ಚಿರ ಯೌವ್ವನಿಗರಾಗಿ

Updated on: 

ಜೀವಕೋಶದ ಹಂತದಲ್ಲಿಯೇ ವಯಸ್ಸಾಗುವ ಪ್ರಕ್ರಿಯೆ ಹೇಗೆ ಆರಂಭವಾಗುತ್ತದೆ ಎನ್ನುವುದನ್ನು ಹಿಂದಿನ ಲೇಖನದಲ್ಲಿ ವಿವರವಾಗಿ ಹೇಳಿದ್ದೆ. ಭ್ರೂಣವಾಗುವ ಮುನ್ನ ನೀವೊಂದು ಪುಟ್ಟ ಜೀವಕೋಶವಾಗಿದ್ದೀರಿ ಅಷ್ಟೆ. ಆ ನಂತರ ಈ ಜೀವಕೋಶ ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ... ಹೀಗೆ ದ್ವಿಗುಣಗೊಳ್ಳುತ್ತ ಶರೀರವಾಗಿ ರೂಪುಗೊಳ್ಳುತ್ತದೆ. ಜೀವಕೋಶ ಒಡೆಯುತ್ತ, ದ್ವಿಗುಣವಾಗುತ್ತ ಸಾಗುವುದು ನಿರಂತರ ಪ್ರಕ್ರಿಯೆ. ನೀವು ಈ ಲೇಖನ ಓದುತ್ತಿರುವಾಗಲೂ ಆ ಕ್ರಿಯೆ ನಡೆಯುತ್ತಿರುತ್ತದೆ. ಹೊಸ ಜೀವಕೋಶಗಳು ಅಸ್ತಿತ್ವ ಪಡೆದಂತೆಲ್ಲ ಕೆಲವು ಹಳೆಯ ಜೀವಕೋಶಗಳು ಸಾಯುತ್ತವೆ. ಹೀಗೆ ಜೀವಕೋಶಗಳು ದುರ್ಬಲವಾಗುವುದನ್ನೇ ನಾವು 'ವಯಸ್ಸಾಗುವ ಪ್ರಕ್ರಿಯೆ' ಎಂದು ಕರೆಯುವುದು. ಇನ್‌ಫ್ಯಾಕ್ಟ್, ಆಯುರ್ವೇದವು ಶರೀರವನ್ನು ನಾಶದತ್ತ ಸಾಗುವ ಪ್ರಕ್ರಿಯೆ ಎಂದೇ ಹೇಳುತ್ತದೆ. ಶಿರ್ಯತೆ ಇತಿ ಶರೀರಮ್! ಇದೇಕೆ?
ಏಕೆಂದರೆ ನೀವು ಸೀಮಿತವಾದ ಜೀವಶಕ್ತಿಯನ್ನು ಪಡೆದಿರುತ್ತೀರಿ. ಅದನ್ನೇ ನಾವು 'ಪ್ರಾಣ' ಎನ್ನುವುದು. ಈ ಪ್ರಾಣವೇ ಜೀವಕೋಶಗಳನ್ನು ನಿಯಂತ್ರಿಸುತ್ತಿರುತ್ತದೆ. ಅದು ಲಕ್ಷಾಂತರ ಅತಿಸೂಕ್ಷ್ಮ ಚಕ್ರಗಳ ರೂಪದಲ್ಲಿ ಪ್ರತಿ ಜೀವಕೋಶದ ಸುತ್ತವೂ ಸುತ್ತುತ್ತಿರುತ್ತದೆ. ಆ ಸೂಕ್ಷ್ಮ ಚಕ್ರಗಳನ್ನು ಮುಖ್ಯ ಚಕ್ರ ನಿಯಂತ್ರಿಸುತ್ತಿರುತ್ತದೆ ಎನ್ನುವುದನ್ನು ನಾವು ಧ್ಯಾನ್ ಆಶ್ರಮದಲ್ಲಿ ಕಂಡುಕೊಂಡಿದ್ದೇವೆ. ಸಾಮಾನ್ಯ ವ್ಯಕ್ತಿಯಲ್ಲಿ ಜೀವಕೋಶಗಳು ದುರ್ಬಲವಾಗುತ್ತಿದ್ದಂತೆ, ಸೂಕ್ಷ್ಮತೆಯಿಂದ ಸಾಂದ್ರತೆಯತ್ತ ಸಾಗುತ್ತಿದ್ದಂತೆ ಪ್ರಾಣದ ವರ್ಣದಲ್ಲಿ ಅಸಾಧಾರಣ ಬದಲಾವಣೆ ಕಂಡುಬರುತ್ತದೆ. ಯೋಗ ಮತ್ತು ಸನಾತನ ಕ್ರಿಯೆ ಮಾಡುವವರಲ್ಲಿ ಇಂಥ ಬದಲಾವಣೆ ಕಂಡುಬರಲಿಲ್ಲ. ಮತ್ತೊಮ್ಮೆ ಹೇಳುತ್ತೇನೆ, ಯೋಗ ಅಥವಾ ಸನಾತನ ಕ್ರಿಯೆಯನ್ನು ಗುರುಮುಖೇನ ಕಲಿತರೆ ಮಾತ್ರ ಅದರ ಸಂಪೂರ್ಣ ಶಕ್ತಿಯ ಪ್ರಯೋಜನ ಪಡೆಯಬಹುದು.
ಹಿಂದೆ ಋಷಿಮುನಿಗಳು ತಮ್ಮ ಕೊನೆ ಉಸಿರಿನವರೆಗೂ ಹೇಗೆ ಯೌವ್ವನ, ಕಾಂತಿಯನ್ನು ಕಾಪಾಡಿಕೊಳ್ಳುತ್ತಿದ್ದರು ಎನ್ನುವುದರ ಗುಟ್ಟು ಇದೇ ಆಗಿದೆ. ಅವರು ಸಮಯ ಬಂದಾಗ ಪ್ರಜ್ಞಾಪೂರ್ವಕವಾಗಿಯೇ ಶರೀರತ್ಯಾಗ ಮಾಡುತ್ತಿದ್ದರು ಮತ್ತು ತಮ್ಮ ಪ್ರಾಣ ಪುನಃ ಯಾವ ದೇಹವನ್ನು ಪ್ರವೇಶಿಸಬೇಕು ಎನ್ನುವುದನ್ನು ತೀರ್ಮಾನಿಸಿಕೊಳ್ಳುತ್ತಿದ್ದರು. ಈ ಕುರಿತಾಗಿ ನಾನು 'ಸನಾತನ ಕ್ರಿಯಾ: 51 ಮಿರಾಕಲ್ಸ್ ಆ್ಯಂಡ್ ಎ ಹಾಂಟಿಂಗ್‌' ಕೃತಿಯಲ್ಲಿ ವಿವರವಾಗಿ ಹೇಳಿದ್ದೇನೆ. ವೇದಕಾಲದಲ್ಲಿದ್ದ ಕೆಲವು ತಂತ್ರಗಳನ್ನು ಅರಿತು ಅಳವಡಿಸಿಕೊಂಡರೆ ನೀವು ಕೂಡ ವೃದ್ಧಾಪ್ಯದ ಲಕ್ಷಣಗಳನ್ನು ಮುಂದೂಡಬಹುದು ಮತ್ತು 80-100 ವರ್ಷದವರೆಗೂ ಯೌವ್ವನಿಗರಾಗಿ ಬದುಕಬಹುದು!

- ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com