ಶರತ್ಕಾಲದಲ್ಲಿ ಆಗಸ ಚಿನ್ನದ ಬಣ್ಣದಲ್ಲಿ ಕಂಗೊಳಿಸುತ್ತಿರುವಾಗ, ಹೂವುಗಳ ಸುಗಂಧ ವಾತಾವರಣವನ್ನು ಆವರಿಸುತ್ತಿದ್ದಂತೆ ನವರಾತ್ರಿಯ ಸಂಭ್ರಮ ಕಳೆಗಟ್ಟುತ್ತದೆ. ಕರ್ನಾಟಕದಲ್ಲಿ ನವರಾತ್ರಿ ಎಂದರೆ ಕೇವಲ ಒಂಬತ್ತು ರಾತ್ರಿಗಳ ಹಬ್ಬವಲ್ಲ.
ನಾಡಿನ ರಾಜವೈಭವ, ಜಾನಪದ ಸಂಪ್ರದಾಯಗಳು, ಕಲಾ ಪರಂಪರೆ ಮತ್ತು ಆದಿಶಕ್ತಿಯ ಮೇಲಿನ ಆಳವಾದ ಭಕ್ತಿಯ ಸುಂದರ ಸಂಗಮ. ಪ್ರಾಚೀನ ಆಚರಣೆಗಳು, ರಾಜಪರಂಪರೆಯ ವೈಭವ ಮತ್ತು ದೈನಂದಿನ ಬದುಕಿನ ಸಾಂಸ್ಕೃತಿಕ ಸಂಪ್ರದಾಯಗಳು ಒಂದಾಗಿ ಬೆರೆತು ನವರಾತ್ರಿಯನ್ನು ಅನನ್ಯ ಅನುಭವವನ್ನಾಗಿಸುತ್ತವೆ.
ಕರ್ನಾಟಕದ ನವರಾತ್ರಿ ಆಚರಣೆಗಳ ಕೇಂದ್ರಬಿಂದುವಾಗಿರುವುದು ವೈಭವೋಪೇತ ಮೈಸೂರು ದಸರಾ. ಈ ಹಬ್ಬವು ರಾಜ್ಯದ ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಣ್ಮುಂದೆ ತೆರೆದಿಡುತ್ತದೆ. ಕಣ್ಮನ ಸೆಳೆಯುವ ಅರಮನೆಯ ಬೆಳಕಿನ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಪ್ರದಾಯಿಕ ಪೂಜೆಗಳು ಮತ್ತು ಭವ್ಯ ಮೆರವಣಿಗೆಗಳು ಮೈಸೂರು ದಸರಾವನ್ನು ಇಂದಿಗೂ ಜೀವಂತವಾಗಿರಿಸಿವೆ. ಇದು ಒಡೆಯರ್ ರಾಜವಂಶದ ವೈಭವದ ಪರಂಪರೆಗೆ ಸಾಕ್ಷಿಯಾಗಿದೆ.
ದಸರೆ ಸಂದರ್ಭದಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸುವ ಮೈಸೂರು ಅರಮನೆ ರಾತ್ರಿಯ ಆಕಾಶದ ಹಿನ್ನೆಲೆಯಲ್ಲಿ ಚಿನ್ನದ ಕನಸಿನಂತೆ ಹೊಳೆಯುತ್ತದೆ. ವಿಜಯದಶಮಿಯಂದು ನಡೆಯುವ ಜಂಬೂ ಸವಾರಿ ಉತ್ಸವದ ಪ್ರಮುಖ ಆಕರ್ಷಣೆ. ಅಲಂಕೃತ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ತಾಯಿ ಚಾಮುಂಡೇಶ್ವರಿಯ ಉತ್ಸವಮೂರ್ತಿ, ಅದರೊಂದಿಗೆ ಸಾಗುವ ಆನೆಗಳು, ಸಾಂಪ್ರದಾಯಿಕ ವಾದ್ಯವೃಂದ, ಜಾನಪದ ಕಲಾವಿದರು ಮತ್ತು ವೈವಿಧ್ಯಮಯ ಸ್ತಬ್ಧಚಿತ್ರಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸುತ್ತವೆ.
