ಜೆರುಸಲೇಮ್: ದುಬೈಯಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಮಧ್ಯಾಕಾಶದ ಗಂಭೀರ ಘಟನೆಯಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ಲಾಘಿಸಿದ್ದಾರೆ.
ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, ಸ್ಮಿತ್ ಮಚ್ಚರ್ ಅವರ ಧೈರ್ಯದಿಂದ ‘9/11 ಮಾದರಿಯ ಮತ್ತೊಂದು ಭೀಕರ ದುರಂತ ತಪ್ಪಿದೆ. ವಿಮಾನದ ಸಹ ಪೈಲಟ್ ಮತ್ತೊಬ್ಬ ಪೈಲಟ್ ಮೇಲೆ ಕೊಡಲಿ ಅಥವಾ ಚಾಕುವಿನಿಂದ ದಾಳಿ ನಡೆಸಿದ್ದಾನೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದರೂ, ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು ಎಂದು ಮಚ್ಚರ್ ಸಾಹಸವನ್ನು ನೇತನ್ಯಾಹು ಶ್ಲಾಘಿಸಿದರು.
ದುಬೈಯಿಂದ ಇಸ್ರೇಲ್‌ಗೆ ಹೊರಟಿದ್ದ ಫ್ಲೈದುಬೈ ಸಂಸ್ಥೆಯ ಎಫ್‌ಜೆ1073 ವಿಮಾನವು ಇಸ್ರೇಲ್ ಗಡಿಯ ಸಮೀಪಿಸುತ್ತಿದ್ದಾಗ ವಿಮಾನದಲ್ಲಿ ಈ ದಾಳಿ ನಡೆದಿತ್ತು. ವಿಮಾನದ ಕಾಕ್ ಪೀಟ್ ನಲ್ಲಿದ್ದ ಇಬ್ಬರೂ ಪೈಲಟ್ ಗಳೂ ದಾಳಿಯಲ್ಲಿ ಗಾಯಗೊಂಡಿದ್ದರು.
ಗಾಯಗೊಂಡ ಪೈಲಟ್ ಸ್ಮಿತ್ ಮಚ್ಚರ್ ಜೀವಕ್ಕಾಗಿ ಹೋರಾಡುತ್ತಿದ್ದರೂ ಕರ್ತವ್ಯ ನಿರ್ವಹಿಸಿದ್ದು, ಈ ವೇಳೆ ವಿಮಾನ ಕೆಳಮುಖವಾಗಿ ಚಲಿಸಲು ಆರಂಭಿಸಿತ್ತು ಎಂದು ನೆತನ್ಯಾಹು ವಿವರಿಸಿದ್ದಾರೆ.
ಭಯಾನಕ ಘಟನೆಯ ಎಳೆ-ಎಳೆಯಾಗಿ ಬಿಚ್ಚಿಟ್ಟ ಇಸ್ರೇಲ್ ಪ್ರಧಾನಿ
ಕಾಕ್‌ಪಿಟ್‌ನಿಂದ ಕೂಗಾಟ ಕೇಳಿದ ಬಳಿಕ 18ನೇ ಸಾಲಿನಲ್ಲಿ ಕುಳಿತಿದ್ದ ಇಸ್ರೇಲಿ ಪ್ರಯಾಣಿಕನೊಬ್ಬ ಮುಂಭಾಗಕ್ಕೆ ಧಾವಿಸಿದ್ದಾನೆ. ಈ ವೇಳೆ ವಿಮಾನ ತೀವ್ರವಾಗಿ ಕೆಳಕ್ಕೆ ಜಾರುತ್ತಿದ್ದಾಗ ಆತ ದೂರಕ್ಕೆ ಎಸೆಯಲ್ಪಟ್ಟರೂ, ಬಳಿಕ ಕಾಕ್‌ಪಿಟ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಕಾಕ್‌ಪಿಟ್ ಒಳಗೆ ಪ್ರವೇಶಿಸಿದ ಪ್ರಯಾಣಿಕ, ದಾಳಿ ನಡೆಸಿದ ಸಹ ಪೈಲಟ್ ವಿಮಾನದ ನಿಯಂತ್ರಣ ಸಾಧನಗಳನ್ನು ಬಳಕೆ ಮಾಡಲು ಯತ್ನಿಸಿದಾಗ ಆತ ಹಿಂದಿನಿಂದ ದಾಳಿಕೋರನನ್ನು ಹಿಡಿದು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾನೆ. ಬಳಿಕ ಮತ್ತೊಬ್ಬ ಇಸ್ರೇಲಿ ಪ್ರಯಾಣಿಕ ಹಾಗೂ ವಿಮಾನ ಸಿಬ್ಬಂದಿಯೊಬ್ಬರು ಸಹಾಯ ಮಾಡಿದ್ದಾರೆ.
ತುರ್ತು ಭೂಸ್ಪರ್ಶ
ಆ ಬಳಿಕ ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದ ರಿಸರ್ವ್ ವಿಮಾನ ಸಿಬ್ಬಂದಿ ಕಾಕ್‌ಪಿಟ್‌ಗೆ ಪ್ರವೇಶಿಸಿ ವಿಮಾನವನ್ನು ಸ್ಥಿರಗೊಳಿಸಿದ್ದಾರೆ. ವಿಮಾನದ ರಡ್ಡರ್ ಹಾಗೂ ಬಾಲ ಭಾಗಕ್ಕೆ ಹಾನಿಯಾಗಿದ್ದರೂ, ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂದು ನೆತನ್ಯಾಹು ಹೇಳಿದ್ದಾರೆ.
ಅಸಾಧಾರಣ ಸಾಹಸ
“ಇದು ಅಸಾಧಾರಣ ವೀರತೆ. ವಿಶೇಷ ಪಡೆಗಳಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಆದರೆ ಇಂತಹ ಘಟನೆ ನಾನು ಕಂಡಿಲ್ಲ,” ಎಂದು ನೆತನ್ಯಾಹು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅನುಭವಿ ಪೈಲಟ್ ಮಚ್ಚರ್
ಗಾಯಗೊಂಡ ಸ್ಮಿತ್ ಮಚ್ಚರ್ ಅವರು ಯುಎಇ ಮೂಲದ ಫ್ಲೈದುಬೈ ಸಂಸ್ಥೆಯಲ್ಲಿ ಡೈರೆಕ್ಟ್ ಎಂಟ್ರಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರಿಗೆ 13 ವರ್ಷಗಳ ವಾಣಿಜ್ಯ ವಿಮಾನಯಾನ ಅನುಭವವಿದ್ದು, ಸುಮಾರು 9,750 ಗಂಟೆಗಳ ಹಾರಾಟದ ಅನುಭವವಿದೆ. ಫ್ಲೈದುಬೈ ಸೇರುವ ಮೊದಲು ಅವರು 11 ವರ್ಷಗಳ ಕಾಲ ಸ್ಪೈಸ್‌ಜೆಟ್‌ನಲ್ಲಿ ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು.
ಈ ಘಟನೆಯ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫ್ಲೈದುಬೈ ಸಂಸ್ಥೆ ತಾತ್ಕಾಲಿಕವಾಗಿ ಇಸ್ರೇಲ್‌ಗೆ ಹಾಗೂ ಇಸ್ರೇಲ್‌ನಿಂದ ತನ್ನ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ.