ರವಾಗಿರುವ ಫಿಲಿಪ್ಪೀನ್ಸ್, ವಾರ್ಷಿಕ ಶೃಂಗಸಭೆ ಮತ್ತು ಅದಕ್ಕೆ ಸಂಬಂಧಿಸಿದ ಸಭೆಗಳನ್ನು ಮನಿಲಾದಲ್ಲಿ ಆಯೋಜಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

UN-OIC ಕರಡು ನಿರ್ಣಯ: ಉದ್ದೇಶಪೂರ್ವಕವಾಗಿ ಭಾರತವನ್ನು ದೂರವಿಟ್ಟ ಟರ್ಕಿ ವಿರುದ್ಧ ಭಾರತ ತೀವ್ರ ಕಿಡಿ, ನಿರ್ಣಯದ ವಿರುದ್ಧ ಮತದಾನ

ಸದ್ದೇ ಇಲ್ಲದೇ OTTಗೆ ಲಗ್ಗೆ ಇಟ್ಟ ಕನ್ನಡ ಬ್ಲಾಕ್ ಬಸ್ಟರ್ ಚಿತ್ರ 'ಪ್ರೇಮದ ಊರಲಿ'.. ಎಲ್ಲಿ, ಯಾವಾಗ?

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ಗೆ ಭಾರತ ತಂಡ ಆಯ್ಕೆ; ಪ್ಲೇಯಿಂಗ್ ಇಲೆವೆನ್ ಸುಳಿವು ಕೊಟ್ಟ ನಾಯಕ ಶುಭಮನ್ ಗಿಲ್; 7 ಬ್ಯಾಟರ್‌, 4 ವೇಗಿಗಳು!

West Asia Conflict ಎಫೆಕ್ಟ್: ರಫ್ತುದಾರರಿಗೆ ತೆರಿಗೆ ಬಿಸಿ; Diesel-ATF ರಫ್ತಿನ ಮೇಲಿನ Windfall ತೆರಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಪೆಟ್ರೋಲ್‌ಗೆ ಶೂನ್ಯ ಸುಂಕ ಮುಂದುವರಿಕೆ..!

IPL: ರಾಜಸ್ಥಾನ್ ರಾಯಲ್ಸ್ ಗೆ ಕೈಕೊಟ್ಟ ಯಶಸ್ವಿ ಜೈಸ್ವಾಲ್?, KKR ಸೇರುವ ಸಾಧ್ಯತೆ ಇದೆ ಎಂದ ಇರ್ಫಾನ್ ಪಠಾಣ್!