ಟೆಹ್ರಾನ್: ಇರಾನ್ ರಾಜಧಾನಿ ಟೆಹ್ರಾನ್ನ ಅತ್ಯಂತ ಜನನಿಬಿಡ ರಸ್ತೆಯೊಂದರಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಣಕಿಸುವ ವಿಶಿಷ್ಟ ರಾಜಕೀಯ ಕಲಾ ಪ್ರದರ್ಶನವೊಂದು ಸಾರ್ವಜನಿಕರ ಭಾರಿ ಗಮನ ಸೆಳೆಯುತ್ತಿದೆ.
ನಕಲಿ ಜೈಲು ಕೋಣೆಯೊಳಗೆ ಟ್ರಂಪ್ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ನಿದ್ರಿಸುತ್ತಿರುವ ಮತ್ತು ಅಡ್ಡಾಡುತ್ತಿರುವ ದೃಶ್ಯಾವಳಿಗಳು ಕಂಡು ಬಂದಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಜೈಲಿನ ಕಂಬಿಗಳ ಹಿಂದೆ ಟ್ರಂಪ್ ಮಲಗಿರುವಂತೆ ಬಿಂಬಿಸುವ ದೃಶ್ಯವನ್ನು ಪ್ರದರ್ಶಿಸಲಾಗಿದ್ದು, ಇದು ಜನರ ಗಮನ ಸೆಳೆಯುತ್ತಿದೆ.
ಇರಾನ್ನಲ್ಲಿ ನಡೆದ ಮದುವೆ ಸಮಾರಂಭದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಜನರು ಮೃತಪಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಾಷಿಂಗ್ಟನ್ ವಿರುದ್ಧ ಸಂದೇಶ ಸಾರಲು ಈ ಪ್ರದರ್ಶನ ರೂಪಿಸಲಾಗಿದೆ.
ಟೆಹ್ರಾನ್ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಒಂದಾದ ತಜ್ರೀಶ್ ಚೌಕದ ಮೇಲಿರುವ ಜಾಹೀರಾತು ಫಲಕದಲ್ಲಿ ಜೈಲಿನ ಮಾದರಿಯ ಪಂಜರವನ್ನು ಅಳವಡಿಸಲಾಗಿದೆ. ಅದರೊಳಗೆ ಟ್ರಂಪ್ ಮುಖವಾಡ ಮತ್ತು ವಿಗ್ ಧರಿಸಿದ ವ್ಯಕ್ತಿಯೊಬ್ಬರು ಕಾಣಿಸಿಕೊಳ್ಳುತ್ತಾರೆ. ಪಂಜರದೊಳಗೆ ಹಾಸಿಗೆ, ಶೌಚಾಲಯ ಮತ್ತು ಕೈತೊಳೆಯುವ ಸಿಂಕ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಕಂಬಿಗಳನ್ನು ಹಿಡಿದು ಅಲುಗಾಡಿಸುವುದು, ಬಳಿಕ ಮಲಗಿ ನಿದ್ರಿಸುವಂತೆ ನಟಿಸುವುದು ಸೇರಿದಂತೆ ವಿವಿಧ ಭಂಗಿಗಳ ಮೂಲಕ ಅಮೆರಿಕ ಅಧ್ಯಕ್ಷರನ್ನು ಅಣಕಿಸಲಾಗಿದೆ. ಈ ಪ್ರದರ್ಶನವನ್ನು ನೋಡಲು ಜನರು ಗುಂಪುಗೂಡುತ್ತಿದ್ದು, ಅನೇಕರು ತಮ್ಮ ಮೊಬೈಲ್ಗಳಲ್ಲಿ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ.
ಪಂಜರದ ಹಿಂಭಾಗದಲ್ಲಿರುವ ವಿದ್ಯುನ್ಮಾನ ಜಾಹೀರಾತು ಫಲಕದಲ್ಲಿ ಕಳೆದ ತಿಂಗಳು ದಕ್ಷಿಣ ಇರಾನ್ನ ಕುಹೆಸ್ತಕ್ ಪಟ್ಟಣದಲ್ಲಿ ಮದುವೆ ಸಮಾರಂಭದ ಮೇಲೆ ನಡೆದ ಅಮೆರಿಕದ ದಾಳಿಗೆ ಸಂಬಂಧಿಸಿದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಘಟನಾ ಸ್ಥಳದ ಚಿತ್ರಗಳನ್ನೂ ಬಳಸಲಾಗಿದ್ದು, ದಾಳಿಯ ಹೊಣೆಗಾರಿಕೆಯನ್ನು ಅಮೆರಿಕ ಅಧ್ಯಕ್ಷರೊಂದಿಗೆ ತಳುಕು ಹಾಕುವ ಪ್ರಯತ್ನ ಮಾಡಲಾಗಿತ್ತು.
ಫೆಬ್ರವರಿಯಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಅಮೆರಿಕದ ವಿರುದ್ಧ ರಾಜಕೀಯ ಸಂದೇಶ ಸಾರಲು ಇರಾನ್ ಸಾರ್ವಜನಿಕ ಸ್ಥಳಗಳಲ್ಲಿನ ಬೃಹತ್ ಜಾಹೀರಾತು ಫಲಕಗಳನ್ನು ಹೆಚ್ಚಾಗಿ ಬಳಸುತ್ತಿದೆ. ಈ ಹಿಂದೆ ಟ್ರಂಪ್ ಅವರು ಗೀಚುಬರಹಗಳಿಂದ ತುಂಬಿದ ಶವಪೆಟ್ಟಿಗೆಯಲ್ಲಿ ಮಲಗಿರುವಂತೆ ಚಿತ್ರಿಸುವ ಫಲಕವನ್ನೂ ಪ್ರದರ್ಶಿಸಲಾಗಿತ್ತು.
ಸಂಘರ್ಷದ ಸಂದರ್ಭದಲ್ಲಿ ಇರಾನ್ನ ಅಧಿಕಾರಿಗಳು ಮತ್ತು ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ಹಾಗೂ ಅವರ ಆಡಳಿತವನ್ನು ಅಣಕಿಸುವ ಹಲವು ವಿಡಿಯೊಗಳು ಮತ್ತು ಮೀಮ್ಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಮದುವೆ ಸಮಾರಂಭದ ಮೇಲಿನ ದಾಳಿಯ ಆರೋಪವು ಇರಾನ್ನ ಹೊಸ ಅಭಿಯಾನದ ಕೇಂದ್ರಬಿಂದುವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಇರಾನ್ನಿಂದ ಬಂದಿರುವ ವರದಿಗಳ ಬಗ್ಗೆ ಮಾಹಿತಿ ಇದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿತ್ತು. ಆದರೆ, ಅಮೆರಿಕದ ಪಡೆಗಳು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಿಲ್ಲ ಎಂದು ಹೇಳಿತ್ತು.