ಮೈಸೂರಿನ ಆರಾಧ್ಯ ದೇವತೆಯಾದ ಚಾಮುಂಡೇಶ್ವರಿಯು ಮಹಿಷಾಸುರನನ್ನು ಸಂಹರಿಸಿ ಧರ್ಮವನ್ನು ಎತ್ತಿಹಿಡಿದ ಶಕ್ತಿಸ್ವರೂಪಿಣಿ ಎಂಬ ನಂಬಿಕೆ ಈ ಆಚರಣೆಯ ಹಿಂದಿದೆ. ಮಹಿಷಾಸುರನ ಕಥೆಯು ಮೈಸೂರಿನ ಐತಿಹಾಸಿಕ ಗುರುತಿನೊಂದಿಗೂ ನಿಕಟ ಸಂಬಂಧ ಹೊಂದಿದೆ. ಹೀಗಾಗಿ ಇಲ್ಲಿ ನವರಾತ್ರಿ ಕೇವಲ ಆಚರಣೆಯಾಗಿ ಉಳಿಯದೆ, ಧೈರ್ಯ, ಧರ್ಮ ಮತ್ತು ಸಾಂಸ್ಕೃತಿಕ ಹೆಮ್ಮೆಯ ಜೀವಂತ ಪರಂಪರೆಯಾಗಿ ಅನಾವರಣಗೊಳ್ಳುತ್ತದೆ.
ಕರ್ನಾಟಕ ರಾಜ್ಯದ ನವರಾತ್ರಿಯ ಅತ್ಯಂತ ಆಕರ್ಷಕ ಸಂಪ್ರದಾಯಗಳಲ್ಲಿ ಬೊಂಬೆ ಹಬ್ಬವೂ ಒಂದು. ಮನೆಮನೆಗಳಲ್ಲಿ ಬಣ್ಣಬಣ್ಣದ ಗೊಂಬೆಗಳನ್ನು ಬೆಸಸಂಖ್ಯೆಯಲ್ಲಿ ಮೆಟ್ಟಿಲುಗಳ ಮೇಲೆ ಸಾಲಾಗಿ ಜೋಡಿಸಿ ಪ್ರದರ್ಶಿಸುವುದು ಈ ಹಬ್ಬದ ವಿಶೇಷತೆ. ಪುರಾಣ, ಇತಿಹಾಸ, ಜನಪದ ಮತ್ತು ದೈನಂದಿನ ಬದುಕಿನ ಚಿತ್ರಣಗಳನ್ನು ಒಳಗೊಂಡ ಈ ಗೊಂಬೆಗಳ ಜಗತ್ತು ಪುಟ್ಟ ಕಲಾಲೋಕವನ್ನಾಗಿ ಪರಿವರ್ತಿಸುತ್ತದೆ.
ದೇವಾನುದೇವತೆಗಳ ಮೂರ್ತಿಗಳು, ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳು, ಹಳ್ಳಿಯ ಬದುಕು, ಮದುವೆಯ ಸಂಭ್ರಮ, ಪುಟ್ಟ ಮಾರುಕಟ್ಟೆಗಳು ಹಾಗೂ ಸಮಕಾಲೀನ ಸಮಾಜವನ್ನು ಪ್ರತಿಬಿಂಬಿಸುವ ದೃಶ್ಯಗಳು ಬೊಂಬೆ ಹಬ್ಬದ ಅಲಂಕಾರದಲ್ಲಿ ಸ್ಥಾನ ಪಡೆಯುತ್ತವೆ. ಪ್ರತಿಯೊಂದು ಗೊಂಬೆಗೂ ತನ್ನದೇ ಆದ ಅರ್ಥವಿರುತ್ತದೆ; ಪ್ರತಿಯೊಂದು ಜೋಡಣೆಯೂ ಒಂದೊಂದು ಕಥೆಯನ್ನು ಹೇಳುತ್ತದೆ.
