

ಮಾನವ ಜೀವನದ ಸರಳ ವ್ಯಾಖ್ಯಾನ, 'ಧರ್ಮಾರ್ಥಕಾಮ ಮೋಕ್ಷಾಯ'. ಅಂದರೆ, ಚತುರ್ವಿಧ ಪುರುಷಾರ್ಥಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಈ ಪುರುಷಾರ್ಥಗಳಲ್ಲಿ ಪ್ರಧಾನವಾದುದು ಅರ್ಥ. ಉಳಿದ ಪುರುಷಾರ್ಥಗಳಾದ ಧರ್ಮ, ಕಾಮ ಮತ್ತು ಮೋಕ್ಷ ಸಾಧನೆಗಳಿಗೆ ಹಣ ಸಂಪಾದನೆ ಮುಖ್ಯ ಪಾತ್ರ ವಹಿಸುತ್ತದೆ.
ಧನವಿಲ್ಲದೇ ಏನನ್ನೂ ಸಾಧಿಸಲಾಗದು. ಅವರವರ ಯೋಗ್ಯತೆಗೆ ಅನುಸಾರವಾಗಿ ಧನ ಸಂಪಾದನೆ. ಆದ್ದರಿಂದ ಧನಾಗಮನ ಯೋಗಗಳನ್ನು ಪ್ರತಿಯೊಬ್ಬರು ಜಾತಕ ಪರಿಶೀಲಿಸಿ ತಿಳಿಯಬಹುದು. ಧನಭಾವ, ಲಗ್ನದಿಂದ 2ನೆಯ ಮನೆ. ಇದು ಮುಖ್ಯ. ಧನಯೋಗವನ್ನು ತಿಳಿಯಲು ಇದರ ಜೊತೆಗೆ 5, 9, 10, 11ನೇ ಭಾವಗಳೂ ಪ್ರಧಾನ. ಈ ಭಾವಗಳಿಗೆ ಹೆಚ್ಚಿನ ಸಂಬಂಧ ಉಂಟಾದಲ್ಲಿ ಧನ ಪ್ರಾಪ್ತಿಯಾಗುವ ಸಂಭವವಿರುತ್ತದೆ.
ಹಾಗಾದರೆ, ಪ್ರಧಾನವಾದ ಧನಯೋಗಗಳು ಯಾವುವು?
ತ್ರಿಲೋಚನ ಯೋಗ
ಸೂರ್ಯ, ಅಂಗಾರಕ, ಚಂದ್ರ ಪರಸ್ಪರ ಕೋನದಲ್ಲಿದ್ದು ಬಲಶಾಲಿಗಳಾಗಿ ಒಂದರ ನಂತರ ಒಂದರಂತಿದ್ದರೆ ತ್ರಿಲೋಚನ ಯೋಗ ಉಂಟಾಗಿ ಜಾತಕನು ಮಹದೈಶ್ವರ್ಯ, ಬುದ್ಧಿಶಾಲಿಯಾಗಿ, ಚಿರಕಾಲ ಬಾಳುವನು.
ಧನಾಕರ್ಷಣ ಯೋಗ
ಲಗ್ನಾಧಿಪತಿಯು ಧನ ಭಾವದಲ್ಲಿದ್ದು, ಸವಮಾಧಿ ಪತಿಯೇ ಏಕಾದಶದಲ್ಲಿದ್ದು, ಸಪ್ತಮಾಧಿಪತಿ ಪಂಚಮದಲಿದ್ದು, ಪಂಚಮಾಧಿಪತಿ, ತೃತೀಯಾಧಿಪತಿ ಲಗ್ನದಲ್ಲಿದ್ದರೆ ಧನಾಕರ್ಷಣ ಯೋಗ ಉಂಟಾಗಿ, ಜಾತಕ ಯಾರ ಮನೆಯಲ್ಲಿರುತ್ತಾನೋ ಆ ಮನೆಯವರು ಎಲ್ಲಾ ರೀತಿಯಿಂದ ಧನಪ್ರಾಪ್ತಿ ಉಳ್ಳವರಾಗಿ ಬಾಳುತ್ತಾರೆ.
ರಸಾತಲಯೋಗ
ದ್ವಾದಶಾಧಿಪತಿ ಪರಮೋಚ್ಚದಲ್ಲಿದ್ದು, ದ್ವಾದಶದಲ್ಲಿ ಶುಕ್ರನಿದ್ದು, ನಾಲ್ಕನೇ ಸ್ಥಾನಾಧಿಪತಿಯಿಂದ ನೋಡಲ್ಪಟ್ಟರೆ ರಸಾತಲ ಯೋಗ ಉಂಟಾಗಿ ಜಾತಕ ಭೂಮಿಯಲ್ಲಿ ಬಚ್ಚಿಟ್ಟ ಧನವನ್ನು ಹೊಂದಿ ಶ್ರೀಮಂತನಾಗಿ ಅರಸನೋಪಾದಿಯಲ್ಲಿ ಬಾಳುತ್ತಾನೆ.
