ವಿನಯ ರಾಜ

Updated on: 

ನಯಸ್ಯ ವಿನಯೋ ಮೂಲಂ ವಿನಯಃ ಶಾಸ್ತ್ರನಿಶ್ಚಯಃ
ವಿನಯೋ ಹೀಂದ್ರಿಯಜಯಸ್ತದ್ಯುಕ್ತಃ ಶಾಸ್ತ್ರಮೃಚ್ಛತಿ
ನೀತಿಗೆ ಮೂಲ ವಿನಯ. ವಿನಯವೆಂದರೆ ಶಾಸ್ತ್ರಗಳ ಖಚಿತವಾದ ಅರಿವು. ವಿನಯವೆಂದರೆ ಇಂದ್ರಿಯ ಜಯವೂ ಹೌದು. ಅದನ್ನುಳ್ಳವನು ಶಾಸ್ತ್ರವನ್ನು ತಿಳಿಯುತ್ತಾನೆ ಎಂದು ಶ್ಲೋಕಾರ್ಥ.
ವಿದ್ಯೆ ವಿನಯವನ್ನು ಕೊಡುತ್ತದೆ. ವಿನಯದಿಂದ ಅರ್ಹತೆ ಬರುತ್ತದೆ. ಅರ್ಹತೆಯ ಕಾರಣ ಹಣವೂ ಬರುತ್ತದೆ. ಹಣದಿಂದ ಧರ್ಮವೂ, ಅದರಿಂದ ಸುಖವೂ ಉಂಟಾಗುತ್ತದೆ ಎನ್ನುತ್ತದೆ ಸುಭಾಷಿತ. ರಾಮ, ಲಕ್ಮಣರು ಯುದ್ಧರಂಗದಲ್ಲಿ ಮೂರ್ಛಿತರಾಗಿ ಬಿದ್ದಿದ್ದಾಗ ಆಂಜನೇಯ ಜಾಂಬವನ ಮಾತಿನಂತೆ ಹಿಮಾಲಯದ ಔಷಧಿ ಪರ್ವತವನ್ನು ಲಂಕೆಗೆ ಹೊತ್ತು ತಂದ. ಅದಕ್ಕೆ ಮೊದಲು ಯಾರೂ ಸಾಧಿಸದಿದ್ದ ಸಾಗರೋಲ್ಲಂಘನ ಕಾರ್ಯವನ್ನು ಸಾಧಿಸಿದ. ಸೀತಾರಾಮರಿಗೆ ಪ್ರೀತಿಪಾತ್ರನಾಗಿ ರಾಮನ ಉಂಗುರವನ್ನು ಲಂಕೆಯ ಅಶೋಕವನದಲ್ಲಿದ್ದ ಸೀತೆಗೆ ಕೊಟ್ಟು, ಆಕೆಯಿಂದ ಚೂಡಾಮಣಿಯನ್ನು ತಂದು ರಾಮನಿಗೆ ಕೊಟ್ಟು, 'ಸುಗ್ರೀವನ ಸನ್ನಿಧಿಯಲ್ಲಿ ನನಗಿಂತ ಚಿಕ್ಕವರ್ಯಾರೂ ಇಲ್ಲ' ಎಂದು ವಿನಯವನ್ನು ತೋರಿಸುತ್ತಿದ್ದ.  
'ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ' ಎನ್ನುವ ವಿನಯ ಬಸವಣ್ಣನವರದ್ದು. ವಿನಯ ಸಜ್ಜನಿಕೆಯ ಸಲ್ಲಕ್ಷಣ. ಇಂದು ಇದು ಕ್ಷೀಣವಾಗುತ್ತಾ ಬರುತ್ತಿರುವುದು ಸಾಮಾಜಿಕ ಅಸಮತೋಲನಕ್ಕೆ ಕಾರಣವಾದೀತು. ಅನಂತರ ಕಾಲದಲ್ಲಿ ಮನುಷ್ಯನ ಜೀವಿತಾವಧಿ ದೊಡ್ಡದೇನಲ್ಲ. ಆದುದರಿಂದ ತಿಳಿದವರು ತಾವು ತಿಳಿದದ್ದು ಕಡಿಮೆ ಎನ್ನುತ್ತಾರೆ, ಇನ್ನೂ ಹೆಚ್ಚು ತಿಳಿದುಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಾರೆ.
ವಿನಯವನ್ನು ಎಲ್ಲರೂ ಸ್ವಾಗತಿಸುತ್ತಾರೆ. ಅದು ಎಲ್ಲರ ಹೃದಯಗಳನ್ನು ಅರಳಿಸುತ್ತದೆ. ಬಹು ಚಿಕ್ಕ ಮೂರ್ತಿಯಾದ ವಿನಯ ವಿಶಾಲ ಪ್ರಪಂಚವನ್ನು ಆವರಿಸಿದಾಗ, ಎಲ್ಲ ಭೇದಭಾವಗಳ, ಆತಂಕ, ಸಣ್ಣತನ ನಾಶವಾಗಬಹುದು. ವಿನಯ ಸಕಲ ಸದ್ಗುಣಗಳ ತಳಹದಿ. ಅದಕ್ಕೆ ಖರ್ಚೇನೂ ಇಲ್ಲ. ಆದರೆ ಅದು ಎಲ್ಲವನ್ನೂ ಕೊಂಡುಕೊಳ್ಳುತ್ತದೆ.

= ಶಿವರಾಮ ಭಟ್ ಹತ್ತೊಕ್ಕಲು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com