ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. 
ವಿದೇಶ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ಇರಾನ್ ಯುದ್ಧದ ಭಾಗವಾಗಿ ಹೊಸದಾಗಿ ತೆರೆದುಕೊಂಡಿರುವ ಮತ್ತೊಂದು ಸಂಘರ್ಷದ ರಂಗದಲ್ಲಿ ಸೌದಿ ಅರೇಬಿಯಾ ಸರಣಿ ದಾಳಿಗಳನ್ನು ಎದುರಿಸುತ್ತಿದೆ. ನೆರೆಯ ಯೆಮನ್‌ನಲ್ಲಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರೊಂದಿಗೆ ಸಂಘರ್ಷ ತೀವ್ರಗೊಂಡಿದೆ.

ರಿಯಾದ್: ಸೌದಿ ಅರೇಬಿಯಾದ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಶನಿವಾರ ನಡೆದ ದಾಳಿಯಲ್ಲಿ ಅಮೆರಿಕದ ಪ್ರಜೆಯೂ ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 309ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.

ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ನೀಡಿರುವ ಮಾಹಿತಿಗಳ ಪ್ರಕಾರ, ಮೃತಪಟ್ಟವರಲ್ಲಿ ನಾಲ್ವರು ಸೌದಿ ಪ್ರಜೆಗಳು, ಇಬ್ಬರು ಬಾಂಗ್ಲಾದೇಶದವರು ಹಾಗೂ ಈಜಿಪ್ಟ್, ಜೋರ್ಡಾನ್, ಸಿರಿಯಾ, ಪ್ಯಾಲೆಸ್ತೀನ್ ಮತ್ತು ಸುಡಾನ್‌ನ ತಲಾ ಒಬ್ಬರು ಸೇರಿದ್ದಾರೆಂದು ತಿಳಿಸಿದೆ.

ಇದೇ ವೇಳೆ ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇರಾನ್ ಯುದ್ಧದ ಭಾಗವಾಗಿ ಹೊಸದಾಗಿ ತೆರೆದುಕೊಂಡಿರುವ ಮತ್ತೊಂದು ಸಂಘರ್ಷದ ರಂಗದಲ್ಲಿ ಸೌದಿ ಅರೇಬಿಯಾ ಸರಣಿ ದಾಳಿಗಳನ್ನು ಎದುರಿಸುತ್ತಿದೆ. ನೆರೆಯ ಯೆಮನ್‌ನಲ್ಲಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರೊಂದಿಗೆ ಸಂಘರ್ಷ ತೀವ್ರಗೊಂಡಿದೆ.

ಹೌತಿಗಳ ವಿರುದ್ಧ ಸೌದಿ ಅರೇಬಿಯಾ ನಡೆಸುತ್ತಿರುವ ದಾಳಿಗಳಲ್ಲಿ ಅಮೆರಿಕವೂ ಭಾಗಿಯಾಗಬೇಕೇ ಎಂಬುದನ್ನು ಪರಿಶೀಲಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.

ನಾವು ಭಾಗಿಯಾಗಬಹುದು. ಈ ಬಗ್ಗೆ ಪರಿಶೀಲಿಸುತ್ತೇವೆ. ವಿಮಾನ ನಿಲ್ದಾಣದ ಮೇಲಿನ ಇತ್ತೀಚಿನ ದಾಳಿಯ ಬಗ್ಗೆ ಈಗಷ್ಟೇ ತಿಳಿದುಕೊಂಡಿದ್ದೇವೆ. ನಿರ್ಧಾರ ಕೈಗೊಳ್ಳುತ್ತೇವೆ. ನಾವು ಬಹಳ ವೇಗವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ರಿಯಾದ್ ವಿಮಾನ ನಿಲ್ದಾಣದ ಮೇಲಿನ ದಾಳಿಯನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ಅಮೆರಿಕದ ಪ್ರಜೆಯೂ ಸೇರಿದಂತೆ ಹಲವು ಅಮಾಯಕ ಜೀವಗಳನ್ನು ಬಲಿ ಪಡೆದ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಇಂದಿನ ದಾಳಿ ಸೇರಿದಂತೆ ಸೌದಿ ಅರೇಬಿಯಾ ವಿರುದ್ಧ ಭಯೋತ್ಪಾದಕ ಹೌತಿಗಳು ನಡೆಸುತ್ತಿರುವ ದಾಳಿಗಳನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.

