ಟೆಹ್ರಾನ್: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಉದ್ವಿಗ್ನತೆ ಮತ್ತಷ್ಟು ತಾರಕಕ್ಕೇರಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಯತ್ನಿಸುತ್ತಿದ್ದ 20ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳ ಮೇಲೆ ಇರಾನ್ ಸೇನೆ ದಾಳಿ ಮಾಡಿದೆ.
ಇದರ ಬೆನ್ನಲ್ಲೇ ಜಲಸಂಧಿಯ ಹೊರಗಿನ ಸಂಚಾರ ನಿರ್ಬಂಧಿತ ವಲಯವನ್ನು (No-go zone) ಇರಾನ್ ವಿಸ್ತರಿಸಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಈ ಬೆಳವಣಿಗೆಯಿಂದಾಗಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದೆ.
ಇರಾನ್ ಹಾರ್ಮುಜ್ ಜಲಸಂಧಿಯ ಸಂಚಾರವನ್ನು ತಡೆಯುತ್ತಿರುವ ಸಂದರ್ಭದಲ್ಲಿ, ಅಮೆರಿಕ ಕೂಡ ಇರಾನ್‌ನ ಬಂದರುಗಳ ವಿರುದ್ಧ ಪ್ರತಿಬಂಧಕ ಕ್ರಮಗಳನ್ನು ಮುಂದುವರಿಸಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 101.21 ಡಾಲರ್‌ಗೆ ವಹಿವಾಟು ಮುಗಿಸಿದೆ.
ಇರಾನ್‌ನ ಕ್ರಾಂತಿಕಾರಿ ರಕ್ಷಣಾ ಪಡೆ ಬುಧವಾರ ಎರಡು ಅಮೆರಿಕದ ಹಡಗುಗಳು, ಎಂಟು ತೈಲ ಸಾಗಣೆ ಹಡಗುಗಳು ಹಾಗೂ ಮಾರ್ಗದ ಮೂಲಕ ಸಾಗಲು ಇರಾನ್‌ನ ಸೂಚನೆಗಳನ್ನು ಪಾಲಿಸದ 10 ಹಡಗುಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿದೆ. ಇರಾನ್‌ನ ಸರ್ಕಾರಿ ಮಾಧ್ಯಮಗಳು ಈ ಮಾಹಿತಿಯನ್ನು ವರದಿ ಮಾಡಿವೆ.
ಗಲ್ಫ್ ಆಫ್ ಓಮನ್ ಮತ್ತು ಗಲ್ಫ್ ಪ್ರದೇಶದಲ್ಲಿನ ಹಲವು ಹಡಗುಗಳು ಈ ಪ್ರದೇಶದಲ್ಲಿ ನಡೆಯುತ್ತಿರುವ ಸೇನಾ ಚಟುವಟಿಕೆಯ ಭಾಗವಾಗಿ ನಿಷ್ಕ್ರಿಯಗೊಳಿಸುವ ಗುಂಡಿನ ದಾಳಿಗೆ ಒಳಗಾಗಿವೆ ಎಂದು ಬ್ರಿಟನ್‌ನ ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ ತಿಳಿಸಿದೆ.
ಹಾರ್ಮುಜ್ ಜಲಸಂಧಿಯ ಸಮುದ್ರದಾಚೆಯ ಭಾಗದಲ್ಲಿರುವ ಗಲ್ಫ್ ಆಫ್ ಓಮನ್ ಹಿಂದೂ ಮಹಾಸಾಗರದೊಂದಿಗೆ ಸಂಪರ್ಕ ಹೊಂದಿದೆ. ಜಗತ್ತಿನ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗ ಸಾಮಾನ್ಯವಾಗಿ ಈ ಪ್ರಮುಖ ಜಲಮಾರ್ಗದ ಮೂಲಕ ಸಾಗುತ್ತದೆ.
ಇರಾನ್‌ನ ಕ್ರಾಂತಿಕಾರಿ ರಕ್ಷಣಾ ಪಡೆ ಇದೇ ಮೊದಲ ಬಾರಿಗೆ ಗಲ್ಫ್ ಆಫ್ ಓಮನ್ ಹಾಗೂ ಅರಬ್ಬೀ ಸಮುದ್ರದ ಕೆಲವು ಭಾಗಗಳನ್ನು ಹೊಸ ‘ನಿಷೇಧಿತ ವಲಯ’ದ ವ್ಯಾಪ್ತಿಗೆ ಸೇರಿಸಿದೆ. ಈ ವಲಯದ ನಿಖರ ಭೌಗೋಳಿಕ ನಿರ್ದೇಶಾಂಕಗಳನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
“ಸಮನ್ವಯವಿಲ್ಲದೆ ಯಾವುದೇ ಹಡಗು ಈ ಪ್ರದೇಶ ಪ್ರವೇಶಿಸಿದರೆ, ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕ್ರಾಂತಿಕಾರಿ ರಕ್ಷಣಾ ಪಡೆಯ ವಕ್ತಾರ ಹೊಸೈನ್ ಮೊಹೆಬಿ ಸರ್ಕಾರಿ ದೂರದರ್ಶನಕ್ಕೆ ತಿಳಿಸಿದ್ದಾರೆ.
