

ಭಾರತ ಅಧ್ಯಾತ್ಮ ದೇಗುಲ. ಈ ಆನಂದ ದೇಗುಲದ ಶಿಖರವೇ ಹಿಮಾಲಯ. ಹಿಮಾಲಯ ಎಂದರೆ ಒಂಥರಾ ರೋಮಾಂಚನ! ಕಣ್ಣಿನ ಕ್ಯಾಮೆರಾದಲ್ಲಿ ಮೂಡುವುದೇ, ಹಿಮ ಪರ್ವತ, ಶಿಖರ, ಬಂಡೆಗಳು ಎಷ್ಟೊ ಸಂತರು, ಋಷಿಗಳ, ಯೋಗಿಗಳ ಸಾಕ್ಷಾತ್ಕಾರ ಸಾಕಾರಕ್ಕೆ ಸಾಥಿಯಾಗಿವೆ.
ವರ್ಷಾನುಗಟ್ಟಲೇ ಕೊರೆಯುವ ಚಳಿ, ಮೈಮನ ಪುಳಕಗೊಳಿಸುವ ದೃಶ್ಯಗಳು, ಕಣ್ಣಾಲಿಗಳನ್ನು ತೇವಗೊಳಿಸುವ ತಂಪು ಗಾಳಿ. ಬದುಕು ಅಂದರೆ ಅಧಿಕಾರ, ಅಂತಸ್ತು, ಮೋಜು ಮಜಾ ಉಡಾಯಿಸಲಿಕ್ಕೆ ಎನ್ನುತ್ತಿರುವ ಆಧುನಿಕ ಜಗತ್ತಿನಲ್ಲಿ ಇವೇನೂ ಸಂಬಂಧವಿಲ್ಲದಂತೆ, ಇದಕ್ಕೆ ಅಪವಾದವೆಂಬಂತೆ ಹಿಮಾವೃತ ನಿಸರ್ಗದ ಬೃಹತ್ ಕ್ಯಾನ್ವಾಸಿನಲ್ಲಿ ಬಿಡಿಸಿದ ಸುಂದರ ಚುಕ್ಕೆಗಳಂತೆ ಅಲ್ಲಲ್ಲಿ ಚಿಕ್ಕಪುಟ್ಟ ಗವಿಗಳನ್ನು ನಿರ್ಮಿಸಿಕೊಂಡು ಧ್ಯಾನನಿರತರಾಗಿರುವ ಮಹಾನ್ ಮಹರ್ಷಿಗಳು.
ಭವ್ಯ ಭಾರತವನ್ನು ಸದಾ ಹಚ್ಚ ಹಸಿರಾಗಿಸುತ್ತಿರುವ ಪಾವನ ಗಂಗೆ- ಯಮುನೆಯರ ಉಗಮ ಸ್ಥಾನಗಳು, ಗಂಗೋತ್ರಿ- ಯಮನೋತ್ರಿ ಬಲು ಅಪರೂಪ. ಒಂದು ಕಡೆ ಗಂಗೆಯೊಳಗೆ ಕೈಯಿಟ್ಟರೆ ಕೈ ಕೊರೆಯುವಷ್ಟು ತಣ್ಣಗಿರುವ ಹಿಮಜಲ, ಇನ್ನೊಂದು ಕಡೆ ಕೈಯಿಟ್ಟರೆ ಸುಡುವಷ್ಟು ಬಿಸಿಯಾಗಿರುವ ಜಲ, ಗಂಗೆ ಒಂದು ದಿಕ್ಕಿನಲ್ಲಿ ಹರಿದರೆ, ಯಮುನೆ ಹರಿಯುವುದು ಇನ್ನೊಂದು ದಿಕ್ಕಿನಲ್ಲಿ ಆದರೆ ಮತ್ತೆ ಗಂಗೆ ಯಮುನೆಯರ ಮಿಲನವಾಗುವುದು. ಪ್ರಯಾಗ (ಅಲಹಬಾದ್) ತ್ರಿವೇಣಿ ಸಂಗಮದಲ್ಲಿ ಏನಿದು ಆಶ್ಚರ್ಯ..?
