

ಮಹರ್ಷಿ ವೇದವ್ಯಾಸರಿಂದ ರಚಿತವಾಗಿರುವ ವಿಷ್ಣುಪುರಾಣ ಅಷ್ಟಾದಶ ಪುರಾಣಗಳಲ್ಲಿ ಪ್ರಾಥಮಿಕ ಪುರಾಣವೆಂದು ಹೇಳಬಹುದು. ಹಿಂದುಗಳಿಗೆ, ಅದರಲ್ಲೂ ಮುಖ್ಯವಾಗಿ ವೈಷ್ಣವ ಸಂಪ್ರದಾಯವನ್ನು ಅನುಸರಿಸುವವರಿಗೆ ಇದು ಅತ್ಯಂತ ಮಹತ್ವದ, ಪವಿತ್ರಮಯವಾದ ಗ್ರಂಥ.
ವಿಷ್ಣು ಎಂದರೆ ಸರ್ವವ್ಯಾಪಿ. ಆ ಸರ್ವವ್ಯಾಪಿ ಭಗವಂತನ ಅನಂತ, ಅಮೋಘ, ಅಚಿಂತ್ಯ, ಅನಾದಿ, ಅಗಮ್ಯ, ಅಗಾಧ ಶಕ್ತಿ, ವೈಭವಗಳ ಅಭೂತಪೂರ್ವ ವರ್ಣನೆಯೇ ವಿಷ್ಣು ಪುರಾಣ. ಇದರಲ್ಲಿ ಭಗವಂತ ಹಾಗೂ ಭಕ್ತನ ಅವಿನಾಭಾವ ಸಂಬಂಧ, ಲೋಕಾನುಗ್ರಹಕಾರಕನೂ, ಭಕ್ತವತ್ಸಲನೂ ಆದ ವಿಷ್ಣು ತನ್ನ ಭಕ್ತವನ್ನು ಉದ್ಧರಿಸಿದ ಸಾವಿರಾರು ಕಥೆಗಳು ಇವೆ.
ಈ ಪುರಾಣದಲ್ಲಿ ಅಖಂಡ ಬ್ರಹ್ಮಾಂಡದ ನಿರ್ಮಾಣ ಹಾಗೂ ವಿನಾಶಗಳ ಸಂಪೂರ್ಣ ಚಿತ್ರಣವಿದೆ. ಭಗವಾನ್ ಮಹಾವಿಷ್ಣು ದಶಾವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ವಾಮನ, ನರಹಿಂಸ, ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಬುದ್ಧ ಮತ್ತು ಕಲ್ಕಿ ಅವತಾರಗಳ ಹಿನ್ನೆಲೆ, ಅವತಾರದ ಉದ್ದೇಶ, ಸಂದೇಶ, ಉಪಸಂಹಾರಗಳು ಅತ್ಯಂತ ಸವಿಸ್ತಾರವಾಗಿಯೂ, ಭಕ್ತಿಭಾವಪೂರ್ವಕವಾಗಿಯೂ ವರ್ಣಿಸಲ್ಪಟ್ಟಿದೆ.
ಇನ್ನು ದಶಾವತಾರಗಳಷ್ಟೇ ವಿಷ್ಣುವಿನ ಅವತಾರಗಳಲ್ಲ. ಲೋಕೋದ್ಧಾರಕ್ಕಾಗಿಯೂ, ಭಕ್ತಿ ಪಂಥದ ಪ್ರಚಾರಕ್ಕಾಗಿಯೂ ಸ್ವಯಂ ವಿಷ್ಣುವೇ ಇನ್ನೂ ಅಸಂಖ್ಯ, ಅನೇಕಾನೇಕ ಅವತಾರಗಳನ್ನು ಎತ್ತಿ ತನ್ನ ಸರ್ವವ್ಯಾಪಕತ್ವವನ್ನು ಲೋಕಪ್ರಕಾಶಗೊಳಿಸಿದನೆಂಬ ಅಂಶವೂ ವರ್ಣಿತವಾಗಿದೆ. ಇದರಲ್ಲಿ ರಾಮಾಯಣ, ಮಹಾಭಾರತದಲ್ಲಿ ಬರುವ ನೂರಾರು ಅದ್ವಿತೀಯ ರಾಜ-ಮಹಾರಾಜರುಗಳ ವಂಶವೃಕ್ಷವಿದೆ. ಈ ವಂಶಾವಳಿಯ ವರ್ಣನೆಯೇ ನೂರಾರು ಪುಟಗಳಷ್ಟಿದೆ. ಇದನ್ನು ಓದಿದವರಿಗೆ ಅದ್ಭುತವಾದ ಅನುಭವವಾಗುತ್ತದೆ.
ಈ ಪುರಾಣದಲ್ಲಿ ವಿಶ್ವವ್ಯಾಪಾರದ ರಹಸ್ಯವು ಯಾವ ಸೂತ್ರದ ಆಧಾರದ ಮೇಲೆ ನಡೆಯುತ್ತಿದೆ ಎಂಬುದರ ವರ್ಣನೆ ಇದೆ. ಅಂತ್ಯದಲ್ಲಿ ವಿಷ್ಣು ಸಾಯುಜ್ಯವನ್ನು ಹೊಂದುವ ರಹಸ್ಯವನ್ನೂ ಇದರಲ್ಲಿ ವಿಷದವಾಗಿ ವಿವರಿಸಲಾಗಿದೆ. ಮಾಹಿತಿಗೆ ಸಂಪರ್ಕಿಸಿ, ಮೊ. 9740973224.
- ವಿ. ಕೇಶವಮೂರ್ತಿ