ಶಂಕರ ನಮನ

ಯಾವಾಗ ಧರ್ಮಕ್ಕೆ ಗ್ಲಾನಿಯೂ, ಅಧರ್ಮಕ್ಕೆ ಅಭ್ಯುತ್ಥಾನವೂ ಉಂಟಾಗುತ್ತದೆಯೋ ಆಗ ನಾನು ಅವತರಿಸುತ್ತೇನೆ...
ಶಂಕರ ನಮನ
Updated on: 

ಯಾವಾಗ ಧರ್ಮಕ್ಕೆ ಗ್ಲಾನಿಯೂ, ಅಧರ್ಮಕ್ಕೆ ಅಭ್ಯುತ್ಥಾನವೂ ಉಂಟಾಗುತ್ತದೆಯೋ ಆಗ ನಾನು ಅವತರಿಸುತ್ತೇನೆ ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅದರಂತೆಯೇ ಅಂದೊಮ್ಮೆ ನಾಸ್ತಿಕವಾದ, ಚಾರ್ವಾಕವಾದಗಳು ರಾಷ್ಟ್ರದಲ್ಲಿ ಎಲ್ಲೆಲ್ಲಿಯೂ ಹರಡಿದ್ದವು. ಜನರಲ್ಲಿ ಧರ್ಮ ಶ್ರದ್ಧೆ ಕುಂಠಿತವಾಗಿ, ಅನಾಚಾರ ತುಂಬಿ ಹೋಗಿದ್ದವು ಹಾಗೂ ಇತರ ಮತಗಳ ಹಾವಳಿಯಿಂದ ಹಿಂದೂ ಸನಾತನ ಆರ್ಯ ವೈದಿಕ ಧರ್ಮಕ್ಕೆ ಸಾಕಷ್ಟು ಪೆಟ್ಟು ಬಿದ್ದಂತಾಗಿತ್ತು.
ಇಂಥ ಕಾಲದಲ್ಲಿ ಸಾಕ್ಷಾತ್ ಪರಮೇಶ್ವರನ ಅಂಶವಾಗಿ ಶಂಕರಾಚಾರ್ಯರು ಕೇರಳದ ಕಾಲಟಿ ಎಂಬಲ್ಲಿ ಶಿವಗುರು ಹಾಗೂ ಆರ್ಯಾಂಬೆ ದಂಪತಿಯ ಮಗನಾಗಿ ವಿಭವ ಸಂವತ್ಸರದ ವೈಶಾಖ ಶುಕ್ಲ ಆರಿದ್ರ ನಕ್ಷತ್ರದಲ್ಲಿ, ಪಂಚಮಿ ದಿನ (ಎಲ್ಲ ಗ್ರಹಗಳು ಉಚ್ಚ ಸ್ಥಾನದಲ್ಲಿದ್ದಾಗ) ಅಭಿಜಿನ್ ಮುಹೂರ್ತದಲ್ಲಿ ಜನ್ಮ ತಾಳಿದರು. ಪಿತೃಗಳು ಮಗುವಿಗೆ ಶಂಕರ ಎಂದು ನಾಮಕರಣ ಮಾಡಿದರು. ಶಂಕರ ಎಂದರೆ ಶಂ ಕರೋತಿ ಇತಿ ಶಂಕರಃ,  ಶಂ ಎಂದರೆ ಶಾಂತಿಯನ್ನು, ಕರೋತಿ ಎಂದರೆ ಉಂಟು ಮಾಡುವನು ಎಂದು. ಅಂದರೆ ಎಲ್ಲರಿಗೂ ಶಾಂತಿಯನ್ನುಂಟು ಮಾಡುವನು ಎಂದು.
ಇವರ ಜೀವನ ಸಾಧನೆಗಳನ್ನು ಸಂಖ್ಯಾಶಾಸ್ತ್ರ ಪ್ರಕಾರ ಒಂದೇ ಶ್ಲೋಕದಲ್ಲಿ ಹೇಳಬಹುದು.
