ಕಠ್ಮಂಡು: ನೇಪಾಳ ಮತ್ತು ಚೀನಾ ಗಡಿಭಾಗದಲ್ಲಿ ಸಂಭವಿಸಿದ ಆಕಸ್ಮಿಕ ಮಹಾ ಪ್ರವಾಹದಿಂದಾಗಿ (Flash Floods) ಮೃತಪಟ್ಟವರ ಒಟ್ಟು ಸಂಖ್ಯೆ 1,003 ಕ್ಕೆ ಏರಿಕೆಯಾಗಿದೆ.
ಇಂದು ರಕ್ಷಣಾ ಕಾರ್ಯಾಚರಣೆಯು 7ನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ತೀರಾ ಗಂಭೀರವಾಗಿದೆ. ಮೃತರ ಪೈಕಿ ನೇಪಾಳವೊಂದರಲ್ಲೇ 987 ಶವಗಳು ಪತ್ತೆಯಾಗಿದ್ದು, ಚೀನಾದ ಟಿಬೆಟ್ ಪ್ರಾಂತ್ಯದಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಸದ್ಯ ಸಿಗುತ್ತಿರುವ ವರದಿಗಳ ಪ್ರಕಾರ, ಇಡೀ ದುರಂತ ಪೀಡಿತ ಪ್ರದೇಶದಲ್ಲಿ 4,462 ಜನರು ನಾಪತ್ತೆಯಾಗಿದ್ದಾರೆ. ಇದರಲ್ಲಿ ನೇಪಾಳದಲ್ಲಿ 3,916 ಜನರು ಮತ್ತು ಚೀನಾದಲ್ಲಿ 546 ಜನರು ಸೇರಿದ್ದಾರೆ. ರಕ್ಷಣಾ ಪಡೆಗಳು ನಾಪತ್ತೆಯಾದವರಿಗಾಗಿ ಹಗಲಿರುಳು ಹುಡುಕಾಟ ನಡೆಸುತ್ತಿವೆ.
ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಹಾಗೂ ನಿರ್ವಹಣಾ ಪ್ರಾಧಿಕಾರದ (NDRRMA) ಇತ್ತೀಚಿನ ಮಾಹಿತಿ ಪ್ರಕಾರ, 927 ಮೃತದೇಹಗಳನ್ನು ಸಂರಕ್ಷಿಸಲಾಗಿದ್ದು, ಗುರುತು ಪತ್ತೆಯಾದ ಬಳಿಕ 51 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇನ್ನೂ 726 ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಚಿಟ್ವಾನ್‌ನಲ್ಲಿ 321, ನವಲ್ಪರಾಸಿ ಪೂರ್ವದಲ್ಲಿ 216, ನವಲ್ಪರಾಸಿ ಪಶ್ಚಿಮದಲ್ಲಿ 170 ಹಾಗೂ ನುವಾಕೋಟ್‌ನಲ್ಲಿ 95 ಮೃತದೇಹಗಳು ಪತ್ತೆಯಾಗಿವೆ. ಗೋರಖಾದಲ್ಲಿ 65, ಧಾದಿಂಗ್‌ನಲ್ಲಿ 55, ತನಹುನ್‌ನಲ್ಲಿ 38 ಹಾಗೂ ರಸುವಾದಲ್ಲಿ 27 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಈ ಪ್ರವಾಹದಿಂದ ಒಟ್ಟು ಎಂಟು ಜಿಲ್ಲೆಗಳು ಬಾಧಿತವಾಗಿವೆ. ಗಾಯಗೊಂಡ 279 ಮಂದಿಯಲ್ಲಿ 168 ಮಂದಿ ಚಿಕಿತ್ಸೆ ಪಡೆದು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಹಾಗೂ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಚೀನಾದಲ್ಲಿ 546 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಇದರಿಂದ ನೇಪಾಳ ಮತ್ತು ಟಿಬೆಟ್ ಸೇರಿ ಒಟ್ಟಾರೆ ನಾಪತ್ತೆಯಾದವರ ಸಂಖ್ಯೆ 4,462ಕ್ಕೆ ಏರಿಕೆಯಾಗಿದೆ.
