ವಿಚಿತ್ರ ಪ್ರಾಣಿ!

ವಿಚಿತ್ರ ಪ್ರಾಣಿ!
Updated on: 

ಜಗತ್ತಿನ ಬಹುತೇಕ ಧರ್ಮಗಳ ಪುರಾಣಗಳಲ್ಲಿ ನಾನಾ ರೀತಿಯ ಚಿತ್ರವಿಚಿತ್ರ ಪ್ರಾಣಿ ಪಕ್ಷಿ, ಮಾನವ-ಪ್ರಾಣಿಗಳ ಮಿಶ್ರಣದ ಜೀವಿಗಳ ರೋಚಕ ಕಥೆಗಳಿವೆ. ಈ ದಂತಕಥೆ, ಪುರಾಣಗಳಲ್ಲಿ ಬರುವ ಮಾಯಾಜಾಲ  ಮಾನವ, ದಾನವ ಪಾತ್ರಗಳೂ ಅವರಿಗೆ ಸಹಾಯಕರಾಗಿರುವ ಅಥವಾ ವಾಹನಗಳಾಗಿರುವ ಅನೇಕ ಚಿತ್ರವಿಚಿತ್ರ ಪ್ರಾಣಿ, ಪಕ್ಷಿಗಳು ನಾಯಕ ನಾಯಕಿಯರನ್ನೂ ಮೀರಿಸಿ ಪ್ರಭಾವ ಬೀರುತ್ತವೆ.
ಅರ್ಧ ಮನುಷ್ಯ ಇನ್ನರ್ಧ ಪ್ರಾಣಿಯೋ ಪಕ್ಷಿಯೋ ಅಥವಾ ಪ್ರಾಣಿಗಳೇ ಈ ರೀತಿ ಆಗಿರುವ, ಕ್ರೂರಾತಿಕ್ರೂರ ಕೊಂಬುಕೋರೆಗಳ ಈ ಜೀವಿಗಳು ಓದುಗರನ್ನು ರೋಮಾಂಚಿತಗೊಳಿಸುತ್ತವೆ.
ಈ ಕಲ್ಪನಾ ವಿಲಾಸಕ್ಕೆ ಮೂಲ ಕಾರಣ ಜೀವವಿಕಾಸದ ಹಾದಿಯಲ್ಲಿ ರೂಪಾಂತರ ಹೊಂದಿದ ಅನೇಕ ಜೀವಿಗಳ ಪ್ರಭಾವವಿರಬಹುದು. ಕಲ್ಪನೆಯ ಮೋಡಗಳಲ್ಲಿ ತೇಲಾಡುವ ಮಾನವ ಇಂತಹ ಜೀವಿಗಳಿಗೆ ಸಂಕರ ರೂಪ ತೊಡಿಸಿ, ಅದಕ್ಕೊಂದು ಪೌರಾಣಿಕ ಕಥೆಯ ಚೌಕಟ್ಟು ಹಾಕಿದ.
ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ನಮ್ಮ ಪಶ್ಚಿಮಘಟ್ಟಗಳಲ್ಲಿ ಹೆಚ್ಚಾಗಿ ಸಿಗುವ ಹಾರುವ ಹಲ್ಲಿಗಳು. ಇವು ಡ್ರ್ಯಾಗನ್‌ಗಳ ಪಳೆಯುಳಿಕೆಯಂತಿವೆ. ಕಲ್ಪನೆಯ ಕುದುರೆ ಏರಿದವರಿಗೆ ಇಷ್ಟು ಸಾಕು. ಈ ಹಾರುವ ಹಲ್ಲಿಗಳಿಗೆ ಬೃಹದಾಕಾರ, ಕೋರೆದಾಡಿಗಳನ್ನು ಮೂಡಿಸಿ, ಸ್ಪೆಷಲ್ ಎಫೆಕ್ಟ್‌ಗಾಗಿ ಅವುಗಳ ಬಾಯಿಯಿಂದ ಬೆಂಕಿಯನ್ನು ಉಗುಳಿಸಿದ ಪ್ರಾಣಿಗಳ ರಕ್ತ ಹೀರುವ ನಿಶಾಚರ ಆಗಿರುವ ಒಂದು ಬಗೆಯ ಬಾವಲಿಗಳು ಮುಂದೆ ಮನುಷ್ಯರ ರಕ್ತ ಹೀರುವ ಡ್ರಾಕೂಲಾಗಳಾಗಿ ವಿಜೃಂಭಿಸಿದವು.