ಯೋಗಿಗಳ ಪ್ರಕಾರ ನಮ್ಮೊಳಗೂ ಗಂಗಾ, ಯಮುನಾ, ಸರಸ್ವತಿ ನದಿಗಳಿವೆ. ಇವುಗಳಿಗೆ ಇಡಾ, ಪಿಂಗಳಾ, ಸುಷುಮ್ನಾಗಳೆಂದು ಕರೆಯುತ್ತಾರೆ. ಸುಷುಮ್ನಾ ನಾಡಿಯು ಬೆನ್ನುಹುರಿಯ ಮಧ್ಯಭಾಗದಲ್ಲಿ ನೆಲೆಸಿರುವ ಅಧ್ಯಾತ್ಮ ನದಿಯಾಗಿದೆ. ಇದು ಪೆರಿನಿಯಂನಲ್ಲಿರುವ ಮೂಲಾಧಾರ ಚಕ್ರದಿಂದ ಆಗಮಿಸಿ ತಲೆಯ ನೆತ್ತಿಯಲ್ಲಿರುವ ಸಹಸ್ರಾರ (ಬ್ರಹ್ಮರಂಧ್ರ)ದಲ್ಲಿ ಕೊನೆಗೊಳ್ಳುತ್ತದೆ. ಇಡಾನಾಡಿಯು ಮೂಲಾಧಾರದ ಎಡಭಾಗದಿಂದ ಹೊರಟು ಬೆನ್ನುಹುರಿಯನ್ನು ಸುರುಳಿಯಾಗಿ ಸುತ್ತಿಕೊಳ್ಳುತ್ತಾ ಪ್ರತಿಯೊಂದು ಚಕ್ರವನ್ನು ಅಂಕುಡೊಂಕಾಗಿ ಬಳಸಿಕೊಂಡು ಆಜ್ಞಾಚಕ್ರದ (ಭೂಮಧ್ಯ) ಎಡಭಾಗದಲ್ಲಿ ಕೊನೆಗೊಳ್ಳುತ್ತದೆ.
ಪಿಂಗಳಾನಾಡಿ ಮೂಲಾಧಾರದ ಬಲಭಾಗದಿಂದ ಹೊರಟು ಇಡಾನಾಡಿಗೆ ಅಭಿಮುಖವಾಗಿ ಹಾಯ್ದು, ಆಜ್ಞಾ ಚಕ್ರದ ಬಲಭಾಗದಲ್ಲಿ ಕೊನೆಗೊಳ್ಳುತ್ತದೆ. ಇಡಾ ಪಿಂಗಳಾ ನಾಡಿಗಳು ನಮ್ಮೊಳಗೆ ಹರಿಯುತ್ತಿರುವ ಎರಡು ವಿರುದ್ಧ ಬಲಗಳನ್ನು ಪ್ರತಿನಿಧಿಸುತ್ತವೆ. ಇಡಾ ನಾಡಿಯು ನಿಷ್ಕ್ರಿಯ, ಅಂತರ್ಮುಖಿ ಹಾಗೂ ಸ್ತ್ರೀ ಗುಣಗಳನ್ನು ಹೊಂದಿದೆ. ಇದನ್ನು ಚಂದ್ರನಾಡಿ ಎಂದೂ ಕರೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಪಿಂಗಳ ಸಕ್ರಿಯ, ಬಹಿರ್ಮುಖಿ ಹಾಗೂ ಪುರುಷ ಗುಣದ್ದಾಗಿದ್ದು, ಇದನ್ನು ಸೂರ್ಯನಾಡಿ ಎಂದೂ ಕರೆಯುತ್ತಾರೆ.
ಹೀಗೆ ನಮ್ಮೊಳಗಿನ ಹಿಮಾಲಯದೊಳಗೆ ಸಂಚರಿಸಲು ದೇಶದಲ್ಲಿರುವ ಹಿಮಗಿರಿಗೊಮ್ಮೆ ಹೋಗಿ ಬರಬೇಕು.
ನನ್ನ ಮಟ್ಟಿಗೆ ಹೇಳುವುದಾದರೆ ಹಿಮಾಲಯ ಧ್ಯಾನ ಕಲಿಕೆಯ ಸಂಕೇತವೇ ಹೊರತು ಮತ್ತೇನೂ ಅಲ್ಲ; ಇದು ಧ್ಯಾನದ ವಿಶ್ವವಿದ್ಯಾಲಯ, ಇದು ಇಂದು ನಿನ್ನೆಯದಲ್ಲ. ಶತಮಾನಗಳಿಂದ ಇದು ಇಂಥ ಧ್ಯಾನದ ವಿಶ್ವವಿದ್ಯಾಲಯವೇ ಆಗಿದೆ.
ಕುಸುಮ ಗಂಧ
ಹಿಮರಾಶಿಗಳ ಗರ್ಭದೊಳಗೆ 250 ಎಕರೆಯಷ್ಟು 'ಯು' ಆಕಾರದ ಬೋಗುಣಿಯಂಥ ವಿಶಾಲವಾದ ಹೂಗಳ ಸಮುದ್ರ, ಎಲ್ಲೆಂದರಲ್ಲಿ ಹೂವೇ ಹೂವು. ಕಡಿಮೆಯೆಂದರೂ 300 ಜಾತಿಯ ವಿವಿಧ ಹೂಗಳು ಕೆಲವು ಎಕರೆಗಳಷ್ಟು ಜಾಗದಲ್ಲಿ ಗೆರೆ ಎಳೆದು ಗುರುತು ಮಾಡಿದಂತೆ ಒಂದೇ ಜಾತಿಯ ಹೂಗಳು, ಎಕರೆಗಳಷ್ಟು ಬರೀ ಬಿಳಿ ಬಣ್ಣದ, ಬರೀ ನೀಲಿ ಬಣ್ಣದ, ಬರೀ ಕೆಂಪು ಬಣ್ಣದ, ಹೀಗೆ ನಾನಾ ಬಣ್ಣ ಬಣ್ಣದ ಹೂದೋಟ! ಇದು ಹೂಗಳ ಸಾಗರವೇ ಸರಿ.
ಬೀಸುವ ಗಾಳಿಗೆ ತೊನೆದಾಡುವ ಹೂಗಳು, ನದಿಯಲ್ಲಿ ನೀರಿನ ಅಲೆಗಳು ಏರಿ ಇಳಿದಂತೆ ಕಾಣುತ್ತವೆ. ನಾನಾ ಪರಿಮಳ, ಪಕ್ಷಿಗಳ ಕಲರವ, ಪುಷ್ಪವತಿ ನದಿಯ ಜುಳು- ಜುಳು ನಾದ ನಿನಾದ, ಒಂದೊಂದು ಹೂವಿನ ಸುಗಂಧವೇ ಬೇರೆ ಬೇರೆ, ಒಂದೊಂದು ಹೂವಿಗೆ ಮುತ್ತಿಟ್ಟಾಗ ಅವುಗಳ ಸ್ಪರ್ಶ ಸುಖವೇ ಡಿಫರೆಂಟೂ! ಅದೆಷ್ಟೋ ವಿದೇಶಿ ಯಾತ್ರಿಕರು 'ಹೂ ಕಣಿವೆ'ಯೊಳಗೆ ಹೊಕ್ಕು ಕಾಣೆಯಾಗಿದ್ದಾರೆ.
ಸಾವಿರಾರು ಯೋಗಿಗಳಿಗೆ ಜ್ಞಾನೋದಯವಾದದ್ದು ಹಿಮಾಲಯದ ಈ ಬೆಟ್ಟದಲ್ಲಿಯೇ. ಸ್ವಿಜ್ಜರ್ಲೆಂಡ್, ನೆದರ್ಲೆಂಡ್, ನ್ಯೂಜಿಲೆಂಡ್ ಕೂಡ ಸುಂದರ ತಾಣಗಳು. ಆದರೆ, ಹಿಮಾಲಯದ ಮುಂದೆ ಅವೇನೂ ಅಲ್ಲ. ಇವೆಲ್ಲ ಭೋಗದ ಭುವಿಗಳಾದರೆ, ಹಿಮಾಲಯ ಯೋಗ ಭೂಮಿ. ಅಲ್ಲೆಲ್ಲಾ ಮನಸ್ಸು ವೃತ್ತಿ, ಪ್ರವೃತ್ತಿಯತ್ತ ಹೆಜ್ಜೆ ಹಾಕಿದರೆ, ಇಲ್ಲಿ ಮನಸ್ಸು ನಿವೃತ್ತಿ, ನಿಷ್ಪತ್ತಿಯತ್ತ ಹೆಜ್ಜೆ ಹಾಕುತ್ತದೆ.
ಹಿಮಾಲಯಕ್ಕೆ ತಂತ್ರಜ್ಞಾನದ ಬಿಸಿ ತಟ್ಟಿಲ್ಲ. ರಸ್ತೆಗಳಿಲ್ಲ, ವಿದ್ಯುತ್ ಶಕ್ತಿಯಿಲ್ಲ, ವಿಮಾನ, ರೈಲುಮಾರ್ಗವಿಲ್ಲ...ಆದರೆ ಇದು ನಮ್ಮನ್ನು ಬೇರೊಂದು ಸಮಯಕ್ಕೆ, ಬೇರೊಂದು ಅಸ್ತಿತ್ವಕ್ಕೆ, ಬೇರೊಂದು ಸ್ಥಳಕ್ಕೆ ಕೊಂಡೊಯ್ಯುತ್ತದೆ. ಶತ ಶತಮಾನಗಳಿಂದ ಮಹಾನ್ ಯೋಗಿಗಳನ್ನು ಹಿಮಾಲಯ ಆಕರ್ಷಿಸುತ್ತಿದೆ. ಪರ್ವತ ಶೃಂಗಗಳಲ್ಲಿ ಅಲ್ಲಿ ಎಂದೂ ಕರಗದ ಹಿಮರಾಶಿಯಲ್ಲಿ, ಮುರಿಯದ ನಿರಂತರ ಮೌನದಲ್ಲಿ, ಯಾರೂ ಮೆಟ್ಟದ ಹಿಮಪಥದಲ್ಲಿ ಏನೋ ಒಂಥರ ಅಧ್ಯಾತ್ಮ ಆನಂದದ ಸೆಲೆಯಿದೆ.
- ವಚನಾನಂದ ಗುರೂಜಿ