ಇದು ಭೀಮನ ಅಮವಾಸ್ಯೆ. ಈ ಅಮವಾಸ್ಯೆ ಬೇರೆ ಅಮವಾಸ್ಯೆಗಳಿಗಿಂತ ಭಿನ್ನ. ಬೇರೆಲ್ಲ ಅಮವಾಸ್ಯೆಗಳಲ್ಲಿ ಕೇವಲ ಕತ್ತಲು ತುಂಬಿಕೊಂಡಿದ್ದರೆ ಈ ಅಮವಾಸ್ಯೆಯಲ್ಲಿ ದಾಂಪತ್ಯ ಬೆಳಕು ತುಂಬಿಕೊಂಡಿದೆ. ಈ ಅಮವಾಸ್ಯೆ ತುಂಬೆಲ್ಲ ಪತಿ- ಪತ್ನಿಯರ ಪ್ರಣಯ ದೀಪ್ತಿಯ ಹಾಲ್ಬೆಳಕು ಚೆಲ್ಲಿಕೊಂಡಿರುತ್ತದೆ. ಗಂಡ ಹೆಂಡತಿಯ ನಡುವೆ ಪರಸ್ಪರ ಪ್ರೀತಿ- ವಿಶ್ವಾಸಗಳ ಅಭಿವ್ಯಕ್ತಿಗೆ ಈ ಅಮವಾಸ್ಯೆ ಒಂದು ವೇದಿಕೆ.
ಆಷಾಢದ ಪೂರ್ಣಿಮೆ, ಏಕಾದಶಿಗಳಂತೆಯೇ ಆಷಾಢದ ಅಮಾವಾಸ್ಯೆ ಕೂಡ ಭಾರತೀಯರ ಮನಸ್ಸನಲ್ಲಿ ಭಾವುಕವಾಗಿ ನೆಲೆಯೂರಿದೆ. ಅಂದು ವಿವಾಹಿತ ಮಹಿಳೆಯರು ತಮ್ಮ ಪತಿಯ ಆರೋಗ್ಯ ಆಯುಷ್ಯ ಮತ್ತು ಓಜಸ್ಸು, ತೇಜಸ್ಸುಗಳ ವೃದ್ಧಿಗಾಗಿ ಜ್ಯೋತಿರ್ಭೀಮೇಶ್ವರನ ವ್ರತ ಮಾಡುತ್ತಾರೆ.
ವಾಗಾರ್ಥಗಳಂತೆ ಅನನ್ಯ ಮತ್ತು ಅನ್ಯೋನ್ಯವಾಗಿರುವ ಶಿವಪಾರ್ವತಿಯರೇ ಭೀಮನ ಅಮವಾಸ್ಯೆಯ ಅಧಿಷ್ಟಾನ ದೇವತೆಗಳು.
ಆಕಾಶದ ಮೋಡದಂತೆ ಹಬ್ಬಗಳಿಲ್ಲದೆ ಮಂಕು ಕವಿದ ಮಾಸವೇ ಆಷಾಢ ಎಂಬುದು ಜನರ ಭಾವನೆ. ಇದಕ್ಕೂ ಮಿಗಿಲಾಗಿ ನವವಧುವನ್ನು ಅತ್ತೆಯ ಮನೆಯಿಂದ (ಗಂಡನಿಂದ ಬಳಿಯಿಂದ) ಬೇರ್ಪಡಿಸಿದ್ದು ಈ ಮಾಸ ಎಂಬ ಮೂದಲಿಕೆ ಬೇರೆ ಇದಕ್ಕಿದೆ.
ಜನ್ಮದಿಂದ ಪ್ರಳಯದವರೆಗೂ ಹೊಂದಿಕೊಂಡು ಬಾಳುವ ರುದ್ರಪಾರ್ವತಿಯರಿಗೆ ಪ್ರೇರಕಶಕ್ತಿ ಮತ್ತೊಬ್ಬನಿದ್ದಾನೆ. ತೊಡೆಯ ಮೇಲೆ ಲಕ್ಷ್ಮಿಯನ್ನೇರಿಸಿಕೊಂಡು ಕುಳಿತಿರುವ ನರಸಿಂಹ, ಹೆಂಡತಿಯನ್ನು ಬಿಟ್ಟಿರದ ಆ ಲಕ್ಷ್ಮೀನರಸಿಂಹನೇ ರುದ್ರನ ದಾಂಪತ್ಯದ ಪ್ರೇರಕ ಶಕ್ತಿ.
