ವಿದೇಶ

ಹುವಾಂಗ್ ರಾಜೀನಾಮೆ ಬೆನ್ನಲ್ಲೇ NVIDIAದಲ್ಲಿ ಮತ್ತೊಂದು ವಿವಾದ: ಚೀನಾಕ್ಕೆ ₹21,000 ಕೋಟಿ ಮೂಲ್ಯದ AI Chip ಕಳ್ಳಸಾಗಣೆ ಮಾಡಿದ ಮಾಜಿ ಉಪಾಧ್ಯಕ್ಷನ ಪತ್ನಿ!

ಅಮೆರಿಕದ ರಫ್ತು ನಿರ್ಬಂಧಗಳನ್ನು ಉಲ್ಲಂಘಿಸಿ ಚೀನಾಕ್ಕೆ $2.5 ಬಿಲಿಯನ್ ಮೌಲ್ಯದ ಎನ್‌ವಿಡಿಯಾ ಎಐ ಚಿಪ್‌ಗಳನ್ನು ಅಕ್ರಮವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಯ್ ಪುರಿ ಮತ್ತು ಅವರ ಪತ್ನಿ ಸೆನ್ಲಿ ಚೆನ್ ಅವರ ಕಾರ್ಪೊರೇಟ್ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಆ ಕುರಿತ ವರದಿ ಇಲ್ಲಿದೆ:

ವಾಷಿಂಗ್ಟನ್ ಡಿ.ಸಿ. (ಅಮೆರಿಕ): ಯಾಕೋ ಏನೋ ಎನ್‌ವಿಡಿಯಾದ ಗ್ರಹಚಾರ ಕೆಟ್ಟಂತೆ ಕಾಣ್ಣುತಿದ್ದು, ಅದರ ಸುತ್ತಲಿನ ವಿವಾದದ ಹುತ್ತ ದೊಡ್ಡದಾಗುತ್ತಲೇ ಇದೆ! ಹೌದು, ಮೊನ್ನೆ ಮೊನ್ನೆಯಷ್ಟೇ ಎನ್‌ವಿಡಿಯಾ ಕಂಪನಿಯ ಸಹ-ಸಂಸ್ಥಾಪಕ ಮತ್ತು ದೀರ್ಘಕಾಲದ ಸಿಇಒ ಜೆನ್ಸನ್ ಹುವಾಂಗ್ ಅವರು ಚೀನಾದ ಗುಪ್ತಚರ ಏಜೆಂಟ್ ಎನ್ನಲಾದ ಸಿಂಗಾಪುರ ಮೂಲದ ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆ ಮೆಗಾಸ್ಪೀಡ್‌ನ ಮಾಜಿ ಕಾರ್ಯನಿರ್ವಾಹಕಿ ಆಲಿಸ್ ಹುವಾಂಗ್ ಜೊತೆಗಿನ ಅಕ್ರಮ ಸಂಬಂಧದ ಕಾರಣ ಸಿಇಒ ಮತ್ತು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಬೆನ್ನಲ್ಲೇ ಕಂಪನಿಯ ಷೇರು ಮೌಲ್ಯ ದೊಡ್ಡ ಮಟ್ಟದಲ್ಲಿ ಕುಸಿಯಿತು. ಇದರ ನಡುವೆಯೇ, ಚೀನಾಕ್ಕೆ ಅಕ್ರಮವಾಗಿ ಎಐ ಚಿಪ್‌ಗಳನ್ನು ಸಾಗಿಸಿದ (ಚಿಪ್ ಕಳ್ಳಸಾಗಣೆ) ವಿವಾದದಲ್ಲಿ ಎನ್‌ವಿಡಿಯಾ ಸಂಸ್ಥೆಯ ಮಾಜಿ ಉನ್ನತ ಅಧಿಕಾರಿ ಅಜಯ್ ಜಯ್ ಪುರಿ ಅವರ ಪತ್ನಿಯಾದ ಸೆನ್ಲಿ ಚೆನ್ ಹೆಸರು ಕೇಳಿಬಂದಿದೆ. ಆ ಕುರಿತ ವರದಿ ಇಲ್ಲಿದೆ:

ವಿವಾದ ಬೆಳಕಿಗೆ ಬಂದಿದ್ದು ಹೇಗೆ?