ನಮ್ಮ ಪುರಾಣಗಳಲ್ಲೂ ಅನೇಕ ಅದ್ಭುತವೆನಿಸುವಂತಹ ಪ್ರಾಣಿಪಕ್ಷಿಗಳ ವರ್ಣನೆಯೂ ಇದೆ. ರಾಮಾಯಣದಲ್ಲಿನ ಸಂಪಾತಿ, ಜಟಾಯು ಪಕ್ಷಿಗಳು, ಹನುಮಂತ, ಜಾಂಬವಂತ ಮುಂತಾದ ಪಾತ್ರಗಳು. ವೈಕುಂಠದಲ್ಲಿ ಶ್ರೀಮನ್ನಾರಾಯಣನ ಹಾಸಿಗೆಯಾದ ಸಾವಿರ ಹೆಡೆಯ ಆದಿಶೇಷ. ಕೈಲಾಸದಲ್ಲಿರುವ ನಂದಿ, ಭೃಂಗಿ ಮುಂತಾದ ಪಾತ್ರಗಳು ಭಕ್ತಿಯ ಜತೆಗೆ ರೋಚಕತೆಯನ್ನೂ ಉಂಟುಮಾಡಿವೆ.
ಮಹಾವಿಷ್ಣುವಿನ ಗರುಡ, ಇಂದ್ರನ ನಾಲ್ಕು ಕೋರೆ ಹಾಗೂ ಐದು (ಕೆಲಮೊಂದು ಕಡೆ ಏಳು)  ಸೊಂಡಿಲಿನ  ಐರಾವತ ಎಂಬ ಆನೆ, ಆನೆಯ ಮುಖ ಸಿಂಹದ ದೇಹ ಹೊಂದಿದ ಶರಭ, ಎರಡು ಮುಖದ ಗಂಡಭೇರುಂಡ ಪಕ್ಷಿ, ವೈಕುಂಠದಲ್ಲಿರುವ ಸಹಸ್ರ ಹೆಡೆಯ ಶೇಷ, ಕುದುರೆ ಮುಖ ಮನುಷ್ಯ ದೇಹದ, ಮನುಷ್ಯ ಮುಖ ಕುದುರೆ ದೇಹದ (ಗ್ರೀಕಿನ ಸೆಂಟಾರೆಸ್) ಕಿನ್ನರ ಕಿಂಪುರುಷರು, ವರಾಹ, ಸಿಂಹದ ಮುಖ ಹೊಂದಿದ ವಿಷ್ಣುವಿನ ರೂಪ ಆನೆ ಮುಖದ ಗಣಪ, ಆರು ಮುಖದ ಷಣ್ಮುಖ, ಹತ್ತು ತಲೆಯ ರಾವಣ, ಚತುರ್ಮುಖ ಬ್ರಹ್ಮ ಅರ್ಧಸರ್ಪ ಅರ್ಧ ರಾಕ್ಷಸ ದೇಹದ ರಾಹು ಕೇತು, ಕೋಣನ ಮುಖದ ಮಹಿಷಾಸುರ, ಸಾಗರದಲ್ಲಿ ಇರುವವಳೆಂದು ಹೇಳಲಾಗುವ ಮತ್ಸ್ಯಕನ್ಯೆ, ಇಂತಹ ಅಸಂಖ್ಯ ಉದಾಹರಣೆಗಳು ಸಿಗುತ್ತವೆ.
ಅಂತಹ ಕೆಲವು ಅಪೂರ್ವ ರೋಚಕ ವಾಸ್ತವ ಎನ್ನುವಷ್ಟು ಪ್ರಭಾವ ಬೀರಿದ ಕಾಲ್ಪನಿಕ ಜೀವಿಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬೇಕಿದೆ.

= ಎಚ್.ಜಿ.ಮಳಗಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com