ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದ ಸಂದರ್ಭದಲ್ಲಿ UN ಭದ್ರತಾ ಮಂಡಳಿಯ ಸಭೆಗಾಗಿ ಪ್ರತಿನಿಧಿಗಳು ಒಟ್ಟುಗೂಡಿದರು. 
ವಿದೇಶ

Veto ಇಲ್ಲದ ಖಾಯಂ ಸದಸ್ಯತ್ವ ‘2ನೇ ದರ್ಜೆ’ಗೆ ಸಮಾನ, ಅರೆಬರೆ ಸದಸ್ಯತ್ವ ನಮಗೆ ಬೇಡ: ವಿಶ್ವಸಂಸ್ಥೆಗೆ ಭಾರತ ಖಡಕ್ ಸಂದೇಶ

ಸುಧಾರಣೆಗೊಂಡ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಅಸ್ತಿತ್ವದಲ್ಲಿರುವವರೆಗೆ ಎಲ್ಲ ಖಾಯಂ ಸದಸ್ಯರಿಗೂ ಈ ಅಧಿಕಾರ ಇರಬೇಕು. ವೀಟೊ ಅಧಿಕಾರದ ಕುರಿತು ಭಾರತದ ನಿಲುವು ತತ್ವಬದ್ಧವಾಗಿದ್ದು, ಎಲ್ಲರಿಗೂ ತಿಳಿದಿದೆ.

ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ವೀಟೋ ಹಕ್ಕು ಇಲ್ಲದ ಖಾಯಂ ಸದಸ್ಯ ಸ್ಥಾನವನ್ನು ಸೃಷ್ಟಿಸುವುದು ಹೊಸದಾಗಿ ಸೇರ್ಪಡೆಯಾಗುವ ದೇಶಗಳನ್ನು 'ಎರಡನೇ ದರ್ಜೆ'ಗೆ ತಳ್ಳಿದಂತೆ ಎಂದು ಭಾರತ ತೀವ್ರವಾಗಿ ಆಕ್ಷೇಪಿಸಿದೆ.

ಸೋಮವಾರ ವೀಟೊ ಅಧಿಕಾರದ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಹರೀಶ್ ಪರ್ವತನೇನಿ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಭಾಗವಾಗಿ ವೀಟೊ ಅಧಿಕಾರವಿಲ್ಲದ ಹೊಸ ಖಾಯಂ ಸದಸ್ಯರ ವರ್ಗವನ್ನು ಸೃಷ್ಟಿಸಿದರೆ, ಅವರು ‘ಎರಡನೇ ದರ್ಜೆಯ’ ಸದಸ್ಯರಾಗಿಯೇ ಉಳಿಯಲಿದ್ದಾರೆ. ಇದರಿಂದ ಈಗಿರುವ ಐವರು ಖಾಯಂ ಸದಸ್ಯರ ಪ್ರಾಬಲ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಸುಧಾರಣೆಗೊಂಡ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಅಸ್ತಿತ್ವದಲ್ಲಿರುವವರೆಗೆ ಎಲ್ಲ ಖಾಯಂ ಸದಸ್ಯರಿಗೂ ಈ ಅಧಿಕಾರ ಇರಬೇಕು. ವೀಟೊ ಅಧಿಕಾರದ ಕುರಿತು ಭಾರತದ ನಿಲುವು ತತ್ವಬದ್ಧವಾಗಿದ್ದು, ಎಲ್ಲರಿಗೂ ತಿಳಿದಿದೆ. ವೀಟೊ ಅಧಿಕಾರ ಇರುವವರೆಗೆ, ಸುಧಾರಣೆಗೊಂಡ ಭದ್ರತಾ ಮಂಡಳಿಯ ಎಲ್ಲ ಖಾಯಂ ಸದಸ್ಯರೂ ಅದನ್ನು ಹೊಂದಿರಬೇಕು ಎಂಬ ನಮ್ಮ ನಿಲುವನ್ನು ಪುನರುಚ್ಚರಿಸುತ್ತೇವೆ ಎಂದು ತಿಳಿಸಿದ್ದಾರೆ.

ವೀಟೊ ಅಧಿಕಾರವಿಲ್ಲದ ದೀರ್ಘಾವಧಿಯ ಸದಸ್ಯರ ಪ್ರತ್ಯೇಕ ವರ್ಗವನ್ನು ಸೃಷ್ಟಿಸುವುದರಿಂದ ಈಗಿನ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇದರಿಂದ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ಎಂಬ ಐವರು ಖಾಯಂ ಸದಸ್ಯರು ಈಗ ಹೊಂದಿರುವ ಮೇಲುಗೈ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ನ್ಯಾಯಸಮ್ಮತತೆ ಮತ್ತು ಸಮಾನತೆಯ ದೃಷ್ಟಿಯಿಂದ ಎಲ್ಲ ಖಾಯಂ ಸದಸ್ಯರಿಗೂ ಸಮಾನ ಹಕ್ಕುಗಳು ಹಾಗೂ ಜವಾಬ್ದಾರಿಗಳು ಇರಬೇಕು ಎಂದು ಅವರು ಒತ್ತಿಹೇಳಿದರು.