ಅಮೆರಿಕದ ಪಡೆಗಳು ಒಂದು ದಿನದ ಹಿಂದೆ 5 ಇರಾನ್‌ನ ತೈಲ ಸಾಗಣೆ ಹಡಗುಗಳನ್ನು ನಾಶಪಡಿಸಿದ್ದಕ್ಕೆ ಪ್ರತಿಯಾಗಿ ಜೋರ್ಡನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೂ ದಾಳಿ ನಡೆಸಿರುವುದಾಗಿ ಇರಾನ್‌ನ ಪಡೆಗಳು ಹೇಳಿವೆ. ಇದಕ್ಕೆ ಪ್ರತಿಯಾಗಿ ಜೋರ್ಡನ್ ಸೇನೆ ತನ್ನತ್ತ ಉಡಾಯಿಸಲಾದ 18 ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಇರಾನ್‌ನ ತೈಲ ಸಾಗಣೆ ಹಡಗುಗಳ ಮೇಲಿನ ದಾಳಿಯನ್ನು ಆ ದೇಶದ ವಿದೇಶಾಂಗ ಸಚಿವಾಲಯ ಖಂಡಿಸಿದ್ದು, ಇದು “ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಬಹಿರಂಗ ಬೆದರಿಕೆ” ಎಂದು ಹೇಳಿದೆ.
ಈ ದಾಳಿಗಳು ಪ್ರದೇಶದಲ್ಲಿನ ಉದ್ವಿಗ್ನತೆಯ ಅಪಾಯವನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ತಿಳಿಸಿದೆ. ಇದೇ ವೇಳೆ, ಈ ಪ್ರದೇಶದಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ನಡೆಸಿದ ದಾಳಿಗಳು ಆತ್ಮರಕ್ಷಣೆಯ ಕ್ರಮ ಎಂದು ಇರಾನ್ ಸಮರ್ಥಿಸಿಕೊಂಡಿದೆ.
ಅಮೆರಿಕದ ಸೇನಾ ಪಡೆಗಳು, ಅಮೆರಿಕದ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡ ಇರಾನ್ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿವೆ. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಅಮೆರಿಕದ ನೌಕೆಯ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ ಎಂದು ತಿಳಿಸಿದೆ.
ಇರಾನ್‌ನ ಕ್ರಾಂತಿಕಾರಿ ರಕ್ಷಣಾ ಪಡೆ, ಅಮೆರಿಕ ತನ್ನ ಕೆಲವು ಷರತ್ತುಗಳನ್ನು ಒಪ್ಪಿಕೊಂಡರೆ ಯುದ್ಧವನ್ನು ಅಂತ್ಯಗೊಳಿಸಬಹುದು ಎಂದು ಹೇಳಿದೆ. ಲೆಬನಾನ್ ಮತ್ತು ಯೆಮೆನ್‌ನಲ್ಲಿನ ಯುದ್ಧಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನೂ ಇರಾನ್ ಮುಂದಿಟ್ಟಿದೆ.
ಅಮೆರಿಕವು ಮರುದಾಳಿ ನಡೆಸುವ ಬೆದರಿಕೆಗಳನ್ನು ಕೈಬಿಡಬೇಕು, ಇಸ್ರೇಲ್ ಸೇನೆಯನ್ನು ಲೆಬನಾನ್‌ನಿಂದ ಹಿಂಪಡೆಯಬೇಕು, ಯೆಮೆನ್ ಮೇಲಿನ ನಿರ್ಬಂಧವನ್ನು ಕೊನೆಗೊಳಿಸಬೇಕು, ಇರಾನ್‌ನ 24 ಬಿಲಿಯನ್ ಡಾಲರ್‌ನಷ್ಟು ಸ್ಥಗಿತಗೊಂಡಿರುವ ಆಸ್ತಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ತನ್ನ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮೊಹೆಬಿ ಹೇಳಿದ್ದಾರೆ.
ಏತನ್ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆ ಮುಗಿದ ತಕ್ಷಣ ಸಂಘರ್ಷ ಅಂತ್ಯಗೊಳ್ಳಲಿದೆ ಎಂದು ಬುಧವಾರ ಹೇಳಿದ್ದಾರೆ.
