New York’s Times Squareನಲ್ಲಿ ರಕ್ತಪಾತ: ದಾರಿಹೋಕರಿಗೆ ಚೂರಿ ಇರಿತ, ಆತಂಕ ಸೃಷ್ಟಿಸಿದ್ದ ಮಹಿಳೆ ಪೊಲೀಸರ ಗುಂಡಿಗೆ ಬಲಿ..!

ದಾಳಿ ನಡೆಸಿದ ಮಹಿಳೆಯನ್ನು ಕ್ವೀನ್ಸ್ ನಿವಾಸಿ, 49 ವರ್ಷದ ಪಮೇಲಾ ಸಿಸ್ನೆರೋಸ್ ಎಂದು ಗುರುತಿಸಲಾಗಿದೆ. ಆಕೆಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದವು ಎಂದು ತಿಳಿದುಬಂದಿದೆ.
New York police
ನ್ಯೂಯಾರ್ಕ್ ಪೊಲೀಸ್
Updated on

ನ್ಯೂಯಾರ್ಕ್: ಪ್ರವಾಸಿಗರಿಂದ ಸದಾ ಗಿಜಿಗುಡುವ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಚಾಕು ಹಿಡಿದ ಮಹಿಳೆಯೊಬ್ಬರು ಇಬ್ಬರ ಮೇಲೆ ದಾಳಿ ನಡೆಸಿ, ಆತಂಕ ಸೃಷ್ಟಿಸಿದ್ದ ಘಟನೆಯೊಂದು ಸೋಮವಾರ ನಡೆದಿದೆ.

ಇಬ್ಬರು ದಾರಿಹೋಕರಿಗೆ ಮಹಿಳೆ ಚೂರಿ ಇರಿದಿದ್ದು ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ನಡುವೆ ದಾಳಿ ನಡೆಸಿದ ಮಹಿಳೆಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಆರೋಪಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಮೇಯರ್ ಝೊಹ್ರಾನ್ ಮಮ್ದಾನಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಗಾಯಗೊಂಡಿದ್ದ ಎರಡನೇ ವ್ಯಕ್ತಿ ಆಸ್ಪತ್ರೆಯಲ್ಲಿ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ದಾಳಿ ನಡೆಸಿದ ಮಹಿಳೆಯನ್ನು ಕ್ವೀನ್ಸ್ ನಿವಾಸಿ, 49 ವರ್ಷದ ಪಮೇಲಾ ಸಿಸ್ನೆರೋಸ್ ಎಂದು ಗುರುತಿಸಲಾಗಿದೆ. ಆಕೆಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದವು ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಜನನಿಬಿಡ ಪ್ರದೇಶದಲ್ಲಿ ಆಕೆ ಪ್ರಸಿದ್ಧ ಸೂಪರ್‌ಮಾರ್ಕೆಟ್‌ ಸರಪಳಿಯ ಲೋಗೋ ಹೊಂದಿದ್ದ ಚೀಲದಿಂದ ಎರಡು ದೊಡ್ಡ ಚಾಕುಗಳನ್ನು ಹೊರತೆಗೆದು ದಾರಿಹೋಕರಿಗೆ ಬೆದರಿಕೆ ಹಾಕಿದ್ದಾಳೆ ಎಂದು ನ್ಯೂಯಾರ್ಕ್ ಪೊಲೀಸ್ ಆಯುಕ್ತೆ ಜೆಸ್ಸಿಕಾ ಟಿಶ್ ತಿಳಿಸಿದ್ದಾರೆ.

ಬಳಿಕ 68 ವರ್ಷದ ವ್ಯಕ್ತಿಯೊಬ್ಬರ ಬಳಿ ತೆರಳಿದ ಆಕೆ ಅವರ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾಳೆ. ಸುಮಾರು 20 ಸೆಕೆಂಡ್‌ಗಳ ಬಳಿಕ 32 ವರ್ಷದ ಮಹಿಳೆಯೊಬ್ಬರ ಮೇಲೂ ದಾಳಿ ನಡೆಸಿ ಹೊಟ್ಟೆಗೆ ಇರಿದಿದ್ದಾಳೆ. ಗಾಯಗೊಂಡ ಮಹಿಳೆ ಬಳಿಕ ಮೃತಪಟ್ಟಿದ್ದಾರೆ.

