ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯುದ್ಧಕಾಲದ ಅಪರೂಪದ ಭಾಷಣವೊಂದನ್ನು ಮಾಡಿದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ತಮ್ಮ ಜನರು ಅಮೆರಿಕ ನಡೆಸಿದ 'ಭಯೋತ್ಪಾದನೆಯ ಸಂತ್ರಸ್ತರಾಗಿದ್ದಾರೆ ಎಂದು ಬುಧವಾರ ಹೇಳಿದರು.
ನಾನು ಇಸ್ಲಾಮಿಕ್ ಗಣರಾಜ್ಯವನ್ನು (ಇರಾನ್) ಸಂಪೂರ್ಣವಾಗಿ ನಾಶಪಡಿಸಬಹುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಮರುದಿನವೇ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಯುದ್ಧದ ಆರಂಭಿಕ ದಿನಗಳಲ್ಲಿ ಹತ್ಯೆಗೀಡಾದ ದಿವಂಗತ ಸರ್ವೋಚ್ಚ ನಾಯಕ ಅಲಿ ಖಮೇನಿ ಮತ್ತು 150ಕ್ಕೂ ಹೆಚ್ಚು ಶಾಲಾ ಮಕ್ಕಳ ಪೋಟೋಗಳನ್ನು ಅವರು ಪ್ರದರ್ಶಿಸಿದರು.
ನಮ್ಮನ್ನು ನಾವು ರಕ್ಷಿಸಿಕೊಂಡಿದ್ದೇವೆ. ಆದರೆ ನಾವು ಭಯೋತ್ಪಾದಕರಲ್ಲ ಎಂದು ಪೆಜೆಶ್ಕಿಯನ್ ಹೇಳಿದರು. ನಮ್ಮ ದೇಶದ ಮೇಲೆ ಮಾಡಲಾದ ಹೇಡಿ ದಾಳಿಗಳು ಮತ್ತು ಆಕ್ರಮಣಗಳಿಗೆ ನಮ್ಮ ಮುಗ್ಧ ಜನರು ಗುರಿಯಾಗಿದ್ದಾರೆ. ನಾವು ಅತ್ಯಂತ ಶಕ್ತಿಯುತವಾಗಿ ನಮ್ಮನ್ನು ರಕ್ಷಿಸಿಕೊಂಡಿದ್ದೇವೆ. ಅಮೆರಿಕ ಮತ್ತು ಇಸ್ರೇಲ್ ನಮ್ಮ ಮೇಲೆ ದಾಳಿ ನಡೆಸಿದವು. ಹೌದು, ಅವರು ನಮ್ಮ ಮೇಲೆ ದಾಳಿ ನಡೆಸಿದರು ಆದರೆ ನಾವು ಮಂಡಿಯೂರಿ ಶರಣಾಗಲಿಲ್ಲ ಎಂದು ಪ್ರಬಲ ಭಾಷಣ ಮಾಡಿದರು.
ಕಠಿಣ ಭದ್ರತೆ ಮತ್ತು ತೀವ್ರ ಪರಿಶೀಲನೆಯ ನಡುವೆ ನ್ಯೂಯಾರ್ಕ್‌ಗೆ ಆಗಮಿಸಿದ ಪೆಜೆಶ್ಕಿಯನ್, ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಿದರು. ನಿನ್ನೆಯಷ್ಟೇ ಇದೇ ವೇದಿಕೆಯಲ್ಲಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುಮಾರು ಏಳು ತಿಂಗಳಿನಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಶೀಘ್ರದಲ್ಲೇ ಒಪ್ಪಂದ ಏರ್ಪಡದಿದ್ದರೆ ಇಸ್ಲಾಮಿಕ್ ಗಣರಾಜ್ಯವನ್ನು "ಸಂಪೂರ್ಣವಾಗಿ ನಾಶಪಡಿಸಬಹುದು" ಎಂದು ಎಚ್ಚರಿಕೆ ನೀಡಿದ್ದರು.
ಇದಾದ ಕೆಲವು ಗಂಟೆಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅಮೆರಿಕದ ಪ್ರಮುಖ ಪ್ರತಿನಿಧಿಗಳಾದ ಸ್ಟೀವ್ ವಿಟ್‌ಕಾಫ್ ಮತ್ತು ಜಾರೆಡ್ ಕುಶ್ನರ್ ಅವರು ಇರಾನ್ ಅಧಿಕಾರಿಗಳೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದರು. ಆದರೆ ಚರ್ಚೆಗಳು ಹೇಗೆ ನಡೆದವು ಅಥವಾ ಮಾತುಕತೆ ಫಲಪ್ರದವಾಯಿತೇ ಎಂಬುದರ ಕುರಿತು ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ.
ಪೆಜೆಶ್ಕಿಯನ್ ನ್ಯೂಯಾರ್ಕ್‌ನಲ್ಲಿದ್ದಾಗ ಅವರನ್ನು ಭೇಟಿಯಾಗಲು ಟ್ರಂಪ್ ಸಿದ್ಧರಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಂಗಳವಾರ ಹೇಳಿದರು.