ಉಪಚಯಯೋಗ
ತೃತೀಯ, ಷಷ್ಠ, ಏಕಾದಶಗಳಲ್ಲಿ (3,6,11) ಶುಭ ಗ್ರಹಗಳು ಸ್ಥಿತರಾದರೆ, ಶುಭವನ್ನುಂಟು ಮಾಡುವ ಈ ಯೋಗ ಜಾತಕನು ಶುಲ್ಕಪಕ್ಷಶ್ರ ಚಂದ್ರನಂತೆ ವೃದ್ಧಿ ಹೊಂದಿ ಧನವಂತನಾಗಿ ಸುಖದಿಂದ ಬಾಳಲು ಸಹಕಾರಿ.
ಲಕ್ಷ್ಮೀಯೋಗ
ನವಮಾಧಿಪತಿ ಭಾಗ್ಯದಲ್ಲಿ ಉಚ್ಚನಾಗಿದ್ದು ಪಂಚಮಾಧಿಪತಿಯೊಂದಿಗೆ ಕೂಡಿದ್ದಲ್ಲಿ ಲಕ್ಷ್ಮೀ ಯೋಗ ಉಂಟಾಗಿ ಬಹಳ ಧನಿಕನಾಗಿ ಕೀರ್ತಿವಂತನಾಗಿ ಜಾತಕನು ಜೀವಿಸುತ್ತಾನೆ.
ಕುಲವರ್ಧನಯೋಗ
ಚಂದ್ರ, ಸೂರ್ಯನಿಗೆ, ಲಗ್ನಕ್ಕೆ ಪಂಚಮದಲ್ಲಿ ಸರ್ವಶುಭ ಗ್ರಹಗಳು ಬಲರಾಗಿದ್ದರೆ, ಕುಲ ವರ್ಧನ ಯೋಗ ಉಂಟಾಗಿ, ಈ ಜಾತಕನ ಮಕ್ಕಳು ಮೊಮ್ಮಕ್ಕಳು, ಆಯುಷ್ಯ ಆರೋಗ್ಯ ಹೊಂದಿ ಧನಿಕರಾಗುವರು.
ಅಮೋಘ ಯೋಗ
ಅನೇಕ ಶುಭಗ್ರಹಗಳು ಉಚ್ಚ, ಮೂಲ ತ್ರಿಕೋಣಗಳಲ್ಲಿದ್ದರೆ, ರಾಜನ ಮೂಲಕ (ಸರ್ಕಾರದ ಮೂಲಕ) ಮಹಾಧನವನ್ನೀಯುವ ಅಮೋಘವಾದ ಧನ ಯೋಗ ಉಂಟಾಗಿ ಸುಖದಿಂದ ಜಾತಕನು ಬಾಳುವನು.
ಅರ್ಥಯೋಗ
ನವಮನದಲ್ಲಿ ದ್ವಿತೀಯಾಧಿಪತಿಯು ಚತುರ್ಥಾಧಿಪತಿಯೊಂದಿಗಿದ್ದು, ನವಮಾಧಿಪತಿಯು ಬಲಾಢ್ಯನಾಗಿ ದ್ವಿತೀಯ ಸ್ಥಾನದಲ್ಲಿದ್ದು, ಲಾಭಾಧಿಪತಿಯು ಲಾಭ ಭಾವದಲ್ಲಿದ್ದು, ಆ ಭಾವವು ಲಗ್ನಾಧಿಪತಿಗೆ ಉಚ್ಚ ಸ್ಥಾನವಾದರೆ ಅರ್ಥಯೋಗ ಉಂಟಾಗಿ ಜಾತಕನು ಕೋಟೀಶ್ವರನಾಗಿ, ಅರಸನಂತೆ ಬಾಳುವನು.
ದೇವೇಂದ್ರ ಯೋಗ
ಲಗ್ನಾಧಿಪತಿ ಲಾಭ ಭಾವಲ್ಲಿದ್ದು, ದ್ವಿತೀಯಾಧಿಪತಿ ದಶಮದಲ್ಲಿದ್ದು; ದಶಮಾಧಿಪತಿಯು ದ್ವಿತೀಯದಲ್ಲಿದ್ದು, ಲಾಭಾಧಿಪತಿಯು ಲಗ್ನದಲ್ಲಿದ್ದರೆ, ಜಾತಕನು ದೇವೇಂದ್ರನಂತೆ ಕೋಟೀಶ್ವರನಾಗಿ, ಕೀರ್ತಿವಂತನಾಗಿ ಬಾಳುವನು. ಮಾಹಿತಿಗಾಗಿ ಸಂಪರ್ಕಿಸಿ. ಮೊ. 9731906176.
- ಎಂ.ವಿ. ಸತ್ಯನಾರಾಯಣ