ನೇಪಾಳದಲ್ಲಿ ನಾಪತ್ತೆಯಾಗಿರುವವರ ಪೈಕಿ 30ಕ್ಕೂ ಹೆಚ್ಚು ದೇಶಗಳ 583 ವಿದೇಶಿಯರು ಇದ್ದಾರೆ. ಚೀನಾದಲ್ಲಿ 23 ದೇಶಗಳ 261 ವಿದೇಶಿಯರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ವಿದೇಶಿಯರಲ್ಲಿ ಭಾರತೀಯರ ಸಂಖ್ಯೆಯೂ ಹೆಚ್ಚಾಗಿದೆ. ನೇಪಾಳದಲ್ಲಿ 275 ಭಾರತೀಯರು ಹಾಗೂ ಭಾರತೀಯ ಮೂಲದ 128 ಮಂದಿ ನಾಪತ್ತೆಯಾಗಿದ್ದಾರೆ ಎಂದು ನವದೆಹಲಿ ತಿಳಿಸಿದೆ.
ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಾರ, 85 ಅಮೆರಿಕನ್ನರು ನಾಪತ್ತೆಯಾಗಿದ್ದಾರೆ. ಇದಲ್ಲದೆ 62 ಉಕ್ರೇನಿಯನ್ನರು, 51 ಮಲೇಷ್ಯನ್ನರು, 42 ಆಸ್ಟ್ರೇಲಿಯನ್ನರು ಹಾಗೂ 33 ಬ್ರಿಟಿಷರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
11 ಸಾವಿರಕ್ಕೂ ಹೆಚ್ಚು ಮಂದಿ ರಕ್ಷಣೆ
ನೇಪಾಳದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಂದ ಇದುವರೆಗೆ 11 ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೇಪಾಳ ಸೇನೆ ಸೇರಿದಂತೆ 22 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
NDRRMA ವಕ್ತಾರ ಶಾಂತಿ ಮಹತ್ ಪ್ರಕಾರ, ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಕನಿಷ್ಠ 16 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಪ್ರವಾಹದಿಂದ ಸ್ಥಳಾಂತರಗೊಂಡ 2,970 ಮಂದಿಗೆ ವಿವಿಧ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಜಲವಿದ್ಯುತ್ ಯೋಜನೆಗಳಲ್ಲಿ 900 ಕಾರ್ಮಿಕರು ನಾಪತ್ತೆ
ನೇಪಾಳದ ರಸುವಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಪ್ರವಾಹದಿಂದ ಹಾನಿಗೊಳಗಾದ 12 ಜಲವಿದ್ಯುತ್ ಯೋಜನೆಗಳಲ್ಲಿ ಕನಿಷ್ಠ 900 ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ವಿದ್ಯುತ್ ಕಂಪನಿಗಳನ್ನು ಪ್ರತಿನಿಧಿಸುವ ಖಾಸಗಿ ವಲಯದ ಸಂಘಟನೆ ತಿಳಿಸಿದೆ.
ನಾಪತ್ತೆಯಾದವರಲ್ಲಿ ಸುಮಾರು 500 ಮಂದಿ ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆಯಿದೆ. ಕೆಲವರಿಗೆ ಆಮ್ಲಜನಕ ಲಭ್ಯವಿರುವ ಸಾಧ್ಯತೆ ಇದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ. ಆದರೆ, ದಿನಗಳು ಕಳೆದಂತೆ ಬದುಕುಳಿದವರನ್ನು ಪತ್ತೆಹಚ್ಚುವ ಸಾಧ್ಯತೆ ಕ್ಷೀಣಿಸುತ್ತಿದೆ ಎಂದು ಮತ್ತಷ್ಟು ತಜ್ಞರು ಎಚ್ಚರಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿರುವ ಸಂದರ್ಭದಲ್ಲಿ ಮಣ್ಣಿನಿಂದ ತುಂಬಿದ್ದ ಮೂರು ಸುರಂಗಗಳಿಂದ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ನೇಪಾಳ ಸೇನೆ ತಿಳಿಸಿದೆ.
