ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

‘96 ಗಂಟೆಯೊಳಗೆ ದಾಳಿ’: Donald Trump ಆದೇಶಕ್ಕೆ ಕಾಯುತ್ತಿರುವ ಅಮೆರಿಕ ಸೇನೆ, ಇರಾನ್ ಮೇಲೆ ಮತ್ತೆ ಯುದ್ಧದ ಕಾರ್ಮೋಡ?

ಇರಾನ್ ವಿರುದ್ಧ ಹೊಸದಾಗಿ ದಾಳಿ ಆರಂಭಿಸುವ ಬಗ್ಗೆ ಟ್ರಂಪ್ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. “ಇದು ದೊಡ್ಡ ಪ್ರಮಾಣದ ಕಾರ್ಯಾಚರಣೆಯಾಗಿರಲಿದೆ” ಎಂದು ಅಮೆರಿಕದ ಅಧಿಕಾರಿಯೊಬ್ಬರು ಸಿಎನ್‌ಎನ್‌ಗೆ ತಿಳಿಸಿದ್ದಾರೆ..

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದರೆ, ಮುಂದಿನ 96 ಗಂಟೆಗಳೊಳಗೆ ಇರಾನ್ ವಿರುದ್ಧ ದೊಡ್ಡ ಪ್ರಮಾಣದ ಸೇನಾ ಕಾರ್ಯಾಚರಣೆ ಆರಂಭಿಸಲು ಅಮೆರಿಕದ ಪಡೆಗಳು ಸಿದ್ಧವಾಗಿವೆ ಎಂದು ಹೇಳಲಾಗಿದೆ.

ಈ ಬಗ್ಗೆ ಸಿಎನ್‌ಎನ್ ವರದಿ ಮಾಡಿದ್ದು, ಇಬ್ಬರು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಈ ಮಾಹಿತಿ ಪ್ರಕಟಿಸಲಾಗಿದೆ. ದಾಳಿಗೆ ಅಗತ್ಯವಿರುವಷ್ಟು ಅಮೆರಿಕದ ಸೇನಾ ಪಡೆಗಳು ಈಗಾಗಲೇ ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡಿವೆ ಎಂದು ವರದಿ ತಿಳಿಸಿದೆ.

ಆದರೆ, ಇರಾನ್ ವಿರುದ್ಧ ಹೊಸದಾಗಿ ದಾಳಿ ಆರಂಭಿಸುವ ಬಗ್ಗೆ ಟ್ರಂಪ್ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. “ಇದು ದೊಡ್ಡ ಪ್ರಮಾಣದ ಕಾರ್ಯಾಚರಣೆಯಾಗಿರಲಿದೆ” ಎಂದು ಅಮೆರಿಕದ ಅಧಿಕಾರಿಯೊಬ್ಬರು ಸಿಎನ್‌ಎನ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಇರಾನ್‌ನ ರಾಡಾರ್‌ಗಳು, ಕ್ಷಿಪಣಿ ಉಡಾವಣಾ ವ್ಯವಸ್ಥೆಗಳು ಮತ್ತು ಇತರ ಸೇನಾ ನೆಲೆಗಳ ಮೇಲಿನ ಸೀಮಿತ ದಾಳಿಗೆ ಮಾತ್ರವಲ್ಲದೆ, ಅದಕ್ಕಿಂತ ವ್ಯಾಪಕವಾದ ಕಾರ್ಯಾಚರಣೆಗೂ ಅಮೆರಿಕದ ಸೇನಾ ನಾಯಕರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ಮತ್ತು ಪೆಂಟಗನ್ ಇರಾನ್‌ನ ಇಂಧನ ಮೂಲಸೌಕರ್ಯ, ಸೇನಾ ನೆಲೆಗಳು ಹಾಗೂ ಪರಮಾಣು ಸೌಲಭ್ಯಗಳನ್ನೂ ಒಳಗೊಂಡ ಸಂಭಾವ್ಯ ಗುರಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿವೆ ಎಂದು ವರದಿ ಹೇಳಿದೆ.

ಯೋಜನೆಗಳು ಸಿದ್ಧವಾಗಿವೆ. ಟ್ರಂಪ್ ಅನುಮತಿಗಾಗಿ ಕಾಯಲಾಗುತ್ತಿದೆ. ಮಧ್ಯಂತರ ಚುನಾವಣೆಗಳ ಬಳಿಕವೂ ಕಾರ್ಯಾಚರಣೆ ನಡೆಯಬಹುದು ಎಂದು ಹೇಳಲಾಗಿದೆ.