ಬೊಂಬೆ ಹಬ್ಬ ಕೇವಲ ಅಲಂಕಾರದ ಸಂಪ್ರದಾಯವಲ್ಲ. ತಲೆಮಾರುಗಳಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದ ಗೊಂಬೆಗಳನ್ನು ಹೊರತೆಗೆದು ಜೋಡಿಸುವಾಗ ಹಳೆಯ ನೆನಪುಗಳು ಮನೆಯವರಿಗೆ ಮರುಕಳಿಸುತ್ತವೆ. ಹಿರಿಯರು ಮಕ್ಕಳಿಗೆ ಪೌರಾಣಿಕ ಕಥೆಗಳನ್ನು ಹೇಳುತ್ತಾರೆ. ನೆರೆಹೊರೆಯವರು ಮನೆಗಳಿಗೆ ಭೇಟಿ ನೀಡಿ ಗೊಂಬೆಗಳ ಪ್ರದರ್ಶನವನ್ನು ವೀಕ್ಷಿಸುತ್ತಾರೆ. ಪರಸ್ಪರ ಅರಿಶಿನ-ಕುಂಕುಮ ಹಾಗೂ ತಾಂಬೂಲ ವಿನಿಮಯ ಮಾಡಿಕೊಳ್ಳುವ ಮೂಲಕ ಆತ್ಮೀಯತೆಯ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ.
ತಮಿಳುನಾಡಿನಲ್ಲಿ ‘ಗೊಲು’ ಅಥವಾ ‘ಕೋಲು’, ಆಂಧ್ರಪ್ರದೇಶದಲ್ಲಿ ‘ಬೊಮ್ಮಲ ಕೊಲುವು’ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಈ ಸಂಪ್ರದಾಯವು ಕರ್ನಾಟಕದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಸೃಜನಶೀಲತೆ, ಸಮುದಾಯದ ಸೌಹಾರ್ದ ಮತ್ತು ತಲೆಮಾರುಗಳಿಂದ ಬಂದ ನೆನಪುಗಳನ್ನು ಉಳಿಸಿಕೊಳ್ಳುವ ಸುಂದರ ಕಲೆಯೇ ಬೊಂಬೆ ಹಬ್ಬ.
ನವರಾತ್ರಿ ಎಂದರೆ ಆದಿಶಕ್ತಿಯ ಮಹಿಮೆಯನ್ನು ಸಾರುವ ಪರ್ವಕಾಲ. ಕರ್ನಾಟಕದ ವಿವಿಧ ಭಾಗಗಳಲ್ಲಿ ದೇವಿಯನ್ನು ನಾನಾ ರೂಪಗಳಲ್ಲಿ ಆರಾಧಿಸಲಾಗುತ್ತದೆ. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ; ಮನೆಗಳಲ್ಲಿ ದೀಪಗಳು ಬೆಳಗುತ್ತವೆ. ಧೈರ್ಯ, ಸಮೃದ್ಧಿ, ಜ್ಞಾನ ಮತ್ತು ಸುಖ-ಶಾಂತಿ ದೊರೆಯಲಿ ಎಂದು ಭಕ್ತರು ದೇವಿಯಲ್ಲಿ ಪ್ರಾರ್ಥಿಸುತ್ತಾರೆ.
ಅನೇಕ ಮನೆಗಳಲ್ಲಿ ನವರಾತ್ರಿಯ ಒಂಬತ್ತು ದಿನಗಳನ್ನು ದುರ್ಗಾದೇವಿಯ ಒಂಬತ್ತು ರೂಪಗಳಾದ ನವದುರ್ಗೆಯ ಆರಾಧನೆಗೆ ಮೀಸಲಿಡಲಾಗುತ್ತದೆ. ಇನ್ನು ಕೆಲವು ಸಂಪ್ರದಾಯಗಳಲ್ಲಿ ಪ್ರಾದೇಶಿಕ ದೇವತೆಗಳು ಮತ್ತು ಸ್ಥಳೀಯ ಆಚರಣೆಗಳಿಗೆ ವಿಶೇಷ ಪ್ರಾಮುಖ್ಯವಿರುತ್ತದೆ. ಪೂಜಾ ವಿಧಾನಗಳು ಭಿನ್ನವಾಗಿದ್ದರೂ, ಎಲ್ಲ ಆಚರಣೆಗಳ ಹಿಂದಿರುವ ಆಶಯ ಒಂದೇ—ಕೆಟ್ಟದ್ದರ ವಿರುದ್ಧ ಒಳ್ಳೆಯದಕ್ಕೆ ಜಯ, ಕತ್ತಲೆಯ ವಿರುದ್ಧ ಬೆಳಕಿನ ವಿಜಯ.