ಅಷ್ಟ ವರ್ಷೆ ಚತುರ್ವೇದೀ
ದ್ವಾದಶೀ ಸರ್ವ ಶಾಸ್ತ್ರವಿತ್‌೤
ಷೋಡಶೇ ಕೃತವಾನ್ ಭಾಷ್ಯಂ
ದ್ವಾತ್ರಿಂಶೇ ಮುನಿರಭೈಗಾತ್‌॥
ಶಂಕರರಿಗೆ 3ನೇ ವರ್ಷದಲ್ಲಿ ಚೂಡಾಕರ್ಮ. 5ನೇ ವರ್ಷದಲ್ಲಿ ಉಪನಯನ ಸಂಸ್ಕಾರ ಹಾಗೂ ಅದೇ ವರ್ಷದಿಂದ ವೇದಾಧ್ಯಯನ ಪ್ರಾರಂಭ. 7ನೇ ವಯಸ್ಸಿನಲ್ಲಿ ಕನಕಧಾರ ಸ್ತ್ರೋತ್ರ ರಚಿಸಿ ಕಡು ಬಡ ಮಹಿಳೆಗೆ ಭಾಗ್ಯಲಕ್ಷ್ಮಿಯ ಬಂಗಾರದ ನೆಲ್ಲಿಕಾಯಿಗಳ ಮಳೆಯನ್ನೇ ಸುರಿಸಿ ಬಡತನವನ್ನು ನೀಗಿಸಿದರು.  ಈ ಕನಕಧಾರಾ ಸ್ತೋತ್ರ 21 ಶ್ಲೋಕಗಳಿಂದ ಕೂಡಿದೆ. ಇದು ಭಕ್ತರಿಗೆ ಕಲ್ಪವೃಕ್ಷ, ಕಾಮಧೇನುವಿನಂತೆ ಇದೆ. ಬಾಲಕ ಶಂಕರ ಪವಾಡ ಪುರುಷ ಎಂಬುದಕ್ಕೆ ಇದೇ ಸಾಕ್ಷಿ.
ಶಂಕರರು 8ನೇ ವರ್ಷಕ್ಕೆ ನಾಲ್ಕು ವೇದಗಳನ್ನೂ ಸಂಪೂರ್ಣ ಅಧ್ಯಯನ ಮಾಡಿದ್ದರು. ಸಾಮಾನ್ಯ ಜನರಿಗೆ 4 ವೇದಗಳನ್ನು ಸಂಪೂರ್ಣವಾಗಿ ಕಲಿಯಬೇಕಾದರೆ ಕನಿಷ್ಠ 16 ವರ್ಷವಾದರೂ ಬೇಕು. ಆದರೆ ಶಂಕರಾಚಾರ್ಯರು ಕೇವಲ 4 ವರ್ಷದಲ್ಲಿ ಸಂಪೂರ್ಣ ಅಧ್ಯಯನ ಮಾಡಿದ್ದರು. ಇದೇ 8ನೇ ವಯಸ್ಸಿನಲ್ಲಿ ಗೋವಿಂದ ಭಗವತ್ಪಾದರಿಂದ ಸನ್ಯಾಸ ಸ್ವೀಕಾರ ಆಯಿತು. 12ನೇ ವಯಸ್ಸಿಗೆ ಸರ್ವ ಶಾಸ್ತ್ರಗಳ ಅಧ್ಯಯನ, ಪುರಾಣ ಧರ್ಮ ಶಾಸ್ತ್ರಗಳು, ರಾಮಾಯಣ ಹಾಗೂ ಮಹಾಭಾರತ ಗ್ರಂಥಗಳು, ಯೋಗ, ಸಾಂಖ್ಯ, ಅಲಂಕಾರ, ಛಂದಸ್ಸು ಎಲ್ಲ ಶಾಸ್ತ್ರಗಳನ್ನು ಕರಗತ ಮಾಡಿಕೊಂಡಿದ್ದರು. 16ನೇ ವಯಸ್ಸಿನಲ್ಲಿ ಶಂಕರರು ಪ್ರಸ್ಥಾನತ್ರಯತ್ರಗಳಾದ ಬ್ರಹ್ಮಸೂತ್ರ, ಭಗವದ್ಗೀತೆ ಹಾಗೂ ಉಪನಿಷತ್‌ಗೆ ಭಾಷ್ಯ ರಚಿಸಿದರು. 