

ಶ್ರೀ ಕೃಷ್ಣನ ಕೊಳಲಿನ ಕರೆಯಲ್ಲಿ ಓಂಕಾರನಾದದ ದಿವ್ಯಾರ್ಥದ ವಿಸ್ತಾರ ವೈಭವವಿದೆ. ಭಕ್ತರಿಗೆ ಭಗವಂತನ ಅನುಗ್ರಹದ ಭರವಸೆ ಇದೆ. ಜೀವಾತ್ಮನಿಗೆ ಪರಮಾತ್ಮನ ನೆಲೆಯ ಆಹ್ವಾನವಿದೆ. ಇಹಲೋಕದ ಭೌತಿಕ ಸುಖ-ಸಂತೋಷಗಳಿಂದ ಮಿಗಿಲಾದ ಆನಂದದ ಆಕರ್ಷಣೆ ಇದೆ.
ಶ್ರೀ ಕೃಷ್ಣನ ಸ್ವಭಾವವೇ ಪ್ರೀತಿಯ ಪರಿಪಾಕ. ಅವನಿಗೆ ಯುಕ್ತವಾದ ಪ್ರವೃತ್ತಿಯೆಂದರೆ ಅನುರಕ್ತಿ. ನಿಸ್ಸೀಮವಾದ ಭಕ್ತಿ; ಅನನ್ಯ ಪ್ರಪತ್ತಿ. ಇದೇ ಕೃಷ್ಣಾವತಾರದ ಆಧ್ಯಾತ್ಮಿಕ ಆದೇಶ, ಸಂದೇಶ, ಉದ್ದೇಶ.
ಇಂದು ಹೊಸ ಸಾಂಸಾರಿಕ ಬಿರುಗಾಳಿಗೆ ನೆಲದಲ್ಲಿ ಮಹತ್ವದ ನೆಲೆಯಾಗುತ್ತಿದೆ. ಇದರ ಪರಿಣಾಮವಾಗಿ ನಮ್ಮತನವೇ ಕಳೆದು ಹೋಗುತ್ತಿದೆ. ಇಂತಹ ಸಂಕ್ರಮಣಕಾಲದಲ್ಲಿ ಶ್ರೀ ಕೃಷ್ಣಗಾಥೆ ನಮಗೆ ಕೈಗಂಬವಾಗಲಿ.
ಕೊಳಲು ನಾವಾಗಬೇಕು
ಹಾಗಾದರೆ ಈ ಕೊಳಲಿನ ಮಹಿಮೆಯಾದರೂ ಏನು? ಸ್ವರೋತ್ಪತ್ತಿಯಾಗುವ ಸಾಧನಗಳಲ್ಲಿ ಮುಖ್ಯವಾದವು ಕೊಳಲು. ಸಂಗೀತವಾದ್ಯಗಳಲ್ಲೆಲ್ಲಾ ಅತ್ಯಂತ ಸರಳ ವಾದ್ಯ. ಕೃಷ್ಣಾವತಾರದ ಪೂರ್ವದಲ್ಲಿ 'ವೇಣು' ಎಂಬ ಕನ್ಯೆ ಕಾರಣಾಂತರಗಳಿಂದ ಋಷಿಗಳ ಶಾಪಕ್ಕೆ ಗುರಿಯಾಗಿ ಪ್ರಾಯಶ್ಚಿತ್ತಕ್ಕಾಗಿ ಅಗ್ನಿ ಪ್ರವೇಶ ಮಾಡುವಾಗ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದಳು.
ಅವಳ ಭಕ್ತಿಗೆ ಮೆಚ್ಚಿದ ಪರಮಪುರುಷ ಕೃಷ್ಣಾವತಾರದಲ್ಲಿ ಭಗವಂತನ ಕರಸ್ಪರ್ಶದಿಂದ ಅವಳಿಗೆ ಪಾಪ ಪರಿಹಾರವೆಂದು ಹೇಳುತ್ತಾನೆ. ಮುಂದೆ ದ್ವಾಪರಯುಗದಲ್ಲಿ ಈ ವೇಣು ಗೋಕುಲದಲ್ಲಿ ಕೃಷ್ಣನ ವಾಸಸ್ಥಾನದ ಸಮೀಪದಲ್ಲೇ ಬಿದಿರು ಮೆಳೆಯಾಗಿ ಹುಟ್ಟಿದಳು.