ಮೃತರು ಹಾಗೂ ಗಾಯಾಳುಗಳ ಕುಟುಂಬಗಳಿಗೆ ಮಾಹಿತಿ ನೀಡುವವರೆಗೆ ಅವರ ಗುರುತುಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಕೂಡಲೇ ಧಾವಿಸಿ, ಚಾಕುಗಳನ್ನು ಕೆಳಗಿಡುವಂತೆ ಮಹಿಳೆಯನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಸುಮಾರು ನಾಲ್ಕು ನಿಮಿಷಗಳ ಕಾಲ ಪೊಲೀಸರು ಆಕೆಯೊಂದಿಗೆ ಮಾತುಕತೆ ನಡೆಸಿ, ಹಲವು ಬಾರಿ ಚಾಕುಗಳನ್ನು ಕೆಳಗಿಡುವಂತೆ ಸೂಚಿಸಿದರೂ ಆಕೆ ನಿರಾಕರಿಸಿದ್ದಾಳೆ ಎಂದು ಪೊಲೀಸ್ ಆಯುಕ್ತೆ ತಿಳಿಸಿದ್ದಾರೆ.

ಈ ವೇಳೆ ಆಕೆ ಪೊಲೀಸರಿಗೆ, “ನಾನು ಯಾವುದನ್ನೂ ಕೆಳಗಿಡುವುದಿಲ್ಲ. ನಿಮ್ಮಿಬ್ಬರನ್ನೂ ಕೊಲ್ಲುವುದೇ ನನಗೆ ಇಷ್ಟ” ಎಂದು ಹೇಳಿದ್ದಾಳೆ ಎಂದು ಟಿಶ್ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಯೊಬ್ಬರು ಸ್ಥಳೀಯ ಸುದ್ದಿ ವಾಹಿನಿ ಪಿಕ್ಸ್11ಗೆ ನೀಡಿದ ಮಾಹಿತಿ ಪ್ರಕಾರ, ಮಹಿಳೆಯ ಕೈಯಲ್ಲಿ ಎರಡು ಚಾಕುಗಳಿದ್ದವು. ಪೊಲೀಸರು ಮೊದಲು ವಿದ್ಯುತ್ ಆಘಾತ ನೀಡುವ ಸಾಧನ ಬಳಸಿ ಆಕೆಯನ್ನು ನಿಯಂತ್ರಿಸಲು ಯತ್ನಿಸಿದರೂ, ಆಕೆ ಪೊಲೀಸರತ್ತ ಧಾವಿಸಿದ್ದಳು. ಬಳಿಕ ಪೊಲೀಸರು ಎರಡು ಬಾರಿ ಗುಂಡು ಹಾರಿಸಿದ್ದಾರೆ.

ಸ್ಟನ್ ಗನ್ ಬಳಸಿ ನಿಯಂತ್ರಿಸುವ ಪ್ರಯತ್ನ ವಿಫಲವಾದ ನಂತರ ಪೊಲೀಸರು ತಮ್ಮ ಕೈಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಇಲಾಖೆ ದೃಢಪಡಿಸಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು.

ಈ ದಾಳಿ ಭಯೋತ್ಪಾದನೆಗೆ ಸಂಬಂಧಿಸಿದ್ದಲ್ಲ ಎಂದು ಪೊಲೀಸರು ತಿಳಿಸಿದ್ದು, ಟೈಮ್ಸ್ ಸ್ಕ್ವೇರ್‌ನಂತಹ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಅತ್ಯಂತ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪೊಲೀಸ್ ಆಯುಕ್ತೆ ತಿಳಿಸಿದ್ದಾರೆ.

ಘಟನೆ ಬಳಿಕ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರಿ ಪ್ರಮಾಣದ ತುರ್ತು ಸೇವಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ರಸ್ತೆಯೊಂದರಲ್ಲಿ ಕಂಡುಬಂದ ರಕ್ತದ ಕಲೆಗಳನ್ನೂ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com