ಮೈಸೂರಿನಲ್ಲಿ ಚಾಮುಂಡೇಶ್ವರಿಯ ಆರಾಧನೆಯಿಂದ ಹಿಡಿದು ರಾಜ್ಯದ ವಿವಿಧ ದೇವಾಲಯಗಳಲ್ಲಿ ನಡೆಯುವ ದುರ್ಗಾದೇವಿಯ ಪೂಜೆಯವರೆಗೆ, ಕರ್ನಾಟಕದ ನವರಾತ್ರಿ ಆಚರಣೆಗಳು ಸ್ಥಳೀಯ ಸಂಸ್ಕೃತಿಯಲ್ಲಿ ಭಕ್ತಿ ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನು ಸಾರುತ್ತವೆ.
ಕರ್ನಾಟಕದ ನವರಾತ್ರಿ ಸಂದರ್ಭದಲ್ಲಿ ವೈವಿಧ್ಯಮಯ ಜಾನಪದ ಕಲೆಗಳು ಹಬ್ಬದ ಸಂದರ್ಭದಲ್ಲಿ ಸಂಗೀತ, ನೃತ್ಯ, ನಾಟಕ ಮತ್ತು ಕಥನಕಲೆಗಳ ಮೂಲಕ ಜನರನ್ನು ಒಗ್ಗೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಸಾಂಪ್ರದಾಯಿಕ ಜಾನಪದ ಪ್ರದರ್ಶನಗಳು, ಭಕ್ತಿಗೀತೆಗಳು ಮತ್ತು ಪ್ರಾದೇಶಿಕ ಕಲಾಪ್ರಕಾರಗಳು ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡುತ್ತವೆ. ಮೈಸೂರಿನಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ದಸರೆಯ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಿದರೆ, ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಸ್ಥಳೀಯ ದೇವಾಲಯಗಳ ಉತ್ಸವಗಳು ಆಯಾ ಪ್ರದೇಶಗಳ ವಿಶಿಷ್ಟ ಸಂಪ್ರದಾಯಗಳನ್ನು ಅನಾವರಣಗೊಳಿಸುತ್ತವೆ.
ಪ್ರಾರ್ಥನೆ ಮತ್ತು ಪೂಜೆಯಷ್ಟೇ ಅಲ್ಲದೆ, ಸಂಗೀತ, ನೃತ್ಯ, ಕರಕುಶಲ ಕಲೆ ಮತ್ತು ಸಾಮೂಹಿಕ ಸಂಭ್ರಮದ ಮೂಲಕವೂ ಭಕ್ತಿಯನ್ನು ಅಭಿವ್ಯಕ್ತಿಸಬಹುದು ಎಂಬುದನ್ನು ನವರಾತ್ರಿ ಸಾರುತ್ತದೆ.
ನವರಾತ್ರಿಯ ಹತ್ತನೇ ದಿನವಾದ ವಿಜಯದಶಮಿ ಹಬ್ಬದ ಸಮಾಪ್ತಿಯನ್ನು ಸೂಚಿಸುವುದರ ಜೊತೆಗೆ ಸಾರ್ವಕಾಲಿಕ ಸಂದೇಶವೊಂದನ್ನು ಸಾರುತ್ತದೆ. ಅಧರ್ಮದ ವಿರುದ್ಧ ಧರ್ಮದ ವಿಜಯ, ಅಜ್ಞಾನದ ವಿರುದ್ಧ ಜ್ಞಾನದ ಗೆಲುವು ಮತ್ತು ಭಯದ ವಿರುದ್ಧ ಧೈರ್ಯದ ಜಯವನ್ನು ಈ ದಿನ ಪ್ರತಿನಿಧಿಸುತ್ತದೆ.