ಕೃಷ್ಣ ತನ್ನ ಗೆಳೆಯರೊಡನೆ ಗೋವುಗಳನ್ನು ಕಾಯಲು ಹೋದಾಗ ಕೃಷ್ಣ ಆ ಗೋಪಾಲನಿಗೆ ಒಂದು ಕೌತುಕವನ್ನು ತೋರಿಸುವುದಾಗಿ ಹೇಳಿ ಆ ಬಿದಿರನ್ನು ಕಡಿದು ತಂದು ಏಳು ರಂಧ್ರಗಳನ್ನು ಮಾಡಿ 'ವೇಣು'ವಿನ ಪೂರ್ವಕೃತ ಪಾಪಗಳನ್ನೆಲ್ಲವನ್ನು ಸುಟ್ಟು ಅದನ್ನು ಸುಂದರ ಕೊಳಲಾಗಿ ಮಾರ್ಪಡಿಸಿದನು. ಎಲ್ಲಾ ಪಾಪಗಳಿಂದ ಮುಕ್ತವಾದ ಆ ಜೀವಿಯು ಅವನಿಗೆ ಅತ್ಯಂತ ಪ್ರಿಯಳಾದ ಕಾರಣ ಆ ವೇಣುವನ್ನು ಸರ್ವಕಾಲವೂ ತನ್ನ ಬಳಿಯೇ ಇರಿಸಿಕೊಂಡಿದ್ದನು.
ಸಿಂಹಾಸನದಿಂದ ದೂರ
ಸಿಂಹಾಸನದಿಂದ ದೂರವಿದ್ದುಕೊಂಡೇ ಜನಮನ ಸಿಂಹಾಸದಲ್ಲಿ ಪರಮಾತ್ಮನಾದ ಪರಮಾಪ್ತವಾದ. ಅವನ ಸುಧಾಮ ಪ್ರೀತಿ, ರಾಧಾ ಪ್ರೇಮ, ಅರ್ಜುನ ಸೌಖ್ಯ, ದೌಪದಿ ಭಾತೃತ್ವ, ಕೃಷ್ಣನೊಬ್ಬ ಬಿಟ್ಟರೆ ಕೃಷ್ಣನಿಗೊಂದು ಹೋಲಿಕೆ ಇಲ್ಲ.
ಇಷ್ಟಾದರೂ -ರಾಮ-ಕೃಷ್ಣರನ್ನು ಸದಾ ಒಟ್ಟಿಗೆ ನೋಡುವ ನಾವು ಹೆಚ್ಚು ಭಕ್ತಿಯಿಂದ ಪೂಜಿಸುವುದು ರಾಮನನ್ನೇ. ಎದೆಯ ಮೆಚ್ಚು ಮಾತ್ರ ಕೃಷ್ಣನಿಗೆ. ಏಕೆಂದರೆ ರಾಮ ಆದರ್ಶ, ಕೃಷ್ಣ ವಾಸ್ತವ. ಶ್ರೀ ಕೃಷ್ಣನಂತಹ ಸೂಕ್ಷ್ಮಮತಿಯ, ಉದಾರಚಿತ್ತದ ಅತಿಜಾಗರೂಕರಾದ ಸುಧಾರಕರು ಸಿಗುವುದು ಬಹಳ ಕಷ್ಟ. ಅನೇಕ ವೇಳೆ ನಮ್ಮ ಕಣ್ಣ ಮುಂದೆ ಬಂದು ಹೋದ ಸುಧಾಕರಲ್ಲಿ ಪರರಿಗಾಗಿ ಮರುಗುವ ಹೃದಯವೇನೋ ಇದೆ. ಆದರೆ ಅವರಲ್ಲಿ ಸಹನೆ ಇಲ್ಲ.
