ಪೇಶಾವರ (ಪಾಕಿಸ್ತಾನ): ಪಾಕಿಸ್ತಾನದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಬೆಳವಣಿಗೆಯೊಂದರಲ್ಲಿ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಮೂಲಕ ಪಾಕಿಸ್ತಾನದ ವಾಯುವ್ಯ ಪ್ರಾಂತ್ಯವಾದ ಖೈಬರ್ ಪಖ್ತುನ್ಖ್ವಾದಲ್ಲಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ರಾಜ್ಯಪಾಲರ ಆಡಳಿತವನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಹಿಡಿತದಲ್ಲಿದ್ದ ಕೊನೆಯ ಪ್ರಾಂತೀಯ ಸರ್ಕಾರವನ್ನು ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ವಜಾಗೊಳಿಸಿದೆ. ಅಲ್ಲದೆ, ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಸೊಹೈಲ್ ಅಫ್ರಿದಿ ಅವರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಆ ಕುರಿತ ವರದಿ ಇಲ್ಲಿದೆ:
ತುರ್ತು ಪರಿಸ್ಥಿತಿ ಜಾರಿಗೆ ಕಾರಣಗಳೇನು?
ಇಸ್ಲಾಮಾಬಾದ್ ಚಲೋ ಪ್ರತಿಭಟನೆ: ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಆಗ್ರಹಿಸಿ ಸಿಎಂ ಸೊಹೈಲ್ ಅಫ್ರಿದಿ ನೇತೃತ್ವದಲ್ಲಿ ಸಾವಿರಾರು ಪಿಟಿಐ ಬೆಂಬಲಿಗರು ರಾಜಧಾನಿ ಇಸ್ಲಾಮಾಬಾದ್ ಕಡೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದ್ದರು.
ಭದ್ರತಾ ವೈಫಲ್ಯದ ಆರೋಪ: ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಕೇಂದ್ರ ಸಚಿವ ಸಂಪುಟವು ಪ್ರಾಂತ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಮತ್ತು ಭಯೋತ್ಪಾದನೆ ನಿಗ್ರಹದಲ್ಲಿ ಅಲ್ಲಿನ ಸರ್ಕಾರ "ಉದ್ದೇಶಪೂರ್ವಕವಾಗಿ ನಿಷ್ಕ್ರಿಯತೆ" ವಹಿಸಿದೆ ಎಂದು ಆರೋಪಿಸಿ, ತುರ್ತು ಪರಿಸ್ಥಿತಿ ಹೇರಲು ಶಿಫಾರಸು ಮಾಡಿತ್ತು.
ಮುಂದುವರೆದು, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಎಂ ಸೊಹೈಲ್ ಅಫ್ರಿದಿ ಮತ್ತು ಪಿಟಿಐ ಪ್ರಾಂತ್ಯದ ಅಧ್ಯಕ್ಷರನ್ನು ಬಂಧಿಸಲಾಗಿದ್ದು, ಇಡೀ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳ ಕಟ್ಟುನಿಟ್ಟಿನ ಕ್ರಮಗಳು ಜಾರಿಯಲ್ಲಿವೆ. ಇದರೊಂದಿಗೆ, ರಾಜಧಾನಿ ಇಸ್ಲಾಮಾಬಾದ್ ತಲುಪದಂತೆ ಪ್ರಮುಖ ರಸ್ತೆಗಳನ್ನು ಕಂಟೈನರ್‌ಗಳ ಮೂಲಕ ಬಂದ್ ಮಾಡಲಾಗಿದ್ದು, ಆಯ್ದ ನಗರ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ, ಪಿಟಿಐ ಮುಖ್ಯಸ್ಥ ಗೋಹರ್ ಅಲಿ ಖಾನ್ ಮತ್ತು ಪಕ್ಷದ ವಕ್ತಾರರು ಸರ್ಕಾರದ ಈ ನಿರ್ಧಾರವನ್ನು "ಪ್ರಜಾಪ್ರಭುತ್ವ ವಿರೋಧಿ ಮತ್ತು ದೊಡ್ಡ ರಾಜಕೀಯ ತಪ್ಪು" ಎಂದು ಖಂಡಿಸಿದ್ದು, ಇದು ದೇಶದಲ್ಲಿ ಮತ್ತಷ್ಟು ಅಸ್ಥಿರತೆ ಮತ್ತು ಹಿಂಸಾಚಾರಕ್ಕೆ ಕಾರಣವಾಗಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.