ನ್ಯಾಲಾ (ಸುಡಾನ್): ಸುಡಾನ್‌ನಲ್ಲಿ ಸುಡಾನ್ ಸಶಸ್ತ್ರ ಪಡೆಗಳು (SAF) ಹಾಗೂ ರ‍್ಯಾಪಿಡ್ ಸಪೋರ್ಟ್ ಫೋರ್ಸಸ್ (RSF) ನಡುವಿನ ಸಂಘರ್ಷ ಉಲ್ಬಣಗೊಂಡಿದ್ದು, ಆರ್‌ಎಸ್‌ಎಫ್ ಆಡಳಿತದ ದಕ್ಷಿಣ ದಾರ್ಫರ್ ಪ್ರಾಂತ್ಯದ ರಾಜಧಾನಿಯಾದ ನ್ಯಾಲಾ ನಗರದ ಜನನಿಬಿಡ ಮಾರುಕಟ್ಟೆಯೊಂದರ ಮೇಲೆ ಸುಡಾನ್ ಸಶಸ್ತ್ರ ಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ 100ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 113ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಘಟನೆಯ ವಿವರ:
ಅರೆಸೈನಿಕ ಪಡೆಯಾದ ರ್ಯಾಪಿಡ್ ಸಪೋರ್ಟ್ ಫೋರ್ಸಸ್ ನಿಯಂತ್ರಣದಲ್ಲಿರುವ ದಕ್ಷಿಣ ದಾರ್ಫರ್ ಪ್ರಾಂತ್ಯದ ರಾಜಧಾನಿಯಾದ ನ್ಯಾಲಾ ನಗರದ ತಂಕ್ವಾಂಗ್ ಮಾರುಕಟ್ಟೆಯನ್ನು ಗುರಿಯಾಗಿಸಿ ಸುಡಾನ್ ದೇಶದ ಸೇನೆಯಾದ ಸುಡಾನ್ ಸಶಸ್ತ್ರ ಪಡೆಗಳು ದಾಳಿ ಮಾಡಿದೆ. ಅದರಲ್ಲೂ, ಸುಡಾನ್‌ನಲ್ಲಿ ಹಿಂಸಾಚಾರವನ್ನು ಪತ್ತೆಹಚ್ಚುವ ಮಾನವ ಹಕ್ಕುಗಳ ಸಂಘಟನೆಯಾದ ಎಮರ್ಜೆನ್ಸಿ ಲಾಯರ್ಸ್ ಪ್ರಕಾರ, ಮೃತರಾದವರಲ್ಲಿ ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ನಾಗರಿಕರು ಬೆಳಗಿನ ಉಪಾಹಾರ ಸೇವಿಸುತ್ತಿದ್ದ ಹಾಗೂ ವ್ಯಾಪಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿಯೇ ಡ್ರೋನ್ ಮಾರುಕಟ್ಟೆಗೆ ಅಪ್ಪಳಿಸಿದೆ ಎಂದು ತಿಳಿಸಿದೆ. ಜೊತೆಗೆ, ಅಂತರರಾಷ್ಟ್ರೀಯ ವೈದ್ಯಕೀಯ ಚಾರಿಟಿ ಸಂಸ್ಥೆಯಾದ ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ತನ್ನ ಆಸ್ಪತ್ರೆಗೆ 36 ಮೃತದೇಹಗಳು ಬಂದಿರುವುದನ್ನು ದೃಢಪಡಿಸಿದೆ ಹಾಗೂ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸುಮಾರು 150 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಸಂಘರ್ಷದ ಹಿನ್ನೆಲೆ ಏನು?
ಸುಡಾನ್ ಅನ್ನು ಸುಮಾರು 30 ವರ್ಷಗಳ ಕಾಲ ಆಳಿದ ಸರ್ವಾಧಿಕಾರಿ ಒಮರ್ ಅಲ್-ಬಶೀರ್‌ನನ್ನು 2019 ರಲ್ಲಿ ಅಲ್ಲಿನ ಸಾರ್ವಜನಿಕರ ತೀವ್ರ ಪ್ರತಿಭಟನೆಯ ನಂತರ ಸೇನೆಯು ಪದಚ್ಯುತಗೊಳಿಸಿತು. ಆದರೆ, ಪ್ರಜಾಪ್ರಭುತ್ವ ಸರ್ಕಾರ ರಚನೆಗೆ ನಾಗರಿಕರು ಒತ್ತಾಯಿಸುತ್ತಿದ್ದಾಗ, 2021ರಲ್ಲಿ ಸುಡಾನ್ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೈನಿಕ ಪಡೆಯಾದ ರ್ಯಾಪಿಡ್ ಸಪೋರ್ಟ್ ಫೋರ್ಸಸ್ ಮುಖ್ಯಸ್ಥ ಮೊಹಮ್ಮದ್ ಹಮ್ದಾನ್ ದಗಾಲೋ (ಹೆಮೆಡ್ತಿ) ಜಂಟಿಯಾಗಿ ಸೇನಾ ದಂಗೆ ನಡೆಸಿ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡರು. ಇದರ ತರುವಾಯು ಇಬ್ಬರು ಜನರಲ್‌ಗಳ ನಡುವೆ ದೇಶದ ಸಂಪೂರ್ಣ ನಿಯಂತ್ರಣಕ್ಕಾಗಿ ಭಿನ್ನಾಭಿಪ್ರಾಯಗಳು ತೀವ್ರಗೊಂಡವು. ಅದರಲ್ಲೂ, ಈ ಸಂಘರ್ಷದಿಂದಾಗಿ ಉಭಯ ಬಣಗಳಿಗೆ ವಿದೇಶಿ ಶಕ್ತಿಗಳು (ಉದಾಹರಣೆಗೆ ಯುಎಇ ಆರ್‌ಎಸ್‌ಎಫ್‌ಗೆ ಮತ್ತು ಈಜಿಪ್ಟ್/ಇರಾನ್ ರಾಷ್ಟ್ರೀಯ ಸೇನೆಗೆ) ಶಸ್ತ್ರಾಸ್ತ್ರ ಒದಗಿಸುತ್ತಿರುವುದರಿಂದ ಈ ರಕ್ತಪಾತ ನಿರಂತರವಾಗಿ ಮುಂದುವರಿದಿದೆ.
ಏತನ್ಮಧ್ಯೆ, ವಿಶ್ವಸಂಸ್ಥೆಯ ವರದಿಗಳ ಪ್ರಕಾರ, ಸುಡಾನ್‌ನಲ್ಲಿ ನಡೆಯುತ್ತಿರುವ ಈ ಸುದೀರ್ಘ ಸಂಘರ್ಷದಿಂದಾಗಿ ವಿಶ್ವದ ಅತಿ ದೊಡ್ಡ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ದೇಶದ ಮೂರನೇ ಎರಡರಷ್ಟು ಭಾಗ ಅಂದರೆ ಸುಮಾರು 3.4 ಕೋಟಿ ಜನರಿಗೆ ತುರ್ತು ನೆರವಿನ ಅಗತ್ಯವಿದೆ.