ಟ್ರಂಪ್ ಆಡಳಿತವು ಸೌದಿ ಅರೇಬಿಯಾದ ಪಾಲುದಾರರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಶನಿವಾರದ ದಾಳಿಯ ಹೊಣೆಯನ್ನು ಹೌತಿ ಬಂಡುಕೋರರು ಇನ್ನೂ ಹೊತ್ತುಕೊಂಡಿಲ್ಲ. ಆದರೆ, ವಾರದ ಆರಂಭದಲ್ಲಿ ಇದೇ ವಿಮಾನ ನಿಲ್ದಾಣದ ಮೇಲೆ ನಡೆಸಿದ ದಾಳಿಯಲ್ಲಿ ಪೈಲಟ್ ಸೇರಿದಂತೆ ಮೂವರು ಸೌದಿ ಪ್ರಜೆಗಳು ಮೃತಪಟ್ಟಿದ್ದರು ಎಂದು ಹೌತಿಗಳು ಹೇಳಿಕೊಂಡಿದ್ದರು.

ಶನಿವಾರದ ದಾಳಿಯಲ್ಲಿ ದೇಶೀಯ ವಿಮಾನಗಳ ಟರ್ಮಿನಲ್‌ಗಳಾದ 3 ಮತ್ತು 4 ಇರುವ ಸಂಕೀರ್ಣದ ಮೇಲೆ ಕ್ಷಿಪಣಿ ಅಪ್ಪಳಿಸಿದೆ ಎಂದು ಪ್ರಾದೇಶಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕೃತ ಅನುಮತಿ ಇಲ್ಲದ ಕಾರಣ ಅವರು ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ.

ಸೌದಿ ವಿಮಾನ ನಿಲ್ದಾಣಗಳು, ಸೇನಾ ನೆಲೆಗಳು ಮತ್ತು ತೈಲ ಮೂಲಸೌಕರ್ಯಗಳ ಮೇಲಿನ ದಾಳಿಗಳು ಹೆಚ್ಚಾಗಿವೆ. ಹೌತಿಗಳ ವಿರುದ್ಧ ಸೌದಿ ನೇತೃತ್ವದ ಮೈತ್ರಿಕೂಟವು ಪ್ರಮುಖ ಸೇನಾ ಕಾರ್ಯಾಚರಣೆ ಆರಂಭಿಸಿದ ಒಂದು ವಾರದ ಬಳಿಕ ಈ ಬೆಳವಣಿಗೆ ನಡೆದಿದೆ.

ಇದೇ ವೇಳೆ, ಹೌತಿ ನಿಯಂತ್ರಣದಲ್ಲಿರುವ ಯೆಮನ್ ರಾಜಧಾನಿ ಸನಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಸೌದಿ ಅರೇಬಿಯಾ ದಾಳಿ ನಡೆಸಿದೆ ಎಂದು ಬಂಡುಕೋರರು ಶನಿವಾರ ಆರೋಪಿಸಿದ್ದಾರೆ.

ಯೆಮನ್‌ಗೆ ವಿಶ್ವಸಂಸ್ಥೆಯ ವಿಶೇಷ ರಾಯಭಾರಿ ಹ್ಯಾನ್ಸ್ ಗ್ರುಂಡ್‌ಬರ್ಗ್, ರಿಯಾದ್ ಮೇಲಿನ ದಾಳಿಯನ್ನು “ಅಪಾಯಕಾರಿ ಉಲ್ಬಣ” ಎಂದು ಬಣ್ಣಿಸಿದ್ದು, ಇದು ಪ್ರಾದೇಶಿಕ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಎಚ್ಚರಿಸಿದ್ದಾರೆ.

ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತ

ಈ ನಡುವೆ ದಾಳಿಯ ಹಿನ್ನೆಲೆಯಲ್ಲಿ ರಿಯಾದ್ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೌದಿ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಗಳಿಗೆ ನೀಡಲಾದ ಅಧಿಕೃತ ಸೂಚನೆಯ ಪ್ರಕಾರ, ಮಧ್ಯರಾತ್ರಿಯವರೆಗೆ ಕಾರ್ಯಾಚರಣೆ ಸ್ಥಗಿತಗೊಂಡಿರಲಿದೆ.

ವಿಮಾನ ನಿಲ್ದಾಣದ ಸುತ್ತಮುತ್ತ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಎಲ್ಲ ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗಿದೆ. ವಿಮಾನ ನಿಲ್ದಾಣದ ಸಂಕೀರ್ಣದ ಸುತ್ತಲಿನ ದೀಪಗಳ ಬೆಳಕನ್ನೂ ಕಡಿಮೆ ಮಾಡಲಾಗಿದೆ.

ವಿಮಾನಗಳ ಸಂಚಾರದ ಮಾಹಿತಿ ನೀಡುವ ಫ್ಲೈಟ್‌ರಾಡಾರ್24 ಪ್ರಕಾರ, ಹಲವು ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ಅಮೆರಿಕ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳು ತಮ್ಮ ನಾಗರಿಕರಿಗೆ ವಿಮಾನ ನಿಲ್ದಾಣದಿಂದ ದೂರವಿರುವಂತೆ ಎಚ್ಚರಿಕೆ ನೀಡಿವೆ.

ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾಗಿರುವ ಸೌದಿ ಅರೇಬಿಯಾದ ಮೇಲಿನ ದಾಳಿಗಳು ಜಾಗತಿಕ ಮಾರುಕಟ್ಟೆ ಮತ್ತು ಪ್ರಾದೇಶಿಕ ಸ್ಥಿರತೆಯ ಮೇಲೆ ಆತಂಕ ಮೂಡಿಸಿವೆ.

ದಾಳಿಯ ಕೆಲವೇ ಗಂಟೆಗಳ ಬಳಿಕವೂ ರಿಯಾದ್‌ನಲ್ಲಿ ಭಾನುವಾರ ಆರಂಭವಾಗಲಿರುವ ಪ್ರಮುಖ ಅಂತಾರಾಷ್ಟ್ರೀಯ ಇಂಧನ ಸಮ್ಮೇಳನದ ಕುರಿತು ಸೌದಿ ಇಂಧನ ಸಚಿವಾಲಯ ಪ್ರಚಾರ ಮುಂದುವರಿಸಿತ್ತು.

ಯೆಮನ್‌ನಲ್ಲಿ ಹೌತಿ ಬಂಡುಕೋರರು ಮತ್ತು ಸೌದಿ ಬೆಂಬಲಿತ ಯೆಮನ್ ಸರ್ಕಾರಿ ಪಡೆಗಳ ನಡುವಿನ ಹೋರಾಟ ತೀವ್ರಗೊಂಡಿದೆ. ಕೆಂಪು ಸಮುದ್ರದ ಕರಾವಳಿಯಲ್ಲಿ ಇತ್ತೀಚೆಗೆ ಹೌತಿಗಳು ಗಳಿಸಿರುವ ಮುನ್ನಡೆಯನ್ನು ಹಿಮ್ಮೆಟ್ಟಿಸಲು ಸರ್ಕಾರಿ ಪಡೆಗಳು ಪ್ರಯತ್ನಿಸುತ್ತಿದ್ದು, ಸೌದಿ ನೇತೃತ್ವದ ಮೈತ್ರಿಕೂಟವು ವಾಯುದಾಳಿ ಬೆಂಬಲ ನೀಡುತ್ತಿದೆ.

ಈ ಮುನ್ನಡೆಯಿಂದ ಬಾಬ್ ಅಲ್-ಮಂದಬ್ ಜಲಸಂಧಿಯಲ್ಲಿನ ಹಡಗುಗಳ ಚಲನವಲನದ ಮೇಲೆ ನಿಗಾ ಇಡುವ ಸಾಮರ್ಥ್ಯ ಹೌತಿಗಳಿಗೆ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಬಾಬ್ ಅಲ್-ಮಂದಬ್ ಜಲಸಂಧಿಯು ಜಾಗತಿಕ ಸಾಗಣೆಗೆ ಪ್ರಮುಖ ಪರ್ಯಾಯ ಮಾರ್ಗವಾಗಿದೆ.

ತಮ್ಮ ಮೇಲೆ ಹೇರಲಾಗಿರುವ ನಿರ್ಬಂಧಕ್ಕೆ ಪ್ರತೀಕಾರವಾಗಿ ಸೌದಿ ಹಡಗುಗಳನ್ನಷ್ಟೇ ಗುರಿಯಾಗಿಸುತ್ತಿರುವುದಾಗಿ ಹೌತಿಗಳು ಅಸೋಸಿಯೇಟೆಡ್ ಪ್ರೆಸ್ ಸೇರಿದಂತೆ ಹಲವು ಮಾಧ್ಯಮಗಳಿಗೆ ತಿಳಿಸಿದ್ದರೂ, ದಾಳಿಗಳ ಆತಂಕ ಮುಂದುವರಿದಿದೆ.

ಗಾಜಾ ಯುದ್ಧ ಆರಂಭವಾದ ಬಳಿಕ ಪ್ಯಾಲೆಸ್ತೀನಿಯರಿಗೆ ಬೆಂಬಲ ಸೂಚಿಸುವ ನೆಪದಲ್ಲಿ ಹೌತಿಗಳು ಇತರ ಹಡಗುಗಳ ಮೇಲೂ ದಾಳಿ ನಡೆಸಿದ್ದರು. ಆಗ ಅಮೆರಿಕ ನಡೆಸಿದ ಬಾಂಬ್ ದಾಳಿ ಕಾರ್ಯಾಚರಣೆಗಳು ಈ ದಾಳಿಗಳ ತೀವ್ರತೆಯನ್ನು ಗಣನೀಯವಾಗಿ ತಗ್ಗಿಸಿದ್ದವು.