ಗೀತಾಚಾರ್ಯನಾದ ಶ್ರೀಕೃಣ್ಣ ವೇದಗಳಲ್ಲಿ ತಾನು ಸಂಗೀತ ಪ್ರಧಾನವಾದ ಸಾಮವೇದ ಎಂದಿದ್ದಾನೆ. ಮನುಷ್ಯ ಕೊಳಲಿನಂತೆ ಟೊಳ್ಳಾಗಿರಬೇಕು. ಅಂದರೆ ಅವನೊಳಗಿನ ಅಹಂಕಾರವೆಲ್ಲ ಖಾಲಿಯಾಗಿ ಜ್ಞಾನವೆಂಬ ರಾಗ ಹೊರ ಹೊಮ್ಮಬೇಕು. ಭಾಗವತದ ಬಾಲಕೃಷ್ಣನ ಕೈಯ ಕೊಳಲಿಗೆ ಅದೆಷ್ಟು ಅರ್ಥಗಳಿವೆ. ಅವನ ಕೊಳಲಿನಲ್ಲಿ ದೇಹದ ನವದ್ವಾರಗಳಿಗೆ ಸಂಕೇತವೆಂಬಂತೆ ಒಂಭತ್ತು ರಂಧ್ರಗಳು. ಭಾವುಕರಿಗೆ ಅವನ ಕೈಯ ಕೊಳಲಾಗುವ ನಿತ್ಯ ತವಕ.
'ಕೃಷ್ಣಂ ವಂದೇ ಜಗದ್ಗುರುಂ'
ಜಗದ್ಗುರುವೆಂದರೆ ನಮ್ಮೆದುರಿಗೆ ಬರುವ ಚಿತ್ತ ಒಬ್ಬ ಮಠಾಧಿಪತಿಯಲ್ಲವೆ? ಕಾವಿ, ಪಲ್ಲಕ್ಕಿ, ಛತ್ರ, ಚಾಮರ, ದೀವಟಿಗೆ, ಪಾದುಕೆ, ದಂಡ, ಕಮಂಡಲ, ಶಿಷ್ಯ ಸಮೂಹ, ಜಾತ್ರೆ, ಗ್ರಂಥರಚನೆ, ಪ್ರವಚನ, ಭಿಕ್ಷೆ, ಏಕಾಂತಪ್ರಿಯತೆ- ಇವಲ್ಲವೇ ನಮ್ಮ ಕಲ್ಪನೆ? 'ಕೃಷ್ಣಂ ವಂದೇ ಜಗದ್ಗುರುಂ' ಎಂದಾಗ ಈ ಕಲ್ಪನೆಯೆಲ್ಲ ಸುಳ್ಳಾಗಿ, ಈ ಶಬ್ದ ಆಡಂಬರದಂತೆ ತೋರುತ್ತ, ಪೊಳ್ಳಾಗಿ, ಹುಸಿಯಾಗಿ, ಅತಿಶಯೋಕ್ತಿಯಾಗಿ, ಒಗಟಾಗಿ, ಅಣಕಿಸುವಂತೆ ನಿಲ್ಲುತ್ತದೆ.
ಶ್ರೀಕೃಷ್ಣ ಯಾವ ಮಠ ಕಟ್ಟಿದ? ಯಾವ ಸನ್ಯಾಸ ಪರಂಪರೆ ಆರಂಭಿಸಿದ? 'ಅವನ ತ್ರಿದಂಡ' ಎಲ್ಲಿ ಹೋಯಿತು? ಪಲ್ಲಕ್ಕಿ ಎಲ್ಲಿ? ಯಾರಿಗೆ ಗೊತ್ತು? ಕಣ್ಣು ಅಗಲವಾಗುತ್ತದೆ! ತಾನೇ ಮುಚ್ಚುತ್ತದೆ! ಕಿವಿಗೆ ಏನೂ ಕೇಳಿಸದೆ, ಮೌನ ಮನಸ್ಸು ಸಮುದ್ರ ತಳ ಕಟ್ಟಿ ಕೊಡುತ್ತದೆ.