ವಿಜಯದಶಮಿಗೆ ವಿಶೇಷ ಮಹತ್ವವಿದೆ. ಮೈಸೂರು ದಸರೆಯ ಭವ್ಯ ಮೆರವಣಿಗೆಯೊಂದಿಗೆ ಈ ದಿನದ ಸಂಭ್ರಮ ಕಳೆಗಟ್ಟುತ್ತದೆ. ದುಡಿಮೆಗೆ ನೆರವಾಗುವ ಆಯುಧಗಳು ಮತ್ತು ಉಪಕರಣಗಳನ್ನು ಪೂಜಿಸುವ ಆಯುಧಪೂಜೆಯನ್ನು ಅನೇಕ ಮನೆಗಳಲ್ಲಿ ವಿಜಯದಶಮಿಯ ಹಿಂದಿನ ನವಮಿಯಂದು ಆಚರಿಸಲಾಗುತ್ತದೆ. ಕೃಷಿ ಉಪಕರಣಗಳು, ವಾಹನಗಳು, ಪುಸ್ತಕಗಳು, ಕಂಪ್ಯೂಟರ್‌ಗಳು ಮತ್ತು ಯಂತ್ರೋಪಕರಣಗಳು ಸೇರಿದಂತೆ ಜೀವನೋಪಾಯಕ್ಕೆ ನೆರವಾಗುವ ಸಾಧನಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ಹೊಸ ಕಾರ್ಯಗಳನ್ನು ಆರಂಭಿಸಲು, ಸಂಗೀತ ಅಥವಾ ಇತರ ಕಲೆಗಳನ್ನು ಕಲಿಯಲು ಮತ್ತು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ವಿಜಯದಶಮಿಯನ್ನು ಶುಭದಿನವೆಂದು ಜನರು ಪರಿಗಣಿಸುತ್ತಾರೆ. ಈ ಸಂದರ್ಭದಲ್ಲಿ ನಡೆಯುವ ವಿದ್ಯಾರಂಭದ ಸಂಪ್ರದಾಯವು ಜ್ಞಾನದ ಮಹತ್ವವನ್ನು ಸಾರುತ್ತದೆ.
ಈ ಆಚರಣೆಗಳು ಆಧ್ಯಾತ್ಮಿಕತೆಯನ್ನು ದೈನಂದಿನ ಬದುಕಿನೊಂದಿಗೆ ಬೆಸೆಯುತ್ತವೆ. ನಮ್ಮ ಕೆಲಸ, ಜ್ಞಾನ ಮತ್ತು ಬೆಳವಣಿಗೆಗೆ ನೆರವಾಗುವ ಸಾಧನಗಳನ್ನು ಗೌರವಿಸಬೇಕು ಎಂಬ ಮೌಲ್ಯವನ್ನು ನೆನಪಿಸುತ್ತವೆ.
ಕರ್ನಾಟಕದ ನವರಾತ್ರಿಯ ಅತ್ಯಂತ ಸುಂದರ ವೈಶಿಷ್ಟ್ಯವೆಂದರೆ ಅದು ತಲೆಮಾರುಗಳು ಮತ್ತು ಸಮುದಾಯಗಳನ್ನು ಒಂದೇ ಭಾವನಾತ್ಮಕ ಬಂಧದಲ್ಲಿ ಬೆಸೆಯುವ ಶಕ್ತಿ ಹೊಂದಿರುವುದು. ಮೈಸೂರು ಅರಮನೆಯ ರಾಜವೈಭವದಲ್ಲಿ, ಮನೆಯೊಂದರಲ್ಲಿನ ಅಚ್ಚುಕಟ್ಟಾದ ಬೊಂಬೆ ಹಬ್ಬದಲ್ಲಿ, ಪುರಾತನ ದೇವಾಲಯಗಳ ಗಂಟೆನಾದದಲ್ಲಿ, ಜಾನಪದ ವಾದ್ಯಗಳ ಲಯದಲ್ಲಿ ಮತ್ತು ಮನೆಮನೆಗಳಲ್ಲಿ ಬೆಳಗುವ ದೀಪಗಳಲ್ಲಿ ನವರಾತ್ರಿಯ ಸೊಗಡು ಕಾಣಸಿಗುತ್ತದೆ.
ಕಾಲ ಬದಲಾದಂತೆ ಆಚರಣೆಗಳ ಸ್ವರೂಪವೂ ಬದಲಾಗುತ್ತಿದ್ದರೂ, ನವರಾತ್ರಿಯ ಮೂಲ ಆಶಯ ಮತ್ತು ಸಾಂಸ್ಕೃತಿಕ ಮಹತ್ವ ಕರ್ನಾಟಕದ ಜನಜೀವನದಲ್ಲಿ ಇಂದಿಗೂ ಗಟ್ಟಿಯಾಗಿ ಬೇರೂರಿದೆ.