ಈ ದೇಹ ಮಣ್ಣಾಗುವವರೆಗೂ ಮಿನುಗುತ್ತಾ ಸದೃಢವಾಗಿ ನಗೆಯ ನಕ್ಷತ್ರಗಳನ್ನು ಹೊಮ್ಮಿಸಿ ಗಂಡನೊಂದಿಗೆ ಬದುಕಬೇಕು. ಅಂಥ ದಾಂಪತ್ಯದ ಸಂಕೇತವಾಗಿ ತೋರುಬೆರಳಿನ ಪ್ರಮಾಣದಷ್ಟು ಕೆಮ್ಮಣ್ಣಿನ ಪ್ರತಿಮೆ ಮಾಡಿ ಸಂತಸ- ಸಂಭ್ರಮಗಳ ದ್ಯೋತಕವಾಗಿ ಕಡ್ಡಿಯಲ್ಲಿ ಸುಣ್ಣವನ್ನು ಮೆತ್ತಿಕೊಂಡು ಅದರಿಂದ ಎಲ್ಲ ಕಡೆಯೂ ಮಧ್ಯ ಮಧ್ಯ ಚುಕ್ಕಿಯನ್ನು ಮಾಡಿ, ಧಾನ್ಯ ಸಮೃದ್ಧಿಗಾಗಿ ಅಕ್ಕಿ ಹರಡಿದ ಹರಿವಾಣದಲ್ಲಿ ಈ ಪ್ರತಿಮೆಗಳಿಗೆ ಅರಿಶಿನದ ಬೇರನ್ನು ದಾರದಿಂದ ಸುತ್ತು ಬರುವಂತೆ ಕಟ್ಟುವುದು, ಸೌಮಂಗಲ್ಯದ ತಾಳಿಯ ಪ್ರತಿನಿಧಿಯನ್ನು ಪೂಜಿಸಬೇಕು.
ಈ ವ್ರತವನ್ನು ಪತಿ ಸಂಜೀವಿನಿ ವ್ರತವೆಂದೂಕರೆಯುತ್ತಾರೆ. ದೀಪದ ಕಂಬದಲ್ಲಿ ಶಿವನನ್ನು ಆವಾಹಿಸಿ ಪೂಜಿಸುವುದರಿಂದ ಇದಕ್ಕೆ ಜ್ಯೋತಿರ್ಭೀಮೇಶ್ವರ ವ್ರತವೆಂದು ಹೆಸರು. ಇಲ್ಲಿ ಭೀಮ ಎನ್ನುವುದು ಬಲ ಎಂಬುದಕ್ಕೆ ಪರ್ಯಾಯ ಪದ. ಮೈದಾ ಹಿಟ್ಟಿನಲ್ಲಿ ಭಂಡಾರ ಮಾಡಿ, ಅಣ್ಣ-ತಮ್ಮಂದಿರಿಂದ ಹೊಸ್ತಿಲಿನ ಮೇಲೆ ಅದನ್ನು ಒಡೆಸಿ ದಕ್ಷಿಣೆ ನೀಡುವ ಮೂಲಕ ವ್ರತ ಸಂಪನ್ನವಾಗುತ್ತದೆ. ಹೆಣ್ಣು ಮಕ್ಕಳು ಒಂಭತ್ತು ವರ್ಷ ಇದನ್ನು ನಡೆಸಿ, ಒಂಭತ್ತು ಎಳೆಯ ಗಂಟು ಹಾಕಿದ ದಾರವನ್ನು ಬಲಗೈ ಮುಂಭಾಗದಲ್ಲಿ ಕಟ್ಟಿಕೊಳ್ಳುವುದು ವಾಡಿಕೆ. ಈ ಬಾರಿ ಆಗಸ್ಟ್ 6 ರಂದು ಮಂಗಳವಾರ ಭೀಮನ ಅಮವಾಸ್ಯೆ ಬರಲಿದೆ. ಮರುದಿನ ಶ್ರಾವಣ ಮಾಸ ಆರಂಭವಾಗಲಿದೆ.
- ಗುರುರಾಜ ಪೋಶೆಟ್ಟಿಹಳ್ಳಿ