ಮಡ್ಡಿ ವಾಟರ್ಸ್ ವರದಿ. ನವೆಂಬರ್ 17, 2026 ರಂದು ಅಮೆರಿಕದ ಶಾರ್ಟ್-ಸೆಲ್ಲಿಂಗ್ ಸಂಶೋಧನಾ ಸಂಸ್ಥೆಯಾದ 'ಮಡ್ಡಿ ವಾಟರ್ಸ್', "NVIDIA: More China" ಎಂಬ ತನಿಖಾ ವರದಿಯನ್ನು ಬಿಡುಗಡೆ ಮಾಡಿದೆ. 2024 ಮತ್ತು 2026ರ ನಡುವೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜಯ್ ಪುರಿ ಅವರೊಂದಿಗೆ ಕಾಣಿಸಿಕೊಂಡಿದ್ದ ಸೆನ್ಲಿ ಚೆನ್ ಅವರು, ಚಿಪ್ ಹಗರಣದ ಆರೋಪ ಎದುರಿಸುತ್ತಿರುವ ಸೂಪರ್ ಮೈಕ್ರೋ ಕಂಪ್ಯೂಟರ್ ಸಂಸ್ಥೆಯ ಮಾಜಿ ಹಿರಿಯ ಅಧಿಕಾರಿಯೇ ಎಂದು ಈ ವರದಿ ಪ್ರಶ್ನಿಸಿದೆ. ಅದರಲ್ಲೂ, ಜಯ್ ಪುರಿ ಅವರು ಎನ್‌ವಿಡಿಯಾದ ಜಾಗತಿಕ ಮಾರಾಟ ಮತ್ತು ಪಾಲುದಾರಿಕೆಯ ಮುಖ್ಯಸ್ಥರಾಗಿದ್ದರು (ಕಂಪನಿಯ ನಂ. 3 ಉನ್ನತ ಅಧಿಕಾರಿ). ಮತ್ತೊಂದೆಡೆ, ಅವರ ಪತ್ನಿ ಸೆನ್ಲಿ ಚೆನ್ ಅವರು ಎನ್‌ವಿಡಿಯಾದ ಅತಿದೊಡ್ಡ ಪಾಲುದಾರ ಸಂಸ್ಥೆಯಾದ ಸೂಪರ್ ಮೈಕ್ರೋದಲ್ಲಿ ಮುಖ್ಯ ಬೆಳವಣಿಗೆ ಅಧಿಕಾರಿಯಾಗಿದ್ದರು. ಎನ್‌ವಿಡಿಯಾದಿಂದ ಚಿಪ್‌ಗಳನ್ನು ಹಂಚಿಕೆ ಮಾಡುವ ಸ್ಥಾನದಲ್ಲಿ ಪತಿ ಇದ್ದರೆ, ಆ ಚಿಪ್‌ಗಳನ್ನು ಪಡೆದು ಗ್ರಾಹಕರಿಗೆ ವಿತರಿಸುವ ಸಂಸ್ಥೆಯ ಉನ್ನತ ಹುದ್ದೆಯಲ್ಲಿ ಪತ್ನಿ ಇದ್ದದ್ದು ಈಗ ಹೂಡಿಕೆದಾರರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

$2.5 ಬಿಲಿಯನ್ ಚಿಪ್ ಕಳ್ಳಸಾಗಣೆ ಹಗರಣದ ಹಿನ್ನೆಲೆ....

ಮುಂದುವರೆದು, ಅಮೆರಿಕದ ರಫ್ತು ನಿರ್ಬಂಧಗಳನ್ನು ಉಲ್ಲಂಘಿಸಿ, ಸುಮಾರು $2.5 ಬಿಲಿಯನ್ (ಸುಮಾರು ₹21,000 ಕೋಟಿಗೂ ಅಧಿಕ) ಮೌಲ್ಯದ ಎನ್‌ವಿಡಿಯಾ ಜಿಪಿಯು ಚಿಪ್‌ಗಳನ್ನೊಳಗೊಂಡ ಸರ್ವರ್‌ಗಳನ್ನು ಆಗ್ನೇಯ ಏಷ್ಯಾದ ಮಧ್ಯವರ್ತಿಗಳ ಮೂಲಕ (ವಿಶೇಷವಾಗಿ ಬ್ಯಾಂಕಾಕ್ ಮೂಲದ OBON Corp ಮೂಲಕ) ಚೀನಾಕ್ಕೆ ಅಕ್ರಮವಾಗಿ ಸಾಗಿಸಲಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತು ಸೀರಿಯಲ್ ನಂಬರ್ ಸ್ಟಿಕ್ಕರ್‌ಗಳನ್ನು ಬದಲಾಯಿಸಿ ಈ ಚಿಪ್‌ಗಳನ್ನು ಸಾಗಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ. ಇದರೊಂದಿಗೆ, ಮಾರ್ಚ್ 2026ರಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಮೈಕ್ರೋ ಸಹ-ಸಂಸ್ಥಾಪಕ ಯಿಹ್-ಶ್ಯಾನ್ 'ವಾಲಿ' ಲಿಯಾವ್, ಮಾರಾಟ ವ್ಯವಸ್ಥಾಪಕ ಸ್ಟೀವನ್ ಚಾಂಗ್ ಮತ್ತು ಗುತ್ತಿಗೆದಾರ ವಿಲ್ಲಿ ಸನ್ ವಿರುದ್ಧ ಕ್ರಿಮಿನಲ್ ಆರೋಪಪಟ್ಟಿ ದಾಖಲಿಸಿತ್ತು.

ಹಾಗಾದ್ರೆ ಸೆನ್ಲಿ ಚೆನ್ ಮೇಲಿರುವ ಆರೋಪಗಳೇನು?

