

ಹರೋಹರ.. ವರ್ಷಕ್ಕೊಮ್ಮೆ ಹೀಗೊಂದು ಉದ್ಘೋಷ ಮಲೆನಾಡಿನಲ್ಲಿ ಮೊಳಗುತ್ತದೆ. ಧರೆ ಕೊಚ್ಚಿ ಹೋಗುವಂತೆ ಸುರಿಯುವ ಮಳೆ ಮಧ್ಯ, ಭಕ್ತಿಯ ಮಳೆ ಬೆರೆತು ಅಲ್ಲೊಂದು ಅಧ್ಯಾತ್ಮ ಕಡಲು ಸೃಷ್ಟಿಯಾಗುತ್ತದೆ. ಶಿವಮೊಗ್ಗದ ಗುಡ್ಡೇಕಲ್ ಜಾತ್ರೆಯೆಂದರೆ, ಅದೊಂದು ಭಕ್ತಿಯ ಪ್ರವಾಹವೇ ಸೈ.
ಶಿವಮೊಗ್ಗ- ಹೊಳೆಹೊನ್ನೂರು ರಸ್ತೆಗೆ ಅಂಟಿಕೊಂಡಿರುವ ವಿಶಾಲ ಬಂಡೆಯ ಮೇಲಿದೆ ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇಗುಲ. ಇಲ್ಲಿ ಆಷಾಢ ಅಥವಾ ಶ್ರಾವಣ ಮಾಸದಲ್ಲಿ ಕೃತ್ತಿಕೆ ದಿನದಂದು 'ಆಡಿ ಕೃತ್ತಿಕೆ ಜಾತ್ರೆ' ನಡೆಯುತ್ತದೆ. ಎರಡು ದಿನಗಳ ಸಂಭ್ರಮ. ಪಾಲ್ಗೊಳ್ಳುವವರ ಸಂಖ್ಯೆ ಮಾತ್ರ ಲಕ್ಷಕ್ಕೂ ಅಧಿಕ.
ಜಾತ್ರೆ ವಿಶೇಷ
ಭಕ್ತರು ಕಾವಡಿಯನ್ನು ಹೊತ್ತು ತಂದು ಹರಕೆ ತೀರಿಸುವುದು ಇಲ್ಲಿನ ವೈಶಿಷ್ಟ್ಯ. ಜಾತ್ರೆಯ ಮೊದಲನೇ ದಿನ ಭರಣಿ ಕಾವಡಿ. ಎರಡನೇ ದಿನ ಆಡಿ ಕೃತ್ತಿಕೆ. ಹರಕೆ ಹೊರುವ ಭಕ್ತರು ಆಡಿ (ತಮಿಳು ಪಂಚಾಂಗ) ತಿಂಗಳ ಆರಂಭದಿಂದಲೇ ಕಟ್ಟುನಿಟ್ಟಿನ ವ್ರತ ಆಚರಿಸುತ್ತಾರೆ. ಈ ವೇಳೆ ಧೂಮಪಾನ, ಮದ್ಯಪಾನ, ಮಾಂಸಾಹಾರಗಳೆಲ್ಲ ದೂರ. ಬಾಲಸುಬ್ರಹ್ಮಣ್ಯ ಮಾತ್ರ ಹೃದಯಸ್ಥ.
ಭಕ್ತರು ಒಂದು ದಂಡದ ಎರಡೂ ಬದಿಗೆ ಬುಟ್ಟಿಯನ್ನು ಕಟ್ಟಿ, ಒಂದರಲ್ಲಿ ಪೂಜೆ ಸಾಮಗ್ರಿ, ಇನ್ನೊಂದರಲ್ಲಿ ಹೂಗಳನ್ನಿಟ್ಟು ಹೊತ್ತು ತರುತ್ತಾರೆ. ನಾಲಗೆ, ಕೆನ್ನೆಗೆ, ಚೂಪಾದ ಶೂಲದಿಂದ (ವೇಲ್) ಚುಚ್ಚಿಕೊಂಡು ಅಥವಾ ಬೆನ್ನಿಗೆ ಕೊಂಡಿಯ ಮೂಲಕ ಹಗ್ಗಕಟ್ಟಿ ತೇರನ್ನು ಮನೆ ಬಾಗಿಲಿನಿಂದ ದೇಗುಲದ ವರೆಗೆ ಎಳೆದು ತರುವ ಸಂಪ್ರದಾಯವೂ ಇದೆ. ಮೈಗೆ ನಿಂಬೆಹಣ್ಣನ್ನು ದಾರದ ಮೂಲಕ ಕಟ್ಟಿಕೊಂಡು ಕಾವಡಿ ತರುವವರೂ ಇದ್ದಾರೆ.
ಕಾವಡಿಗಳಲ್ಲಿ ನವಿಲು ಕಾವಡಿ, ಜೇನು ಕಾವಡಿ, ಹಾಲು ಕಾವಡಿ, ಪುಷ್ಪ ಕಾವಡಿ ಸೇರಿದಂತೆ ಹಲವು ಬಗೆಯ ಕಾವಡಿಗಳನ್ನು ತಂದು, ಹರಕೆ ತೀರಿಸುವ ಸಲುವಾಗಿ ಬಾಲಸುಬ್ರಹ್ಮಣ್ಯ ಸ್ವಾಮಿಯಲ್ಲಿ ಮೊರೆ ಇಡುತ್ತಾರೆ.
ಇನ್ನೊಂದು ವೈಶಿಷ್ಟ್ಯವೆಂದರೆ ಹೀಗೆ ಕಾವಡಿಯನ್ನು ಹೊತ್ತು ದೇಗುಲದತ್ತ ಹೆಜ್ಜೆ ಹಾಕುವಾಗ ಹರಕೆ ಹೊತ್ತವರು, ಅವರ ಕುಟುಂಬದವರು, ಆತ್ಮೀಯರು ಏಕ ದನಿಯಲ್ಲಿ 'ಹರೋಹರ' ಎಂದು ಕೂಗುತ್ತಾರೆ. ಈ ಬಾಲಸುಬ್ರಹ್ಮಣ್ಯ, ಬೇಡಿಕೆ ಈಡೇರಿಸುವ ಕಾಮಧೇನು- ಕಲ್ಪವೃಕ್ಷ ಎಂದೇ ಪ್ರತೀತಿ.
ದೇಗುಲದ ವಿಶೇಷ
ತುಂಗೆ ತಪ್ಪಲು ಶಿವಮೊಗ್ಗಕ್ಕೆ ಈ ದೇಗುಲ ಸೊಬಗಿನ ತಿಲಕ. ಬೃಹದಾಕಾರದ ಗುಡ್ಡದ ತುದಿಯಲ್ಲಿ ದೇಗುಲವಿದ್ದು, ಬಾಲಸುಬ್ರಹ್ಮಣ್ಯ ಸ್ವಾಮಿಯು ಕಚ್ಚೆಯನ್ನುಟ್ಟ ಶಿಖೆ ಇಲ್ಲದೆ, ಕೈಯಲ್ಲಿ ಒಂದು ದಂಡ ಹಿಡಿದು ನವಿಲು ವಾಹನದಲ್ಲಿ ನಿಂತಿರುವ ವಿಗ್ರಹವೇ ಭಕ್ತಿಯ ಕೇಂದ್ರಬಿಂದು. ಈ ದೇಗುಲ 'ಎರಡನೇ ಪಳನಿ' ಅಂತಲೇ ಖ್ಯಾತಿ. ಈ ಸಾಲಿನ ಆಡಿಕೃತ್ತಿಕೆ ಜಾತ್ರೆಯು ಜುಲೈ 30 ಹಾಗೂ 31ರಂದು ನಡೆಯುವುದು.
- ಶ್ರೀಕಾಂತ ಭಟ್, ಅನಿಲ್ ಕುಮಾರ್
ಚಿತ್ರ- ಶಿವಮೊಗ್ಗ ನಂದನ್