ಮಧ್ಯಂತರ ಚುನಾವಣೆ ಬಳಿಕ ದಾಳಿ ಸಾಧ್ಯತೆ?

ಇರಾನ್ ಮೇಲೆ ಹೊಸ ದಾಳಿ ನಡೆಸುವ ನಿರ್ಧಾರ ಈ ವರ್ಷದ ಅಂತ್ಯದೊಳಗೆ ಹೊರಬೀಳಬಹುದು ಎಂದು ಸೇನಾ ಯೋಜನೆಗಳ ಬಗ್ಗೆ ತಿಳಿದಿರುವ ಹಾಲಿ ಮತ್ತು ಮಾಜಿ ಅಮೆರಿಕದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಮಧ್ಯಂತರ ಚುನಾವಣೆಗಳು ಮುಗಿದ ಬಳಿಕ ದಾಳಿ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಆದರೆ, ಈ ಹಿಂದೆ ಟ್ರಂಪ್ ಕೆಲವು ಸೇನಾ ಕಾರ್ಯಾಚರಣೆಗಳಿಗೆ ಒಲವು ತೋರಿದ್ದರೂ, ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಉದಾಹರಣೆಗಳಿವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

“ಅಮೆರಿಕದ ರಕ್ಷಣಾ ಇಲಾಖೆ ಯೋಜನೆಗಳನ್ನು ರೂಪಿಸುವ ಸಂಸ್ಥೆಯಾಗಿದೆ. ಅಧ್ಯಕ್ಷರು ಆದೇಶಿಸುವ ಸೇನಾ ಆಯ್ಕೆಗಳನ್ನು ಸಿದ್ಧಪಡಿಸಿ ಜಾರಿಗೊಳಿಸುವುದು ಅದರ ಕರ್ತವ್ಯ” ಎಂದು ಪೆಂಟಗನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣೆಗೆ ಮುನ್ನ ಜಂಟಿ ದಾಳಿಗೆ ಇಸ್ರೇಲ್ ಒತ್ತಾಯ?

ಇತ್ತ ಇರಾನ್ ಮೇಲೆ ಮತ್ತೊಂದು ಸುತ್ತಿನ ದಾಳಿ ನಡೆಸುವ ಸಾಧ್ಯತೆಗೆ ಇಸ್ರೇಲ್ ಸಿದ್ಧತೆ ನಡೆಸುತ್ತಿದ್ದು, ಕಾರ್ಯಾಚರಣೆಗೆ ಅಮೆರಿಕದ ಬೆಂಬಲವನ್ನೂ ಕೋರಿತ್ತು ಎಂದು ಸಿಎನ್‌ಎನ್ ವರದಿ ಮಾಡಿದೆ. “ಚುನಾವಣೆಗೂ ಮುನ್ನ ಇರಾನ್ ಮೇಲೆ ಜಂಟಿ ದಾಳಿ ನಡೆಸಲು ನೆತನ್ಯಾಹು ಬಯಸಿದ್ದರು. ಟ್ರಂಪ್ ಅವರನ್ನು ಒಪ್ಪಿಸಲು ಪ್ರಯತ್ನಿಸಿದ್ದರು. ಆದರೆ, ಟ್ರಂಪ್ ಅನುಮತಿ ನೀಡಲಿಲ್ಲ” ಎಂದು ಇಸ್ರೇಲ್‌ನ ಭದ್ರತಾ ಮೂಲವೊಂದು ತಿಳಿಸಿದೆ. ಆದರೆ, ಇಸ್ರೇಲ್ ಪ್ರಧಾನಿ ಕಚೇರಿ ಈ ಆರೋಪವನ್ನು ತಳ್ಳಿಹಾಕಿದ್ದು, ಇದೊಂದು “ಸುಳ್ಳು ಸುದ್ದಿ” ಎಂದು ಹೇಳಿದೆ.