ವಿಪತ್ತು ಸಂಭವಿಸಿ ಸುಮಾರು ಒಂದು ವಾರ ಕಳೆದಿದ್ದು, ಸುಮಾರು 65 ಸಾವಿರ ಮಂದಿಗೆ ತುರ್ತು ಕುಡಿಯುವ ನೀರು, ನೈರ್ಮಲ್ಯ ಹಾಗೂ ಸ್ವಚ್ಛತಾ ಸಾಮಗ್ರಿಗಳ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ವಿಶ್ವಸಂಸ್ಥೆಯ ವಕ್ತಾರ ಸ್ಟೆಫಾನ್ ಡುಜಾರಿಕ್ ಅವರು ಮಾತನಾಡಿ, 22 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ರಕ್ಷಣಾ ಸೇವೆಗಳ ಅಗತ್ಯವಿದೆ. ಐದು ವರ್ಷದೊಳಗಿನ ಸುಮಾರು 2,600 ಮಕ್ಕಳಿಗೆ ತೀವ್ರ ಅಪೌಷ್ಟಿಕತೆಗೆ ಚಿಕಿತ್ಸೆ ಬೇಕಾಗಬಹುದು. ಸುಮಾರು 10,500 ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶದ ನೆರವು ಅಗತ್ಯವಿದೆ ಎಂದು ಹೇಳಿದ್ದಾರೆ.
ಪ್ರವಾಹದಿಂದ ಹಲವು ಶಾಲೆಗಳು ಹಾನಿಗೊಳಗಾಗಿದ್ದು ಅಥವಾ ಸಂಪೂರ್ಣ ನಾಶವಾಗಿವೆ. ಕೆಲವು ಶಾಲೆಗಳನ್ನು ಸ್ಥಳಾಂತರಗೊಂಡವರಿಗೆ ಆಶ್ರಯ ಕೇಂದ್ರಗಳಾಗಿ ಬಳಸಲಾಗುತ್ತಿದೆ. 10 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಮಾನಸಿಕ ನೆರವು ಅಗತ್ಯವಿದೆ. 107 ಮಕ್ಕಳು ತಮ್ಮ ಪೋಷಕರು ಅಥವಾ ಆರೈಕೆದಾರರಿಂದ ಬೇರ್ಪಟ್ಟಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಮತ್ತೆ ಪ್ರವಾಹದ ಎಚ್ಚರಿಕೆ
ಏತನ್ಮಧ್ಯೆ ನೇಪಾಳದ ಪೂರ್ವ, ಮಧ್ಯ ಹಾಗೂ ಪಶ್ಚಿಮ ಭಾಗಗಳ ಹಲವು ಜಿಲ್ಲೆಗಳಲ್ಲಿ ಮತ್ತೆ ಪ್ರವಾಹದ ಅಪಾಯವಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಂಗಳವಾರ ಹೊಸ ಎಚ್ಚರಿಕೆ ನೀಡಿದ್ದಾರೆ.
ನದಿಗಳ ಸಮೀಪ ವಾಸಿಸುವ ಜನರು ಎಚ್ಚರಿಕೆಯಿಂದಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ನುವಾಕೋಟ್ ಮತ್ತು ರಸುವಾ ಜಿಲ್ಲೆಗಳಲ್ಲಿ ಹಠಾತ್ ಪ್ರವಾಹದ ಹೆಚ್ಚಿನ ಸಾಧ್ಯತೆಯಿದ್ದು, ಸಣ್ಣ ನದಿಗಳು ಹಾಗೂ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಎನ್‌ಡಿಆರ್‌ಆರ್‌ಎಂಎ ಎಚ್ಚರಿಸಿದೆ.