ಅಕ್ಟೋಬರ್ 2026ರಲ್ಲಿ ಸೂಪರ್ ಮೈಕ್ರೋ ಷೇರುದಾರರು ಕಂಪನಿಯ ವಿರುದ್ಧ ಸಲ್ಲಿಸಿರುವ ಸಿವಿಲ್ ದಾವೆಯಲ್ಲಿ ಸೆನ್ಲಿ ಚೆನ್ ಹೆಸರನ್ನು ಉಲ್ಲೇಖಿಸಲಾಗಿದೆ. ಅದರ ಪ್ರಕಾರ, ಎನ್‌ವಿಡಿಯಾದಿಂದ ಚಿಪ್‌ಗಳನ್ನು ಖರೀದಿಸುವುದು ಮತ್ತು ಗ್ರಾಹಕರಿಗೆ ಹಂಚಿಕೆ ಮಾಡುವ ನಿರ್ಧಾರಗಳನ್ನು ಚೆನ್ ನಿರ್ವಹಿಸುತ್ತಿದ್ದರಿಂದ, ಚೀನಾಕ್ಕೆ ಅಕ್ರಮವಾಗಿ ಚಿಪ್ ಮಾರಾಟವಾಗುತ್ತಿರುವ ವಿಷಯ ಅವರಿಗೆ ತಿಳಿಯದಿರಲು ಸಾಧ್ಯವೇ ಇಲ್ಲ ಎಂದು ದಾವೆಯಲ್ಲಿ ವಾದಿಸಲಾಗಿದೆ. ಅಲ್ಲದೆ, ಚೀನಾಕ್ಕೆ ಅಕ್ರಮವಾಗಿ ಸಾಗಿಸಲಾದ ಚಿಪ್‌ಗಳ ಸೀರಿಯಲ್ ನಂಬರ್‌ಗಳಿಗೆ ಸಂಬಂಧಿಸಿದಂತೆ ಎನ್‌ವಿಡಿಯಾಕ್ಕೆ ಇಮೇಲ್ ಕಳುಹಿಸಿದ್ದ ಕಾರಣಕ್ಕಾಗಿಯೇ ಅವರು ಕಂಪನಿಯಿಂದ ಹೊರನಡೆಯಬೇಕಾಯಿತು ಎಂದು ಮಾಜಿ ಉದ್ಯೋಗಿಯೊಬ್ಬರು ದಾವೆಯಲ್ಲಿ ಆರೋಪಿಸಿದ್ದಾರೆ.

ಏತನ್ಮಧ್ಯೆ, ಷೇರುದಾರರ ಆರೋಪಗಳನ್ನು ಸೂಪರ್ ಮೈಕ್ರೋ ಸಂಪೂರ್ಣವಾಗಿ ತಳ್ಳಿಹಾಕಿದೆ. ಎನ್‌ವಿಡಿಯಾ ಜೊತೆಗಿನ ವ್ಯವಹಾರವನ್ನಾಗಲಿ ಅಥವಾ ಚಿಪ್ ಹಂಚಿಕೆಯನ್ನಾಗಲಿ ಚೆನ್ ನಿರ್ವಹಿಸುತ್ತಿರಲಿಲ್ಲ ಮತ್ತು 18 ವರ್ಷಗಳ ಸೇವೆಯ ನಂತರ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ ’: ಸಿಎಂ ಡಿ ಕೆ ಶಿವಕುಮಾರ್; Video

ಕಾವೇರಿ ಕದನದಲ್ಲಿ ಮಹಾ ತಿರುವು! ಸುಪ್ರೀಂನಲ್ಲಿ ವಿಜಯ್ ಸರ್ಕಾರದ ಅರ್ಜಿ ವಜಾ ಬೆನ್ನಲ್ಲೇ ಕರ್ನಾಟಕಕ್ಕೆ ಶಾಕ್: ತಮಿಳುನಾಡಿಗೆ ನಿತ್ಯ 2,000 ಕ್ಯೂಸೆಕ್ ನೀರು ಬಿಡಲು CWRC ಶಿಫಾರಸು

'ಕಂಗಲಾದ ಪ್ರಧಾನಿ' ಆರ್ಥಿಕ ಪರಿಸ್ಥಿತಿಗೆ ಇತರರನ್ನು ದೂಷಿಸುವ ಬದಲು ಸರ್ಕಾರದ ನೀತಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು- ಕಾಂಗ್ರೆಸ್

ಪಂಜಾಬ್ ಚುನಾವಣೆಗೂ ಮುನ್ನ 'ಕೈ'ಗೆ ಮರ್ಮಾಘಾತ: ಪ್ರಣಾಳಿಕೆ ರಚನೆಯ ಮುಖಂಡನೇ ಬಿಜೆಪಿಗೆ ಸೇರ್ಪಡೆ

2 ತಿಂಗಳಾದರೂ ರೈತರಿಗೆ ತಲುಪದ ಬರ ಪರಿಹಾರ; ಅಧಿಕಾರಿಗಳಿಗೆ DCM ಪರಮೇಶ್ವರ್ ತರಾಟೆ, ತಕ್ಷಣ ನೆರವು ನೀಡಲು ಸೂಚನೆ..!