ಕಠ್ಮಂಡು: ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಆಕಸ್ಮಿಕ ಪ್ರವಾಹದ (Flash Floods) ನಂತರ, ಹಾನಿ ತುಂಬಿಸಿಕೊಡುವಂತೆ ಭಾರತ ಸೇರಿದಂತೆ ಯಾವುದೇ ದೇಶದ ಬಳಿ ನಾವು ಆರ್ಥಿಕ ಪರಿಹಾರವನ್ನು ಕೇಳಿಲ್ಲ ಎಂದು ನೇಪಾಳ ಸರ್ಕಾರ ಸ್ಪಷ್ಟಪಡಿಸಿದೆ.
ನೇಪಾಳ ಸರ್ಕಾರವು ಭಾರತ, ಚೀನಾ ಮತ್ತು ಅಮೆರಿಕದಂತಹ ದೊಡ್ಡ ದೇಶಗಳಿಂದ "ಹವಾಮಾನ ಪರಿಹಾರ" (Climate Compensation) ಕೋರಿದೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದ ವರದಿಗಳ ಕುರಿತು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸ್ಪಷ್ಟಪಡಿಸಿದ್ದಾರೆ,
ಎಎನ್‌ಐ ಜೊತೆ ಮಾತನಾಡಿರು ಅವರು, ನಾನಾಗಲಿ, ವಿದೇಶಾಂಗ ಸಚಿವಾಲಯವಾಗಲಿ ಅಥವಾ ನೇಪಾಳ ಸರ್ಕಾರವಾಗಲಿ ಭಾರತ, ಚೀನಾ ಅಥವಾ ಅಮೆರಿಕದಿಂದ ಯಾವುದೇ ರೀತಿಯ ಪರಿಹಾರವನ್ನು ಕೇಳಿಲ್ಲ" ಎಂದು ಖಚಿತಪಡಿಸಿದ್ದಾರೆ. ಈ ಮೂಲಕ ಭಾರತದಿಂದ ಹವಾಮಾನ ಪರಿಹಾರಧನವನ್ನು ನೇಪಾಳ ಕೇಳಿದೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ.
ನಾನಾಗಲೀ ಅಥವಾ ವಿದೇಶಾಂಗ ಸಚಿವಾಲಯದ ಯಾರೇ ಆಗಲಿ, ನೇಪಾಳ ಸರ್ಕಾರದ ಯಾರೇ ಆಗಲಿ ಭಾರತದಿಂದಾಗಲಿ, ಚೀನಾ ಅಥವಾ ಅಮೆರಿಕ ಸೇರಿದಂತೆ ಯಾವುದೇ ದೇಶದಿಂದಾಗಲಿ ಪರಿಹಾರಧನವನ್ನು ಕೇಳಿಲ್ಲ. ನಮ್ಮ ಮನವಿ ಏನೆಂದರೆ, ಈ ದುರಂತವನ್ನು ಹವಾಮಾನ ಬದಲಾವಣೆ ಹಾಗೂ ಅದರ ಪರಿಣಾಮದ ದೃಷ್ಟಿಕೋನದಿಂದ ಜಾಗತಿಕ ಸಮುದಾಯ ನೋಡಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಹಿಮಾಲಯ ಪ್ರದೇಶದ ದೇಶಗಳು ಒಂದೇ ರೀತಿಯ ಪರಿಸರ ವ್ಯವಸ್ಥೆಯನ್ನು ಹಂಚಿಕೊಂಡಿರುವುದನ್ನು ಉಲ್ಲೇಖಿಸಿದ ಅವರು, ರಾಜತಾಂತ್ರಿಕ ಭಿನ್ನಾಭಿಪ್ರಾಯಗಳಿಗಿಂತ ಒಟ್ಟಾಗಿ ಮುನ್ನೆಚ್ಚರಿಕೆ ಮತ್ತು ಸಿದ್ಧತೆ ಕೈಗೊಳ್ಳುವುದು ಅಗತ್ಯ ಎಂದು ಒತ್ತಿ ಹೇಳಿದ್ದಾರೆ.
ಚೀನಾ, ಭಾರತ ಮತ್ತು ನೇಪಾಳ—ಈ ಮೂರು ದೇಶಗಳೂ ಒಂದೇ ರೀತಿಯ ಪರಿಸರ ವ್ಯವಸ್ಥೆಯನ್ನು ಹಂಚಿಕೊಂಡಿವೆ. ಹಿಮಾಲಯದಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ನಾವೆಲ್ಲರೂ ಎದುರಿಸುತ್ತಿದ್ದೇವೆ. ಮೂರು ದೇಶಗಳು ಒಟ್ಟಾಗಿ ಉತ್ತಮವಾಗಿ ಸಿದ್ಧರಾಗಬೇಕು ಎಂಬುದು ನಮ್ಮ ಮನವಿ. ಜಾಗತಿಕ ಸಮುದಾಯವೂ ನೇಪಾಳದಂತಹ ಸಣ್ಣ ರಾಷ್ಟ್ರಗಳಿಗೆ ಬೆಂಬಲ ನೀಡಬೇಕು ಎಂದು ತಿಳಿಸಿದ್ದಾರೆ.
