

ಭಾರತೀಯರಿಗೆ ಪ್ರತಿಯೊಂದು ದಿನವೂ ಹಬ್ಬದ ಸಂಭ್ರಮವೇ. ಅದರಲ್ಲಿ ಕೆಲವು ದಿನಗಳೇ ಪವಿತ್ರ ದಿನಗಳೆಂದು ಗಣಿಸಲ್ಪಟ್ಟಿವೆ. ಹೀಗೆ ಜೈನರ ಪವಿತ್ರ ದಿನಗಳಲ್ಲೊಂದು ಶ್ರುತ ಪಂಚಮಿ. ಕ್ರಿ.ಪೂ. 1ನೇ ಶತಮಾನ ಪೂರ್ವದಲ್ಲಿ ಯಾವುದೇ ರೀತಿಯ ಗ್ರಂಥಗಳಿರಲಿಲ್ಲ. ಜೈನ ಮುನಿಗಳು ಮಾಡಿದ ಪ್ರವಚನವನ್ನೇ ಆಲಿಸಿ ಜನರು ತಮ್ಮ ದೈನಂದಿನ ಕಾರ್ಯಗಳನ್ನು ಮಾಡುತ್ತಿದ್ದರಂತೆ.
ಆದರೆ ಒಂದು ಸಲ ಧರಸೇನ ಆಚಾರ್ಯರೆಂಬ ಗುರುಗಳು ಮಾಡಿದ ಪ್ರವಚನ ಆಲಿಸಿದ ಜಿನರು, 'ಪುನಃ ಪ್ರವಚನ ಮಾಡಿ' ಎಂದರಂತೆ. ಈ ಪ್ರಕರಣದ ಫಲದಂತೆ ಎಚ್ಚರಗೊಂಡ ಗುರುಗಳು ಇನ್ನು ಮುಂದೆ ಪ್ರವಚನ ಸಾಲದು ಗ್ರಂಥರೂಪದಲ್ಲಿ ರಚಿಸಿದರೆ ಉತ್ತಮ ಎಂದು ಭಾವಿಸಿ ತನ್ನ ಶಿಷ್ಯರಾದ ಪುಷ್ಪದಂತ ಆಚಾರ್ಯ ಮತ್ತು ಬೂತಬಲ ಆಚಾರ್ಯರನ್ನು ನೇಮಿಸಿ ತಾನು ಹೇಳಿದಂತೆ ಗ್ರಂಥ ರಚಿಸಲು ತಿಳಿಸಿದರು. ಆ ದಿನವೇ ಜ್ಯೇಷ್ಠ ಶುದ್ಧ ಪಂಚಮಿ ದಿನ ಆಗಿದ್ದು, ಶ್ರುತ ಪಂಚಮಿ ಎನಿಸಿದೆ.
ಇಬ್ಬರು ಆಚಾರ್ಯ ಗುರುಗಳು ಹೇಳಿದಂತೆ 3 ಗ್ರಂಥಗಳನ್ನು ರಚಿಸಿದರು. ಆ ಗ್ರಂಥಗಳೇ ಧವಳ, ಜಯಧವಳ ಮತ್ತು ಮಹಾಧವಳಗಳಾಗಿವೆ. ಈ ಎಲ್ಲಾ ಗ್ರಂಥಗಳು ಪ್ರಾಕೃತ ಭಾಷೆಯಲ್ಲಿ ರಚಿಸಲ್ಪಟ್ಟಿವೆ. ಈ ಗ್ರಂಥಗಳನ್ನು ಪೂರ್ಣಗೊಳಿಸಿ ಗುರುಗಳಿಗೆ ಒಪ್ಪಿಸಿದ ದಿನವೇ ಜೇಷ್ಠ ಶುದ್ಧ ಪಂಚಮಿ ದಿನ ಆಗಿದೆಯಂತೆ. ಈ ಗ್ರಂಥಗಳನ್ನು ಶತ್ರಗಳಿಂದ ರಕ್ಷಿಸಲು ಶ್ರವಣಬೆಳಗೊಳ ಜೈನ ಮಠಕ್ಕೆ ಸ್ಥಳಾಂತರಿದ್ದರಂತೆ. ಆ ದಿನವೂ ಸಹ ಜೇಷ್ಠ ಶುದ್ಧ ಪಂಚಮಿಯ ದಿನ.
ವಿಷ್ಣುವರ್ಧನ ಮಹಾರಾಜನ ಕಾಲದಲ್ಲಿ ಹಳೇಬೀಡಿನಲ್ಲಿ ನೂರಾರು ಜೈನ ಬಸದಿಗಳನ್ನು ಕೆಡವಿದನಂತೆ. ಇದರಿಂದ ಭೀತಿಗೊಂಡ ಜೈನರು ಮೂಡಬಿದ್ರೆಗೆ ಬಂದು ಐವರು ಶ್ರೇಷ್ಠರ ಸಮ್ಮುಖದಲ್ಲಿ ಈ ಗ್ರಂಥಗಳನ್ನು ಜೈನ ಸ್ವಾಮೀಜಿ ಚಾರುಕೀರ್ತಿ ಭಟ್ಟಾರಕರಿಗೆ ಒಪ್ಪಿಸಿದರಂತೆ. ಆ ದಿನವೂ ಸಹ ಜೇಷ್ಠ ಶುದ್ಧ ಪಂಚಮಿ.
ಈಚೆಗೆ 1999ರ ನಂತರ ಶ್ರವಣ ಬೆಳಗೊಳದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಶ್ರೀಯವರು ಈ 3 ಪ್ರಾಕೃತ ಗ್ರಂಥಗಳನ್ನು 40 ಕ್ಕೂ ಮಹತ್ವದ ಸಂಪುಟಗಳಾಗಿ ಕನ್ನಡಕ್ಕೆ ಪರಿವರ್ತಿಸಿ ಪ್ರಸ್ತುತ ರೂಪದಲ್ಲಿ ರಚಿಸಿದರು. ಆ ದಿನವೂ ಜೇಷ್ಠ ಶುದ್ಧ ಪಂಚಮಿ.
ಈ ವರ್ಷ ಶ್ರುತ ಪಂಚಮಿ 13.06.2013 ರಲ್ಲಿ ಆಚರಿಸಲಾಗುತ್ತಿದೆ. ಈ ದಿನ ಗುರುವಾರ ಆಗಿದ್ದು, ಗುರು ಪುಷ್ಯಯೋಗ ಎಂಬ ವಿಶೇಷ ದಿನವೂ ಅಗಿರುತ್ತದೆ. ಈ ಕಾಲದಲ್ಲಿ ಗುರು ಅಸ್ತನಾಗಿದ್ದರೂ ಶುಕ್ರನು ಮಾತ್ರ ಕ್ಷೇತ್ರ ಮಿಥುನ ರಾಶಿಯಲ್ಲಿದ್ದು, ದೋಷ ಪರಿಹಾರ ಆಗಿದೆ. ಈ ದಿನ ಜೈನರು ಹಿಂದಿನ ಗ್ರಂಥಗಳ ಭಂಡಾರಕ್ಕೆ ವಿಶೇಷ ಪೂಜೆ ಮಾಡುವುದರಿಂದಲೇ ಶ್ರುತ ಪಂಚಮಿ ಎಂಬ ಹೆಸರು ಬಂತು.
- ರತ್ನರಾಜ್ ಜೈನ್