ಇಸ್ರೇಲ್ ಸೇನಾ ಮುಖ್ಯಸ್ಥ ಐಯಾಲ್ ಜಮೀರ್ ಅವರು ಅಮೆರಿಕದ ಜಂಟಿ ಸೇನಾ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ಡ್ಯಾನ್ ಕೇನ್ ಅವರಿಗೆ ದಾಳಿಯಿಂದ ಇಸ್ರೇಲ್‌ನ ಚುನಾವಣಾ ಪ್ರಕ್ರಿಯೆಗೆ ಹಾನಿಯಾಗಬಹುದು ಮತ್ತು ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದೇ ಟ್ರಂಪ್ ಹಿಂದೆ ಸರಿಯಲು ಒಂದು ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಟ್ರಂಪ್ ಸೇರಿದಂತೆ ಅಮೆರಿಕದ ಹಿರಿಯ ಅಧಿಕಾರಿಗಳು ಹೆಚ್ಚುವರಿ ದಾಳಿಗಳನ್ನು ತಡೆಹಿಡಿಯುವಂತೆ ಇಸ್ರೇಲ್‌ಗೆ ಸೂಚಿಸಿದ್ದರು. ಆದರೆ, ಮುಂದಿನ ದಿನಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಿರಲಿಲ್ಲ ಎನ್ನಲಾಗಿದೆ. ಇಸ್ರೇಲ್ ತಕ್ಷಣದ ದಾಳಿ ಯೋಜನೆಯನ್ನು ಮುಂದೂಡಿದ್ದರೂ, ಅಮೆರಿಕದೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾಚರಣೆ ನಡೆಸುವ ಸಾಧ್ಯತೆಗಾಗಿ ಸಿದ್ಧತೆ ಮುಂದುವರಿಸಿದೆ ಎಂದು ವರದಿ ತಿಳಿಸಿದೆ.

ಕ್ಷಿಪಣಿ ರಕ್ಷಣೆಗೆ ಅಮೆರಿಕದ ನೆರವು ಅಗತ್ಯ

ಇರಾನ್ ಮತ್ತು ಹೌತಿಗಳ ಸಂಭಾವ್ಯ ಪ್ರತಿದಾಳಿಯನ್ನು ಎದುರಿಸಲು ಅಮೆರಿಕದ ನೆರವು ಅಗತ್ಯವಿರುವುದೂ ಇಸ್ರೇಲ್ ದಾಳಿ ಮುಂದೂಡಲು ಕಾರಣವಾಗಿರಬಹುದು. ಯುದ್ಧದ ಸಂದರ್ಭದಲ್ಲಿ ಇಸ್ರೇಲ್‌ನ ರಕ್ಷಣಾತ್ಮಕ ಕ್ಷಿಪಣಿಗಳ ಸಂಗ್ರಹದ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿ, ಸಂಘರ್ಷ ಮತ್ತೆ ತೀವ್ರಗೊಂಡರೆ ಅಮೆರಿಕದ ನೆರವು ಇಸ್ರೇಲ್‌ಗೆ ನಿರ್ಣಾಯಕವಾಗಬಹುದು ಎಂದು ಮೂಲವೊಂದು ತಿಳಿಸಿದೆ.

ಇದೇ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ವಾರ ನಡೆದ ಸೇನಾ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಇರಾನ್ ಆಡಳಿತವನ್ನು ಉರುಳಿಸುವುದು ಸೇನೆ, ಮೊಸಾದ್ ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ ನೀಡಿರುವ ಸೂಚನೆ ಎಂದು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಸರ್ಕಾರವೇ ತನ್ನ ಮತದಾರರ ಆಯ್ಕೆ ಮಾಡುತ್ತಿದೆ, ಜ್ಞಾನೇಶ್ ಕುಮಾರ್ ಕೆಳಗಿಳಿಯಬೇಕು': ಕಾಂಗ್ರೆಸ್ ನೇತೃತ್ವದ INDIA ಬಣದ ರ‍್ಯಾಲಿಗೆ CJP ಬೆಂಬಲ

Namma Metro ಪಿಂಕ್ ಲೈನ್​​ ಮೇಲ್ಸೇತುವೆ ಎಲಿವೇಟೆಡ್ ಮಾರ್ಗಕ್ಕೆ CMRS ಗ್ರೀನ್ ಸಿಗ್ನಲ್

ಕರ್ನಾಟಕದಲ್ಲಿ 'ಶೂನ್ಯ'; ಬ್ಯಾಲೆಟ್ ಪೇಪರ್‌ನಲ್ಲಿ ನಡೆದ 28 MLC ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆಷ್ಟು? ಪ್ರಧಾನಿ ಮೋದಿ ಲೇವಡಿ

‘ರಾವಣ ಸಂಪೂರ್ಣ ಕೆಟ್ಟವನಲ್ಲ'; ಸಾಯಿ ಪಲ್ಲವಿ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ

ವೃತ್ತಿಜೀವನಕ್ಕೆ ತಂದೆ ಯಾವುದೇ ಸಹಾಯ ಮಾಡಿಲ್ಲ; ಸಿಂಗಲ್ ಮದರ್ ಜತೆ ವಾಸಿಸುತ್ತಿದ್ದೇನೆ: ಸೈಫ್ ವಿರುದ್ಧ ಸಿಡಿದೆದ್ದ ಸಾರಾ ಅಲಿ ಖಾನ್