ಇರಾನ್ “ಇನ್ನು ಹೆಚ್ಚು ಕಾಲ ತಡೆದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ ಅವರು, ಅಮೆರಿಕದ ಚುನಾವಣೆಯ ಮೇಲೆ ಪ್ರಭಾವ ಬೀರುವ ಪ್ರಯತ್ನವನ್ನು ಇರಾನ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಆದರೆ, ಅಮೆರಿಕದ ಉನ್ನತ ಅಧಿಕಾರಿಗಳು ಖಾಸಗಿಯಾಗಿ ಈ ಯುದ್ಧ ಟ್ರಂಪ್ ಅವರ ಅಧಿಕಾರಾವಧಿಯ ಉಳಿದ ಎರಡು ವರ್ಷಗಳವರೆಗೂ ಮುಂದುವರಿಯುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಈ ನಡುವೆ, ಇರಾನ್‌ನ ಪರಮಾಣು ಚಟುವಟಿಕೆಗಳ ವಿಚಾರದಲ್ಲಿ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಆಡಳಿತ ಮಂಡಳಿ ಬುಧವಾರ ಮಹತ್ವದ ನಿರ್ಣಯ ಕೈಗೊಂಡಿದೆ. ಪರಮಾಣು ಒಪ್ಪಂದದ ನಿಯಮಗಳನ್ನು ಪಾಲಿಸದಿರುವ ಆರೋಪದ ಹಿನ್ನೆಲೆಯಲ್ಲಿ ಇರಾನ್ ವಿರುದ್ಧದ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಒಪ್ಪಿಸಲು ಮಂಡಳಿ ಮತ ಚಲಾಯಿಸಿದೆ. ನಿರ್ಣಯವು 23-3 ಮತಗಳಿಂದ ಅಂಗೀಕಾರಗೊಂಡಿದ್ದು, ಎಂಟು ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ. ರಷ್ಯಾ, ಚೀನಾ ಮತ್ತು ನೈಜರ್ ನಿರ್ಣಯದ ವಿರುದ್ಧ ಮತ ಚಲಾಯಿಸಿವೆ.
ಅಮೆರಿಕದ ಒತ್ತಡದಿಂದ ಈ ನಿರ್ಣಯ ಅಂಗೀಕಾರವಾಗಿದೆ ಎಂದು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯಲ್ಲಿನ ಇರಾನ್ ಪ್ರತಿನಿಧಿ ಆರೋಪಿಸಿದ್ದಾರೆ. ಈ ನಿರ್ಣಯಕ್ಕೆ ಯಾವುದೇ ಆಧಾರವಿಲ್ಲ ಮತ್ತು ಇದರಿಂದ ಯಾವುದೇ ಫಲಿತಾಂಶ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಇರಾನ್ ಸರ್ಕಾರ ಶೀಘ್ರದಲ್ಲೇ ಕುಸಿಯಲಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪುನರುಚ್ಚರಿಸಿದ್ದಾರೆ.
ಇರಾನ್‌ನ “ಭಯೋತ್ಪಾದಕ ಆಡಳಿತವನ್ನು ಕೆಳಗಿಳಿಸುವುದು” ಮುಖ್ಯ ಗುರಿಯಾಗಿದ್ದು, ಅದಕ್ಕೆ ತಾವು ಬಹಳ ಸಮೀಪದಲ್ಲಿದ್ದೇವೆ ಎಂದು ಅವರು ದಕ್ಷಿಣ ಸಿರಿಯಾದಲ್ಲಿನ ಸೇನಾ ಪಡೆಗಳನ್ನು ಭೇಟಿ ಮಾಡಿದ ವೇಳೆ ಹೇಳಿದ್ದಾರೆ.
ಮಂಗಳವಾರ ಅಮೆರಿಕದ ಪಡೆಗಳು ಐದು ಇರಾನ್‌ನ ತೈಲ ಸಾಗಣೆ ಹಡಗುಗಳನ್ನು ನಾಶಪಡಿಸಿದ ಬಳಿಕ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಹಡಗುಗಳ ಸಿಬ್ಬಂದಿಗೆ ಹಡಗು ತೊರೆಯುವಂತೆ ಸೂಚಿಸಿದ ಬಳಿಕವೇ ಅವುಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೇನೆ ಹೇಳಿದೆ.
ಇರಾನ್ ಅಮೆರಿಕದ ನೌಕಾಪಡೆಗಳ ಮೇಲೆ ದಾಳಿ ನಡೆಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಪ್ರತಿ ಬಾರಿ ಇಂತಹ ದಾಳಿ ನಡೆದಾಗಲೂ ಇರಾನ್‌ನ ತೈಲ ಸಾಗಣೆ ಹಡಗುಗಳನ್ನು ಗುರಿಯಾಗಿಸಲಾಗುವುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ.
ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ದಾಳಿಗಳ ಬಳಿಕ ಆರಂಭವಾದ ಯುದ್ಧದ ನಂತರ ಇರಾನ್ ಹೋರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿದೆ. ಇದರ ಪರಿಣಾಮ ಈ ಜಲಮಾರ್ಗದ ಮೂಲಕ ನಡೆಯುತ್ತಿದ್ದ ಹಡಗು ಸಂಚಾರ ಬಹುತೇಕ ಸ್ಥಗಿತಗೊಂಡಿದೆ.
ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳು ಇರಾನ್‌ನಿಂದ ಅನುಮತಿ ಪಡೆಯುವುದರ ಜೊತೆಗೆ ಸಾಗಣೆ ಶುಲ್ಕ ಪಾವತಿಸಬೇಕಾಗಿದೆ ಎಂದು ವರದಿಯಾಗಿದೆ.