ಹವಾಮಾನ ಬದಲಾವಣೆಯಿಂದ ವಿಶ್ವದಾದ್ಯಂತ ಸಮುದಾಯಗಳ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ಒಂದು ಬಾರಿಯ ದುರಂತ ಅಥವಾ ತಾತ್ಕಾಲಿಕ ನೆರವಿನ ವಿಷಯವಾಗಿ ಮಾತ್ರ ನೋಡಬಾರದು ಎಂದಿದ್ದಾರೆ.
ಇದೇ ವೇಳೆ ಭಾರತವು ತಕ್ಷಣವೇ ಪರಿಹಾರ ಮತ್ತು ರಕ್ಷಣಾ ನೆರವು ನೀಡಿದ್ದಕ್ಕಾಗಿ ಆಳವಾದ ಕೃತಜ್ಞತೆ ವ್ಯಕ್ತಪಡಿಸಿದ ಅವರು, ಹಿಮಾಲಯ ಪ್ರದೇಶ ಎದುರಿಸುತ್ತಿರುವ ಹವಾಮಾನ ಸವಾಲುಗಳನ್ನು ಎದುರಿಸಲು ಪ್ರಾದೇಶಿಕ ಸಹಕಾರ ಅಗತ್ಯವಿದೆ. ನಮ್ಮ ನಾಗರಿಕತೆ, ಪರಂಪರೆ, ಸಂಸ್ಕೃತಿ ಮತ್ತು ಭವಿಷ್ಯವನ್ನು ಒಟ್ಟಾಗಿ ರಕ್ಷಿಸಲು ನಾವು ಸಹಕರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಶೋಧ, ರಕ್ಷಣಾ ಮತ್ತು ಪುನರ್ವಸತಿ ಕಾರ್ಯಾಚರಣೆಗಳು ನಡೆಯುತ್ತಿರುವ ಸಂದರ್ಭದಲ್ಲೇ ನೇಪಾಳ ವಿದೇಶಾಂಗ ಸಚಿವರ ಈ ಸ್ಪಷ್ಟನೆ ಹೊರಬಿದ್ದಿದೆ.
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ನೇಪಾಳಕ್ಕೆ ಮಾನವೀಯ ನೆರವು ನೀಡಿದ ಮೊದಲ ದೇಶಗಳ ಪೈಕಿ ಒಂದಾಗಿದೆ. ತುರ್ತು ರಕ್ಷಣಾ ಸಾಧನಗಳು, ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಬೇಕಾದ ಉಪಕರಣಗಳು, ನೀರು ಹೊರಹಾಕುವ ಪಂಪ್‌ಗಳು ಹಾಗೂ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಭಾರತ ನೇಪಾಳಕ್ಕೆ ಕಳುಹಿಸಿದೆ.
ನೇಪಾಳಕ್ಕೆ ಇನ್ನಷ್ಟು ಯಾವ ರೀತಿಯ ನೆರವು ಬೇಕಾಗಬಹುದು ಎಂಬ ವಿಚಾರದಲ್ಲಿ ಭಾರತ ಸರ್ಕಾರದೊಂದಿಗೆ ಸಂಪರ್ಕವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖನಾಲ್, ದುರಂತ ಸಂಭವಿಸಿದ ತಕ್ಷಣವೇ ಭಾರತದಿಂದ ಸಂಪರ್ಕ ಆರಂಭವಾಗಿತ್ತು ಎಂದು ಹೇಳಿದರು.
ದುರಂತ ಸಂಭವಿಸಿದ ತಕ್ಷಣವೇ ಭಾರತೀಯ ಅಧಿಕಾರಿಗಳಿಂದ ನಮಗೆ ಸಂಪರ್ಕ ದೊರೆಯಿತು. ನೇಪಾಳ ಸರ್ಕಾರಕ್ಕೆ ಅಗತ್ಯವಿರುವ ಯಾವುದೇ ನೆರವು ನೀಡಲು ಅವರು ಸಿದ್ಧರಿರುವುದಾಗಿ ತಿಳಿಸಿದ್ದಾರೆ” ಎಂದರು.
ಭಾರತವು ವೈದ್ಯಕೀಯ ಸಾಮಗ್ರಿಗಳು, ವಿದ್ಯುತ್ ಉತ್ಪಾದಕಗಳು, ಸೌರ ದೀಪಗಳು, ಟೆಂಟ್‌ಗಳು ಹಾಗೂ ನೀರು ಶುದ್ಧೀಕರಣ ಘಟಕಗಳು ಸೇರಿದಂತೆ ಹಲವು ಟನ್‌ಗಳ ಪರಿಹಾರ ಸಾಮಗ್ರಿಗಳನ್ನು ವಿಮಾನದ ಮೂಲಕ ನೇಪಾಳಕ್ಕೆ ಕಳುಹಿಸಿದೆ.