17ನೇ ವಯಸ್ಸಿನಿಂದ 32ನೇ ವಯಸ್ಸಿನಲ್ಲಿ ಅದ್ವೈತ ವೇದಾಂತ ಪ್ರಸಾರವನ್ನು ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಕಾಲುನಡಿಗೆಯಲ್ಲಿ 4 ಬಾರಿ ಮಾಡಿದ್ದರು. ಇದರ ಮಧ್ಯದಲ್ಲಿ 4 ದಿಕ್ಕಿನಲ್ಲೂ ಚತುರಾಮ್ನಾಯ ಪೀಠ ಸ್ಥಾಪಿಸಿದರು.
ಪೂರ್ವ
ಪೂರ್ವದಲ್ಲಿನ ಜಗನ್ನಾಥ ಕ್ಷೇತ್ರವಾದ ಪುರಿಯಲ್ಲಿ ಗೋವರ್ಧನ ಪೀಠ ಸ್ಥಾಪಿಸಿ ತಮ್ಮ ನೇರ ಶಿಷ್ಯರಾದ ಹಸ್ತಾಮಲಕಾಚಾರ್ಯರನ್ನು ಪ್ರಥಮ ಪೀಠಾಧಿಕಾರಿಗಳಾಗಿ ಮಾಡಿ, ಋಗ್ವೇದದ ಮಹಾಕಾವ್ಯ 'ಪ್ರಜ್ಞಾನಂ ಬ್ರಹ್ಮ' ಎಂಬ ಮಂತ್ರವನ್ನು ಈ ಪೀಠದ ಮೂಲ ಮಂತ್ರವನ್ನಾಗಿ ಮಾಡಿದರು.
ಪಶ್ಚಿಮ
ಪಶ್ಚಿಮ ದಿಕ್ಕಿನಲ್ಲಿರುವ ಗೋಮತೀ ತೀರ್ಥದಲ್ಲಿರುವ ದ್ವಾರಕಾ ನಗರದಲ್ಲಿ ಕಾಳಿಕಾ ಪೀಠವನ್ನು ಸ್ಥಾಪಿಸಿ, ತಮ್ಮ ನೇರ ಶಿಷ್ಯರಾದ ಪದ್ಮಪಾದಾಚಾರ್ಯರನ್ನು ಪ್ರಥಮ ಪೀಠಾಧಿಪತಿಗಳನ್ನಾಗಿ ನೇಮಿಸಿದರು. ಸಾಮವೇದದ 'ತತ್ವಮಸಿ' ಎಂಬ ಮಂತ್ರವೇ ಈ ಪೀಠದ ಮಹಾವಾಕ್ಯ.
ಉತ್ತರ
ಉತ್ತರ ದಿಕ್ಕಿನಲ್ಲಿರುವ ಹಿಮಾಲಯದ ಅಲಕಾನಂದ ನದಿ ತೀರದಲ್ಲಿರುವ ಬದರಿ ಕ್ಷೇತ್ರದಲ್ಲಿ ಜ್ಯೋತಿರ್ಪೀಠವನ್ನು ಸ್ಥಾಪಿಸಿ, ತಮ್ಮ ನೇರ ಶಿಷ್ಯರಾದ ತೋಟಾಕಾಚಾರ್ಯರನ್ನು ಪ್ರಥಮ ಪೀಠಾಧಿಪತಿಗಳನ್ನಾಗಿ ಮಾಡಿದರು. ಇಲ್ಲಿ ಅಥರ್ವಣ ವೇದದ 'ಅಯಮಾತ್ಮಾ ಬ್ರಹ್ಮ' ಎಂಬ ಮಂತ್ರವು ಈ ಪೀಠಕ್ಕೆ ಮಹಾ ವಾಕ್ಯವನ್ನಾಗಿ ಮಾಡಿದರು.
ದಕ್ಷಿಣ
ದಕ್ಷಿಣ ದಿಕ್ಕಿನ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಶಾರದಾ ಪೀಠ ಸ್ಥಾಪಿಸಿ, ತಮ್ಮ ನೇರ ಶಿಷ್ಯರಾದ ಸುರೇಶ್ವರಾಚಾರ್ಯರನ್ನು ಪ್ರಥಮ ಪೀಠಾಧಿಪತಿಯಾಗಿ ನೇಮಿಸಿ, ಯಜುರ್ವೇದದ 'ಅಹಂ ಬ್ರಹ್ಮಾಸಿ' ಎಂಬ ಮಂತ್ರವನ್ನು ಈ ಪೀಠಕ್ಕೆ ಮಹಾ ವಾಕ್ಯವನ್ನಾಗಿ ಮಾಡಿದರು. ಈಗಲೂ ಈ 4 ಪೀಠಗಳು ವೇದ ವೇದಾಂತಗಳ ಸಂದೇಶವನ್ನು, ಧರ್ಮ ಪ್ರಸಾರವನ್ನು ಅವಿಚ್ಛಿನ್ನವಾಗಿ ಮಾಡುತ್ತಾ ಬರುತ್ತಿದೆ.
ಶಾರದಾಂಬೆಯ ಕೃಪಾನುಗ್ರಹಕ್ಕೆ ಪಾತ್ರರಾಗಿದ್ದ ಶಂಕರಾಚಾರ್ಯರು, ಕಾಶ್ಮೀರದ ಶಾರದಾ ಸರ್ವಜ್ಞ ಪೀಠವನ್ನೇರಿ ಸರ್ವಜ್ಞರೆನಿಸಿಕೊಂಡ ಏಕೈಕ ವ್ಯಕ್ತಿ.
ನೂರಾರು ವರ್ಷಗಳಲ್ಲಿ ಮಾಡಬೇಕಾಗಿದ್ದ ಲೋಕ ಕಲ್ಯಾಣವನ್ನು ಶಂಕರಾಚಾರ್ಯರು ಅಲ್ಪಾವಧಿಯಲ್ಲಿ ಮಾಡಿ ಹಿಮಾಲಯ ಪರ್ವತದ ಕೇದಾರಿನ ಗುಹೆಯೊಳಗೆ 32ನೇ ವಯಸ್ಸಿನಲ್ಲಿ ಅಂತರ್ಧಾನರಾದರು.
ನಾಮ ಸಂಖ್ಯೆ ಪ್ರಕಾರ 'ಶಂಕರ' ಎಂಬುದಕ್ಕೆ ಸಂಖ್ಯೆ 5 ಬರುವುದು. ಅವರು ಜನಿಸಿದ ದಿನ ಪಂಚಮಿ ಅಂದರೆ 5. ಹೀಗೆ ಶಂಕರಾಚಾರ್ಯರ ಜೀವನ ಸಾಧನೆಯನ್ನು ಸಂಖ್ಯಾಶಾಸ್ತ್ರ ರೀತಿಯಲ್ಲೂ ನೋಡಬಹುದು. ಇವರ ಜಯಂತಿಯನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನದಂದು ದೇಶದಲ್ಲೆಲ್ಲ ಆಚರಿಸುವರು.

- ಪ್ರಕಾಶಬಾಬು ಕೆ.ಆರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com