ಜೋರ್ಡಾನ್: ಜೋರ್ಡಾನ್‌ನ ಕರಕ್‌ನಲ್ಲಿ ಬಂದೂಕುಧಾರಿಗಳು ಚರ್ಚ್‌ಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಭೀಕರ ದಾಳಿಯಲ್ಲಿ ಏಳು ಜನ ಮೃತಪಟ್ಟಿದ್ದಾರೆ ಮತ್ತು 34 ಮಂದಿ ಗಾಯಗೊಂಡಿದ್ದಾರೆ.
ಹಮೌದ್ ಗ್ರಾಮದಲ್ಲಿರುವ ಗ್ರೀಕ್ ಆರ್ಥೊಡಾಕ್ಸ್ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಚರ್ಚ್‌ಗೆ ನುಗ್ಗಿದ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಅಂತ್ಯಕ್ರಿಯೆಯ ಪ್ರಾರ್ಥನೆಗಳು ಆರಂಭವಾದ ಕೇವಲ 15 ನಿಮಿಷಗಳಲ್ಲಿ ಅಪರಿಚಿತ ದಾಳಿಕೋರರು ಚರ್ಚ್‌ಗೆ ನುಗ್ಗಿ ಅಲ್ಲಿದ್ದ ಜನರ ಮೇಲೆ ನಿರಂತರವಾಗಿ ಗುಂಡಿನ ಮಳೆಗರೆದಿದ್ದಾರೆ. ದಾಳಿಯ ನಂತರ ಚರ್ಚ್‌ನ ನೆಲದ ಮೇಲೆ ರಕ್ತದ ಮಡುವು ಹರಿದಿದ್ದು, ಗಾಜುಗಳು ಪುಡಿಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಜೋರ್ಡಾನ್ ರಾಜ ಅಬ್ದುಲ್ಲಾ ಬಿನ್ ಹುಸೇನ್ II ಅವರು ಈ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಕರಾಕ್ (Karak) ಮೇಲೆ ನಡೆದಿರುವ ಈ ದಾಳಿಗೆ ಅತ್ಯಂತ ಕಠಿಣ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಗುಡುಗಿದ್ದಾರೆ.
"ತಮ್ಮ ಗುಂಡುಗಳಿಂದ ಜೋರ್ಡಾನ್ ಜನರನ್ನು ವಿಭಜಿಸಬಹುದು ಎಂಬ ಭ್ರಮೆಯಲ್ಲಿರುವವರಿಗೆ, ನಮ್ಮ ಒಗ್ಗಟ್ಟಿನ ಮುಂದೆ ಯಾವುದೇ ಅವಕಾಶವಿಲ್ಲ. ಉತ್ತರದ ತುದಿಯಿಂದ ದಕ್ಷಿಣದ ತುದಿಯವರೆಗಿನ ಎಲ್ಲಾ ಜೋರ್ಡಾನ್ ಜನರು ಒಂದೇ ಭೂಮಿ ಮತ್ತು ಒಂದೇ ಭವಿಷ್ಯವನ್ನು ಹಂಚಿಕೊಂಡಿದ್ದಾರೆ. ಅವರ ನಡುವೆ ಯಾವುದೇ ಅಂತರವಿಲ್ಲ. ಹುತಾತ್ಮರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಪ್ರತಿಯೊಬ್ಬ ಜೋರ್ಡಾನ್ ಪ್ರಜೆಯ ಜೀವವೂ ಅಮೂಲ್ಯವಾದುದು. ನಮ್ಮ ರಾಷ್ಟ್ರಕ್ಕೆ ಬೆದರಿಕೆ ಹಾಕಲು ಧೈರ್ಯ ಮಾಡುವವರ ವಿರುದ್ಧ ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ" ಎಂದು ಎಚ್ಚರಿಸಿದ್ದಾರೆ.