15 ಸದಸ್ಯರನ್ನೊಳಗೊಂಡ ಭದ್ರತಾ ಮಂಡಳಿಯಲ್ಲಿ ಖಾಯಂ ಮತ್ತು ಖಾಯಂ ಅಲ್ಲದ ಎರಡೂ ವರ್ಗಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು ಭಾರತದ ಬಹುಕಾಲದ ಬೇಡಿಕೆಯಾಗಿದೆ. ಖಾಯಂ ಅಲ್ಲದ ಸದಸ್ಯರ ಸಂಖ್ಯೆಯನ್ನು ಮಾತ್ರ ಹೆಚ್ಚಿಸುವ ಪ್ರಯತ್ನಗಳಿಂದ ಅರ್ಥಪೂರ್ಣ ಸುಧಾರಣೆ ಸಾಧ್ಯವಿಲ್ಲ ಎಂದು ಭಾರತ ವಾದಿಸುತ್ತಿದೆ.

1945ರಲ್ಲಿ ಸ್ಥಾಪನೆಯಾದ ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವ ಐವರು ಖಾಯಂ ಸದಸ್ಯರಿದ್ದಾರೆ. ಉಳಿದ 10 ಖಾಯಂ ಅಲ್ಲದ ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ ಮಂಡಳಿಯು ಇಂದಿನ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಪ್ರತಿಬಿಂಬಿಸುತ್ತಿಲ್ಲ ಮತ್ತು 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಸಮರ್ಥವಾಗಿಲ್ಲ ಎಂದು ಭಾರತ ಹಲವು ಬಾರಿ ಪ್ರತಿಪಾದಿಸಿದೆ.

ಭದ್ರತಾ ಮಂಡಳಿಯ ಸುಧಾರಣೆಗೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯಲು ನಿರಂತರವಾಗಿ ಒತ್ತಾಯಿಸುತ್ತಿದೆ.

ಇದೇ ವೇಳೆ, 2028-29ರ ಅವಧಿಗೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ಸ್ಥಾನ ಪಡೆಯಲು ಭಾರತ ಪ್ರಯತ್ನಿಸುತ್ತಿದೆ. ಏಷ್ಯಾ–ಪೆಸಿಫಿಕ್ ಗುಂಪಿಗೆ ಮೀಸಲಾಗಿರುವ ಏಕೈಕ ಸ್ಥಾನಕ್ಕಾಗಿ ಭಾರತವು ತಜಿಕಿಸ್ತಾನದ ವಿರುದ್ಧ ಸ್ಪರ್ಧಿಸಲಿದೆ. ಈ ಚುನಾವಣೆಯು 2027ರ ಜೂನ್‌ನಲ್ಲಿ ನಡೆಯಲಿದೆ.

ಭಾರತ ಕೊನೆಯ ಬಾರಿಗೆ 2021-22ರಲ್ಲಿ ಭದ್ರತಾ ಮಂಡಳಿಯ ಸದಸ್ಯತ್ವ ವಹಿಸಿತ್ತು. ಅದು ಭಾರತದ ಎಂಟನೇ ಅವಧಿಯಾಗಿತ್ತು. ಇದಕ್ಕೂ ಮೊದಲು 1950-51, 1967-68, 1972-73, 1977-78, 1984-85, 1991-92 ಮತ್ತು 2011-12ರಲ್ಲಿ ಭಾರತ ಮಂಡಳಿಯ ಸದಸ್ಯವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಸತ್ಯಂ ಶಿವಂ ಸುಂದರಂ': ಸುಪ್ರೀಂನಲ್ಲಿ SIR ವಿಚಾರಣೆಗೂ ಮುನ್ನ ಫೋಟೊ ಹಂಚಿಕೊಂಡ ರಾಹುಲ್ ಗಾಂಧಿ!

ಫಲ ನೀಡದ ಬೆಳಗಾವಿ ಸಭೆ: ಕಬ್ಬು ಬೆಳೆಗಾರರಿಗೆ ಮತ್ತೆ ನಿರಾಸೆ: ಸಮಸ್ಯೆ ಆಲಿಸಲು ಅ. 29 ರಂದು ಮತ್ತೊಮ್ಮೆ ಸಿಎಂ ಸಭೆ..!

Russia ದ್ವಿಮುಖ ನೀತಿ: ಕದನ ವಿರಾಮ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ Kyiv ಮೇಲೆ ಕ್ಷಿಪಣಿಗಳ ಮಳೆಗರೆದ ಪುಟಿನ್ ಸೇನೆ, Zelenskyy ತೀವ್ರ ಆಕ್ರೋಶ..!

ಹೋಟೆಲ್ ರೂಮ್ ಹೊರಗೆ ಕುಸಿದು ಬಿದ್ದು ನವವಿವಾಹಿತೆ ಸಾವು: CCTVಯಲ್ಲಿ ಭೀಕರ ದೃಶ್ಯ ಸೆರೆ! ಕೊಲೆ ಎಂದ ಕುಟುಂಬಸ್ಥರು

Microsoft ಉದ್ಯೋಗಿಗಳಿಗೆ ಬಿಗ್ ಶಾಕ್: ಭಾರತ ಸೇರಿ 4 ದೇಶಗಳ 60,000 ಟೆಕ್ಕಿಗಳಿಗೆ ಸ್ವಯಂ ನಿವೃತ್ತಿ ಪ್ಯಾಕೇಜ್ ಘೋಷಿಸಿದ ಮೈಕ್ರೋಸಾಫ್ಟ್, ಟೆಕ್ ಲೋಕದಲ್ಲಿ ಸಂಚಲನ..!