ವಿಮಾನ ಸಂಚಾರಕ್ಕೆ ಹೆಚ್ಚುತ್ತಿರುವ ಅಡಚಣೆ

ಸೌದಿ ವಾಯುಪ್ರದೇಶವು ತಮ್ಮ ಸೇನಾ ಕಾರ್ಯಾಚರಣೆಗಳ ವ್ಯಾಪ್ತಿಗೆ ಸೇರಿದ್ದು, ಅಲ್ಲಿ ಕಾರ್ಯನಿರ್ವಹಿಸುವ ಜಾಗತಿಕ ವಿಮಾನಯಾನ ಸಂಸ್ಥೆಗಳು ಎದುರಿಸಬಹುದಾದ ಪರಿಣಾಮಗಳ ಬಗ್ಗೆ “ಕೊನೆಯ ಎಚ್ಚರಿಕೆ” ನೀಡಿರುವುದಾಗಿ ಹೌತಿಗಳು ಈ ವಾರ ಹೇಳಿದ್ದರು.

ವಿಮಾನ ಸಂಚಾರದ ಮಾಹಿತಿ ನೀಡುವ ಫ್ಲೈಟ್‌ಅವೇರ್ ವೆಬ್‌ಸೈಟ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಿಯಾದ್ ವಿಮಾನ ನಿಲ್ದಾಣದ ಕನಿಷ್ಠ 291 ವಿಮಾನಗಳ ಸಂಚಾರ ರದ್ದಾಗಿದೆ. ಇತ್ತೀಚಿನ ದಾಳಿಗೂ ಮುನ್ನ ಏರ್ ಇಂಡಿಯಾ, ಫ್ಲೈದುಬೈ, ಲುಫ್ತಾನ್ಸಾ ಗ್ರೂಪ್ ಮತ್ತು ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಸೇರಿದಂತೆ ಹಲವು ಸಂಸ್ಥೆಗಳು ರಿಯಾದ್ ಹಾಗೂ ಇತರ ಸೌದಿ ವಿಮಾನ ನಿಲ್ದಾಣಗಳಿಗೆ ಮತ್ತು ಅಲ್ಲಿಂದ ನಡೆಸುವ ವಿಮಾನ ಸಂಚಾರವನ್ನು ವಿವಿಧ ಅವಧಿಗೆ ಸ್ಥಗಿತಗೊಳಿಸಿದ್ದವು.

ಸೌದಿ ವಾಯುಪ್ರದೇಶದ ಕುರಿತ ಮಾರ್ಗಸೂಚಿಗಳನ್ನು ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ ವಿಸ್ತರಿಸಿದೆ. ಹೌತಿಗಳು ಸೌದಿ ಅರೇಬಿಯಾದ ಒಳಭಾಗದಲ್ಲಿರುವ ರಿಯಾದ್‌ನಂತಹ ಪ್ರದೇಶಗಳ ಮೇಲೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವುದು ಮತ್ತು ವಿಮಾನಯಾನ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಹಾಗೂ ಅವುಗಳನ್ನು ತಡೆಯುವ ಪ್ರಯತ್ನಗಳಿಂದ ನಾಗರಿಕ ವಿಮಾನಗಳನ್ನು ತಪ್ಪಾಗಿ ಗುರುತಿಸುವ ಅಪಾಯ ಹೆಚ್ಚಾಗಿದೆ ಎಂದು ಸಂಸ್ಥೆ ಎಚ್ಚರಿಸಿದೆ.

ಗುರುವಾರ ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿಗಳು ನಡೆಸಿದ ದಾಳಿಯಲ್ಲಿ ಮೂರು ವಿಮಾನಗಳಿಗೆ ಹಾನಿಯಾಗಿದೆ ಎಂದು ಇಬ್ಬರು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಲು ಅನುಮತಿ ಇಲ್ಲದ ಕಾರಣ ಅವರು ತಮ್ಮ ಹೆಸರನ್ನು ಬಹಿರಂಗಪಡಿಸಿಲ್ಲ.

ಸೌದಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯೂ ತನ್ನ ವಿಮಾನವೊಂದಕ್ಕೆ ನೆಲದಲ್ಲಿದ್ದಾಗ ಹಾನಿಯಾಗಿರುವುದನ್ನು ದೃಢಪಡಿಸಿದ್ದು, ಆ ಸಂದರ್ಭದಲ್ಲಿ ವಿಮಾನದಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ

‘Gen Z ಪ್ರತಿಭಟನೆಗಳಿಂದ ಮೋದಿ ಸರ್ಕಾರಕ್ಕೆ ನಡುಕ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