ಬೀಜಿಂಗ್: ಅಮೆರಿಕದೊಂದಿಗೆ ಸಹಕಾರಕ್ಕೆ ಒತ್ತು ನೀಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಚೀನಾ ಮತ್ತು ಅಮೆರಿಕ ಪರಸ್ಪರ ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲು ವಾಷಿಂಗ್ಟನ್ ಡಿ.ಸಿ. ತಲುಪಿದ ಬೆನ್ನಲ್ಲೇ ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ 'ಕ್ಸಿನ್ಹುವಾ' ಈ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ನಮ್ಮ ಎರಡು ದೇಶಗಳು ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು. ಚೀನಾ ಮತ್ತು ಅಮೆರಿಕದ ಜನರು ದೀರ್ಘಕಾಲದಿಂದ ಸ್ನೇಹಪರ ವಿನಿಮಯವನ್ನು ಹೊಂದಿದ್ದಾರೆ. ನಮ್ಮ ಹಿತಾಸಕ್ತಿಗಳು ಆಳವಾಗಿ ಪರಸ್ಪರ ಬೆಸೆದುಕೊಂಡಿವೆ ಎಂದು ಹೇಳಿದ್ದಾರೆ..
ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳು ಮತ್ತು ಜಾಗತಿಕ ಪರಿಸ್ಥಿತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಆಳವಾದ ಚರ್ಚೆ ನಡೆಸಲು ಎದುರು ನೋಡುತ್ತಿದ್ದೇವೆ.
ಉಭಯ ದೇಶಗಳು ಪರಸ್ಪರ ಹತ್ತಿರವಾಗಲು ಪ್ರಯತ್ನಿಸಬೇಕು. ಸಹಕಾರಕ್ಕೆ ಆದ್ಯತೆ ನೀಡುವ, ಮಿತಿಯೊಳಗಿನ ಸ್ಪರ್ಧೆ ಹೊಂದಿರುವ, ಭಿನ್ನಾಭಿಪ್ರಾಯಗಳನ್ನು ನಿಯಂತ್ರಣದಲ್ಲಿಡುವ ಹಾಗೂ ಶಾಂತಿಯುತ ಭವಿಷ್ಯಕ್ಕೆ ಅವಕಾಶ ಕಲ್ಪಿಸುವ ಸ್ಥಿರ ಸಂಬಂಧವನ್ನು ನಿರ್ಮಿಸಬೇಕು.
ಟ್ರಂಪ್ ಅವರ ಪ್ರಮುಖ ರಾಜಕೀಯ ಘೋಷಣೆಯನ್ನೂ ಉಲ್ಲೇಖಿಸಿದ ಕ್ಸಿ, "ಚೀನೀ ರಾಷ್ಟ್ರದ ಮಹಾನ್ ಪುನರುತ್ಥಾನದ ಗುರಿ ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸುವ ಗುರಿ ಪರಸ್ಪರ ಕೈಜೋಡಿಸಿ ಸಾಗಬಹುದು, ಎರಡು ಪ್ರಮುಖ ಶಕ್ತಿಗಳು ಪರಸ್ಪರ ಸಹಬಾಳ್ವೆ ನಡೆಸಲು ಸರಿಯಾದ ಮಾರ್ಗವನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.
ನಾವು ಇದನ್ನು ಸಾಧಿಸಬಹುದು ಎಂಬ ವಿಶ್ವಾಸ ನನಗಿದೆ. ಎರಡೂ ದೇಶಗಳ ಜಂಟಿ ಪ್ರಯತ್ನದಿಂದ ಈ ಭೇಟಿ ಫಲಪ್ರದ ಫಲಿತಾಂಶಗಳನ್ನು ನೀಡಲಿದೆ, ನಮ್ಮ ಎರಡೂ ದೇಶಗಳ ಜನರ ಕಲ್ಯಾಣವನ್ನು ಹೆಚ್ಚಿಸಲಿದೆ ಮತ್ತು ವಿಶ್ವ ಶಾಂತಿಗೆ ಹೊಸ ಭರವಸೆ ತರಲಿದೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
ಟ್ರಂಪ್ ಮತ್ತು ಕ್ಸಿ ಜಿನ್‌ಪಿಂಗ್ ನಡುವಿನ ಮಹತ್ವದ ಮಾತುಕತೆಗೆ ಮುನ್ನ ಈ ಹೇಳಿಕೆ ಹೊರಬಿದ್ದಿದೆ. ಚೀನಾ ಅಧ್ಯಕ್ಷರು ಅಮೆರಿಕ ರಾಜಧಾನಿಗೆ ಆಗಮಿಸಿದ ಬಳಿಕ ಕೆಂಪು ಹಾಸಿನ ಮೇಲೆ ಇಬ್ಬರೂ ನಾಯಕರು ಪರಸ್ಪರ ಹಸ್ತಲಾಘವ ಮಾಡಿದರು.
ಉಭಯ ರಾಷ್ಟ್ರಗಳ ನಡುವಿನ ಮಾತುಕತೆಯಲ್ಲಿ ವ್ಯಾಪಾರ, ತಂತ್ರಜ್ಞಾನ ಸ್ಪರ್ಧೆ, ಅದರಲ್ಲೂ ವಿಶೇಷವಾಗಿ ಕೃತಕ ಬುದ್ಧಿಮತ್ತೆ ಕ್ಷೇತ್ರದ ಸ್ಪರ್ಧೆ, ಇರಾನ್‌ಗೆ ಬೀಜಿಂಗ್ ನೀಡುತ್ತಿರುವ ರಾಜತಾಂತ್ರಿಕ ಮತ್ತು ಆರ್ಥಿಕ ಬೆಂಬಲ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗುವ ನಿರೀಕ್ಷೆಯಿದೆ.