ಏನನ್ನೂ ಬಯಸದ ನಿಸ್ಪೃಹನಿಗೆ ಈ ಜಗತ್ತಿನ ಉದ್ಧಾರ ಏಕೆ ಬೇಕಿತ್ತು? ತಾನೇ ಆಳದವನು 'ಜಗತ್ತಿಗೆ ದುರ್ಯೋಧನನೇ ಒಡೆಯನಾಗಿರಲಿ, ಯುಧಿಷ್ಟಿರನೇ ಆಗಿರಲಿ, ತನಗೇಕೆ ಗೊಡವೆ?' ಎಂದೇಕೆ ತಾಟಸ್ಥ್ಯ ವಹಿಸಲಿಲ್ಲ? ಅದು ಅಸಾಮಾನ್ಯ! ಅದ್ಭುತ! ಮಾಯೆ! ಅವನೆಂದರೆ ಸೌಂದರ್ಯ. ಅವನೆಂದರೆ ಮೋಹ, ಅವನೆಂದರೆ ಪ್ರೀತಿ, ಅವನೆಂದರೆ ವಿರಹ, ಅವನೆಂದರೆ ಕ್ಲೇಷ ನಿವಾರಣೆ, ಅವನೆಂದರೆ ಎಲ್ಲವೂ. ಕೃಷ್ಣನ ವ್ಯಕ್ತಿತ್ವೇ ಹಾಗೆ! ತುಂಬು ಲವಲವಿಕೆಯಿಂದ, ಜೀವಂತಿಕೆಯಿಂದ ಬಾಳಿದವನು. ಹಾಗೆ ನೋಡಿದರೇ ಮಹಾಭಾರತವೇ ಕೃಷ್ಣನ ಲೀಲಾ ವಿನೋದ. ವ್ಯಕ್ತಿಯೊಬ್ಬ ಹುಟ್ಟಿನಿಂದ ವೃದ್ಧಾಪ್ಯದವರೆಗೆ ಸ್ತ್ರೀಯರಿಗೆ ಏನೇನು ಆಗಿರಬಲ್ಲನೋ ಅದೆಲ್ಲವೂ ಅವನಾಗಿದ್ದ.
ಮೋಹಕ ಮಾತುಗಾರ
ಭಾಗವತ ಪ್ರಜ್ಞೆಯ ಪುರುಷೋತ್ತಮ ತತ್ವದ ಅನುಷ್ಠಾನ ರಾಮ. ಹಾಗೆ ನೋಡಿದಲ್ಲಿ ರಾಮ ಮೌನಿ. ಆತನದ್ದು, ನುಡಿದಂತೆ ನುಡೆ. ಮುಂಬರುವ ಕೃಷ್ಣನ ಕಥೆಯೇ ಬೇರೆ. ಅವನು ವಾಚಾಳಿ. ತಾಯಿ ಯಶೋಧೆಗೆ ಮಾಯಾ ವಿಶ್ವವನ್ನೇ ಬಾಯ್ದೆರೆದು ತೋರಿದ. ಭಾಗವತ ಪ್ರಜ್ಞೆಯ ದಿವ್ಯಾಗಾರ ಕೃಷ್ಣನ ಬಾಯಿಯಿಂದಲೇ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ವಿಶ್ವರೂಪ ತೋರಿಸಿ, ಭಗವದ್ಗೀತೆ ಬೋಧಿಸಿದ ವಿಶ್ವ ದಾರ್ಶನಿಕ.
ಈ ವರ್ಷ ಆ.28ರ ಬುಧವಾರ ಬರಲಿದೆ.
- ಗುರುರಾಜ ಪೋಶೆಟ್ಟಿಹಳ್ಳಿ