ಆಗಸ್ಟ್ 26ರಂದು ಭಾರತದಿಂದ ಮೊದಲ ಪರಿಹಾರ ವಿಮಾನ ನೇಪಾಳಕ್ಕೆ ಆಗಮಿಸಿದ್ದು, 10 ಟನ್‌ಗಳಷ್ಟು ಸಾಮಗ್ರಿಗಳನ್ನು ಹೊತ್ತೊಯ್ದಿತ್ತು. ಇದರಲ್ಲಿ ತಾತ್ಕಾಲಿಕ ಆಶ್ರಯ ವ್ಯವಸ್ಥೆಗಳು, ಹೊದಿಕೆಗಳು, ಸ್ವಚ್ಛತಾ ಕಿಟ್‌ಗಳು, ಸೌರ ದೀಪಗಳು ಮತ್ತು ಔಷಧಗಳು ಸೇರಿದ್ದವು.
ಆಗಸ್ಟ್ 27ರಂದು ಎರಡನೇ ವಿಮಾನ 37.5 ಟನ್‌ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಹೊತ್ತೊಯ್ದಿತ್ತು. ಟೆಂಟ್‌ಗಳು, ಹೊದಿಕೆಗಳು, ಸ್ವಚ್ಛತಾ ಕಿಟ್‌ಗಳು, ಸೌರ ದೀಪಗಳು, ನೀರು ಹೊರಹಾಕುವ ಪಂಪ್‌ಗಳು, ಅಡುಗೆ ಸಾಮಗ್ರಿಗಳು, ಜನರೇಟರ್‌ಗಳು, ಔಷಧಗಳು ಮತ್ತು ಆಹಾರ ಪದಾರ್ಥಗಳು ಇದರಲ್ಲಿ ಸೇರಿದ್ದವು. ನಂತರ ಮತ್ತೊಂದು 10 ಟನ್‌ಗಳಷ್ಟು ಸಾಮಗ್ರಿಗಳನ್ನು ಕಳುಹಿಸಲಾಯಿತು.
ಬುಧವಾರ ಭಾರತವು ವಿಶೇಷ ರಕ್ಷಣಾ ಉಪಕರಣಗಳೊಂದಿಗೆ 11 ಸದಸ್ಯರ ರಕ್ಷಣಾ ತಂಡ ಹಾಗೂ 5.5 ಟನ್‌ಗಳಷ್ಟು ಅಗತ್ಯ ಔಷಧಗಳನ್ನು ಹೊತ್ತ ಐದನೇ ವಿಮಾನವನ್ನು ನೇಪಾಳಕ್ಕೆ ಕಳುಹಿಸಿತು.
ಭಾರತವು ತಕ್ಷಣದ ಪರಿಹಾರ ಸಾಮಗ್ರಿಗಳು, ರಕ್ಷಣಾ ಉಪಕರಣಗಳು ಹಾಗೂ ವಿಧಿವಿಜ್ಞಾನ ನೆರವನ್ನು ಒದಗಿಸಿದೆ. ಅಗತ್ಯತೆಗಳು ಎದುರಾದಂತೆ ಎರಡೂ ದೇಶಗಳ ನಡುವೆ ನಿರಂತರ ಸಂಪರ್ಕವಿದೆ ನೇಪಾಳ ವಿದೇಶಾಂಗ ಸಚಿವರು ತಿಳಿಸಿದ್ದಾರೆ.
ಅಗತ್ಯತೆ ಎದುರಾದಾಗಲೆಲ್ಲ ನಾವು ಸಂಪರ್ಕಿಸುತ್ತಿದ್ದೇವೆ. ಭಾರತ ಸರ್ಕಾರ ನಮ್ಮ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡಿದೆ. ಮುಂದೆಯೂ ಹೊಸ ಅಗತ್ಯತೆಗಳು ಎದುರಾದರೆ ನಾವು ಸಂಪರ್ಕಿಸುತ್ತೇವೆ ಮತ್ತು ಭಾರತ ನೆರವು ನೀಡಲು ಸಿದ್ಧವಾಗಿದೆ” ಎಂದು ಹೇಳಿದ್ದಾರೆ.
ಏತನ್ಮಧ್ಯೆ, ನೇಪಾಳದ ರಸುವಾ ಪ್ರವಾಹ ದುರಂತದಲ್ಲಿ ಸಾವಿನ ಸಂಖ್ಯೆ 1,259ಕ್ಕೆ ಏರಿಕೆಯಾಗಿದೆ. ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ (NDRRMA) ಪ್ರಕಾರ, ಗುರುವಾರ ಸಂಜೆ 7 ಗಂಟೆಯವರೆಗೆ ಈ ಮಾಹಿತಿ ಲಭ್ಯವಾಗಿದೆ.